ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶಲ್ಲಿ ಮೇಲುಗೈ! ಆದರೆ ಉದ್ಯೋಗದಲ್ಲೇಕೆ ಹಿನ್ನಡೆ

Last Updated 3 ಮೇ 2019, 20:15 IST
ಅಕ್ಷರ ಗಾತ್ರ

ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಮೊದಲಾದ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ಮಾಧ್ಯಮಗಳಲ್ಲಿ ಮಾಮೂಲು ಎನಿಸುವಂತಹ ಶೀರ್ಷಿಕೆ ಗಮನಿಸಿರಬಹುದು ‘ಹುಡುಗಿಯರದ್ದೇ ಮೇಲುಗೈ’, ‘ಹೆಣ್ಮಕ್ಕಳೇ ಫಸ್ಟ್‌’, ‘ವಿದ್ಯಾರ್ಥಿನಿಯರೇ ಮುಂದೆ’.. ಹೆಣ್ಣುಮಕ್ಕಳ ಈ ಸಾಧನೆಯನ್ನು ಕಂಡು ಮನಸ್ಸು ಬೀಗುತ್ತದೆ ನಿಜ. ನಮ್ಮ ಹೆಣ್ಣುಮಕ್ಕಳು ಚೆನ್ನಾಗಿ ಓದುತ್ತಾರೆ, ಒಳ್ಳೆಯ ಅಂಕ ಗಳಿಸಿ ರ್‍ಯಾಂಕ್‌ ಬರುತ್ತಾರೆ ಎನ್ನುವುದೆಲ್ಲಾ ಸರಿಯೇ!

ವಿದ್ಯಾಭ್ಯಾಸದ ನಂತರದ ಹಂತಗಳನ್ನು ತೆಗೆದುಕೊಳ್ಳಿ. ‘ಮಹಿಳೆಯರು ಮಾನಸಿಕವಾಗಿ, ಭಾವನಾತ್ಮಕವಾಗಿ ತುಂಬಾ ಗಟ್ಟಿ. ಮಹಿಳೆಯರು ಒಂದೇ ಬಾರಿಗೆ ಹೆಚ್ಚು ಕೆಲಸಗಳನ್ನು ಮಾಡಬಲ್ಲಂತಹ ಸಾಮರ್ಥ್ಯವುಳ್ಳವರು. ಉದ್ಯೋಗ ಕ್ಷೇತ್ರಕ್ಕೆ ಬಂದರೆ ತಮ್ಮ ಪುರುಷ ಸಹೋದ್ಯೋಗಿಗಳಿಗಿಂತ ಹೆಚ್ಚು ಪ್ರಾಮಾಣಿಕವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುವವರು. ಖರೀದಿ– ಮಾರಾಟದಂತಹ ವ್ಯವಹಾರದ ವಿಷಯದಲ್ಲೂ ಅಷ್ಟೆ, ಅತ್ಯಂತ ಕುಶಲಿಗರು’

ಇಂತಹ ಹೊಗಳಿಕೆಗಳೆಲ್ಲ ಹಿಂದಿನಿಂದಲೂ ಕಿವಿಯ ಮೇಲೆ ಬೀಳುತ್ತಲೇ ಇದೆ. ಆ ಮೆಚ್ಚುಗೆಯ ಮಾತಿಗೆ ಉಬ್ಬುವುದೂ ನಡೆದೇ ಇದೆ. ಆದರೆ ಉದ್ಯೋಗ ಅಥವಾ ಉದ್ಯಮದ ವಿಷಯಕ್ಕೆ ಬಂದರೆ ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಯಾಕೆ ಇನ್ನೂ ಕಡಿಮೆಯಿದೆ ಎಂಬ ಪ್ರಶ್ನೆಗಳು ಮತ್ತೆ ಮತ್ತೆ ಕಣ್ಮುಂದೆ ಕುಣಿಯುತ್ತಲೇ ಇರುತ್ತವೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಸ್ಥಾನಗಳಲ್ಲಿರುವವರನ್ನು ಒಮ್ಮೆ ಅವಲೋಕಿಸಿ. ಅಲ್ಲಿ ತುಂಬಿಕೊಂಡಿರುವ ಬಹುತೇಕ ಮಂದಿ ಪುರುಷರು ಎಂಬುದನ್ನರಿತಾಗ ಏಕೆ ಹೀಗೆ ಎಂಬ ಪ್ರಶ್ನೆ ಏಳುತ್ತದೆ ಅಲ್ಲವೇ!

ಉದಾಹರಣೆಗೆ ನಮ್ಮ ದೇಶದಲ್ಲಿ ಬಹುತೇಕ ಕುಟುಂಬಗಳಲ್ಲಿ ಮನೆಯವರೆಲ್ಲರ ಹಸಿವು ನೀಗಿಸುವ ಕೆಲಸ ಮಹಿಳೆಯರದ್ದು. ಆದರೆ ಖ್ಯಾತ ಷೆಫ್‌ (ಬಾಣಸಿಗ)ಗಳನ್ನು ತೆಗೆದುಕೊಳ್ಳಿ. ಹೆಚ್ಚಿನವರೆಲ್ಲ ಪುರುಷರು. ವೈದ್ಯಕೀಯ ಕ್ಷೇತ್ರದಲ್ಲೂ ಅಷ್ಟೆ, ಶಸ್ತ್ರಚಿಕಿತ್ಸಾ ತಜ್ಞರಲ್ಲಿ ಹೆಚ್ಚಿನವರು ಗಂಡಸರು. ಮಹಿಳಾ ವೈದ್ಯರು ರೋಗಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಚಿಕಿತ್ಸೆ ನೀಡುವಾಗ ಎಲ್ಲಾ ನಿಯಮಗಳನ್ನು ಪಾಲಿಸುತ್ತಾರೆ. ವೈದ್ಯೆಯರಿಂದ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುವುದು ಕಡಿಮೆ ಎಂದು ಅಧ್ಯಯನವೇ ಹೇಳಿದೆ. ಆದರೂ ಯಾಕೆ ಈ ಕ್ಷೇತ್ರಕ್ಕೆ ಬರಲು ಹೆಚ್ಚಿನ ಯುವತಿಯರು ಹಿಂಜರಿಯುತ್ತಿದ್ದಾರೆ ಎಂಬ ಪ್ರಶ್ನೆ ಕಾಡುವುದು ಸಹಜ.

ಮನರಂಜನಾ ಕ್ಷೇತ್ರವನ್ನೇ ನೋಡೋಣ. ಸಿನಿಮಾ, ಕಿರುತೆರೆಯಲ್ಲಿ ನಟಿಯರು, ಡಾನ್ಸರ್‌, ಹಾಗೆಯೇ ಜಾಹೀರಾತು ಕ್ಷೇತ್ರಗಳಲ್ಲಿ ಮಾತ್ರ ಹೆಂಗಳೆಯರಿರಲೇ ಬೇಕು ಎನ್ನುವ ಅಲಿಖಿತ ನಿಯಮ. ಪ್ರೇಕ್ಷಕರನ್ನು, ಓದುಗರನ್ನು ಆಕರ್ಷಿಸಲು ಮಹಿಳಾ ಮುಖವೇ ಬೇಕು. ಆದರೆ ಸ್ಟ್ಯಾಂಡಪ್‌ ಕಾಮಿಡಿಯನ್‌ಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಎಷ್ಟು ಮಂದಿ ಯುವತಿಯರಿದ್ದಾರೆ?

ಹೆಗಲೇರುವ ಕುಟುಂಬದ ಹೊಣೆ
‘ಸ್ವಲ್ಪ ಹೆಚ್ಚು ಶ್ರಮದಾಯಕ ಕೆಲಸವನ್ನು ಮಾಡಲು ಮಹಿಳೆಯರು ಯಾಕೆ ಹಿಂದೇಟು ಹಾಕುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಸಿಗುವಂತಹದ್ದು ಮತ್ತದೇ ಹೆಗಲ ಮೇಲೆ ಕೂತಿರುವ ಕುಟುಂಬದ ಹೊಣೆಗಾರಿಕೆ ಎಂಬ ಸವಕಲು ವಾಕ್ಯ. ಚಿಕ್ಕಂದಿನಿಂದಲೇ ಅವರಲ್ಲಿ ಈ ಬಗ್ಗೆ ಒಂದು ರೀತಿಯ ಮ್ಯಾಪಿಂಗ್‌ ಮಾಡಿರುತ್ತಾರೆ. ಕುಟುಂಬದ ಇತರ ಸದಸ್ಯರನ್ನು ನೋಡಿಕೊಳ್ಳಲು ಸಾಕಷ್ಟು ಸಮಯವಿರಬೇಕು, ಅಂತಹ ಉದ್ಯೋಗ ಹುಡುಕಿಕೊಳ್ಳಬೇಕು ಎಂಬ ಅಂಶ ಬೆಳೆಯುತ್ತ ಹೋದಂತೆ ಅವರ ತಲೆಯಲ್ಲೂ ಬೆಳೆದು ಗಟ್ಟಿಯಾಗಿ ಕೂತುಬಿಡುತ್ತದೆ’ ಎನ್ನುತ್ತಾರೆ ಮನಶಾಸ್ತ್ರಜ್ಞೆ ಡಾ.ಪ್ರಮೀಳಾ ಎಸ್‌.

ಹುಡುಗಿಯರು ಒಂದೇ ಬಾರಿ ಹಲವು ಪಾತ್ರಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಪ್ರೋಗ್ರಾಂ ಆಗಿಬಿಟ್ಟಿರುತ್ತಾರೆ. ಹಾಗೆಯೇ ಎಲ್ಲವನ್ನೂ ಸಮರ್ಥವಾಗಿ ಪೂರೈಸಬೇಕು, ಎಲ್ಲಿಯಾದರೂ ಎಡವಿದರೆ ಅದು ದೊಡ್ಡ ಪ್ರಮಾದ ಎಂಬಂತಹ ಭಾವನೆ ಬೆಳೆಸಿಕೊಂಡಿರುವವರೇ ಅಧಿಕ. ಹೀಗಾಗಿ ಒಂದು ಕಚೇರಿಯಲ್ಲಿ ಸಣ್ಣ ಪುಟ್ಟ ತಪ್ಪಾದರೂ ಅಪರಾಧಿ ಭಾವನೆಯಿಂದ ನರಳುವವರು ಯುವತಿಯರೇ. ಆದರೆ ಇಂತಹ ಪ್ರಮಾದಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪುರುಷರು ಹೆಚ್ಚು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ, ಹಾಗೆಯೇ ಹೊಸ ಕ್ಷೇತ್ರಗಳಲ್ಲಿ, ಹೊಸ ಅವಕಾಶಗಳಲ್ಲಿ ಕೈ ಹಾಕುತ್ತಾರೆ.

ತ್ಯಾಗ ಮನೋಭಾವ?
‘ಈ ಅಪರಾಧಿ ಭಾವನೆಗೆ ಕಾರಣ ಅವರ ತ್ಯಾಗ ಮನೋಭಾವ. ಇದರಿಂದಾಗಿಯೇ ಅವರು ಬದುಕಿನಲ್ಲಿ ಹೊಸ ಹೊಸ ಅವಕಾಶಗಳಿಗೆ ತೆರೆದುಕೊಳ್ಳುವುದಕ್ಕೆ ಹಿಂಜರಿಯುವುದು. ಉದಾಹರಣೆಗೆ ಕೆಲವು ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಹುಡುಗಿ ತಾನು ಮುಂದೆ ಏರೋನಾಟಿಕಲ್‌ ಎಂಜಿನಿಯರ್‌ ಆಗುವುದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಳು. ಆಕೆಯ ಮುಂದೆ ಅವಕಾಶಗಳೂ ಇದ್ದವು. ಆದರೆ ಪಿಯುಸಿ ಮುಗಿಸುವ ವೇಳೆಗೆ ಆಕೆಯ ಆಯ್ಕೆ ಬದಲಾಗಿತ್ತು. ಇದಕ್ಕೆ ಕಾರಣ ಆಕೆಯ ತರಗತಿಯ ಇತರ ಹುಡುಗಿಯರು ಮಾಡಲು ಸುಲಭವಾದ ಕೆಲಸದ ಆಯ್ಕೆ ಮಾಡಿಕೊಂಡು ಆ ನಿಟ್ಟಿನಲ್ಲಿ ಅಧ್ಯಯನ ಮುಂದುವರಿಸಿದ್ದು ಅವಳ ಮೇಲೆಯೂ ಪರಿಣಾಮ ಬೀರಿತ್ತು’ ಎನ್ನುತ್ತಾರೆ ಡಾ.ಪ್ರಮೀಳಾ. ಈ ರೀತಿಯ ನಡವಳಿಕೆಗೆ ಸಮಾಜ ಹೇರಿರುವಂತಹ ನಿಯಮಗಳು ಮಾತ್ರವಲ್ಲ, ಹಲವು ವರ್ಷಗಳಿಂದ ಅವರ ಮನಸ್ಸನ್ನು ಇಂತಹುದಕ್ಕೆ ಒಗ್ಗಿಸಿಕೊಂಡಿರುವುದು ಎನ್ನುತ್ತಾರೆ ಅವರು.

ನಮ್ಮ ಯುವತಿಯರು ಬುದ್ಧಿವಂತೆಯರು; ದೃಢ ನಿರ್ಧಾರ, ನಿಷ್ಠೆ ಎಲ್ಲವೂ ಇದೆ. ಯಾವುದೇ ಕ್ಷೇತ್ರವಿರಲಿ, ಉದ್ಯೋಗಶೀಲತೆ, ಕಠಿಣ ಶ್ರಮ ಹಾಕುವ ಗುಣವಿದೆ. ಏನೇ ಕಷ್ಟ ಬಂದರೂ ಸಹಿಸುವ ಗಟ್ಟಿ ಮನಸ್ಸು ಕೂಡ ಇದೆ. ಬೇಕಾಗಿರುವುದು ಏನೆಂದರೆ ಅವರ ಸಾಮರ್ಥ್ಯದಲ್ಲಿ ಹೆಚ್ಚು ನಂಬಿಕೆ, ನಿರ್ಧಾರ ಕೈಗೊಳ್ಳುವ ಶಕ್ತಿಯಲ್ಲಿ ವಿಶ್ವಾಸ. ಸಂಕಷ್ಟದ ಸಂದರ್ಭದಲ್ಲಿ ಅಪರಾಧಿ ಮನೋಭಾವ ಹೊಂದದೆ ಮುನ್ನಡೆಯುವ ಛಲವೂ ಅಗತ್ಯ. ಏಕೆಂದರೆ ಈ ಮಾರ್ಗದಲ್ಲಿ ಬೇಕಾದಷ್ಟು ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ. ಆದರೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಸಮಾಜದ ದೃಷ್ಟಿಯಲ್ಲಿ ಗಟ್ಟಿ ವ್ಯಕ್ತಿತ್ವ ಬೆಳೆಸಿಕೊಳ್ಳುವ ಅವಶ್ಯಕತೆಯಿದೆ.

**

* ಬಹುತೇಕ ಕ್ಷೇತ್ರಗಳಲ್ಲಿ ಕೆಲವು ಮಹಿಳೆಯರು ಮಾಡಿರುವ ಅಭೂತಪೂರ್ವ ಸಾಧನೆಯನ್ನು ನೋಡಿ. ಆ ಮೂಲಕವಾದರೂ ನಿಮ್ಮಲ್ಲಿರುವ ಕೀಳರಿಮೆಯನ್ನು ತ್ಯಜಿಸಿ.
* ಹತ್ತಾರು ಹೊಣೆಗಾರಿಕೆಗಳನ್ನು ಮೈಮೇಲೆ ಎಳೆದುಕೊಳ್ಳುವ ಮನೋಭಾವದಿಂದ ಹೊರಬನ್ನಿ.
* ಎಲ್ಲವನ್ನೂ ನೂರಕ್ಕೆ ನೂರರಷ್ಟು ಸಮರ್ಥವಾಗಿ ಮಾಡಬಲ್ಲೆ ಎಂಬ ಗುರಿ ಇಟ್ಟುಕೊಂಡು ಪ್ರಯಾಸಪಡಬೇಡಿ.
* ನಿಮ್ಮ ವೃತ್ತಿ ಅಥವಾ ವೈಯಕ್ತಿಕ ಬೆಳವಣಿಗೆಗೆ ನೆರವಾಗುವಂತಹ ಉದ್ಯೋಗ ಅಥವಾ ವೇತನ ಏರಿಕೆಯ ಬಗ್ಗೆ ಬೇಡಿಕೆ ಇಡಲು ಹಿಂಜರಿಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT