ಮಾಗಿಕಾಲದಲ್ಲಿ ಗಂಗೋತ್ರಿಯ ಸೊಬಗು..

7

ಮಾಗಿಕಾಲದಲ್ಲಿ ಗಂಗೋತ್ರಿಯ ಸೊಬಗು..

Published:
Updated:
Prajavani

ತಣ್ಣನೆಯ ಗಾಳಿಯೊಂದಿಗೆ, ಹಕ್ಕಿಗಳ ಚಿಲಿಪಿಲಿ ನಿನಾದದೊಂದಿಗೆ, ಗಿಡಮರಗಳಿಂದ ಸಮೃದ್ಧಿ ಹೊಂದಿದ ಹಚ್ಚಹಸಿರಿನ ಪರಿಸರವನ್ನು ಸವಿಯುತ್ತಾ, ಚುಮು ಚುಮು ಚಳಿಯ ಮಂಜು ಮುಸುಕಿನ ಮುಂಜಾನೆ ಹೊತ್ತಲ್ಲಿ ನಮ್ಮ ಕ್ಯಾಂಪಸ್‍ನಲ್ಲಿ ವಾಕಿಂಗ್ ಹೋಗುವುದೇ ಚಂದ.

ದಿನನಿತ್ಯದ ಜೀವನ ಜಂಜಾಟದಲ್ಲಿ ಎಲ್ಲರ ದಿನ ಹೇಗೆ ಪ್ರರಂಭವಾಗುತ್ತದೆಯೋ ಏನೋ? ಆದರೆ ನನ್ನ ದಿನ ಮಾತ್ರ ಮಾನಸ ಗಂಗೋತ್ರಿಯ ಅಚ್ಚುಕಟ್ಟಾದ ರಸ್ತೆಯಲ್ಲಿ ಅಲೆಯುತ್ತಾ, ಅಲ್ಲಿನ ಮನೋಹರವಾದ ಪ್ರಕೃತಿ ಸೊಬಗನ್ನು ಸವಿಯುತ್ತಾ ಶುರುವಾಗುತ್ತದೆ. ನಾನು ವಿದ್ಯಾರ್ಥಿನಿಲಯದ ವಿದ್ಯಾರ್ಥಿ; ಆದ್ದರಿಂದ ಈ ಸೌಭಾಗ್ಯ ನನ್ನದಾಗಿದೆ. 

ಬೆಳಂಬೆಳಿಗ್ಗೆಯ ನಿದ್ದೆಯಿಂದ ಎದ್ದ ತಕ್ಷಣ ಕ್ಯಾಂಪಸ್‌ನಲ್ಲಿ ವಾಯುವಿಹಾರಕ್ಕಾಗಿ ವಾಕಿಂಗ್ ಹೋಗಬೇಕೆಂಬ ಹಂಬಲ ಬಂದಿದ್ದು ಅನಿರೀಕ್ಷಿತ. ಆದರೆ ಅದು ಬಿಟ್ಟು ಬಿಡದಾಗೆ ದಿನನಿತ್ಯದ ಅಭ್ಯಾಸವಾಗಿದ್ದೂ ಒಂದು ವಿಪರ್ಯಾಸ. ಗಂಗೋತ್ರಿಯ ಪ್ರಕೃತಿ ಶ್ರೀಮಂತಿಕೆಯನ್ನು ಎಲ್ಲ ವಿದ್ಯಾರ್ಥಿಗಳು 10 ಗಂಟೆಯಿಂದ 5ರವರೆಗೆ ಮಾತ್ರ ನೋಡಿದ್ದಾರೆ. ಆದರೆ ಮುಂಜಾನೆ ವೇಳೆಯಲ್ಲಿ ಮಂಜಿನಿಂದ ಕೂಡಿದ ತಣ್ಣನೆಯ ಗಾಳಿಯಲ್ಲಿ ವಿರಮಿಸುವುದು ಮನಸೊರೆಗಳ್ಳುವ ಅದ್ಭುತ ಕ್ಷಣ.

ಇತ್ತೀಚಿನ ದಿನಗಳಲ್ಲಂತೂ ಸುಮಾರು ಎಂಟು ಗಂಟೆಯವರೆಗೂ ಮಂಜುಕವಿದ ವಾತವರಣವನ್ನು ನೋಡುವುದೇ ಸೊಗಸು. ಎಲ್ಲರಗೂ ಸಮಯವನ್ನು ಹೇಳುವ ಕ್ಲಾಕ್‍ಟವರ್ ಸಹ ಮಂಜಿನಿಂದ ಆವೃತವಾಗಿ ಸಮಯವನ್ನೇ ಮರೆ ಮಾಡಿರುತ್ತದೆ. ಇನ್ನೂ ವಾಯುವಿಹಾರಕ್ಕೆಂದು ಬರುವ ಗೃಹಿಣಿಯರು ಮತ್ತು ಹಿರಿಯ ನಾಗರಿಕರು ಬೆಚ್ಚನೆಯ ಉಡುಪು ಧರಿಸಿ ತಮ್ಮ ಪಾಡಿಗೆ ಶಿಸ್ತಿನಿಂದ ರಸ್ತೆಯಲ್ಲಿ ನಡೆದು ಹೋಗುತ್ತಿರುತ್ತಾರೆ.

ಒಂದೆಡೆ ದೈಹಿಕ ಕಸರತ್ತಿಗಾಗಿ ಯುವಕರು ಕ್ರಿಕೆಟ್ ಆಟದಲ್ಲಿ ತೊಡಗಿರುತ್ತಾರೆ. ಗಿಡಗಳಲ್ಲಿ ಮಂಜಿನ ಹನಿಗಳು ಕೂತು ಎಲೆಗಳು ಕಂಗೊಳಿಸುತ್ತಿರುತ್ತವೆ. ಮೊಗ್ಗುಗಳು ಹೂವಾಗಿ ಅರಳುವ ಪೂರ್ವಕಾಲ ಅದಾಗಿರುತ್ತದೆ. ಇದಲ್ಲದೆ ಪೂರ್ವದ ಬಾನಂಚಿನ ಮೋಡ ಮಿಶ್ರಿತ ನೀಲಾಕಾಶದಲ್ಲಿ ಕಿತ್ತಾಳೆಯ ವರ್ಣ ಮೂಡಿ ತಾಮ್ರಬಣ್ಣಕ್ಕೆ ತಿರುಗಿ ನಂತರ ಕೆಂಗಂದುಬಣ್ಣವನ್ನು ಪಡೆದು ಆಗಸದಿಂದ ರವಿಯೂ ಪ್ರಜ್ವಲಿಸುತ್ತಾ ಆಗಮಿಸುತ್ತಾನೆ. ಎಲ್ಲ ವಿಭಾಗದ ಮೈದಾನದಲ್ಲಿ ಹಸಿರು ಶಾಲುವನ್ನು ಹೊದ್ದಿಸಿದಂತೆ ಕಾಣುವ ಗರಿಕೆಯ ಮೇಲೆ ಸೂರ್ಯನ ಕಿರಣ ಚುಂಬಿಸುತ್ತಿದ್ದಂತೆ ಮಂಜಿನ ಹನಿಗಳು ಪ್ರಕಾಶಮಾನವಾಗಿ ಹೊಳೆಯುವ ದೃಶ್ಯವು ಮನಮೋಹಕವಾಗಿರುತ್ತದೆ. ಈ ರಮಣೀಯ ದೃಶ್ಯವನ್ನು ಕಣ್ಣು ತುಂಬಿಕೊಳ್ಳುತ್ತಿದ್ದರೆ ಸ್ವರ್ಗವೇ ಧರೆಗಿಳಿದಂತೆ ಭಾಷವಾಗುತ್ತದೆ. ಅಷ್ಟೊಂದು ಅತ್ಯದ್ಭುತವಾಗಿ ಮಾನಸಗಂಗೋತ್ರಿಯ ಮುಂಜಾನೆ ವಾತವರಣ ಸ್ವರ್ಗಕ್ಕೆ ಸೆಡ್ಡು ಹೊಡೆಯುತ್ತದೆ.

ಚಂದ್ರಶೇಖರ್ ಬಿ.ಎನ್., ಮಾನಸ ಗಂಗೋತ್ರಿ, ಮೈಸೂರು

**

ವಿದ್ಯಾರ್ಥಿಗಳೇ, ನೀವೂ ಬರೆಯಿರಿ...

ಕಾಲೇಜು ಎಂದರೆ ವಿದ್ಯಾರ್ಥಿಗಳ ಪಾಲಿಗೆ ಸ್ವರ್ಗವಿದ್ದಂತೆ. ಕಾಲೇಜಿನ ಗೇಟ್‌, ಕಾರಿಡಾರ್, ಪಾರ್ಕ್‌, ಕ್ಲಾಸ್‌ರೂಂ, ಬೆಂಚ್‌, ಕಣ್ಣೋಟದಲ್ಲೇ ಇಷ್ಟವಾದ ಹುಡುಗಿ/ಹುಡುಗ, ಪ್ರಿನ್ಸಿಪಾಲ್‌ ಚೆಂಬರ್, ಕ್ಯಾಂಟೀನ್‌, ಗ್ರಂಥಾಲಯ, ಆಡಿಟೋರಿಯಮ್‌, ಆಟದ ಮೈದಾನ

– ಹೀಗೆ ಕಾಲೇಜಿನ ಕ್ಷಣಗಳು ನಮ್ಮ ಪ್ರೀತಿಯ ಧ್ಯೋತಕವಾಗಿರುತ್ತವೆ. ಅಲ್ಲದೇ ಅವು ನಮ್ಮ ಮೊದಲ ಪ್ರೀತಿಯು ಆಗಿರಬಹುದು. ನಿಮ್ಮ ಕಾಲೇಜಿನ ಮೊದಲ ಪ್ರೀತಿಗೆ ಅಕ್ಷರ ರೂಪ ನೀಡಿ ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಶಿಕ್ಷಣ ಪುರವಣಿ, ನಂ. 75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು – 560001

ಇಮೇಲ್‌ – shikshana@prajavani.co.in

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !