ಸ್ಪರ್ಧಾತ್ಮಕ ಪರೀಕ್ಷೆಗೆ ದಾರಿದೀವಿಗೆ

4

ಸ್ಪರ್ಧಾತ್ಮಕ ಪರೀಕ್ಷೆಗೆ ದಾರಿದೀವಿಗೆ

Published:
Updated:
Deccan Herald

ಕೆ.ಎಸ್.ಆರ್.ಪಿ ಕವಾಯತು ಮೈದಾನದ ಹಿಂಭಾಗದ ಜಾಕಿ ಕ್ವಾರ್ಟರ್ಸ್‌ನಲ್ಲಿಯ ಒಂದು ಸುಸಜ್ಜಿತ ಸಭಾಭವನ. ಸಂಜೆ 5 ಗಂಟೆ ಆಯಿತೆಂದರೆ ಓದುವ ಚಟುವಟಿಕೆಗಳು ಆರಂಭ. ಆರ್ಥಿಕವಾಗಿ ಹಿಂದುಳಿದ ಹಲವು ಯುವಜನತೆ ಇಲ್ಲಿ ಬಂದು ರಾತ್ರಿ 8ರವರೆಗೂ ಅಧ್ಯಯನ ಮಾಡುತ್ತಾರೆ. ಅವರಿಗೆ ಉಪನ್ಯಾಸಕರು, ನಿವೃತ್ತ ಅಧಿಕಾರಿಗಳು, ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.

ಇವರೇನು ಓದುತ್ತಾರೆ?.. ಐಎಎಸ್, ಕೆಎಎಸ್, ಎಫ್‌ಡಿಎ, ಪಿಡಿಒ, ಐಬಿಪಿಎಸ್, ಎಸ್ಎಸ್‌ಸಿ, ಪೊಲೀಸ್ ಸಬ್ಇನ್‌ಸ್ಪೆಕ್ಟರ್‌, ಕಾನ್‌ಸ್ಟೆಬಲ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌... ಹೀಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿರುವ ಉದ್ಯೋಗಾರ್ಥಿಗಳಿಗೆ 2 ವರ್ಷಗಳಿಂದ ಇಲ್ಲಿ ಉಚಿತವಾಗಿ ತರಬೇತಿ ಲಭಿಸುತ್ತಿದೆ.

ಸ್ಪರ್ಧಾತ್ಮಕ ಪರೀಕ್ಷೆ ಬರೆಯದೇ ಉದ್ಯೋಗವಿಲ್ಲ ಎಂಬ ಸ್ಥಿತಿ ಬಂದಿರುವ ಈ ಕಾಲದಲ್ಲಿ ಸರ್ವಸನ್ನದ್ಧರಾಗಲು ಯುವಜನತೆಗೆ ಸೂಕ್ತ ಮಾರ್ಗದರ್ಶನವಂತೂ ಬೇಕೆ ಬೇಕು. ಇದಕ್ಕಾಗಿ ಹಲವು ಸಂಘ-ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ, ಇಲ್ಲಿಯ ವಿಶೇಷವೆಂದರೆ ಇದು ಉಚಿತ ತರಬೇತಿ. ಬಡ ಯುವಜನತೆಗಾಗಿಯೇ ರೂಪುಗೊಂಡ ವ್ಯವಸ್ಥಿತ ತರಬೇತಿ ಕೇಂದ್ರ.

‘ಕ್ರಿಯಾ ಸ್ಪರ್ಧಿ ಹಾಗೂ ಕೆಎಸ್ಆರ್‌ಪಿ (ಬೆಟಾಲಿಯನ್-5) ಸಹಯೋಗದ ತರಬೇತಿ ಕೇಂದ್ರ’ ಆರಂಭಗೊಳ್ಳಲು ಒಂದು ಹಿನ್ನೆಲೆ ಇದೆ.
2014ರಲ್ಲಿ ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಡವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಆರಂಭಿಸಲಾಗಿತ್ತು. ಅಲ್ಲಿಯ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನ ನೇತೃತ್ವದಲ್ಲಿ 2 ವರ್ಷಗಳ ಕಾಲ ಯಶಸ್ವಿಯಾಗಿ ತರಬೇತಿ ನಡೆಯಲು ಹಲವು ಪ್ರಾಧ್ಯಾಪಕರು, ನಿವೃತ್ತ ಶಿಕ್ಷಕರು, ವಿಷಯ ತಜ್ಞರು ಹೆಗಲು ಕೊಟ್ಟರು. ಮೂಲ ಸೌಕರ್ಯಗಳ ಕೊರತೆಯಿಂದಾಗಿ ಬೇರೆ ಸ್ಥಳ ಹುಡುಕಬೇಕಾಯಿತು.

ಈ ಸಂದರ್ಭದಲ್ಲಿ ಕೆ.ಎಸ್.ಆರ್.ಪಿ ಕಮಾಂಡಂಟ್ (5ನೇ ಬೆಟಾಲಿಯನ್) ಕೆ.ಎಸ್.ರಘುನಾಥ ಅವರು ಸಹಾಯಕ್ಕೆ ಬಂದರು. ಪೊಲೀಸರ ಮಕ್ಕಳಿಗೆ ಹಾಗೂ ಉಳಿದ ಯುವಜನತೆಗೂ ಉಚಿತವಾಗಿ ತರಬೇತಿ ನೀಡಲು ಜಾಕಿ ಕ್ವಾರ್ಟರ್ಸ್‌ನಲ್ಲಿರುವ ಸುಸಜ್ಜಿತ ತರಬೇತಿ ಭವನದಲ್ಲಿ ಅಧ್ಯಯನಕ್ಕೆ ವ್ಯವಸ್ಥೆ ಮಾಡಿದರು. 2016 ಡಿ. 10ರಂದು ಆರಂಭವಾದ ಕೇಂದ್ರದಲ್ಲಿ ಸ್ವತಃ ಮಾರ್ಗದರ್ಶನ ನೀಡಿದ್ದೇ ಅಲ್ಲದೇ, ಉಪನ್ಯಾಸಕ್ಕಾಗಿ ಹಲವು ಅಧಿಕಾರಿಗಳನ್ನೂ ಅವರು ಕರೆಸಿದ್ದಾರೆ. ಇಲ್ಲಿಯವರೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇಲ್ಲಿ ಅಧ್ಯಯನ ಮಾಡಿದ 8 ಮಂದಿ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉದ್ಯೋಗ ಗಳಿಸಿದ್ದಾರೆ.

250 ಮಂದಿ ಕುಳಿತುಕೊಳ್ಳಬಹುದಾದ ಸುಸಜ್ಜಿತ ಸಭಾಭವನ, ಪ್ರಾಜೆಕ್ಟರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಉನ್ನತ ತರಬೇತಿ ಕೇಂದ್ರಗಳಲ್ಲಿರಬೇಕಾದ ಎಲ್ಲ ಸೌಲಭ್ಯಗಳೂ ಇಲ್ಲಿವೆ. ಉತ್ತಮ ಗ್ರಂಥಾಲಯ ವ್ಯವಸ್ಥೆಯೂ ಇದೆ. ನಾಲ್ಕನೇ ಬ್ಯಾಚ್‌ನಿಂದ ಅಣಕು ಪರಿಕ್ಷೆಯನ್ನೂ ಅರಂಭಿಸಲಾಗಿದೆ. ಇದಕ್ಕಾಗಿ ತಲಾ ₹ 150ನ್ನು ಸಂಗ್ರಹಿಸಲಾಗಿದೆ. ಪ್ರತಿ ವಾರ ಅಣಕು ಪರೀಕ್ಷೆ ಇರುತ್ತದೆ. ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಯಾವ ವಿಷಯದಲ್ಲಿ ಹಿಂದಿರುವರೋ ಅದರಲ್ಲಿ ಮತ್ತೆ ತರಬೇತಿ ನೀಡುವ ವಿಧಾನವನ್ನೂ ಅಳವಡಿಸಿಕೊಳ್ಳಲಾಗಿದೆ. ಈ ಬ್ಯಾಚಿನಲ್ಲಿ 180 ಮಂದಿ ಓದುತ್ತಿದ್ದಾರೆ.

‘ಡಿಸಿಪಿ ವಿಷ್ಣುವರ್ಧನ್ ಅವರು ಇಲ್ಲಿ ಪಾಠ ಮಾಡಿದ್ದಾರೆ. ಕೆಪಿಎಸ್‌ಸಿ ಮೂಲಕ ಅಕೌಂಟ್ ಆಫಿಸರ್ ಆಗಿ ಆಯ್ಕೆಯಾಗಿರುವ ಪ್ರತಿಭಾ, ಕೆಎಸ್ಆರ್‌ಪಿಯ ಎಸ್ಐಗಳೂ, ಮೈಸೂರು ವಿವಿಯ ಹಲವು ಪ್ರಾಧ್ಯಾಪಕರೂ ಬಂದು ಇಲ್ಲಿ ಪಾಠ ಮಾಡಿದ್ದಾರೆ.

ಪ್ರೇರಣಾದಾಯಕ ಭಾಷಣಗಳೂ ಆಗಾಗ ಇರುತ್ತವೆ. ಇಷ್ಟೇ ಅಲ್ಲದೇ ವಾಟ್ಸ್ಆ್ಯಪ್ ಗ್ರೂಪ್ ಮೂಲಕವೂ ವಿದ್ಯಾರ್ಥಿಗಳಿಗೆ ನಿರಂತರವಾಗಿ ಮಾರ್ಗದರ್ಶನ ನೀಡಲಾಗುತ್ತದೆ. ವ್ಯಕ್ತಿತ್ವ ಹಾಗೂ ಚಾರಿತ್ರ್ಯ ನಿರ್ಮಾಣಕ್ಕೂ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನ ವಿವರಿಸಿದರು.

‘ಈ ತರಬೇತಿಯಿಂದ ಬಹಳ ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಇನ್ನೂ ಉನ್ನತಮಟ್ಟದ ಅಧಿಕಾರಿಗಳನ್ನು, ಸಂಪನ್ಮೂಲ ವ್ಯಕ್ತಿಗಳನ್ನು ಕರೆಸುವ ಉದ್ದೇಶವಿದೆ' ಎಂದು ಕೆ.ಎಸ್.ಆರ್.ಪಿ ಕಮಾಂಡಂಟ್ (5ನೇ ಬೆಟಾಲಿಯನ್) ಕೆ.ಎಸ್.ರಘುನಾಥ್ ತಿಳಿಸಿದರು.

ಆತ್ಮವಿಶ್ವಾಸ ಮೂಡುತ್ತಿದೆ

ಇಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿದೆ. ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ಮೂಡುತ್ತಿದೆ. ಪ್ರತಿಫಲ ಅಪೇಕ್ಷಿಸದೇ ಕೆಲಸ ಮಾಡುವ ಮನೋಭಾವ ಮೂಡಲು ಸಹಾಯವಾಗುತ್ತಿದೆ. ಜ್ಞಾನ ಸಂಪಾದನೆಗಷ್ಟೇ ಸೀಮಿತವಾಗದೇ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣವೂ ಸಾಧ್ಯವಾಗುತ್ತಿದೆ
– ರಾಜೀವ್ ಶರ್ಮಾ, ಸಂಯೋಜಕ, ತರಬೇತಿ ಕೇಂದ್ರ

ಅರಿವೂ ಮೂಡಲು ನೆರವು

ಮನೆಯಲ್ಲೇ ಕುಳಿತು ಓದಿದರೆ ಯಾವುದನ್ನು ಓದಬೇಕು, ಎಷ್ಟು ಓದಬೇಕು, ಯಾವ ವಿಷಯ ಓದಬೇಕು ಎಂಬ ಮಾಹಿತಿ ಇರುವುದಿಲ್ಲ. ಇಲ್ಲಿ ಬಂದರೆ ಓದುವ ಜಾಡು ಹಿಡಿಯಹುದು. ಯಾವ ಹುದ್ದೆಗೆ ಹೋಗಲು ಏನು ಕಲಿತಿರಬೇಕು ಎಂಬ ಅರಿವೂ ಮೂಡುತ್ತದೆ.
ಮಂದಾರ ಎಸ್., ಸಮಾಜ ವಿಜ್ಞಾನ ಸಹಾಯಕ ಶಿಕ್ಷಕ, ಸೇಂಟ್ ರಿಟಾ ಹೈಸ್ಕೂಲ್, ಮೈಸೂರು

ಮಾಹಿತಿಗೆ: 98440 01442

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !