ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕ್ರೀಡೆಗೆ‘ಎಜುಸ್ಪೋರ್ಟ್ಸ್‌’

Last Updated 12 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಆಟದ ಮೈದಾನಗಳು ಎಲ್ಲಿ ಹೆಚ್ಚಿರುತ್ತವೆಯೋ ಅಲ್ಲಿ ಆಸ್ಪತ್ರೆಗಳ ಅಗತ್ಯ ಅಷ್ಟಾಗಿ ಬರುವುದಿಲ್ಲ. ಆಟೋಟ, ದೈಹಿಕ ಕಸರತ್ತಿನಿಂದ ಆರೋಗ್ಯ ಮತ್ತು ಸದೃಢ ಸಮಾಜ ನಿರ್ಮಾಣ ಸಾಧ್ಯ. ಹಾಗಾಗಿ ಶಾಲೆಗಳಲ್ಲಿ ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗುವುದು ಮುಖ್ಯ. ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚುವುದರ ಜತೆಗೆ ಮನೋಬಲವೂ ವೃದ್ಧಿಸುತ್ತದೆ. ಶಿಸ್ತು, ಸಂಯಮ ಮತ್ತು ಕ್ರೀಡಾಸ್ಪೂರ್ತಿಯೂ ಬೆಳೆಯುತ್ತದೆ ಎನ್ನುತ್ತಾರೆ ಕ್ರೀಡಾ ತಜ್ಞರು.

ವರ್ಷದಿಂದ ವರ್ಷಕ್ಕೆ ನಗರದಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇವೆ ಬಹುತೇಕ ಈ ಶಾಲೆಗಳಲ್ಲಿ ಕನಿಷ್ಠ ಮೈದಾನವೂ ಇಲ್ಲ. ಇದರಿಂದ ಮಕ್ಕಳ ಆಟೋಟವಂತೂ ಅಷ್ಟಕ್ಕಷ್ಟೆ. ನಗರದ ಕೆಲ ಶಾಲೆಗಳಲ್ಲಿ ಆಟದ ಮೈದಾನಗಳೇನೋ ಇವೆ, ಆದರೆ ವ್ಯವಸ್ಥಿತ ಕ್ರೀಡಾ ಶಿಕ್ಷಣ ದೊರೆಯುತ್ತಿಲ್ಲ ಎಂಬ ಕೊರಗಿದೆ.

ಬಹುತೇಕ ಶಾಲೆಗಳು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಇತರ ವಿಷಯಗಳಿಗೆ ಆದ್ಯತೆ ನೀಡುತ್ತಿವೆ. ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರತಿ ಶಾಲೆಯಲ್ಲೂ ತರಗತಿವಾರು ವಿದ್ಯಾರ್ಥಿಗಳಿಗೆ ದಿನಕ್ಕೆ 40 ನಿಮಿಷ (ಒಂದು ಪಿರಿಯಡ್‌) ಕ್ರೀಡೆಗೆಂದು ಮೀಸಲೇನೋ ಇಡಲಾಗಿದೆ. ಆದರೆ ವ್ಯವಸ್ಥಿತ ಕಾರ್ಯವಿಧಾನ ಅಳವಡಿಸಿಕೊಳ್ಳದ ಕಾರಣ ಈ ಅವಧಿ ಸದ್ಬಳಕೆ ಆಗುತ್ತಿಲ್ಲ ಎಂಬ ಆರೋಪವಿದೆ.

ಕ್ರೀಡೆಯೊಂದಿಗೆ ಸಮಗ್ರ ಶಿಕ್ಷಣ: ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ‘ಎಜುಸ್ಪೋರ್ಟ್ಸ್‌’, ಕ್ರೀಡೆಯೊಂದಿಗೆ ಸಮಗ್ರ ಶಿಕ್ಷಣದ ಪರಿಕಲ್ಪನೆ ಕಟ್ಟಿಕೊಂಡು 2009ರಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ‘ಸ್ಪೋರ್ಟ್ಸ್‌ವಿಲೇಜ್‌’ ಕಂಪನಿಯ ಅಂಗ ಸಂಸ್ಥೆ. ದೇಶದಾದ್ಯಂತ ಹಲವಾರು ಶಾಲೆಗಳಲ್ಲಿ ತನ್ನ ಜಾಲ ಹೊಂದಿರುವ ಈ ಸಂಸ್ಥೆ, ಬೆಂಗಳೂರಿನ 45 ಖಾಸಗಿ ಶಾಲೆಗಳು ಸೇರಿದಂತೆ ರಾಜ್ಯದ 75 ಶಾಲೆಗಳ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಕ್ರೀಡಾ ಶಿಕ್ಷಣ ನೀಡುತ್ತಿದೆ.

ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ರೀಡೆಗೆ ಪ್ರತ್ಯೇಕ ಪಠ್ಯಕ್ರಮ, ಲೆಸನ್‌ ಪ್ಲಾನ್‌, ಕ್ರೀಡಾ ತರಬೇತಿ ವಿಧಾನ, ಮೌಲ್ಯಮಾಪನ ಕ್ರಮವನ್ನು ಇದು ರೂಪಿಸಿದೆ. ಈ ಮೂಲಕ ಪ್ರತಿ ವಿದ್ಯಾರ್ಥಿಗಳೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು, ಆ ಮೂಲಕ ಅವರಲ್ಲಿ ಲವಲವಿಕೆ, ಉಲ್ಲಾಸ, ಉತ್ಸಾಹ ಮೂಡಿ ಅವರ ದೈಹಿಕ ಸಾಮರ್ಥ್ಯ ಹೆಚ್ಚಾಗಬೇಕು ಎಂಬುದು ಇದರ ಆಶಯ.

ಸೌಮಿಲ್
ಸೌಮಿಲ್

ಜಾಗದ ಸದ್ಬಳಕೆ: ಶಾಲೆಯಲ್ಲಿ ಆಟದ ಮೈದಾನ ಕಿರಿದಾಗಿದ್ದರೆ ಅದಕ್ಕೆ ತಕ್ಕಂತೆ ಯೋಜನೆಯನ್ನು ಈ ಸಂಸ್ಥೆ ರೂಪಿಸುತ್ತದೆ. ಇರುವ ಜಾಗವನ್ನೇ ಸದ್ಬಳಕೆ ಮಾಡಿಕೊಂಡು, ಮಕ್ಕಳು ದೈಹಿಕ ಕಸರತ್ತು ನಡೆಸುವಂತೆ ಇದು ನೋಡಿಕೊಳ್ಳುತ್ತದೆ. ತನ್ನೊಡನೆ ಒಡಂಬಡಿಕೆ ಮಾಡಿಕೊಳ್ಳುವ ಶಾಲೆಗೆ ಅಗತ್ಯವಿರುವ ನುರಿತ ದೈಹಿಕ ಶಿಕ್ಷಕರನ್ನೂ ಇದು ನಿಯೋಜಿಸುತ್ತದೆ. ಅಲ್ಲದೆ ಮಕ್ಕಳ ಆಟೋಟಕ್ಕೆ ಬೇಕಾದ ಕ್ರೀಡಾ ಪರಿಕರಗಳನ್ನೂ ಒದಗಿಸುತ್ತದೆ. ಇದೆಲ್ಲದರ ಜತೆಗೆ ಶಾಲಾ ಹಂತ, ಅಂತರಶಾಲಾ ಹಂತದ ಸೇರಿದಂತೆ ವಿವಿಧ ಹಂತದ ಕ್ರೀಡಾಕೂಟಗಳನ್ನು ಆಯೋಜಿಸಿ ಮಕ್ಕಳನ್ನು ಕ್ರೀಡೆಯತ್ತ ಸೆಳೆಯುವಂತೆ ಮಾಡುತ್ತದೆ.

ಅದರ ಜತೆಗೆ ಶಾಲೆಯ ಪ್ರತಿ ವಿದ್ಯಾರ್ಥಿಗಳ ದೈಹಿಕ ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸಿ, ಅವರ ಪೋಷಕರಿಗೆ ಮಗುವಿನ ‘ಡಯಟ್‌’ ಕುರಿತು ಸಲಹೆ, ಸೂಚನೆ, ಮಾರ್ಗದರ್ಶನವನ್ನು ನೀಡುತ್ತದೆ.

‘ನಮ್ಮ ಸಂಸ್ಥೆ ಕ್ರೀಡಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ 900ಕ್ಕೂ ಹೆಚ್ಚು ಶಾಲೆಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಅವುಗಳಲ್ಲಿ ಬೆಂಗಳೂರಿನ ಡೆಲ್ಲಿ ಪಬ್ಲಿಕ್‌ ಸ್ಕೂಲ್‌, ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌, ಲೆಗೆಸಿ ಸ್ಕೂಲ್‌, ಆರ್ಕಿಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌, ಅಗರದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಸೇರಿದಂತೆ 45 ಖಾಸಗಿ ಶಾಲೆಗಳೂ ಇವೆ. ದೇಶದಾದ್ಯಂತ ಅಂದಾಜು 5 ಲಕ್ಷ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ಕ್ರೀಡಾ ಶಿಕ್ಷಣವನ್ನು ನಮ್ಮ ಸಂಸ್ಥೆ ನೀಡುತ್ತಿದೆ’ ಎಂದು ಎಜುಸ್ಪೋರ್ಟ್ಸ್‌ನ ಸಿಇಒ ಸೌಮಿಲ್‌ ಮಜುಂದಾರ್‌ ಮಾಹಿತಿ ನೀಡುತ್ತಾರೆ.

ವಯಸ್ಸಿಗೆ ತಕ್ಕಂತೆ ಕ್ರೀಡೆ: ‘ಬೆಂಗಳೂರು, ಮುಂಬೈ ನಗರಗಳ ಮಕ್ಕಳಲ್ಲಿ ಸ್ಥೂಲ ಕಾಯದವರು ಹೆಚ್ಚಾಗುತ್ತಿದ್ದಾರೆ. ಕ್ರೀಡೆಗೆ ಒತ್ತನ್ನು ನೀಡದ ಕಾರಣ ಫಿಟ್‌ನೆಸ್‌ ಕೊರತೆಯಿದೆ. ಮಕ್ಕಳು ಓಡಬೇಕು, ಜಿಗಿಯಬೇಕು, ನೆಗೆಯಬೇಕು, ಕುಣಿಯಬೇಕು. ಇವುಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ಅದಕ್ಕೆ ಪೂರಕವಾಗಿ ಕ್ರೀಡಾ ಪಠ್ಯಕ್ರಮವನ್ನು ಸಿದ್ಧ‍ಪಡಿಸಿದ್ದೇವೆ. ನರ್ಸರಿ ಮಕ್ಕಳಿಗೆ ದೈಹಿಕ ಚಲನೆ ಮತ್ತು ಮೂಲಭೂತ ಕೌಶಲ, ಪ್ರಾಥಮಿಕ ಶಾಲಾ ಮಕ್ಕಳಿಗೆ ಬಹು ಕ್ರೀಡಾ ಕೌಶಲಾಭಿವೃದ್ಧಿ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗೆ ಕ್ರೀಡಾ ಕುಶಲತೆಯನ್ನು ಕಲಿಸುತ್ತೇವೆ. ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅವರ ಕಲಿಕೆಯನ್ನು ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಪ್ರಮಾಣೀಕೃತ ತರಬೇತಿದಾರರು ಮತ್ತು ಕೋಚ್‌ಗಳನ್ನು ಶಾಲೆಗಳಿಗೆ ಒದಗಿಸುತ್ತೇವೆ. ಯಾವುದೇ ಲಿಖಿತ ಪರೀಕ್ಷೆ ಮಾಡುವುದಿಲ್ಲ’ ಎನ್ನುತ್ತಾರೆ ಅವರು.

ಏಳು ಲಕ್ಷ ರೂಪಾಯಿ: ‘ವೃತ್ತಿಪರತೆಯಿಂದ ಮಾಡುವ ಈ ಕಾರ್ಯಕ್ಕೆ ನಿರ್ದಿಷ್ಟ ಶುಲ್ಕ ನಿಗದಿ ಮಾಡಿದ್ದೇವೆ. 1000 ವಿದ್ಯಾರ್ಥಿಗಳಿರುವ ಶಾಲೆಯೊಂದರಿಂದ ವರ್ಷಕ್ಕೆ ಅಂದಾಜು ₹ 7 ಲಕ್ಷ ಸಂಗ್ರಹಿಸಲಾಗುತ್ತಿದೆ. ಅಂದರೆ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ತಲಾ ₹ 700ರಿಂದ 800 ತಗಲುತ್ತದೆ’ ಎಂದು ಅವರು ವಿವರಿಸುತ್ತಾರೆ.

ಯಾವ ಕ್ರೀಡೆಗೆ ಒತ್ತು:ಅಥ್ಲೆಟಿಕ್‌, ಫುಟ್‌ಬಾಲ್‌, ವಾಲಿಬಾಲ್‌, ಬ್ಯಾಸ್ಕೆಟ್‌ ಬಾಲ್‌, ಬ್ಯಾಡ್ಮಿಂಟನ್‌, ಕ್ರಿಕೆಟ್‌, ಕಬ್ಬಡಿಗೆ ಕ್ರೀಡೆಗಳಿಗೆ ಎಜುಸ್ಪೋರ್ಟ್ಸ್‌ ಒತ್ತು ನೀಡುತ್ತದೆ. ವಿದ್ಯಾರ್ಥಿನಿಯರನ್ನು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕವಾಗಿ ಸಶಕ್ತರನ್ನಾಗಿಸಲು ‘ಶಕ್ತಿ’ ಎಂಬ ವಿಶೇಷ ಕಾರ್ಯಕ್ರಮವೂ ಇದೆ. ಇದು ಬಾಲಕಿಯರಲ್ಲಿ ಆತ್ಮ ಶಕ್ತಿ ಹೆಚ್ಚಿಸುವುದರ ಜತೆಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ.

ಮಾಹಿತಿಗೆ– 98860 04133(www.sportzvillage.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT