ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿರಲಿ ಪರೀಕ್ಷೆ ಪೂರ್ವತಯಾರಿ!

Last Updated 12 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳೇ, ವಾರ್ಷಿಕ ಪರೀಕ್ಷೆ ಇನ್ನೇನು ಹತ್ತಿರ ಬಂದೇ ಬಿಟ್ಟಿತು ಎಂಬ ಆತಂಕ ಬಿಟ್ಟುಬಿಡಿ. ಎಸ್‌ಎಸ್‌ಎಲ್‌ಸಿ/ಪಿಯುಸಿ ಓದುತ್ತಿರುವವರು ಮುಂದೇನಾಗಬೇಕು ಎಂಬುದರ ಬಗ್ಗೆ ಕನಸು ಕಟ್ಟಿಕೊಂಡಿರುತ್ತೀರಿ. ಆ ಗುರಿಯನ್ನು ತಲುಪಿ ಯಶಸ್ಸನ್ನು ಕಾಣಬೇಕು ಎಂದು ಹಗಲು– ರಾತ್ರಿ ಕಷ್ಟಪಡುವವರು ನಿಮ್ಮಲ್ಲಿ ಹಲವರು ಇರಬಹುದು.ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿ ಓದಿನ ಬಗ್ಗೆ ಏಕಾಗ್ರತೆಯನ್ನು ತಂದು ಕೊಡಲು ಹಲವು ಸುಲಭೋಪಾಯಗಳಿವೆ.

ಯಾರ ಒತ್ತಡಕ್ಕೂ ಮನಸ್ಸನ್ನು ಕೊಡದೆ, ನಿಮ್ಮ ವಿಶ್ವಾಸದ ಕಡೆ ಗಮನ ಕೊಟ್ಟು ಓದಲು ಪ್ರಾರಂಭಿಸಿ. ಓದಿದ ವಿಚಾರ ಮರೆತು ಹೋಗುತ್ತದೆ, ನನ್ನಿಂದ ಸಾಧ್ಯವಿಲ್ಲ ಎಂಬ ಭ್ರಮೆಯಿಂದ ದೂರವಿರಿ. ನೀವು ಇಷ್ಟು ದಿನಗಳೂ ಓದಿದ್ದು, ತರಗತಿಯಲ್ಲಿ ಕೇಳಿಸಿಕೊಂಡಿದ್ದು ಎಲ್ಲವೂ ನಿಮ್ಮ ಮಸ್ತಕದಲ್ಲಿ ಒಂದೆಡೆ ಶೇಖರವಾಗಿದೆ. ಸಮಾಧಾನದ ಮನಸ್ಸಿನಿಂದ ಅವೆಲ್ಲವನ್ನೂ ಸೋಮಾರಿತನ ಮಾಡದೆ, ಅತೀವ ನಂಬಿಕೆಯನ್ನು ಬೆಳೆಸಿಕೊಳ್ಳದೆ ಪುನರ್ ಮನನ ಮಾಡಿ. ತನ್ನಷ್ಟಕ್ಕೇ ಎಲ್ಲವೂ ನೆನಪಿಗೆ ಬರುತ್ತದೆ. ಮುಖ್ಯವಾಗಿ ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು.

ಈ ಸಮಯದಲ್ಲಿ ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ನಿನ್ನೆಯ ಶಕ್ತಿಯನ್ನು ಇವತ್ತಿಗೆ ಹೋಲಿಕೆ ಮಾಡಿಕೊಳ್ಳಿ. ಆತ್ಮಸ್ಥೈರ್ಯ ತಾನಾಗೇ ಬೆಳೆಯುತ್ತದೆ.

ಒಂದು ದಿನಕ್ಕೆ ಒಂದು ಪಠ್ಯವನ್ನು ಓದಿ. ಓದುವಾಗ ಪೆನ್ಸಿಲ್‌ನಿಂದ ಮುಖ್ಯವಾದ ಅಂಶ, ಸೂತ್ರ, ಘಟನೆಗಳ ಇಸವಿಗಳನ್ನು ಗುರುತು ಮಾಡಿಕೊಳ್ಳಿ. ಇದನ್ನು ಬೆಳಗಿನ ಜಾವವೇ ಮಾಡಿ.

ಸಾಯಂಕಾಲ ಬೆಳಿಗ್ಗೆ ಓದಿದ ಪಠ್ಯದ ಪ್ರಶ್ನೆಗಳಿಗೆ ಉತ್ತರಿಸಿ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವುದರಿಂದ, ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಬಗ್ಗೆ ಸಮಗ್ರ ಚಿತ್ರಣ ಸಿಗುತ್ತದೆ ಹಾಗೂ 3 ಗಂಟೆಯ ಅವಧಿಯಲ್ಲೇ ಉತ್ತರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತೀರಿ. ಯಾವ ಪ್ರಶ್ನೆಗೆ ಎಷ್ಟು ಸಮರ್ಪಕ ಉತ್ತರ ಬರೆಯಬೇಕು ಎಂಬ ಮಾಹಿತಿಗಳೂ ಸಿಗುತ್ತವೆ.

ಯಾವ ಪಠ್ಯದಲ್ಲಿ ಯಾವ ಅಧ್ಯಾಯವು ಸ್ವಲ್ಪ ಕಷ್ಟವೆನಿಸುತ್ತದೆಯೋ ಅದರ ಬಗ್ಗೆ ಹೆಚ್ಚಿನ ಗಮನವಿಟ್ಟು ಪುನರಾವರ್ತಿ ಓದಿ. ತಿಳಿಯದಿದ್ದಲ್ಲಿ ಶಿಕ್ಷಕರ ಮೂಲಕ ತಿಳಿದುಕೊಳ್ಳಿ. ಕಷ್ಟ ಎಂದು ಬಿಡಬೇಡಿ. ಅದರಲ್ಲಿ ಬರುವ ಒಂದು ಅಂಕದ ಪ್ರಶ್ನೆಯ ಉತ್ತರವೂ ಬಹಳ ಮುಖ್ಯ.

ಪರೀಕ್ಷೆಯ ಹಿಂದಿನ ದಿನ ಹೊಸದಾಗಿ ಏನನ್ನೂ ಓದಲು ಪ್ರಯತ್ನಿಸದಿರಿ.

ಸುಲಭ ಪ್ರಶ್ನೆಗೆ ಮೊದಲು ಉತ್ತರ
ಪರೀಕ್ಷಾ ಕೊಠಡಿಗೆ ಮೊದಲನೇ ದಿನ ಅರ್ಧಗಂಟೆ ಮುಂಚಿತವಾಗಿ ಹೋಗಿ ನಿಮ್ಮ ಸ್ಥಾನವನ್ನು ಅಲಂಕರಿಸಿ ಸಮಾಧಾನ ಚಿತ್ತದಿಂದ ಪ್ರಶ್ನೆಪತ್ರಿಕೆಯನ್ನು ಪಡೆಯಲು ಉತ್ಸುಕರಾಗಿರಿ. ಮೊದಲು ಗೊತ್ತಿರುವ, ಸುಲಭವಾದ ಪ್ರಶ್ನೆಗಳನ್ನು ಉತ್ತರಿಸಿ. ನಂತರ ಕಷ್ಟ ಎನಿಸಿದ ಪ್ರಶ್ನೆಗೆ ಒತ್ತಡ ಕಡಿಮೆಯಾಗಿ ಮನಸ್ಸು ತನ್ನಷ್ಟಕ್ಕೆ ನಿಮಗೆ ಅರಿವಿಲ್ಲದಂತೆ ದಾರಿ ಮಾಡಿಕೊಡುತ್ತದೆ.

ಚಂದದ ಬರವಣಿಗೆಯೂ ಒಂದು ಕಲೆ. ಇದು ಅಭ್ಯಾಸದಿಂದ ಬರುವ ಒಂದು ಕಲಾಶಕ್ತಿ. ಪರೀಕ್ಷೆಯಲ್ಲಿ ಹಾಳೆಗಳನ್ನು ತುಂಬಿಸಬೇಕೆಂದು ದಪ್ಪದಪ್ಪವಾಗಿ ಅಕ್ಷರಗಳನ್ನು ಬರೆಯುವುದು ಬೇಡ. ಸಹಜ ರೀತಿಯಲ್ಲಿ ಇರಲಿ ನಿಮ್ಮ ಬರವಣಿಗೆ. ಅತಿ ಶೀಘ್ರವೂ ಬೇಡ ಅತಿ ನಿಧಾನಗತಿಯೂ ಬೇಡ.ನಿಮ್ಮ ಬರವಣಿಗೆ ಮತ್ತೊಬ್ಬರಿಗೆ ಓದಲು ಸಾಧ್ಯವಾಗುವಂತಿರಬೇಕು. ಕಾಗುಣಿತ, ಅಕ್ಷರಗಳು ತಪ್ಪಿಲ್ಲದೇ ಬರೆದರೆ ಅರ್ಧ ಪರೀಕ್ಷೆ ಗೆದ್ದಂತೆ.

ವಿಜ್ಞಾನ, ಗಣಿತದ ಪರೀಕ್ಷೆಗಳಲ್ಲಿ ಸೂತ್ರಗಳನ್ನು ಬರೆಯುವುದು, ಹಂತ ಹಂತವಾಗಿ ಲೆಕ್ಕಗಳನ್ನು ಬಿಡಿಸುವುದನ್ನು ಮೌಲ್ಯಮಾಪಕರು ನಿರೀಕ್ಷಿಸುತ್ತಾರೆ. ನೀವು ಬರೆದು ಮುಗಿಸಿದ ಉತ್ತರಗಳನ್ನು ಮತ್ತೊಮ್ಮೆ ಪರಿಶೀಲಿಸಿ. ಆದರೆ ಅದರ ಮರಣೋತ್ತರ ಪರೀಕ್ಷೆ ಮಾಡಬೇಡಿ. ಸಮರ್ಪಕವಾದ ಉತ್ತರಕ್ಕೆ ಸರಿಯಾದ ಅಂಕ ಸಿಕ್ಕೇ ಸಿಗುತ್ತದೆ. ಈಗಲೇ ಆ ಆತಂಕಬೇಡ.

ಪ್ರಶ್ನೆಗಳನ್ನು ಸರಿಯಾಗಿ ಒಂದಲ್ಲ ಎರಡು ಬಾರಿ ಓದಿ, ಅಲ್ಲಿರುವ ಮಾರ್ಗದರ್ಶನದ ಸೂಚನೆಗಳಂತೇ ಅಂಕಕ್ಕೆ ತಕ್ಕಂತೆ ಉತ್ತರಿಸಿ. ಇದು ನಿಮಗೆ ಸಮಯದ ಹತೋಟಿ ತಂದು ಕೊಡುತ್ತದೆ. ಒಂದು ಪ್ರಶ್ನೆಗೆ ಉತ್ತರಿಸಿದ ನಂತರ ಮತ್ತೊಂದು ಪ್ರಶ್ನೆಯ ಉತ್ತರಕ್ಕೆ ಒಂದು ಗೆರೆಯನ್ನು ಎಳೆಯಿರಿ.

ಆ ಮೂರೂ ಗಂಟೆಗಳ ಕಾಲವೂ ಪ್ರಶ್ನೆಪತ್ರಿಕೆಯೊಂದಿಗೆ ನಿಮ್ಮ ಒಡನಾಟ ಸಮಚಿತ್ತದಿಂದ ಇರಲಿ. ಆಗಲೇ ತಿಳಿಸಿದಂತೆ ಸುಲಭ ಪ್ರಶ್ನೆಗಳನ್ನು ಮೊದಲು ಉತ್ತರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿ ಕಷ್ಟದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮನಸ್ಸು ಸಹಕರಿಸುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಬೇರೊಬ್ಬ ವಿದ್ಯಾರ್ಥಿ ಹೆಚ್ಚುವರಿ ಶೀಟ್‌ ಕೇಳಿದಾಕ್ಷಣ ನೀವು ಅದರ ಬಗ್ಗೆ ಆತಂಕದಿಂದ ನಿಮ್ಮ ಗಮನವನ್ನು ಬೇರೆಡೆಗೆ ಹರಿಸುವುದು ಬೇಡ. ನಿಮ್ಮ ಸಾಧನೆ ನಿಮ್ಮ ಪ್ರಯತ್ನ ನಿಮ್ಮದೇ ಹೊರತು ಬೇರೆಯವರದಾಗಿರುವುದಿಲ್ಲ.

ಒಂದು ವೇಳೆ ಆತಂಕದಿಂದ ಅಥವಾ ಭಯದಿಂದ ಗಂಟಲು ಒಣಗಿದಂತಾದರೆ ತಕ್ಷಣವೇ ನೀರು ಕುಡಿಯಿರಿ. ಆಮ್ಲಜನಕದ ಸಹಾಯದಿಂದ ಮನಸ್ಸು ಪುನಃ ಚುರುಕುಗೊಂಡು ಉತ್ತರಿಸಲು ಸಹಕರಿಸುತ್ತದೆ. ಮೂರು ಗಂಟೆಗಳ ಸಂಪೂರ್ಣ ಅವಧಿಯನ್ನು ಉಪಯೋಗಿಸಿಕೊಳ್ಳಿ. ಒಂದು ವೇಳೆ ಬೇಗನೇ ಉತ್ತರಿಸಿದ್ದಾದರೆ ಬರೆದ ಉತ್ತರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ.

ಪರೀಕ್ಷಾ ದಿನಗಳಂದು ಯಾವ ಸ್ನೇಹಿತರೊಡನೆಯೂ ಅಂದಿನ ಪರೀಕ್ಷೆಯ ಬಗ್ಗೆ ಚರ್ಚಿಸದೇ ಇರುವುದು ಒಳ್ಳೆಯದು. ನಿಮ್ಮ ಓದು ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆಯೇ ಹೊರತು ಮತ್ತೊಬ್ಬರದಲ್ಲ. ಪ್ರತಿ ನಿತ್ಯ ಒಂದು ಪರೀಕ್ಷೆ ಮುಗಿದು ಮನೆಗೆ ಹೋದ ಮೇಲೆ ಸ್ವಲ್ಪ ವಿಶ್ರಾಂತಿ, ವಾಯುವಿಹಾರ ಮಾಡಿ ನಂತರದ ಪರೀಕ್ಷೆಯ ಪಠ್ಯವನ್ನು ಓದಲು ಪ್ರಾರಂಭಿಸಿ. ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಸಂಗೀತವನ್ನು ಪಠಿಸುವುದು ಅಥವಾ ಕೇಳುವುದರಿಂದ ಮನಸ್ಸು ಉಲ್ಲಾಸಭರಿತವಾಗುತ್ತದೆ.

ಪೋಷಕರಿಗೆ ಕಿವಿ ಮಾತು
ನಿಮ್ಮ ಮಕ್ಕಳಲ್ಲಿ ಆತಂಕದ ಬದಲು ಆತ್ಮವಿಶ್ವಾಸವನ್ನು ತುಂಬಿ. ಶಿಕ್ಷಕರು ಮತ್ತು ಪೋಷಕರಲ್ಲದೆ ಬೇರೆ ಯಾರೂ ಈ ಶಕ್ತಿಯನ್ನು ತುಂಬಲಾರರು. ಪರೀಕ್ಷೆ ಸಮಯದಲ್ಲಿ ನೀವಾಡುವ ಮಾತು, ನೀಡುವ ಸಹಕಾರದಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಭಾವನೆಗಳು ಗಟ್ಟಿಯಾಗುತ್ತವೆ. ಇದರಿಂದಲೇ ಅವರು ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುವುದು. ಈಗಿನ ಮಕ್ಕಳಿಗೆ ಪದೇ ಪದೇ ಓದು ಎಂದು ಹೇಳಿಸಿಕೊಳ್ಳುವುದು ತುಂಬಾ ಮುಜುಗರ ಕೊಡುತ್ತದೆ. ನಿಮ್ಮ ಬಾಲ್ಯ ಜೀವನದ ಘಟನೆಗಳನ್ನು ಇಂದಿನ ನಿಮ್ಮ ಮಕ್ಕಳೊಡನೆ ಹೋಲಿಸಬೇಡಿ. ಕಾಲ ಬದಲಾಗಿದೆ. ನೀವೂ ಪರಿವರ್ತನೆ ಹೊಂದಲೇಬೇಕು. ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಹೋಗುತ್ತಿದ್ದಾನೆಂದರೆ ಅವರೊಂದಿಗೆ ಒತ್ತಡದ ಮಾತುಗಳಿಗಿಂತ ಪ್ರೋತ್ಸಾಹದ ಮಾತನ್ನಾಡಿ. ಅದು ಅವರ ಆಂತರಿಕ ಏಕಾಗ್ರತೆ ಹಾಗೂ ಆತ್ಮವಿಶ್ವಾಸವನ್ನು ಚುರುಕುಗೊಳಿಸುತ್ತದೆ.

ಪರೀಕ್ಷೆಯ ದಿನಗಳಂದು ಅವರೊಡನೆ ನಗುತ್ತಾ ಮಾತನಾಡಿಸಿ. ಅವರ ಹಾಲ್ ಟಿಕೆಟ್, ಪೆನ್, ಪೆನ್ಸಿಲ್, ವಾಟರ್ ಬಾಟಲ್ ಇವುಗಳನ್ನು ಜೋಡಿಸಿಕೊಳ್ಳುವುದರಲ್ಲಿ ಸಹಕರಿಸಿ. ಚೆನ್ನಾಗಿ ಪರೀಕ್ಷೆಯಲ್ಲಿ ಮಾಡು ಎಂದಷ್ಟೇ ಹೇಳಿ ಹರಸಿ. ಹೆಚ್ಚಿನ ಮಾತುಗಳು ಅವರಿಗೆ ಆತಂಕವನ್ನುಂಟು ಮಾಡಬಹುದು.

ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಅನಿಸಿಕೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ. ಸಮಾಧಾನದಿಂದ ಅವರ ಮಾತುಗಳನ್ನು ಆಲಿಸಿ ಸೂಕ್ತವಾದ ಸಲಹೆಗಳನ್ನು ಸರಳ ಹಾಗೂ ಪ್ರೀತಿಯ ಮಾತಿನಿಂದ ತಿಳಿ ಹೇಳಿ. ಒಂದು ನೆನಪಿರಲಿ ನಮಗಿಂತಲೂ ನಮ್ಮ ಮಕ್ಕಳು ಬುದ್ಧಿವಂತರು ಎಂಬುದನ್ನು ನಾವು ಒಪ್ಪಲೇಬೇಕು. ನಾವು ಪೋಷಕರು, ನಾವು ಹೇಳಿದಂತೇ ನಡೆಯಬೇಕೆಂಬ ಧೋರಣೆಯನ್ನು ಬಿಟ್ಟಲ್ಲಿ ಮಕ್ಕಳು ನಮ್ಮೊಡನೆ ಸ್ನೇಹತ್ವದಿಂದ ಸುಲಭವಾಗಿ ಆಪ್ತ ಸಮಾಲೋಚನೆಯನ್ನು ಮಾಡುತ್ತಾರೆ.

**
ಟಿವಿ, ಮೊಬೈಲ್‌ನಿಂದ ದೂರವಿರಿ
ದಯವಿಟ್ಟು ಪರೀಕ್ಷೆ ಮುಗಿಯುವವರೆಗೂ ಟಿವಿ, ಮೊಬೈಲ್‌ಗಳ ಸಹವಾಸದಿಂದ ದೂರವಿರಿ. ಕಾರಣ ಮನಸ್ಸು ಬಹಳ ಬೇಗ ಚಂಚಲಗೊಂಡು ಓದಿನ ಕಡೆಗೆ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಇದರ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಪ್ರತಿ ನಿತ್ಯ ಓದಲು ಕುಳಿತುಕೊಳ್ಳುವ ಮೊದಲು ಮತ್ತು ನಂತರ ಧ್ಯಾನ ಮಾಡಿ ಏಕಾಗ್ರತೆಯನ್ನು ಗಳಿಸಿ. ಹಿತಮಿತವಾದ, ಅಮ್ಮ ಮಾಡಿದ ಆಹಾರವನ್ನೇ ಸೇವಿಸಿ. ಆರೋಗ್ಯವೇ ಭಾಗ್ಯ ಎಂಬುದು ಸದಾ ನೆನಪಿನಲ್ಲಿರಲಿ. ಕನಿಷ್ಠ 5–6 ಗಂಟೆ ನಿದ್ರೆ ಮಾಡಿ. ನೆನಪಿನ ಶಕ್ತಿ ಉಳಿದು, ಬೆಳೆಯುತ್ತದೆ. ಕುಟುಂಬದವರೊಡನೆ ಸ್ವಲ್ಪ ಸಮಯವಾದರೂ ನಗುವಿನೊಂದಿಗೆ ಮಾತಾಡಿ. ಅಮ್ಮನ ಸನಿಹ ನಿಮಗೆ ಅರಿವಿಲ್ಲದ ಶಕ್ತಿ ಕೊಡುತ್ತದೆ.

ರಾತ್ರಿ ಮಲಗುವ ಮುನ್ನ ಚೆನ್ನಾಗಿ ನೀರು ಕುಡಿಯುವುದರಿಂದ, ನಾವು ತೆಗೆದುಕೊಂಡ ಆಹಾರ ಚೆನ್ನಾಗಿ ಪಚನವಾಗುತ್ತದೆ, ಉಷ್ಣಾಂಶವನ್ನು ಹೊರಗೆ ಹಾಕುತ್ತದೆ ಅಲ್ಲದೆ ಬೆಳಿಗ್ಗೆ ಎದ್ದೇಳಲು ಸಹಾಯ ಮಾಡುತ್ತದೆ. ಇದೊಂದು ಒಳ್ಳೆಯ ಅಭ್ಯಾಸ.

ಒತ್ತಡ, ಆತಂಕ, ಭಯದ ಸ್ವಭಾವದಿಂದ ಮರೆವು ಹೆಚ್ಚಾಗುತ್ತದೆ. ಅದರ ಬದಲಿಗೆ ಸದಾ ಹಸನ್ಮುಖಿಯಾಗಿ ನಾನು ಖಂಡಿತ ಪರೀಕ್ಷೆಗೆ ಸಿದ್ಧನಾಗಿದ್ದೇನೆ, ಚೆನ್ನಾಗಿ ಬರೆಯಬಲ್ಲೆ ಎಂಬ ಉಲ್ಲಾಸದಿಂದ ಪರೀಕ್ಷೆಯನ್ನು ಎದುರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT