ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠಪಾಠ ಕೈ ಹಿಡಿಯದು!

Last Updated 6 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಶಿಕ್ಷಣಕ್ಕೆ ಕಲಿಕೆ ಮತ್ತು ನೆನಪು ಎಂಬುದೇ ಮೂಲಾಧಾರ. ಕಲಿತ ವಿಷಯ ನೆನಪಿನೊಳಗೆ ಹೇಗೆ ಬಂದು ಸೇರಬೇಕು ಎಂಬುದು ಮುಖ್ಯ. ಬಹುತೇಕ ವಿದ್ಯಾರ್ಥಿಗಳ ಕಲಿಕೆ ಮಸುಕಾಗುವುದು ಮಕ್ಕಳು ಕಲಿಯುವ ಮತ್ತು ಶಿಕ್ಷಕರು ಕಲಿಸುವ ಕೆಲವು ವಿಧಾನಗಳಿಂದ. ಅದರಲ್ಲಿ ಮೊದಲನೆಯದು ಕಂಠಪಾಠ ವಿಧಾನ. ಈ ಪದ್ಧತಿಗೆ ಉರು ಹೊಡೆಯುವುದು, ಗಟ್ಟು ಮಾಡುವುದು, ಗಿಳಿಯೋದು ಎಂದೂ ಕರೆಯುವ ರೂಢಿಯಿದೆ.

ಕಂಠಪಾಠದ ವೈಫಲ್ಯಗಳು

ಹಲವರು ಗಮನಿಸಿರಬಹುದು, ಪರೀಕ್ಷೆಯಲ್ಲಿ ಬರೆಯುವಾಗ ಉರು ಹೊಡೆದ ಉತ್ತರಗಳಲ್ಲಿ ಮಧ್ಯೆ ಒಂದು ವಾಕ್ಯ ಕೈಕೊಟ್ಟರೂ ಸಾಕು, ಆ ಉತ್ತರದ ಮುಂದಿನ ಭಾಗವೆಲ್ಲ ಮರೆತೇ ಹೋಗುತ್ತದೆ. ಪರಿಣಾಮ, ಇಡೀ ವರ್ಷ ಪಟ್ಟ ಕಷ್ಟ ಒಂದು ಕ್ಷಣದಲ್ಲಿ ನಷ್ಟವಾಗಿಬಿಡುತ್ತದೆ. ವೇದಿಕೆಯ ಮೇಲೆ ಭಾಷಣ ಮಾಡುವ ಹುಡುಗ ಕೇವಲ ಒಂದು ಸಾಲು ಮರೆತಿದ್ದಕ್ಕೆ ಭಾಷಣವನ್ನೇ ನಿಲ್ಲಿಸಿಬಿಡುತ್ತಾನೆ. ಚೆನ್ನಾಗಿ ಕಂಠಪಾಠ ಮಾಡಿದರೂ ತರಗತಿಗೆ ಯಾರೋ ಹೊಸಬರು ಬಂದು ಕೇಳಿದರೆ ಉತ್ತರ ಹೇಳಲು ತಡಬಡಿಸುತ್ತಾರೆ. ಕಂಠಪಾಠವನ್ನೇ ನಂಬಿಕೊಂಡ ಮಗುವೊಂದು ಮುಂದಿನ ದಿನಗಳಲ್ಲಿ ಒಳ್ಳೆಯ ಅಂಕ ಗಳಿಸಲಾಗದೆ ಕೇವಲ ಜಸ್ಟ್ ಪಾಸ್‌ಗೆ ತೃಪ್ತಿಪಡಬೇಕಾಗುತ್ತದೆ. ವಿಜ್ಞಾನದ ಯಾವುದೊ ಒಂದು ಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲಾಗದೇ ಕೇವಲ ಕಂಠಪಾಠದಿಂದಷ್ಟೇ ಕಲಿತು ಮಗಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸೋಲಬೇಕಾಗುತ್ತದೆ. ಇವೆಲ್ಲ ಕಂಠಪಾಠ ಎಂಬ ಕಲಿಕಾ ಕ್ರಮ ನೀಡಿದ ವೈಫಲ್ಯಗಳು.

ಕಂಠಪಾಠ ಕಲಿಕೆ ಅಥವಾ ಉರು ಹೊಡೆಯುವುದು ಎಂದರೆ ವಿಷಯದ ಕಲ್ಪನೆಯಿಲ್ಲದೇ, ಅದರ ಭಾವಾರ್ಥವನ್ನು ಅರ್ಥ ಮಾಡಿಕೊಳ್ಳದೇ, ಸತತವಾಗಿ ಅದನ್ನೇ ಮತ್ತೆ ಮತ್ತೆ ಕಲಿಯುವುದು. ಕಲಿಯುವುದು ಎನ್ನುವುದಕ್ಕಿಂತ ನೆನಪಿಟ್ಟುಕೊಳ್ಳಲು ಪ್ರಯತ್ನಿಸುವುದು.

ಒಂದು ವಿಷಯ ಗಮನಿಸಿ. ನಾವು ಇತಿಹಾಸ ಓದುತ್ತೇವೆ. ಅದರ ರಾಜಕೀಯ, ಆರ್ಥಿಕತೆಯ ಪ್ರಭಾವ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ನಾವು ವಿಜ್ಞಾನ ಓದುತ್ತೇವೆ, ಆದರೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಆಗುವುದಿಲ್ಲ. ವಿಷಯದ ಅಕ್ಷರಗಳು, ಸಾಲುಗಳು ನೆನಪಿನಲ್ಲಿ ಉಳಿಯುತ್ತವೆ, ಆದರೆ ವಿಷಯ ಅರ್ಥವಾಗಿರುವುದಿಲ್ಲ. ಇದೇ ಕಂಠಪಾಠ ಪದ್ಧತಿಯ ದೊಡ್ಡ ವೈಫಲ್ಯ!

ಹಿಂದೆ ಕಂಠಪಾಠಕ್ಕೆ ಪ್ರಾಮುಖ್ಯ ನೀಡಲಾಗುತ್ತಿತ್ತು. ಆದರೆ ಇಷ್ಟೆಲ್ಲಾ ಬದಲಾವಣೆಯ ನಡುವೆಯೂ ಅದೇ ವಿಧಾನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದೇವೆ. ಇದು ತಪ್ಪು. ನೆನಪಿಡಿ, ಇದು ಮಗು ಹೊರ ಜಗತ್ತಿನಲ್ಲಿ ಜೀವಿಸಲು ಸಿದ್ಧತೆಯನ್ನು ಮಾಡಿಕೊಡುವುದಿಲ್ಲ. ಕಲ್ಪನೆಗಳನ್ನು ಮತ್ತು ಭಾವನೆಗಳನ್ನು ಹುಟ್ಟು ಹಾಕುವುದಿಲ್ಲ. ಆಲೋಚನೆಯಂತೂ ದೂರವೇ!

ಮಗುವೂ ಕೂಡ ತಾನು ಕಂಠಪಾಠ ಮಾಡಿದರಷ್ಟೇ ತಾನು ಪೂರ್ಣ ಕಲಿತು ಬಿಟ್ಟೆ ಎಂದು ಭಾವಿಸಿಕೊಳ್ಳಬಹುದು. ಆದ್ದರಿಂದಲೇ ಶಿಕ್ಷಣದ ಹೊಸ ಬದಲಾವಣೆಗಳು ಈ ಕಂಠಪಾಠ ಕಲಿಕೆಯನ್ನು ವಿರೋಧಿಸುತ್ತವೆ. ಅಮೆರಿಕಾದಲ್ಲಿ ವಿಜ್ಞಾನ ಮತ್ತು ಗಣಿತದ ಮಾನದಂಡಗಳು ವಾಸ್ತವಾಂಶಗಳ ತಿಳಿವಳಿಕೆಯ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಒತ್ತಿ ಹೇಳುತ್ತವೆ.

ಕಂಠಪಾಠದಿಂದ ಅರ್ಥಪೂರ್ಣ ಕಲಿಕೆ ಸಾಧ್ಯವಿಲ್ಲ

ಎಲ್ಲವನ್ನೂ ಕಂಠಪಾಠ ಮಾಡಲು ಸಾಧ್ಯವಿಲ್ಲ, ಮಾಡಿದರೂ ನೆನಪಿರುವುದಿಲ್ಲ: ನಿಮ್ಮ ತರಗತಿಗಳು ಆರೇಳು ಕಲಿಕಾ ವಿಷಯಗಳನ್ನು ಹೊಂದಿರುತ್ತವೆ. ನೀವು ಅದೆಲ್ಲವನ್ನೂ ಕಂಠಪಾಠ ಮಾಡಲು ಸಾಧ್ಯವಿಲ್ಲ. ಕಷ್ಟಪಟ್ಟು ಅಷ್ಟೊ ಇಷ್ಟೊ ಮಾಡಿದರೆ ಒತ್ತಡಕ್ಕೆ ಒಳಗಾಗಿ ಮರೆತು ಹೋಗುತ್ತೀರಿ. ಅಷ್ಟು ವಿಷಯಗಳಿಂದ ನೀವೇನು ಕಲಿತಿದ್ದೀರಿ ಎಂಬ ಪ್ರಶ್ನೆ ಮೂಡುತ್ತದೆ. ಕಲಿಕೆಯೆಂದರೆ ಹೊಸದನ್ನು ಕೂರಿಸುವುದಲ್ಲ, ಹಳೆಯದರೊಂದಿಗೆ ಜೋಡಿಸುವುದು.

ಯಾಂತ್ರಿಕವಾಗುತ್ತೀರಿ: ಕಂಠಪಾಠವೆಂದರೆ ಕಂಪ್ಯೂಟರ್ ಡೇಟಾ ಅಪ್‌ಲೋಡ್ ಮಾಡಿದ ಹಾಗೆ. ನೀವು ಏನನ್ನು ಲೋಡ್ ಮಾಡುತ್ತಿರೋ ಅಷ್ಟನ್ನು ಮಾತ್ರ ಹೊರ ಹಾಕುತ್ತದೆ. ನಿಮ್ಮ ಸೂಚನೆಯಲ್ಲಿ ಒಂಚೂರು ತಪ್ಪಿದ್ದರೂ ಕಂಪ್ಯೂಟರ್ ಮೌನವಹಿಸುತ್ತದೆ. ಕಂಠಪಾಠ ಮಾಡಿದರೆ ಇದೇ ರೀತಿ!

ಕಲಿಕೆ ಅರ್ಥವಾಗದ ಹೊರತು ಅದು ಸಿದ್ಧಿಸುವುದಿಲ್ಲ!: ಒಂದಿಷ್ಟು ಪ್ರಶ್ನೋತ್ತರಗಳನ್ನು ಉರು ಹೊಡೆದು ಪರೀಕ್ಷೆಗೆ ಸಿದ್ಧಗೊಂಡಿರುತ್ತೀರಿ. ಕೇಳುವ ಪ್ರಶ್ನೆಯನ್ನು ಬದಲಾಯಿಸಿ ಕೇಳಿದರೆ ನಿಮ್ಮಲ್ಲಿ ಉತ್ತರವಿಲ್ಲ. ನೀವು ಹೇಗೆ ಕಲಿತಿರುವಿರೋ ಹಾಗೆ ಕೇಳಿದರೆ ಮಾತ್ರ ಕಂಠಪಾಠ ಮಾಡಿದ್ದನ್ನು ಇಳಿಸಬಲ್ಲಿರಿ. ಆದರೆ ಕಲಿಕೆ ಸಂಪೂರ್ಣ ಅರ್ಥವಾಗಿದ್ದರೆ ಹೇಗೆ ಪ್ರಶ್ನೆಗಳನ್ನು ನೀಡಿದರೂ ಸರಾಗವಾಗಿ ಉತ್ತರ ನೀಡಬಲ್ಲಿರಿ.

ಕಲಿಕೆ ಕೊಡಬೇಕಾದದ್ದು ಖುಷಿಯನ್ನು, ಒತ್ತಡವನ್ನಲ್ಲ: ಉರು ಹೊಡೆದಿದ್ದನ್ನು ನೆನಪಿಸಿಕೊಳ್ಳಲು ಹೆಣಗಾಡುವುದು. ನೆನಪಾಗದಿದ್ದರೆ ಗಾಬರಿಯಾಗುವುದು. ಕಲಿಯುವಾಗಲೂ ಆತಂಕ, ನೆನಪು ಮಾಡಿಕೊಂಡು ಬರೆಯುವಾಗಲೂ ಆತಂಕ. ಒಟ್ಟಾರೆ ಒತ್ತಡ. ಕಲಿಸುವುದರ ಉದ್ದೇಶ ಒತ್ತಡ ಹೇರುವುದಲ್ಲ. ಮಗು ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾ ಹೋದಂತೆ ಅದರಲ್ಲೊಂದು ಅವರ್ಣನೀಯ ಸಂತಸ ಸಿಗುತ್ತದೆ. ಅದು ಕಂಠಪಾಠದಲ್ಲಿ ಇಲ್ಲ.

ಅಗತ್ಯವಿದ್ದರೆ ಇವುಗಳನ್ನು ಕಂಠಪಾಠ ಮಾಡಿ: ಓದಿನಲ್ಲಿ ಶಬ್ದ ಶಿಕ್ಷಾ ವಿಧಾನ, ರಸಾಯನ ಶಾಸ್ತ್ರದಲ್ಲಿ ಆವರ್ತಕ ಕೋಷ್ಟಕಗಳು, ಭಾಷೆಯಲ್ಲಿ ಪದ್ಯಗಳು, ಗಣಿತದಲ್ಲಿ ಮಗ್ಗಿ, ಸೂತ್ರಗಳು, ಕಾನೂನಿನ ಮೊಕದ್ದಮೆಗಳು, ಕಾಯ್ದೆಗಳು, ವಿಜ್ಞಾನದ ಮೂಲ ಸೂತ್ರಗಳು, ವೈದ್ಯಶಾಸ್ತ್ರದಲ್ಲಿ ಅಂಗ ರಚನೆ ಸಂಬಂಧಿತ ವಿಷಯ, ಇಸವಿಗಳು ಮುಂತಾದವು.

ಕಂಠಪಾಠ ಮಾಡದೆ ನೆನಪಿಡುವುದು ಹೇಗೆ?

ಕಲಿಕೆ ಎಂದರೆ ಹಳೆಯ ಮಾಹಿತಿಯೊಂದಿಗೆ ಹೊಸದನ್ನು ಜೋಡಿಸುವುದು ಎಂಬ ಮಾತಿದೆ. ಇದರಿಂದ ಕಲಿಕೆ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಕಂಠಪಾಠದ ಸಹಾಯವಿಲ್ಲದೆ ವಿಷಯವನ್ನು ನೆನಪಿಡುವುದಕ್ಕೆ ಅನೇಕ ದಾರಿಗಳಿವೆ.

ಪದೇ ಪದೇ ಓದುವುದು

ಇದನ್ನು ಪುನರಾವರ್ತನೆ ಅಂತ ಬೇಕಾದರೂ ಅಂದುಕೊಳ್ಳಿ. ಮೆದುಳಿಗೆ ಒಂದೇ ವಿಚಾರ ಪದೇಪದೇ ಹೋಗಿ ಮುಟ್ಟಿದಾಗ ಅದು ಶಾಶ್ವತ ನೆನಪಿಗೆ ಹೋಗಿ ತಲುಪುತ್ತದೆ ಅನ್ನುತ್ತದೆ ಮನೋವಿಜ್ಞಾನ. ಮತ್ತೆ ಮತ್ತೆ ಓದುವುದರಿಂದ ಓದಿದ ವಿಚಾರ ನೆನಪಿನಲ್ಲಿ ಉಳಿಯುತ್ತದೆ. ಮತ್ತು ಯಾವುದೇ ಸಮಯದಲ್ಲಿ ಕೈ ಕೊಡದೆ ಬೇಕೆಂದಾಗಲೆಲ್ಲಾ ಸಹಾಯಕ್ಕೆ ಬರುತ್ತದೆ.

ಓದಿದ್ದನ್ನು ಬರೆಯುವುದು

ಹತ್ತು ಬಾರಿ ಓದುವುದು ಒಂದು ಬಾರಿ ಬರೆಯುವುದಕ್ಕೆ ಸಮ ಎಂಬ ಮಾತಿದೆ. ಓದಿದ್ದೆಲ್ಲವನ್ನೂ ಬರೆಯಲಾಗದಿದ್ದರೂ ಸಂಕ್ಷಿಪ್ತವಾಗಿ ಸಾರಾಂಶ ರೂಪದಲ್ಲಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ವಿಷಯದ ಮೇಲೆ ಹಿಡಿತ ಸಾಧ್ಯವಾಗುತ್ತದೆ. ಆಗುವ ತಪ್ಪುಗಳನ್ನೆಲ್ಲಾ ತಿದ್ದಿಕೊಳ್ಳಲು ಅವಕಾಶ ಇರುವುದರಿಂದ ಸ್ಪಷ್ಟ ಕಲಿಕೆ ಸಾಧ್ಯ.

ಚಿತ್ರಗಳ ಸಹಾಯ

ಒಂದೊಂದು ವಿಷಯಕ್ಕೆ ಒಂದೊಂದು ಚಿತ್ರವನ್ನು ಸಮೀಕರಿಸಿಕೊಳ್ಳಬೇಕು. ಅದಕ್ಕೆ ಹತ್ತಿರದ ಚಿತ್ರವಾದರೆ ಇನ್ನೂ ಸುಲಭ. ನೀವು ಭಟ್ಟಿ ಇಳಿಸುವ ಚಿತ್ರವನ್ನು ಚೆನ್ನಾಗಿ ನೆನಪಿಟ್ಟುಕೊಂಡರೆ ಸಾಕು, ಅದಕ್ಕೆ ಸಂಬಂಧಿಸಿದ ಪೂರ್ಣ ವಿವರಣೆ ಅದರೊಂದಿಗೆ ಬರುವಂತೆ ಕಲಿತಿರಬೇಕು.

ಮೈಂಡ್ ಮ್ಯಾಪಿಂಗ್

ಇದೊಂದು ವಂಶವೃಕ್ಷ ತೆರನಾದ ಕಲ್ಪನೆ. ಆದರೆ ಇದು ವಿಷಯ ವೃಕ್ಷ. ಒಂದು ವಿಷಯದಿಂದ ಇನ್ನೊಂದಕ್ಕೆ ಮತ್ತು ಅದರಿಂದ ಮತ್ತೊಂದಕ್ಕೆ ಸಂಬಂಧ ಕೂಡಿಸಿಕೊಂಡು ನೆನಪಿಟ್ಟುಕೊಳ್ಳುವುದು. ಇತಿಹಾಸದ ಪಾಠಗಳು, ಕವಿ ಪರಿಚಯ, ವ್ಯಾಕರಣಾಂಶಕ್ಕೆ ಸಂಬಂಧಿಸಿದಂತೆ ಬಳಸಿಕೊಳ್ಳಬಹುದು.

ಮೊದಲ ಅಕ್ಷರ ಶ್ರೇಣಿ

ಮುಖ್ಯವಾದ ವಿಚಾರಗಳನ್ನು ನೆನಪಿಟ್ಟುಕೊಳ್ಳಲು ಅದರ ಮೊದಲ ಅಕ್ಷರಗಳನ್ನು ಆಯ್ದು ಒಂದು ಪದವನ್ನೊ, ವಾಕ್ಯವನ್ನೊ ಮಾಡಿಕೊಂಡು ನೆನಪಿಡುವುದು. ಉದಾಹರಣೆಗೆ: ದಿಕ್ಕುಗಳನ್ನು ನೆನಪಿಡಲು 'ಉಈಪೂಆದನೈಪವಾ' ಎಂಬ ಪದ ನೆನಪಿಟ್ಟುಕೊಂಡರೆ ಸಾಕು ಎಲ್ಲ ದಿಕ್ಕುಗಳು ಕ್ರಮವಾಗಿ ನೆನಪಾಗುತ್ತವೆ.

ಕಥಾರೂಪ

ಓದಿದ ವಿಷಯಗಳನ್ನು ಮನಸ್ಸಿನಲ್ಲಿ ಒಂದು ಕಥೆಯ ರೂಪದಲ್ಲಿ ಹೆಣೆದುಕೊಳ್ಳಬಹುದು. ಇತಿಹಾಸದ ಘಟನೆಗಳು, ಜೀವನ ಚರಿತ್ರೆ, ಜಲಚಕ್ರ ಹೀಗೆ ಅನೇಕ ವಿಷಯಗಳು ಇದಕ್ಕೆ ಸೂಕ್ತವಾಗಿವೆ. ಸಾಮಾನ್ಯವಾಗಿ ಕಥೆಯು ಮಗುವಿಗೆ ಆಸಕ್ತಿ ಕ್ಷೇತ್ರವಾಗಿರುವುದರಿಂದ ಮರೆಯುವ ಸಾಧ್ಯತೆ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT