ಭಾನುವಾರ, ಮೇ 9, 2021
25 °C
ಗ್ರಾಮಸ್ಥರ, ಪೋಷಕರ ಸಹಕಾರದ ಫಲ,ಗುಣಮಟ್ಟದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು

ಗಡಿ ಭಾಗದ ಹೊಸೂರಿನ ಕಟ್ಟಡವಿಲ್ಲದ ಸರ್ಕಾರಿ ಪ್ರೌಢಶಾಲೆಗೆ ಶೇ100 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಅಫಜಲಪುರ: ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ, ತಾಲ್ಲೂಕಿನ ಹೊಸೂರ ಸರ್ಕಾರಿ ಪ್ರೌಢಶಾಲೆಯು ಸ್ವಂತ ಕಟ್ಟಡ, ಮೂಲ ಸೌಲಭ್ಯಗಳು ಇಲ್ಲದಿದ್ದರೂ 5 ವರ್ಷಗಳಿಂದ ಸತತವಾಗಿ ಎಸ್ಸೆಸ್ಸಿಲ್ಸಿಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡು ಜಿಲ್ಲೆಗೆ ಮಾದರಿ ಪ್ರೌಢಶಾಲೆ ಎನಿಸಿಕೊಂಡಿದೆ.

ಹೊಸೂರ ಗ್ರಾಮವು ಮಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ತಾಲ್ಲೂಕು ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ.

ಈ ಗ್ರಾಮಕ್ಕೆ 1998ರಲ್ಲಿ ಸರ್ಕಾರಿ ಪ್ರೌಢಶಾಲೆ ಮಂಜೂರು ಆಯಿತು. ಆದರೆ ಅಲ್ಲಿಂದ ಇಲ್ಲಿಯವರೆಗೂ ಕಟ್ಟಡ ಕಟ್ಟಲು ನಿವೇಶನ ದೊರೆಯದ ಕಾರಣ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ಪ್ರೌಢಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

ಪ್ರೌಢಶಾಲಾ ಶಿಕ್ಷಕರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ಮಕ್ಕಳಿಗೆ ವರ್ಗಗಳನ್ನು ನಡೆಸುತ್ತಿದ್ದಾರೆ. ಇಲ್ಲಿಯ ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಮಾಡಿಲ್ಲ. ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಮತ್ತು ಫಲಿತಾಂಶ ಹೆಚ್ಚಳಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದ್ದಾರೆ. ಶಿಕ್ಷಕರು ಕೇಂದ್ರ ಸ್ಥಾನದಲ್ಲಿ ಮನೆ ಮಾಡಿಕೊಂಡು ಮಕ್ಕಳೊಂದಿಗೆ ಯಾವಾಗಲೂ ಬೆರೆತು ಶಿಕ್ಷ‌ಣ ನೀಡುತ್ತಿರುವುದು ಇಲ್ಲಿನ ವಿಶೇಷ.

‘ಕೌನ್‌ ಬನೇಗಾ ವಿದ್ಯಾಪತಿ’:  ‘ಗುಣಮಟ್ಟದ ಶಿಕ್ಷಣಕ್ಕಾಗಿ ಮತ್ತು ಫಲಿತಾಂಶ ಹೆಚ್ಚಳಕ್ಕಾಗಿ ನಾವು ಶಾಲೆಯಲ್ಲಿ ‘ಕೌನ್‌ ಬನೇಗಾ
ವಿದ್ಯಾಪತಿ’ ಕಾರ್ಯಕ್ರಮ ಮಾಡುತ್ತೇವೆ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತೇವೆ. 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಅನ್ವೇಷಣೆ ಪರೀಕ್ಷೆ ನಡೆಸಿ ತಲಾ 5 ಮಕ್ಕಳನ್ನು ಶಿಕ್ಷಕರು ದತ್ತು ಪಡೆದುಕೊಂಡು ಅವರಿಗೆ ವಿದ್ಯಾಭ್ಯಾಸ ನೀಡುತ್ತೇವೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು ಆ ಮಕ್ಕಳಿಗೆ ಸನ್ಮಾನ ಮಾಡುತ್ತೇವೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸುತ್ತೇವೆ’ ಎಂದು ಪ್ರೌಢಶಾಲೆಯಲ್ಲಿ ಆರಂಭದಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸುರೇಶ ಕೊರಚಗಾಂವ್ ತಿಳಿಸಿದರು.

‘ನಮ್ಮ ಶಾಲೆಯಲ್ಲಿ 300 ಮಕ್ಕಳು ವ್ಯಾಸಂಗ ಮಾಡುತ್ತಾರೆ. ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು, ಯುವಕರು ತುಂಬಾ 
ಕಾಳಜಿ ವಹಿಸುತ್ತಾರೆ. ಶಾಲೆಗೆ ದೇಣಿಗೆ ನೀಡುತ್ತಾರೆ, ಶಾಲೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ತೊಂದರೆ ಆಗುತ್ತಿದೆ. ಈಗ ಗ್ರಾಮಸ್ಥರು ನಿವೇಶನ ನೀಡಿದ್ದಾರೆ. ವರ್ಷದಲ್ಲಿ ಕಟ್ಟಡ ನಿರ್ಮಾಣವಾಗುತ್ತದೆ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಾದ ದೇವಾನಂದ ಹಿಳ್ಳಿ ಈಗ ಐರ್ಲೆಂಡ್‌ನಲ್ಲಿ ಎಂಜನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾರೆ. ಅಬಿಲ್‌ ವಡಾಳೆ ಎಂಬ ವಿದ್ಯಾರ್ಥಿ ಪುಣೆಯಲ್ಲಿ ಸ್ವಂತ ಕಂಪನಿ ಸ್ಥಾಪಿಸಿ ಹಲವಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಶಶಿಕಾಂತ ಚಿನ್ಮಳ್ಳಿ, ಸಂತೋಷಕುಮಾರ ವಗ್ದರಗಿ ಎಂಬುವವರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ.  ಸರ್ಕಾರ ನೀಡುವ ಲ್ಯಾಪಟಾಪ್ ಪುರಸ್ಕಾರ ನಮ್ಮ ಶಾಲೆ ವಿದ್ಯಾರ್ಥಿಗಳಿಗೆ ಒಂದು ವರ್ಷವೂ ಕೈ ತಪ್ಪಿಲ್ಲ’ ಎಂದು ಹೆಮ್ಮೆಪಡುತ್ತಾರೆ ಮುಖ್ಯ ಶಿಕ್ಷಕ ಎಸ್.ಡಿ. ಬೋಸ್ತಿ.

‘ಹೊಸುರ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರಾತಿಗಾಗಿ ಬಹಳ ಪ್ರಯತ್ನ ಮಾಡಿದ್ದೇವೆ. ನಿವೇಶನಕ್ಕಾಗಿ ಹೋರಾಟ ಮಾಡಿದ್ದೇವೆ. ಇಲ್ಲಿಯ ಶಿಕ್ಷಕರು ನಮಗೆ ಸಹಕಾರ ನೀಡಿದ್ದಾರೆ. ಒಂದು ವರ್ಷದಲ್ಲಿ ಶಾಲಾ ಕಟ್ಟಡ ಪೂರ್ಣಗೊಳ್ಳುತ್ತದೆ ನಮ್ಮ ಗ್ರಾಮ ತಾಲ್ಲೂಕು
ಕೇಂದ್ರದಿಂದ 50 ಕಿ.ಮೀ, ಜಿಲ್ಲಾ ಕೇಂದ್ರದಿಂದ 100 ಕಿ.ಮೀ ದೂರ ಇರುವುದರಿಂದ ನಮ್ಮ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಿಸಬೇಕು. ಹೆಚ್ಚಿನ ಬಸ್‌ ಸೌಕರ್ಯ ಒದಗಿಸಬೇಕು ಎಂದು ಗ್ರಾಮದ ಮುಖಂಡರಾದ ಶಿವಯೋಗೆಪ್ಪ ಸಾಲುಟಗಿ, ಗೌರಿಶಂಕರ ತಂಬಾಕೆ, ಚಿದಾನಂದ ಬಳಗಾನೂರ, ಸಿದ್ದು ಭೈರಗೊಂಡ
ಒತ್ತಾಯಿಸಿದ್ದಾರೆ.

* ಗ್ರಾಮಸ್ಥರ ಸಹಕಾರದಿಂದ ಸರ್ಕಾರಿ ಪ್ರೌಢಶಾಲೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದೇವೆ. 5 ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ 100 ಫಲಿತಾಂಶ ಬಂದಿದೆ

–ಸುರೇಶ ಕೊರಚಗಾಂವ್, ಶಾಲೆಯ ಸಹ ಶಿಕ್ಷಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು