ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಟಿ 2020ಕೊನೆಯ ಹಂತದ ಸಿದ್ಧತೆ ಹೇಗಿರಬೇಕು?

Last Updated 22 ನವೆಂಬರ್ 2020, 20:00 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ದೇಶದಲ್ಲಿ ತುಂಬ ಬೇಡಿಕೆ ಇರುವ ಪರೀಕ್ಷೆಗಳ ಪೈಕಿ ‘ಕ್ಯಾಟ್’ ಎಂದೇ ಜನಪ್ರಿಯವಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Admission Test - CAT)ಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಪ್ರತಿವರ್ಷ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ದೇಶದಲ್ಲಿ ನಡೆಯುವ ಕಠಿಣ ಸ್ವರೂಪದ ಪ್ರವೇಶ ಪರೀಕ್ಷೆಗಳ ಪೈಕಿ ಇದೂ ಒಂದಾಗಿದೆ. ನವೆಂಬರ್ 29ರಂದು ‘ಕ್ಯಾಟ್ 2020’ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವವರು ಈಗಾಗಲೇ ಕೊನೆಯ ಕ್ಷಣದ ಸಿದ್ಧತೆಗಳತ್ತ ತಮ್ಮೆಲ್ಲ ಗಮನ ಕೇಂದ್ರೀಕರಿಸಿರಬಹುದು.

ಈ ವರ್ಷದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಕೆಲವು ಸುಲಭ ಮಾರ್ಗೋಪಾಯಗಳನ್ನು ಇಲ್ಲಿ ವಿವರಿಸಲಾಗಿದೆ.

ಹಿಂದಿನ ವರ್ಷದ ‘ಕ್ಯಾಟ್’ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು: ಪರೀಕ್ಷೆ ಹತ್ತಿರವಿರುವಾಗ ಕೊನೆಯ ಕೆಲವು ದಿನಗಳಲ್ಲಿ ಹಳೆಯ ಕ್ಯಾಟ್ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು ಪರೀಕ್ಷೆಯ ದೃಷ್ಟಿಯಿಂದ ಅಗತ್ಯ. ಆದರೆ ಬಹುತೇಕ ವಿದ್ಯಾರ್ಥಿಗಳು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಯನ್ನಷ್ಟೇ ಬಿಡಿಸಲು ಗಮನ ನೀಡುವುದು ಸಾಮಾನ್ಯ. ಹೆಚ್ಚಿನ ಅಂಕ ಗಳಿಸಬೇಕಾದರೆ ಕಳೆದ ಮೂರು ವರ್ಷಗಳ ಪ್ರಶ್ನೆಪತ್ರಿಕೆಗಳನ್ನೂ ಬಿಡಿಸಲು ಚಿತ್ತ ಹರಿಸಬೇಕು. ಪರೀಕ್ಷಾರ್ಥಿಗಳು 1990 ರಿಂದ 2008ರವರೆಗಿನ ಅವಧಿಯಲ್ಲಿನ ಪ್ರಶ್ನೆಪತ್ರಿಕೆಗಳನ್ನೂ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಸಮಯ ನಿರ್ವಹಣೆಗೆ ಗಮನ: ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಪ್ರಾಯೋಗಿಕವಾಗಿ ಬಿಡಿಸಲು ಯತ್ನಿಸುವಾಗ, ಪರೀಕ್ಷಾರ್ಥಿಗಳು ಸಮಯದ ಸರಿಯಾದ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕು. ವಿದ್ಯಾರ್ಥಿಗಳು ಅರ್ಹತಾ ಮಟ್ಟ ತಲುಪಲು ಪ್ರತಿಯೊಂದು ಸೆಕ್ಷನ್‌ಗೆ 40 ನಿಮಿಷಗಳನ್ನು ಮೀಸಲಿಡಬೇಕು. ಪ್ರತಿಯೊಂದು ಸೆಕ್ಷನ್‌ನಲ್ಲಿ ಕನಿಷ್ಠ 15–17 ಪ್ರಶ್ನೆಗಳಿಗೆ ಉತ್ತರಿಸಬೇಕು.

ವಿಶ್ಲೇಷಣೆ: ಸಮಯವು ತುಂಬ ಕಡಿಮೆ ಇರುವುದರಿಂದ ನಿರ್ದಿಷ್ಟ ಸೆಕ್ಷನ್ನಿನ ವಿಶ್ಲೇಷಣೆಯಲ್ಲಿ, ವಿದ್ಯಾರ್ಥಿಗಳ ಲೆಕ್ಕಹಾಕುವ ವೇಗವು (ಕ್ಯಾಲ್ಕುಲೇಟರ್ ಬಳಕೆಗೆ ಅವಕಾಶ ಇರುವುದರ ಹೊರತಾಗಿಯೂ) ಹೆಚ್ಚಿರಬೇಕಾಗುತ್ತದೆ. ಅಭ್ಯರ್ಥಿಯೊಬ್ಬ ವಿವಿಧ ವಿಭಾಗಗಳಲ್ಲಿ ಅರ್ಹತಾ ಮಟ್ಟ ತಲುಪುವನೊ ಇಲ್ಲವೊ ಎನ್ನುವುದನ್ನು ಇದು ನಿರ್ಧರಿಸುತ್ತದೆ.

ಒಂದೇ ಪ್ರಶ್ನೆಗೆ ಸಮಯ ವ್ಯರ್ಥ ಮಾಡುವುದು ಸರಿಯಲ್ಲ: ಉತ್ತರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಶ್ನೆಗಳನ್ನು ಕೈಬಿಟ್ಟು ಮುಂದಿನ ಪ್ರಶ್ನೆಯನ್ನು ಕೈಗೆತ್ತಿಕೊಳ್ಳಬೇಕು. ಇಡೀ ಸೆಕ್ಷನ್ನಿನ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಈ ಮೊದಲು ಕೈಬಿಡಲಾಗಿದ್ದ ಪ್ರಶ್ನೆಗೆ ಮರಳಿ ಅದನ್ನು ಉತ್ತರಿಸಲು ಇನ್ನೊಮ್ಮೆ ಪ್ರಯತ್ನಿಸಬಹುದು.

ಮೌಖಿಕ ಸಾಮರ್ಥ್ಯ ಮತ್ತು ಓದಿನ ಗ್ರಹಿಕೆ: ಈ ನಿರ್ದಿಷ್ಟ ವಿಭಾಗಕ್ಕೆ ವಿದ್ಯಾರ್ಥಿಗಳು ತಮ್ಮೆಲ್ಲ ಸಾಮರ್ಥ್ಯವನ್ನು ಕೇಂದ್ರೀಕರಿಸಬೇಕು. ಕ್ರಮಬದ್ಧವಾಗಿಲ್ಲದ ವಾಕ್ಯಗಳು, ವಾಕ್ಯಗಳ ಸಮೂಹ (ಪ್ಯಾರಾಗ್ರಾಫ್), ಪ್ರಸ್ತುತವಲ್ಲದ ಮಾಹಿತಿ ಪ್ರತ್ಯೇಕಿಸುವುದು, ಪ್ಯಾರಾಗ್ರಾಫ್ ಪೂರ್ಣಗೊಳಿಸುವ ವಿಮರ್ಶಾತ್ಮಕ ಸ್ವರೂಪದ ತಾರ್ಕಿಕ ಪ್ರಶ್ನೆಗಳು ಇದರಲ್ಲಿ ಇರುತ್ತವೆ.

ವಿಭಿನ್ನ ಪ್ರಶ್ನೆಗಳಿಗೆ ಗಮನ ನೀಡಬೇಕು: ಅಣಕು ಪ್ರಶ್ನೆಪತ್ರಿಕೆಗಳನ್ನು ಬಿಡಿಸುವಾಗ, ವಿದ್ಯಾರ್ಥಿಗಳು ಈ ಹಿಂದೆ ಪ್ರಕಟವಾಗಿದ್ದ ವಿಭಿನ್ನ ಬಗೆಯ ಪ್ರಶ್ನೆಗಳನ್ನು ಉತ್ತರಿಸಲು ಗಮನ ಹರಿಸಬೇಕು. ಉದಾಹರಣೆಗೆ ಬಿಟ್ಟ ಸ್ಥಳ ತುಂಬುವುದು, ವಿಮರ್ಶಾತ್ಮಕ ಸ್ವರೂಪದ ತಾರ್ಕಿಕ ಪ್ರಶ್ನೆಗಳಿಗೆ ಆದ್ಯತೆ ನೀಡಬೇಕು. ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲು ಪುನರಾವರ್ತಿಸುತ್ತಿರಬೇಕು.

ಆತಂಕಕ್ಕೆ ಕಡಿವಾಣ ಹಾಕಿ: ಪರೀಕ್ಷೆಗಳು ಹತ್ತಿರ ಬಂದಾಗ ಆತಂಕ ಎದುರಾಗುವುದು ಸಹಜ. ಪರೀಕ್ಷೆ ಎದುರಿಸುವ ಹಿಂದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ಪರೀಕ್ಷೆಗೆ ಒಂದು ದಿನ ಬಾಕಿ ಇರುವಾಗ ಸಿದ್ಧತೆಗಳನ್ನು ನಿಲ್ಲಿಸಬೇಕು.

ಆನ್‌ಲೈನ್ ಪರೀಕ್ಷಾ ಸಿದ್ಧತೆ ಹೆಚ್ಚಿಸಿಕೊಳ್ಳಿ: ಆನ್‌ಲೈನ್‌ನಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಭಾಗವಹಿಸುವುದು ಪರೀಕ್ಷಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

ದತ್ತಾಂಶಗಳ ಅರ್ಥ ವಿವರಣೆ ಮತ್ತು ತಾರ್ಕಿಕ ಚಿಂತನೆ
ಸರಿಯಾದ ಉತ್ತರ ಕಂಡುಕೊಳ್ಳಲು ತಾರ್ಕಿಕ ಮಟ್ಟದ ವಿಶ್ಲೇಷಣೆಯ ಅಗತ್ಯ ಇರುವ ಅಪ್ಟಿಟ್ಯೂಡ್ ಪ್ರಶ್ನೆಗಳು ಮತ್ತು ದತ್ತಾಂಶಗಳ ಅರ್ಥ ವಿವರಣೆಯ ಪ್ರಶ್ನೆಗಳನ್ನು ಒಳಗೊಂಡಿರುವ ಎರಡೂ ವಿಭಾಗಗಳಿಗೆ ಪರೀಕ್ಷಾರ್ಥಿಗಳು ಸಮಾನ ಗಮನ ನೀಡಬೇಕು. ಸರಳವಾಗಿ ಕಾಣುವ ತಾರ್ಕಿಕ ಚಿಂತನೆಯ ಪ್ರಶ್ನೆಗಳನ್ನಷ್ಟೇ ಉತ್ತರಿಸಲು ಬಹುತೇಕ ವಿದ್ಯಾರ್ಥಿಗಳು ಮುಂದಾಗುತ್ತಾರೆ. ಹಾಗೆ ಮಾಡುವುದು ಸರಿಯಲ್ಲ.

(ಲೇಖಕಿ: ಅನ್‌ಅಕಾಡೆಮಿಯಲ್ಲಿ ‘ಕ್ಯಾಟ್’ನ ಬೋಧಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT