ಶನಿವಾರ, ಮೇ 15, 2021
25 °C
ಸಂತೇಮರಹಳ್ಳಿ: ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿಶಿಷ್ಟ ಪ್ರಯೋಗ, ಶೈಕ್ಷಣಿಕ ವಸ್ತುಪ್ರದರ್ಶನ

ಮಕ್ಕಳ ಪ್ರತಿಭೆ, ಸೃಜನಶೀಲತೆ ಅನಾವರಣ

ಮಹದೇವ್‌ ಹೆಗ್ಗವಾಡಿಪುರ Updated:

ಅಕ್ಷರ ಗಾತ್ರ : | |

Prajavani

ಸಂತೇಮರಹಳ್ಳಿ: ಮಕ್ಕಳ ಬೌಧ್ಧಿಕ ಮಟ್ಟ ಹಾಗೂ ಅವರಲ್ಲಿರುವ ಸೃಜನಶೀಲತೆಯನ್ನು ಅನಾವರಣಗೊಳಿಸಲು ಇಲ್ಲಿನ ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶೈಕ್ಷಣಿಕ ವಸ್ತುಪ್ರದರ್ಶನ ಗಮನ ಸೆಳೆಯಿತು. ಮಕ್ಕಳಲ್ಲಿರುವ ಬೌದ್ಧಿಕ ಪ್ರತಿಭೆ ಹಾಗೂ ಸೃಜನಶೀಲತೆಯ ಅನಾವರಣಕ್ಕೆ ಈ ಕಾರ್ಯಕ್ರಮ ವೇದಿಕೆಯಾಯಿತು.

1 ರಿಂದ 7ನೇ ತರಗತಿ ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದ 150ಕ್ಕೂ ಹೆಚ್ಚು ಮಾದರಿಗಳನ್ನು ತಯಾರು ಮಾಡಿ ಮಾಗದರ್ಶನ ನೀಡಿದ ಶಿಕ್ಷಕರನ್ನೇ ಚಕಿತಗೊಳಿಸಿದರು.

ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ವ್ಯವಸಾಯ, ನೀರಾವರಿ, ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಂಧಿಸಿದ ಹಲವಾರು ಮಾದರಿಗಳನ್ನು ಸ್ವತಃ ತಯಾರಿಸಿದ್ದ ವಿದ್ಯಾರ್ಥಿಗಳು ಶಾಲೆಯ ಎರಡು ಕೊಠಡಿಗಳಲ್ಲಿ ಅದನ್ನು ಪ್ರದರ್ಶನಕ್ಕಿಟ್ಟು ನೋಡುಗರ ಆಸಕ್ತಿ ಕೆರಳಿಸಿದರು. 

ಶೈಕ್ಷಣಿಕ ವಸ್ತುಪ್ರದರ್ಶನ ವೀಕ್ಷಿಸಲು ಸುತ್ತಮುತ್ತಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೂ ಬಂದು ವಿವಿಧ ಮಾದರಿಗಳನ್ನು ನೋಡಿ, ಅವುಗಳ ಬಗ್ಗೆ ಮಾಹಿತಿ ಪಡೆದರು. 

ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ಪುಟ್ಟ ಶೌಚಾಲಯಗಳನ್ನು ನಿರ್ಮಿಸಿದ್ದ ಮಕ್ಕಳು, ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು, ವೈಯಕ್ತಿಕ ಸ್ವಚ್ಛತೆಯಿಂದ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಡುತ್ತಿದ್ದರು. ಕೆಲವು ವಿದ್ಯಾರ್ಥಿಗಳು ಕಬಡ್ಡಿ ಹಾಗೂ ವಾಲಿಬಾಲ್ ಅಂಕಣಗಳನ್ನು ರಚಿಸಿ ಉದ್ದ ಅಳತೆಗಳನ್ನು ಬರೆದಿದ್ದರು. ಕ್ರೀಡಾಂಕಣಗಳ ಮಾಹಿತಿ ಹೊಂದಿದ್ದ ಈ ಮಾದರಿಗಳು ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದ ವಿದ್ಯಾರ್ಥಿಗಳನ್ನು ಆಕರ್ಷಿಸಿದವು.

ವಿಜ್ಞಾನಕ್ಕೆ ಪಠ್ಯಕ್ಕೆ ಸಂಬಂಧಿಸಿದಂತೆ ಮನುಷ್ಯನ ಜೀರ್ಣಾಂಗ ವ್ಯೂಹವನ್ನು ಥರ್ಮಾಕೋಲ್‍ನಲ್ಲಿ ರಚಿಸಿದ್ದ ಮಾದರಿ ಗಮನ ಸೆಳೆಯುತ್ತಿತ್ತು. ಅದನ್ನು ಸಿದ್ಧಪಡಿಸಿದ್ದ ವಿದ್ಯಾರ್ಥಿಗಳು ಬಣ್ಣಗಳ ಪೆನ್ಸಿಲ್‍ಗಳ ಮೂಲಕ ಅನ್ನನಾಳ, ಜಠರ, ಕರುಳು, ಇವುಗಳಿಂದ ಮಾನವನ ಜೀರ್ಣಾಂಗ ಕ್ರಿಯೆ ನಡೆಯುವ ರೀತಿಯನ್ನು ವಿವರಿಸುತ್ತಿದ್ದರು.

‘ಪಠ್ಯಕ್ಕೆ ಸಂಬಂಧಿಸಿದ ವಿಷಯಾಧರಿತ ಮಾದರಿಗಳನ್ನು ತಯಾರಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಒಂದು ವಾರ ಕಾಲಾವಕಾಶ ಪಡೆದು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರ ಸಹಕಾರದಿಂದ ಉತ್ತಮವಾದ ಮಾದರಿಗಳನ್ನು ತಯಾರಿಸಿದ್ದಾರೆ’ ಎಂದು ಮಾರ್ಗದರ್ಶಕ ಶಿಕ್ಷಕ ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ವಸ್ತುಪ್ರದರ್ಶನ ಅನುಕೂಲ. ಇದು ವಿಜ್ಞಾನದ ಪ್ರಾಮುಖ್ಯದ ಬಗ್ಗೆಯೂ ಅವರಿಗೆ ತಿಳಿಸುತ್ತದೆ. ಮನಸ್ಸಿನಲ್ಲಿರುವುದನ್ನು ಕಣ್ಣೆದುರು ಮಾಡಿ ತೋರಿಸಿದಾಗ ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ. ಶೈಕ್ಷಣಿಕ ವಸ್ತು ಪ್ರದರ್ಶನಗಳು ಕಲಿಕೆಗೆ ಪ್ರೇರಣೆ ನೀಡುತ್ತವೆ’ ಎಂದು ಮುಖ್ಯಶಿಕ್ಷಕ ವೈ.ಪಿ.ವಿಶ್ವ ಹೇಳಿದರು. 

‘ಶಿಕ್ಷಕರು ವಸ್ತುಪ್ರದರ್ಶನ ಮಾಡಲು ಹೇಳಿದಾಗ ಆಶ್ಚರ್ಯವಾಯಿತು. ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದಂತೆ ಆಸಕ್ತಿ ಹೆಚ್ಚಾಯಿತು. ಜೊತೆಗೆ ಬೇರೆ ವಿದ್ಯಾರ್ಥಿಗಳು ಮಾಡಿರುವ ಮಾದರಿಗಳಿಂದ ವಿಷಯವನ್ನು ಇನ್ನಷ್ಟು ತಿಳಿದುಕೊಳ್ಳಲು ಅನುಕೂಲವಾಯಿತು’ ಎಂದು 7ನೇ ತರಗತಿ ವಿದ್ಯಾರ್ಥಿನಿ ಮಲ್ಲಿಕಾ ಹೇಳಿದಳು. 

ನೀರು ಉಳಿಸಿ, ಕಾಡುಪ್ರಾಣಿ ರಕ್ಷಿಸಿ..

ನೀರಿನ ಕೊರತೆ ಉಂಟಾಗುತ್ತಿರುವ ಈ ಸಮಯದಲ್ಲಿ ನೀರನ್ನು ಹೆಚ್ಚು ಪೋಲು ಮಾಡದಂತೆ ಅರಿವು ಮೂಡಿಸುವ ಮಾದರಿಯೂ ಪ್ರದರ್ಶನದಲ್ಲಿತ್ತು. ಕೈ ಪಂಪು ಮೂಲಕ ಸೋರಿಕೆಯಾದ ನೀರು ಮತ್ತೆ ಇಂಗು ಗುಂಡಿಯ ಮೂಲಕ ಅಂತರ್ಜಲ ಸೇರಬೇಕು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳು ತೋರಿಸಿಕೊಟ್ಟರು.

ಕಾಡಿನ ಮಾದರಿಯನ್ನು ತಯಾರಿಸಿದ್ದ ವಿದ್ಯಾರ್ಥಿಗಳು, ಕಾಡು ಉಳಿಸಿ ಪ್ರಾಣಿಗಳನ್ನು ರಕ್ಷಿಸಿ ಎಂಬ ಫಲಕಗಳನ್ನು ಅದರಲ್ಲಿ ಅಳವಡಿ ಪರಿಸರ ಜಾಗೃತಿಯನ್ನೂ ಮೂಡಿಸಲು ಯತ್ನಿಸಿದರು. 

ಸಂಚಾರ ನಿಯಮಗಳನ್ನು ವಿವರಿಸುವ ಮಾದರಿಗಳು, ದೇಶದ ಹಾಗೂ ರಾಜ್ಯದ ಭೂಪಟದಲ್ಲಿ ಎಲ್ಲ ರಾಜ್ಯಗಳು ಹಾಗೂ ಜಿಲ್ಲೆಗಳನ್ನು ವಿವಿಧ ಬ‌ಣ್ಣಗಳಿಂದ ಗುರುತಿಸಿದ್ದ ಮಾದರಿಗಳೂ ವಸ್ತು ಪ್ರದರ್ಶನದಲ್ಲಿದ್ದವು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.