ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಅವಕಾಶಗಳ ಬಗ್ಗೆ ಅರಿವು ನೀಡುವ ವೃತ್ತಿ ಸಲಹೆಗಾರರು

Last Updated 21 ಜನವರಿ 2020, 19:30 IST
ಅಕ್ಷರ ಗಾತ್ರ

ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಹೀಗೆ ಒಂದು ಹಂತದ ಓದು ಮುಗಿಸಿರುವವರಿಗೆ ಮುಂದೇನು ಮಾಡಬೇಕು ಎಂಬ ಚಿಂತೆ ತಲೆಯಲ್ಲಿ ಕೂತಿರುತ್ತದೆ. ಪಿಯುಸಿ ಮುಗಿಸಿದವರಿಗೆ ಮುಂದೇನು ಓದಲಿ ಎಂದಾದರೆ, ಡಿಗ್ರಿ ಮುಗಿಸಿದವರಿಗೆ ಮುಂದೆ ಓದಲೇ ಅಥವಾ ಉದ್ಯೋಗಕ್ಕೆ ಸೇರಲೇ ಎಂಬ ಗೊಂದಲ. ಜೊತೆಗೆ ಕಣ್ಣ ಮುಂದೆ ಹತ್ತಾರು ಅವಕಾಶಗಳಿದ್ದರೂ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ. ಈ ಎಲ್ಲಾ ಗೊಂದಲಗಳಿಗೆ ಪರಿಹಾರ ನೀಡುವವರೇ ವೃತ್ತಿ ಸಲಹೆಗಾರರು.

ಬೇರೆ ಬೇರೆ ವಿಷಯಗಳಲ್ಲಿ ಕೋರ್ಸ್ ಮಾಡಿರುವವರಿಗೆ ಭವಿಷ್ಯದ ವೃತ್ತಿಯ ಬಗ್ಗೆ ಗೊಂದಲವಿರುತ್ತದೆ. ಜೊತೆಗೆ ತನ್ನ ಓದಿಗೆ ಈ ವೃತ್ತಿ ಹೊಂದುತ್ತದೋ ಇಲ್ಲವೋ ಎಂಬ ಅಂಶ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಅಂತಹವರಿಗೆ ಸೂಕ್ತ ಉದ್ಯೋಗದ ಮಾರ್ಗದರ್ಶನ ನೀಡುವವರು ವೃತ್ತಿ ಸಲಹೆಗಾರರು.

ಇವರಿಗೆ ಸರ್ಕಾರಿ, ಖಾಸಗಿ ವಲಯಗಳಲ್ಲಿನ ವಿವಿಧ ಉದ್ಯೋಗಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಜೊತೆಗೆ ವೃತ್ತಿಗೆ ಪೂರಕವಾದ ಕೋರ್ಸ್‌ಗಳ ಬಗ್ಗೆಯೂ ವಿವರ ಅವರ ಬಳಿ ಇರಬೇಕು. ಅಲ್ಲದೇ ದೇಶ–ವಿದೇಶಗಳಲ್ಲಿನ ಉದ್ಯೋಗಾವಕಾಶಗಳು, ವೀಸಾ, ಅಲ್ಲಿನ ಉದ್ಯೋಗಕ್ರಮಗಳ ಬಗ್ಗೆಯೂ ಇವರು ಅರಿತಿರಬೇಕು.

ಈ ಎಲ್ಲಾ ಮಾಹಿತಿ ನೀಡುವ ಜೊತೆಗೆ ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯದ ದಾರಿ ತೋರುವ ಮಾರ್ಗದರ್ಶನವನ್ನು ನೀಡಬೇಕು. ಜೊತೆಗೆ ಅವರೊಂದಿಗೆ ಆಪ್ತಸಮಾಲೋಚನೆಯನ್ನು ನಡೆಸಬೇಕು. ಈ ಮೂಲಕ ಅವರ ಗೊಂದಲವನ್ನು ಪರಿಹರಿಸಿ ಅವರಿಗೆ ತಕ್ಕುದಾದ ಭವಿಷ್ಯ ಯಾವುದು ಎಂಬುದನ್ನು ನಿರ್ಧರಿಸುವ ಕೆಲಸವನ್ನು ವೃತ್ತಿ ಸಲಹೆಗಾರರು ಮಾಡುತ್ತಾರೆ.

ಉದ್ಯೋಗಾಕಾಂಕ್ಷಿಗಳಿಗೆ ಸಣ್ಣ ಮಟ್ಟದ ಸೈಕೊಮೆಟ್ರಿಕ್ ಪರೀಕ್ಷೆ ನಡೆಸುವ ಮೂಲಕ ಅವರ ಮಾನಸಿಕ ಸಾಮರ್ಥ್ಯ ಹಾಗೂ ಜ್ಞಾನದ ಕುರಿತ ಆಸಕ್ತಿಯನ್ನು ಸಲಹೆಗಾರರು ಅರಿತುಕೊಳ್ಳುತ್ತಾರೆ. ಆ ಮೂಲಕ ಇವರು ಇಂತಹದ್ದೇ ಉದ್ಯೋಗಕ್ಕೆ ಸೂಕ್ತರಾಗುತ್ತಾರೆ ಎಂಬುದನ್ನು ತಿಳಿಸುತ್ತಾರೆ.

ಕ್ಯಾಂಪಸ್‌ನಲ್ಲಿ ಸಲಹೆಗಾರರು

ಇಂದು ಅನೇಕ ವಿದ್ಯಾಸಂಸ್ಥೆಗಳಲ್ಲಿ ವೃತ್ತಿ ಸಲಹೆಗಾರರನ್ನು ನೇಮಿಸಿಕೊಳ್ಳುತ್ತಾರೆ. ಆ ಮೂಲಕ ವಿದ್ಯಾರ್ಥಿಗಳಲ್ಲಿನ ಭವಿಷ್ಯದ ಉದ್ಯೋಗದ ಗೊಂದಲಗಳಿಗೆ ಕಾಲೇಜಿನಲ್ಲಿ ಪರಿಹಾರ ದೊರಕಿಸುವ ಕೆಲಸವನ್ನು ಮಾಡುತ್ತಿವೆ.
ಇನ್ನೂ ಕೆಲವು ವಿದ್ಯಾಸಂಸ್ಥೆಗಳಲ್ಲಿ ವೃತ್ತಿ ಸಲಹಾಕೇಂದ್ರದಿಂದ ಸಲಹೆಗಾರರನ್ನು ಕರೆಸಿ ಕಾರ್ಯಗಾರಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸುತ್ತಾರೆ.

ಈ ವೃತ್ತಿಯಲ್ಲಿ ಮುಂದುವರಿಯಲು ಉದ್ಯೋಗರಂಗದ ಕುರಿತು ಆಳವಾದ ಜ್ಞಾನವನ್ನು ಹೊಂದಿರಬೇಕು. ದೇಶ-ವಿದೇಶಗಳ ಉದ್ಯೋಗದ ವಿದ್ಯಮಾನಗಳ ಕುರಿತ ಜ್ಞಾನವೂ ಅಷ್ಟೇ ಮುಖ್ಯ. ಈ ಉದ್ಯೋಗಕ್ಕೆ ನಿರ್ದಿಷ್ಟ ವಿದ್ಯಾರ್ಹತೆ ಬೇಕು ಎಂದೇನಿಲ್ಲ. ಇದಕ್ಕೆಂದೇ 10 ತಿಂಗಳ ಕೋರ್ಸ್ ಇದ್ದು ಆ ಮೂಲಕ ವೃತ್ತಿ ಸಲಹೆಗಾರರಾಗಬಹುದು. ಆ ಕೋರ್ಸ್‌ನಲ್ಲಿ ನಿಮ್ಮಲಿರುವ ಕೌಶಲ ಹಾಗೂ ಜ್ಞಾನದ ಮೂಲಕ ಉದ್ಯೋಗಾಕಾಂಕ್ಷಿಗಳ ಶೈಕ್ಷಣಿಕ ಹಾಗೂ ವೃತ್ತಿ ಬದುಕಿನ ಯೋಜನೆಗಳನ್ನು ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸುತ್ತಾರೆ.

ಕರ್ತವ್ಯ ಹಾಗೂ ಜವಾಬ್ದಾರಿಗಳು

ಕೌಶಲ ಮೌಲ್ಯಮಾಪನ, ಸಂದರ್ಶನ

ವೈಯಕ್ತಿಕ ಹಾಗೂ ಆಸಕ್ತಿಗಳ ಮೌಲ್ಯಮಾಪನ

ವೃತ್ತಿ ಸಂಪನ್ಮೂಲ ಹಾಗೂ ಕಾರ್ಮಿಕ ಮಾರುಕಟ್ಟೆಯ ಕುರಿತು ಮಾಹಿತಿ

ವೃತ್ತಿ ಯೋಜನೆಯ ಹಂತಗಳು

ವೃತ್ತಿ ಅಭಿವೃದ್ಧಿ ಮಾದರಿ ಹಾಗೂ ಸಿದ್ಧಾಂತಗಳು

ತರಬೇತಿ ನೀಡುವುದು ಹಾಗೂ ಪ್ರೋಗ್ರಾಂ ಪ್ರಮೋಶನ್

ವೃತ್ತಿ ಹಾಗೂ ಸಂಪನ್ಮೂಲಗಳ ಬಗೆಗಿನ ಅರಿವು

ಹೊಸ ಹೊಸ ವೃತ್ತಿ ಅವಕಾಶಗಳ ಬಗ್ಗೆ ಅರಿವು ಹಾಗೂ ಇಂಟರ್ನ್‌ಶಿಪ್‌ ಅವಕಾಶಗಳ ಬಗೆಗಿನ ಮಾಹಿತಿ.

ರೆಸ್ಯೂಮ್‌ ಹಾಗೂ ವಿನಂತಿ ಪತ್ರ ಬರೆಯುವ ಬಗ್ಗೆ ಜ್ಞಾನ

ಅಣಕು ಸಂದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT