ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೈನರ್: ಎಣೆಯಿಲ್ಲದ ಅವಕಾಶ

Last Updated 13 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಫ್ಯಾಷನ್ ಡಿಸೈನಿಂಗ್ ಎನ್ನುವುದು ದಿನದಿಂದ ದಿನಕ್ಕೆ ಹೊಸತನ್ನು ಬೇಡುವ ಉದ್ಯಮ. ಈ ಕ್ಷೇತ್ರ ಹೊಸ ಆವಿಷ್ಕಾರಗಳೊಂದಿಗೆ ಸಾಗುತ್ತದೆ. ಇಂದು ಫ್ಯಾಷನ್‌ ಕ್ಷೇತ್ರದಲ್ಲಿ ಸದ್ದು ಮಾಡಿದ ಉಡುಗೆ ನಾಳೆ ಔಟ್‌ಡೇಟೆಡ್‌ ಎನಿಸಿಕೊಳ್ಳಬಹುದು. ವರ್ಷಗಳ ಹಿಂದಿನ ರೆಟ್ರೊ ತೊಡುಗೆಗಳು ಮತ್ತೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಬಹುದು. ಹಾಗಾದರೆ ಈ ಕ್ಷೇತ್ರದಲ್ಲಿ ಉದ್ಯೋಗ ಹುಡುಕಿಕೊಳ್ಳಲು, ನಿಮ್ಮದೇ ಆದ ಛಾಪು ಮೂಡಿಸಲು ಏನು ಮಾಡಬೇಕು, ಯಾವ ರೀತಿಯ ಕೋರ್ಸ್‌ಗಳಿವೆ, ಕೌಶಲಗಳನ್ನು ಬೆಳೆಸಿಕೊಳ್ಳಬೇಕು?

ಒಬ್ಬ ಫ್ಯಾಷನ್‌ ಡಿಸೈನರ್‌ ಆಗಲು ತಮ್ಮಲ್ಲಿರುವ ಸೃಜನಶೀಲತೆಯನ್ನು ಬಳಸಿಕೊಳ್ಳುವ ಬುದ್ಧಿವಂತಿಕೆ ಇರಬೇಕು; ಕಾಲಕ್ಕೆ ತಕ್ಕಂತೆ ಜನರನ್ನು ಆಕರ್ಷಿಸುವ ವಿನ್ಯಾಸಗಳನ್ನು ಸೃಷ್ಟಿಸುವ ಛಾತಿ ಇರಬೇಕು; ಫ್ಯಾಷನ್‌ ಉಡುಗೆಯ ಟ್ರೆಂಡ್‌ಗಳ ಬಗ್ಗೆ ಅರಿವಿರಬೇಕು. ಯಶಸ್ವಿ ಫ್ಯಾಷನ್ ಡಿಸೈನರ್‌ ಆಗಬೇಕೆಂದರೆ ಹೆಚ್ಚಿನ ಪರಿಶ್ರಮ ಹಾಗೂ ನಿರಂತರ ಕಲಿಕೆಯಿಂದ ಮಾತ್ರ ಸಾಧ್ಯ.

ಉಡುಪು ವಿನ್ಯಾಸದಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ.

ಹೈ ಸ್ಟ್ರೀಟ್‌ ಫ್ಯಾಷನ್‌: ಇದು ಬಹಳಷ್ಟು ಉದ್ಯೋಗಾವಕಾಶಗಳಿರುವ ವಿಭಾಗ. ಉಡುಪುಗಳನ್ನು ದೊಡ್ಡ ಪ್ರಮಾಣದಲ್ಲಿ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಗ್ರಾಹಕರ ಖರೀದಿಯ ರೀತಿ, ಚಳಿಗಾಲ, ಬೇಸಿಗೆಗಾಲ.. ಹೀಗೆ ಬದಲಾಗುವ ಋತುಮಾನಗಳಿಗೆ ತಕ್ಕಂತೆ ವಿನ್ಯಾಸ ಮಾಡುವ ಚಾಕಚಕ್ಯತೆ ಇರಬೇಕಾಗುತ್ತದೆ.

ರೆಡಿ ಟು ವೇರ್‌: ಖ್ಯಾತ ವಿನ್ಯಾಸಕರು ಕಡಿಮೆ ಸಂಖ್ಯೆಯಲ್ಲಿ ಉಡುಪುಗಳನ್ನು ವಿನ್ಯಾಸ ಮಾಡುವ ವಿಭಾಗವಿದು.

ಹಾಟ್‌ ಕುಚೂರ್‌: ಫ್ಯಾಷನ್‌ ಶೋನಲ್ಲಿ ರೂಪದರ್ಶಿಗಳು, ಸೆಲೆಬ್ರಿಟಿಗಳು, ಸಿನಿಮಾ ತಾರೆಯರು ಕ್ಯಾಟ್‌ವಾಕ್‌ ಮಾಡುವಾಗ ಧರಿಸುವ ಈ ಉಡುಪುಗಳನ್ನು ಸಿದ್ಧಪಡಿಸಲು ಅಪಾರ ಶ್ರಮ, ಸಮಯ ಬೇಕಾಗುತ್ತದೆ. ಸಾಮಾನ್ಯವಾಗಿ ಡಿಸೈನರ್‌ ಬ್ರ್ಯಾಂಡ್‌ ಅನ್ನು ಪ್ರಚಾರ ಮಾಡಲು ಇದನ್ನು ಬಳಸಿಕೊಳ್ಳುವ ಪರಿಪಾಠವಿದೆ.

ಕೌಶಲಗಳು
ಎಲ್ಲಾ ರೀತಿಯ ಬಟ್ಟೆ ಕತ್ತರಿಸುವ ಹಾಗೂ ಹೊಲಿಯುವ ಯಾಂತ್ರಿಕ ಕೌಶಲಗಳ ತಿಳಿವಳಿಕೆ ಇರಬೇಕು. ಜೊತೆಗೆ ಬಟ್ಟೆಗಳ ಗುಣಮಟ್ಟ, ಬಾಳಿಕೆಯನ್ನು ತಿಳಿದಿರಬೇಕು.

ಬಟ್ಟೆಗಳ ವಿನ್ಯಾಸ ಮಾಡುವ ಮುನ್ನ ಯಾವ ವಿನ್ಯಾಸವಿರಬೇಕು ಎಂದು ಚಿತ್ರಿಸಿ ಅದಕ್ಕೆ ಬಣ್ಣ ತುಂಬುವ ಮೂಲಕ ಪ್ರಯೋಗ ಮಾಡಿ ನೋಡಿ. ಹೀಗೆ ಪ್ರಯೋಗ ಮಾಡುವಾಗ ಯಾವ ಮೈಕಟ್ಟಿಗೆ ಆ ವಿನ್ಯಾಸದ ಬಟ್ಟೆಗಳು ಸೂಕ್ತ ಎನಿಸುತ್ತವೆ ಎಂಬುದನ್ನು ಕೂಡ ಚಿತ್ರಿಸಿ ಪರೀಕ್ಷಿಸಿ. ಇದು ಫ್ಯಾಷನ್‌ನ ಕಲಿಕೆಯ ಬಹುಮುಖ್ಯ ಭಾಗ.

ವಿನ್ಯಾಸಕರಾಗುವ ಮೊದಲು ಹಿಂದಿನ ವಿನ್ಯಾಸಗಳು ಹಾಗೂ ಟ್ರೆಂಡ್‌ಗಳ ಬಗ್ಗೆ ತಿಳಿದಿರಬೇಕು. ಯಾವ ಉಡುಗೆಗಳು ಹೆಚ್ಚು ಜನಪ್ರಿಯವಾಗಿವೆ, ಅವು ಯಾವ ಸಮಯದಲ್ಲಿ ಮಾರುಕಟ್ಟೆಗೆ ಬಂದಿವೆ ಎಂಬ ಮಾಹಿತಿಯೂ ಅಗತ್ಯ.

ಫ್ಯಾಷನ್‌ ಮಾರುಕಟ್ಟೆಯಲ್ಲಿ ನಡೆಯುವ ಆಗುಹೋಗುಗಳ ಕುರಿತ ಮಾಹಿತಿ ಅಪ್‌ಡೇಟ್‌ ಮಾಡಿಕೊಳ್ಳಬೇಕು. ಜನರ ಅಭಿರುಚಿ ಹಾಗೂ ಬೇಡಿಕೆಗಳ ಬಗ್ಗೆ ತಿಳಿವಳಿಕೆ ಇದ್ದರೆ ಉತ್ತಮ.

ಅರ್ಹತೆ
ಫ್ಯಾಷನ್‌ ಡಿಸೈನರ್‌ ಆಗಲು ಅದರದ್ದೇ ಆದ ಕಲಿಕಾ ಕ್ರಮಗಳಿವೆ. ಹೆಚ್ಚಿನ ಕಲಿಕೆಗಾಗಿ ಯಶಸ್ವಿ ವಿನ್ಯಾಸಕರಾಗಲು ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ಮಾಡಬಹುದು. ಅದಕ್ಕಾಗಿಯೇ ಇರುವಂತಹ ಬ್ಯಾಚುಲರ್ ಆಫ್ ಫ್ಯಾಷನ್ ಡಿಸೈನಿಂಗ್, ಬಿ.ಎಸ್‌ಸಿ. ಇನ್ ಫ್ಯಾಷನ್ ಡಿಸೈನಿಂಗ್, ಡಿಪ್ಲೊಮಾ ಇನ್ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗಳನ್ನು ಮಾಡಬಹುದು. ಕಲೆ ಮತ್ತು ವಿನ್ಯಾಸ, ಜವಳಿ ತಂತ್ರಜ್ಞಾನ, ಸಿದ್ಧ ಉಡುಪು ತಂತ್ರಜ್ಞಾನದ ಅರಿವಿದ್ದರೆ ಉತ್ತಮ. ಇದಲ್ಲದೆ ಅಲ್ಪಾವಧಿಯ ಆರು ತಿಂಗಳಿನ ಕೋರ್ಸ್‌ ಕೂಡ ಮಾಡಬಹುದು. ಈ ಕಲಿಕೆಯಿಂದ ಹೊಸ ಶೈಲಿಯ ಉಡುಪುಗಳನ್ನು ವಿನ್ಯಾಸ ಮಾಡುವ ಜ್ಞಾನ ಮತ್ತು ಕೌಶಲ ಹೆಚ್ಚುತ್ತದೆ.

ಅವಕಾಶಗಳು
ಖ್ಯಾತ ಬ್ರ್ಯಾಂಡ್‌ನ ಸಿದ್ಧ ಉಡುಪುಗಳ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಹುದು. ಫ್ಯಾಷನ್‌ ಸ್ಟೈಲಿಸ್ಟ್‌ ಆಗಬಹುದು. ಬಣ್ಣಗಳ ತಜ್ಞ, ಫ್ಯಾಷನ್‌ ಇಲ್ಲಸ್ಟ್ರೇಟರ್‌, ಭವಿಷ್ಯದ ಫ್ಯಾಷನ್‌ ಟ್ರೆಂಡ್‌ ಬಗ್ಗೆ ಹೇಳುವ, ಫ್ಯಾಷನ್‌ ಬ್ಲಾಗ್‌ ಬರೆಯುವ ವೃತ್ತಿ ಕೂಡ ನಿಮ್ಮದಾಗಬಹುದು. ಇದಲ್ಲದೇ ಉಡುಗೊರೆಗಳ ಪ್ಯಾಕ್‌ ವಿನ್ಯಾಸ ಮಾಡುವ, ಮನೆಗಳಲ್ಲಿ ಅಲಂಕಾರಿಕ ವಸ್ತುಗಳನ್ನು ವಿನ್ಯಾಸ ಮಾಡುವ ಹೊಸ ಬಗೆಯ ಉದ್ಯೋಗಗಳು ಕೂಡ ಈಗ ಲಭ್ಯ.

ಫ್ಯಾಷನ್‌ ಡಿಸೈನಿಂಗ್ ಶಿಕ್ಷಣ ಸಂಸ್ಥೆಗಳು
ಭಾರತದಲ್ಲಿ ಅನೇಕ ಪ್ರತಿಷ್ಠಿತ ಫ್ಯಾಷನ್ ಡಿಸೈನಿಂಗ್ ವಿದ್ಯಾಸಂಸ್ಥೆಗಳಿವೆ. ಅಂತಹ ವಿದ್ಯಾಸಂಸ್ಥೆಗಳಿಗೆ ಸೇರಬೇಕೆಂದರೆ, ಪ್ರವೇಶ ಪರೀಕ್ಷೆ ಬರೆಯಬೇಕು. ಪರೀಕ್ಷೆ ಬರೆಯುವ ಮುನ್ನ ಫ್ಯಾಷನ್‌ ಡಿಸೈನಿಂಗ್‌ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಪಡೆದುಕೊಂಡಿರಬೇಕು. ಪ್ರತಿಷ್ಠಿತ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (NIFT)ಸಂಸ್ಥೆಯ ಶಾಖೆಗಳು ಬೆಂಗಳೂರು ಸೇರಿದಂತೆ ಹೈದರಾಬಾದ್‌, ಚೆನ್ನೈ, ಕಣ್ಣೂರು, ಮುಂಬೈ ಇನ್ನೂ ಹಲವು ಕಡೆಯಲ್ಲಿವೆ. ಈ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆಯಬಹುದು. ಅದಲ್ಲದೆ, ಸೃಷ್ಟಿ ಸ್ಕೂಲ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಬೆಂಗಳೂರು, ಇಂಟರ್‌‌ನ್ಯಾಷನಲ್ ಇನ್‌‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಬೆಂಗಳೂರು, ಇಂಡಿಯನ್ ಸ್ಕೂಲ್ ಆಫ್ ಡಿಸೈನ್ ಅಂಡ್ ಇನ್ನೋವೇಶನ್, ಮುಂಬೈ ಇತ್ಯಾದಿಗಳಲ್ಲಿ ಕೋರ್ಸ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT