ಗುರುವಾರ , ಜೂಲೈ 9, 2020
28 °C

ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿಕ್ಸೂಚಿ: ವಿದ್ಯುಚ್ಛಕ್ತಿ, ಕಾಂತೀಯ ಪರಿಣಾಮ

ಶ್ರೀಲತ ಎಸ್‌. Updated:

ಅಕ್ಷರ ಗಾತ್ರ : | |

ವಿದ್ಯುಚ್ಛಕ್ತಿ ಮತ್ತು ಅದರ ಕಾಂತೀಯ(ಮ್ಯಾಗ್ನೆಟಿಕ್) ಪರಿಣಾಮಗಳನ್ನು ಅಭ್ಯಸಿಸುವಾಗ ಹಲವು ಪದಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ವಿದ್ಯುತ್ ಒಂದು ಬಗೆಯ ಎನರ್ಜಿ ಎಂಬುದಂತೂ ಗೊತ್ತೇ ಇದೆ. ಇಲ್ಲಿ ರೆಸಿಸ್ಟರ್ ಅಥವಾ ರೋಧಕವು ವಿದ್ಯುತ್ ಹರಿವಿಗೆ ನಿಗದಿತ ಪ್ರಮಾಣದಲ್ಲಿ ತಡೆ(ರೆಸಿಸ್ಟೆನ್ಸ್)ಯನ್ನು ಉಂಟುಮಾಡುತ್ತದೆ.

ಓಮ್‌ನ ನಿಯಮ: ಒಂದು ನಿರ್ದಿಷ್ಟ ತಾಪಮಾನದಲ್ಲಿ ರೆಸಿಸ್ಟರ್‌ ಮೂಲಕ ಹರಿಯುವ ವಿದ್ಯುತ್ (I) ಅದರ ನಡುವಿನ ವಿಭವಾಂತರಕ್ಕೆ (v– ವೋಲ್ಟೇಜ್‌) ನೇರ ಅನುಪಾತದಲ್ಲಿರುತ್ತದೆ. ಈ ರೆಸಿಸ್ಟರ್‌ಗಳನ್ನು ಸರಣಿ ಅಥವಾ ಸಮಾನಾಂತರ ರೀತಿಯಲ್ಲಿ ಜೋಡಿಸಬಹುದು.

ಸರಣಿ(ಸೀರೀಸ್)ಯಲ್ಲಿ ಸಂಯೋಜನೆಯ ರೆಸಿಸ್ಟನ್ಸ್‌ (ಪ್ರತಿರೋಧ) ವೈಯಕ್ತಿಕ ರೆಸಿಸ್ಟನ್ಸ್‌ಗಳ ಮೊತ್ತವಾಗುವುದರಿಂದ ಯಾವುದೇ ಒಂದು ರೆಸಿಸ್ಟನ್ಸ್‌ಗಿಂತ ಅಧಿಕವಾಗಿರುತ್ತದೆ. ಅದೇ ಸಮಾನಾಂತರ(ಪ್ಯಾರಲಲ್) ಜೋಡಣೆಯಲ್ಲಿ ಸಂಯೋಜನೆಯ ರೆಸಿಸ್ಟನ್ಸ್‌, ರೆಸಿಸ್ಟನ್ಸ್‌ಗಳ ಅನುರೂಪ(ರೆಸಿಪ್ರೋಕಲ್) ಗಳ ಮೊತ್ತವಾಗುವುದರಿಂದ, ಕನಿಷ್ಠ ರೆಸಿಸ್ಟನ್ಸ್‌ಗಿಂತಲೂ ಕಡಿಮೆಯಾಗಿರುತ್ತದೆ. ವಾಹಕದ ರೆಸಿಸ್ಟನ್ಸ್‌ ಅದರ ಉದ್ದಕ್ಕೆ ನೇರ ಮತ್ತು ಅಡ್ಡಕೊಯ್ತಕ್ಕೆ ವಿಲೋಮ ಅನುಪಾತದಲ್ಲಿದ್ದು, ವಸ್ತುವಿನ ಪ್ರಾಕೃತಿಕ ಗುಣ ಮತ್ತು ಉಷ್ಣಾಂಶವನ್ನು ಅವಲಂಬಿಸಿರುತ್ತದೆ.

ಮಿಶ್ರಲೋಹದ (ಅಲಾಯ್) ರೋಧಶೀಲತೆಯು (ರೆಸಿಸ್ಟಿವಿಟಿ) ಅದರ ಘಟಕ ಲೋಹಗಳಿಗಿಂತ ಹೆಚ್ಚಾಗಿರುವ ಕಾರಣ ಅದನ್ನು ವಿದ್ಯುತ್‌ನಿಂದ ಉಷ್ಣ ಉತ್ಪಾದಿಸುವ ಸಾಧನಗಳಲ್ಲಿ ಬಳಸಲಾಗುತ್ತದೆ. ವಿದ್ಯುತ್ ಇಸ್ತ್ರಿ ಪೆಟ್ಟಿಗೆ, ಹೀಟರ್‌ ವಿದ್ಯುತ್ ಪ್ರವಾಹದ ಉಷ್ಣೋತ್ಪಾದನಾ ಪರಿಣಾಮದ ತತ್ವವನ್ನು ಆಧರಿಸಿ ಕಾರ್ಯ ನಿರ್ವಹಿಸುತ್ತವೆ.

ಕಾಂತೀಯ ಪರಿಣಾಮ

ವಿದ್ಯುತ್ ಪ್ರವಾಹಕ್ಕೆ ಕಾಂತೀಯ ಪರಿಣಾಮ (ಮ್ಯಾಗ್ನೆಟಿಕ್‌ ಎಫೆಕ್ಟ್‌) ಉಂಟುಮಾಡುವ ಸಾಮರ್ಥ್ಯವಿದೆ. ವಿದ್ಯುತ್ ಮೋಟಾರ್ ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಮಾರ್ಪಡಿಸುತ್ತದೆ. ಇದಕ್ಕೆ ಫ್ಲೆಮಿಂಗ್‌ನ ಎಡಗೈ ನಿಯಮ ಅನ್ವಯವಾಗುತ್ತದೆ. ಆರ್ಮೇಚರ್ ಮತ್ತು ದಿಕ್ಪರಿವರ್ತಕಗಳು (ಕಮ್ಯುಟೇಟರ್) ಮೋಟಾರ್‌ನ ಪ್ರಮುಖ ಭಾಗಗಳು. ಪ್ರೇರಿತ (ಇಂಡ್ಯೂಸ್ಡ್) ವಿದ್ಯುತ್ ಪ್ರವಾಹದ ದಿಕ್ಕನ್ನು ಫ್ಲೆಮಿಂಗ್‌ನ ಬಲಗೈ ನಿಯಮ ಸೂಚಿಸುತ್ತದೆ. ಇದರ ಅನುಸಾರವಾಗಿ ಜೆನರೇಟರ್ ಕಾರ್ಯ ನಿರ್ವಹಿಸುತ್ತದೆ. ಜೆನರೇಟರ್ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಮಾರ್ಪಡಿಸುತ್ತದೆ.

ವಿದ್ಯುತ್ ನೇರ (ಡೈರೆಕ್ಟ್) ಅಥವಾ ಪರ್ಯಾಯ(ಆಲ್ಟರ್ನೇಟ್) ವಾಗಿರಬಹುದು. ಪರ್ಯಾಯ ವಿದ್ಯುತ್ ಅನ್ನು ದೂರದ ಸ್ಥಳಗಳಿಗೆ ಹೆಚ್ಚು ಶಕ್ತಿ ವ್ಯಯವಾಗದಂತೆ ರವಾನಿಸಬಹುದು. ಹೀಗಾಗಿ ಇದು ಹೆಚ್ಚು ಚಾಲ್ತಿಯಲ್ಲಿದೆ. ಭಾರತದಲ್ಲಿ 220 ವೋಲ್ಟೇಜ್‌ ಹಾಗೂ 50 Hz ಆವರ್ತ (ಫ್ರಿಕ್ವೆನ್ಸಿ) ವಿರುವ ಪರ್ಯಾಯ ವಿದ್ಯುತ್ ಶಕ್ತಿ ಮನೆಗಳಿಗೆ ಪೂರೈಕೆಯಾಗುತ್ತದೆ. ಭೂ ಸಂಪರ್ಕ (ಅರ್ಥಿಂಗ್‌) ತಂತಿ ಹಾಗೂ ಫ್ಯೂಸ್ ಸುರಕ್ಷತಾ ಸಾಧನಗಳು. ವಿದ್ಯುತ್ ಮಂಡಲ (ಸರ್ಕ್ಯೂಟ್‌)ದಲ್ಲಿ ಉಂಟಾಗುವ ಹ್ರಸ್ವ ಮಂಡಲ ಮತ್ತು ಓವರ್‌ಲೋಡ್‌ನಿಂದ ವಿದ್ಯುನ್ಮಂಡಲವನ್ನು ರಕ್ಷಿಸಲು ಫ್ಯೂಸ್‌ ಬಳಸಲಾಗುತ್ತದೆ. ಗೃಹಬಳಕೆಯ ವಿದ್ಯುತ್ ಉಪಕರಣಗಳಿಗೆ ವಿಭಿನ್ನ ವಿದ್ಯುತ್ ಪ್ರವಾಹದ ಅವಶ್ಯಕತೆ ಇರುವ ಕಾರಣ ಅವುಗಳ ಸೂಕ್ತ ಕಾರ್ಯನಿರ್ವಹಣೆಗಾಗಿ ಸಮಾನಾಂತರ ಮಂಡಲವನ್ನು ಬಳಸಲಾಗುತ್ತದೆ.

ಎಂಆರ್‌ಐ– ವೈದ್ಯಕೀಯ ರಂಗದಲ್ಲಿ ಕಾಂತೀಯತೆ ಉಪಯೋಗದ ಒಂದು ಉದಾಹರಣೆ.
ವಿದ್ಯುತ್ ಶಕ್ತಿಯ ವ್ಯಾವಹಾರಿಕ ಏಕಮಾನ - ಕಿಲೋವ್ಯಾಟ್‌ಗಂಟೆ (kWh=36X10,0000 Joules)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು