ಗುರುವಾರ , ನವೆಂಬರ್ 14, 2019
19 °C

ಕಲಿಕೆ– ಅಭ್ಯಾಸ ಸಾಧನೆಗೆ ದಾರಿ

Published:
Updated:

ಕಲಾರ್ಣವ ಎನ್ನುವ ಒಂದು ಅದ್ಭುತ ಕಲಾ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಸಂಗೀತ, ನೃತ್ಯ ಮತ್ತು ಕಲೆಗೆ ಅರ್ಪಿಸಿಕೊಂಡಿರುವ ಗುರುವೊಬ್ಬರ ನೇತೃತ್ವದಲ್ಲಿ ಆ ಕಾರ್ಯಕ್ರಮ ನಡೆಯಿತು.

ಮಯೂರ ಸಂದೇಶ ಎನ್ನುವುದು ಅದರ ಒಂದು ಪ್ರಸ್ತುತಿ. ಒಬ್ಬ ತರುಣಿ ನವಿಲಿನ ಮೂಲಕ ಷಣ್ಮುಗನಿಗೆ ತನ್ನ ಪ್ರೀತಿಯ ಸಂದೇಶವನ್ನು ಕಳುಹಿಸುವುದು. ಇದರ ಅಂಗವಾಗಿ ವೇದಿಕೆಯ ಮೇಲೆ ಒಂದು ದೊಡ್ಡ ಚೌಕಟ್ಟಿನಲ್ಲಿ ರಂಗೋಲಿಯನ್ನು ಎದ್ದು ಕಾಣುವಂತೆ ಹರಡಲಾಗಿತ್ತು. ಅದರ ಮೇಲೆ ನೃತ್ಯದ ಮೂಲಕ, ನವಿಲಿನ ಚಿತ್ರವನ್ನು ಬಿಡಿಸುವ ಅದ್ಭುತ ಕೌಶಲವನ್ನು ಕಲಾವಿದೆ ತೋರಿಸಿದರು. ಅನೇಕರಿಗೆ ಕೈಯಿಂದ ಬಿಡಿಸಲು ಬರುವುದಿಲ್ಲ (ನನಗೂ ಅಂತಹ ಕೌಶಲಗಳು ಗೊತ್ತಿಲ್ಲ). ಆದರೆ ಈಕೆ ನೃತ್ಯದ ಮೂಲಕ ಬಿಡಿಸಿದ ನವಿಲಿನ ಚಿತ್ರ ಅದ್ಭುತವಾಗಿತ್ತು.

ಇಂತಹ ಸಾಧಕರನ್ನು ನೋಡಿಯೇ ಸಂತ ತ್ಯಾಗರಾಜ ಅವರು ‘ಎಂದರೋ ಮಹಾನುಭಾವುಲು’ ಎಂದು ಹಾಡಿದರೇನೋ ಎನಿಸುತ್ತದೆ. ವಾಸ್ತವವಾಗಿ ಅವರ ಕಚೇರಿಗೆ ಬಂದ ಒಬ್ಬ ವ್ಯಕ್ತಿ ಯಾವುದೋ ಒಂದು ಹಾಡನ್ನು ನಿರ್ದಿಷ್ಟ ರಾಗದಲ್ಲಿ ಹಾಡಲು ಕೇಳಿದನಂತೆ. ಆ ರಾಗದಲ್ಲಿ ಅದನ್ನು ಹಾಡಲು ಬರುವುದಿಲ್ಲ ಎಂದಾಗ ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿ ಸ್ವಯಂ ಹಾಡಿದನಂತೆ. ಆಗ ಅವನ ಪಾದಗಳಿಗೆರಗಿ ತ್ಯಾಗರಾಜ ಅವರು ಕ್ಷಮಾಪಣೆ ಕೇಳಿ ‘ಎಂದರೋ ಮಹಾನುಭಾವಲು, ಅಂದರಿಕಿ ವಂದನಮುಲು’ ಎಂದು ಹಾಡನ್ನು ರಚಿಸಿ ಹಾಡಿದರಂತೆ.

ಆಕೆ ನೃತ್ಯದ ಮೂಲಕ ನವಿಲಿನ ಚಿತ್ರ ಬಿಡಿಸುವುದನ್ನು ಹೇಗೆ ಕಲಿತರು ಎಂಬ ಪ್ರಶ್ನೆ ಉದ್ಭವವಾಗಬಹುದು. ಅಭ್ಯಾಸ ಬಲದಿಂದ. ಸತತ ಅಭ್ಯಾಸವಿಲ್ಲದೆ ಅಂತಹ ಕೌಶಲ ಬಾರದು. ಕಲಿಕೆ ಮತ್ತು ಅಭ್ಯಾಸಗಳ ನೆರವಿನಿಂದ ಸಾಧ್ಯವಿಲ್ಲದ್ದನ್ನೂ ಮಾಡಿ ತೋರಿಸಬಹುದು ಎನ್ನುವ ಸಂದೇಶವನ್ನು ಈ ಪ್ರಸಂಗ ಸಾರುತ್ತದೆ.
ನಿಮ್ಮ ಎದುರು ಇರುವ ಎರಡೇ ಕರ್ತವ್ಯಗಳು ಕಲಿಕೆ ಮತ್ತು ಅಭ್ಯಾಸ.

‘ಆಗ ಅವರು ಎಷ್ಟು ಹೇಳುತ್ತಿದ್ದರು, ನಾನು ವಿದ್ಯೆ ಕಡೆ ಗಮನ ಕೊಡಲಿಲ್ಲ. ಅವರ ಮಾತು ಕೇಳಿದ್ದಿದ್ದರೆ ನನ್ನ ಜೀವನ ಹೀಗಿರುತ್ತಿರಲಿಲ್ಲ’ ಎಂದು ಯುವಕನೊಬ್ಬ ತನ್ನ ಅಕ್ಕನ ಬಳಿ ಹೇಳಿಕೊಂಡನಂತೆ.

ಈ ವಯಸ್ಸಿನಲ್ಲಿ ಹಿರಿಯರಿಂದ, ಮಾರ್ಗದರ್ಶಿಗಳಿಂದ, ಗುರುಗಳಿಂದ ಸಿಗುವ ಹಿತನುಡಿಗಳು ನಿಮಗೆ ಆಪ್ಯಾಯಮಾನವಾಗಿ ಕಾಣದೇ ಹೋಗಬಹುದು. ಕಾರಣ ಭವಿಷ್ಯದ ಕುರಿತು ನೀವು ಹೆಚ್ಚು ಯೋಚಿಸದೆ ಕೇವಲ ವರ್ತಮಾನದ ಲೋಕದಲ್ಲಿಯೇ ವಿಹರಿಸುತ್ತಿರುವ ಬಯಕೆಯನ್ನು ಹೊಂದಿರುವುದು.

ಆದರೆ ನಮ್ಮ ಅನುಭವದ ಹಿನ್ನೆಲೆಯಲ್ಲಿ, ನಾವು ಮಾಡಿದ ತಪ್ಪುಗಳ ಹಿನ್ನೆಲೆಯಲ್ಲಿ ಈ ಹಿತನುಡಿಗಳನ್ನು ನಿಮಗೆ ತಲುಪಿಸುತ್ತೇವೆ ಎನ್ನುವುದನ್ನು ನೆನಪಿಟ್ಟುಕೊಂಡರೆ ಅವುಗಳು ನಿಮಗೆ ದಾರಿದೀಪಗಳಾಗುತ್ತವೆ.

ಪ್ರತಿಕ್ರಿಯಿಸಿ (+)