ಬಡವರ ಆಶಾಕಿರಣ; ಶಿಕ್ಷಣದ ಹೊಂಗಿರಣ..!

7
2127 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ತಾಂಬಾದ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘ

ಬಡವರ ಆಶಾಕಿರಣ; ಶಿಕ್ಷಣದ ಹೊಂಗಿರಣ..!

Published:
Updated:
Deccan Herald

ತಾಂಬಾ: ಶೈಕ್ಷಣಿಕ ಕ್ರಾಂತಿಯ ಹರಿಕಾರ, ಸ್ವಾತಂತ್ರ್ಯ ಸೇನಾನಿ ಸಂತ, ಬಂಥನಾಳದ ಸಂಗನಬಸವ ಶಿವಯೋಗಿಗಳ ಮೂಸೆಯಲ್ಲಿ ಅರಳಿದ ಶಿಕ್ಷಣ ಸಂಸ್ಥೆಗಳಲ್ಲಿ ತಾಂಬಾದ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘವೂ ಒಂದು.

1960ರ ದಶಕದಲ್ಲಿ ಬಂಥನಾಳದ ಸಂಗನಬಸವ ಶಿವಯೋಗಿಗಳ ದೂರದೃಷ್ಟಿ ಚಿಂತನೆಯ ಫಲವಾಗಿ ಆರಂಭಗೊಂಡ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘ ಇಂದು ಹೆಮ್ಮರವಾಗಿ ಬೆಳೆದಿದೆ.
ತಾಂಬಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿದೆ. ಆರು ದಶಕದ ಅವಧಿಯಲ್ಲಿ ಪ್ರತಿ ವರ್ಷವೂ ಸಹಸ್ರ, ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳಿಗೆ ಜ್ಞಾನಾಮೃತ ಉಣಬಡಿಸುತ್ತಿದೆ.

ಪುರಾಣದ ಫಲವಿದು

ತಾಂಬಾ ಗ್ರಾಮದಲ್ಲಿ ಕೇವಲ ಪ್ರಾಥಮಿಕ ಶಾಲೆಗಳಿದ್ದ ಕಾಲವದು. ಆಗಲೇ 10000 ಜನಸಂಖ್ಯೆಯಿತ್ತು. ಪ್ರೌಢಶಾಲಾ ಶಿಕ್ಷಣಕ್ಕೆ ಇಂಡಿ, ವಿಜಯಪುರಕ್ಕೆ ಹೋಗಬೇಕಿದ್ದ ಅನಿವಾರ್ಯ. ಸಾರಿಗೆ ಸಂಪರ್ಕವೂ ಅಷ್ಟಕ್ಕಷ್ಟೇ. ಇದರಿಂದ ಬಹುತೇಕರು ಹೈಸ್ಕೂಲ್‌ಗೆ ಹೋಗಲು ಹಿಂದೇಟು ಹಾಕಿ, ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದರು.

ಇಂತಹ ಸನ್ನಿವೇಶದಲ್ಲಿ ತಾಂಬಾ ಗ್ರಾಮಸ್ಥರು ತಮ್ಮೂರಲ್ಲಿ ಪುರಾಣ ನಡೆಸಬೇಕು ಎಂಬ ಬಿನ್ನಹ ಹೊತ್ತ ಮನವಿಯೊಂದನ್ನು 1960ರಲ್ಲಿ ಬಂಥನಾಳದ ಸಂಗನಬಸವ ಶಿವಯೋಗಿಗಳಿಗೆ ಅರ್ಪಿಸಿದರು. ಶಿವಯೋಗಿಗಳು ತಮ್ಮ ಎಂದಿನ ಖಡಕ್‌ ಶೈಲಿಯಲ್ಲೇ ಗ್ರಾಮಸ್ಥರಿಗೆ ಕೆಲ ಷರತ್ತು ಹಾಕಿದರು. ಗ್ರಾಮದ ಎಲ್ಲರೂ ಒಪ್ಪಿಕೊಂಡ ಬಳಿಕವೇ ಪುರಾಣ ಹೇಳಲು ಶಿವಯೋಗಿ ಸಮ್ಮತಿ ನೀಡಿದರು. ತಾಂಬಾ ಜನರು ಪುರಾಣ ಪ್ರಿಯರು. ಅದನ್ನು ಆಲಿಸಿ ಅದರಂತೆ ನಡೆಯಬೇಕು ಎಂದೂ ಹೇಳಿದರು.

1961ರ ಶ್ರಾವಣ ಮಾಸದಲ್ಲಿ ಬಂಥನಾಳದ ಸಂಗನಬಸವ ಶಿವಯೋಗಿಗಳು ‘ಬಸವ ಪುರಾಣ’ ಹೇಳಲು ತಾಂಬಾ ಗ್ರಾಮಕ್ಕೆ ಪಾದಾರ್ಪಣೆ ಮಾಡಿದರು. ಸತತ ಒಂದು ತಿಂಗಳು ಪುರಾಣ ನಡೆಯಿತು. ಭಕ್ತರು ಕಾಣಿಕೆಯ ಹೊಳೆಯನ್ನೇ ಹರಿಸಿದರು. ಪುರಾಣ ಮುಗಿಯುವುದರೊಳಗಾಗಿ ₨ 35000 ಕಾಣಿಕೆ ಸಂಗ್ರಹಗೊಂಡಿತು.

‘ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬುದು ಶಿವಯೋಗಿಗಳ ತತ್ವ. ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹಗೊಂಡಿದ್ದರಿಂದ ಪ್ರಸನ್ನವದರಾದ ಸಂಗನಬಸವ ಸ್ವಾಮೀಜಿ ಊರ ಹಿರಿಯರನ್ನು ಒಟ್ಟಿಗೆ ಕೂಡಿಸಿದರು. ಇದೇ ಸಭೆಯಲ್ಲಿ ಪ್ರೌಢಶಾಲೆ ಸ್ಥಾಪನೆಯ ನಿರ್ಧಾರ ಘೋಷಿಸಿದರು. ಇದಕ್ಕಾಗಿ ವೃಷಭ ಲಿಂಗೇಶ್ವರ ವಿದ್ಯಾವರ್ಧಕ ಸಂಘ ಆರಂಭಿಸಿದರು.

ಸ್ಥಳೀಯರಿಗೆ ಎಲ್ಲಾ ಜವಾಬ್ದಾರಿ ನೀಡಿದರು. ಪ್ರೌಢಶಾಲೆ ಜತೆಯಲ್ಲೇ ಪ್ರಸಾದ ನಿಲಯ ಆರಂಭಿಸುವಂತೆ ಮಠದಿಂದ ₨ 1500 ದೇಣಿಗೆ ನೀಡಿದರು. ಊರವರು ಶಿವಯೋಗಿಯ ಹೆಸರಲ್ಲೇ ಪ್ರೌಢಶಾಲೆ ಆರಂಭಿಸಿದರು. ಚಾವಡಿಯಲ್ಲಿ ಆರಂಭಗೊಂಡ ಶಾಲೆಗಾಗಿ ಗ್ರಾಮದ ಧರೆಪ್ಪ ಮಲಕಪ್ಪ ಕುಡವಕ್ಕಲಿಗ (ಕುಟನೂರ) ಎಂಬುವರು 14 ಎಕರೆ ಭೂಮಿ ದಾನ ನೀಡಿದರು.

ವರ್ಷದಿಂದ ವರ್ಷಕ್ಕೆ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘ ಬಲವರ್ಧನೆಗೊಂಡಿದ್ದು, ಇದೀಗ ಹಲ ಶಾಲಾ–ಕಾಲೇಜು ನಡೆಸುತ್ತಿದೆ. ಸಂಗನಬಸವ ಶಿವಯೋಗಿಗಳ ಸ್ಮರಣೆಯನ್ನು ಇಂದಿಗೂ ಚಾಚೂ ತಪ್ಪದೆ ನಡೆಸಿದೆ.

ಸಂಸ್ಥೆಯ ಐತಿಹ್ಯ

ಬಂಥನಾಳದ ಸಂಗನಬಸವ ಶಿವಯೋಗಿಗಳಿಂದ ತಾಂಬಾ ಗ್ರಾಮದಲ್ಲಿ 1961ರಲ್ಲಿ ಆರಂಭಗೊಂಡ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘ 1990ರವರಗೆ ಸನಾತನ ಮಾರ್ಗದಲ್ಲೇ ನಡೆಯಿತು.

1991ರಲ್ಲಿ ಸಂಘದ ಛೇರ್‌ಮನ್‌ ಆಗಿ ಅವಿರೋಧವಾಗಿ ಆಯ್ಕೆಯಾದ ಜೆ.ಎಸ್.ಹತ್ತಳ್ಳಿ ಸಂಘಕ್ಕೆ ಕಾಯಕಲ್ಪ ನೀಡಿದರು. ಇಂದಿಗೂ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.

1992ರಲ್ಲಿ ಕಲಾ ಮಹಾವಿದ್ಯಾಲಯ ಆರಂಭಿಸಲಾಯಿತು. 2006ರಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗ ಆರಂಭಿಸಿದರು. 2007ರಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ, 2011ರಲ್ಲಿ ಬಿ.ಬಿ.ಎ ಮಹಾವಿದ್ಯಾಲಯ ಆರಂಭವಾಯ್ತು.

ಸಂಗನಬಸವೇಶ್ವರ ಪೂರ್ವ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಆರ್.ಎಸ್.ಕೆಂಗನಾಳ ಕೈಗಾರಿಕಾ ತರಬೇತಿ ಕೇಂದ್ರ, ಗುಡ್ಡೋಡಗಿ ಕಂಪ್ಯೂಟರ್ಸ್ ಮತ್ತು ಇನ್ಟುಸಲೂಷನ್ಸ್ ಆರಂಭಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದೆ.

ಸಂಗನಬಸವೇಶ್ವರ ಪೂರ್ವ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 265, ಸಂಗನಬಸವೇಶ್ವರ ಪ್ರೌಢಶಾಲೆ 300, ಎಸ್.ಎಸ್.ಪದವಿ ಪೂರ್ವ ಕಾಲೇಜು 586, ಎಸ್.ಆರ್.ಮಾಳಗೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 850, ಡಾ.ಆರ್.ಎಸ್.ಕೆಂಗನಾಳ ಕೈಗಾರಿಕಾ ತರಬೇತಿ ಕೇಂದ್ರ 81, ಗುಡ್ಡೋಡಗಿ ಕಂಪ್ಯೂಟರ್ಸ್ ಮತ್ತು ಇನ್ಟುಸಲೂಷನ್ಸ್‌ನಲ್ಲಿ 45 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2127 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಕಂಪ್ಯೂಟರ್ ಜ್ಞಾನವನ್ನೂ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಘ ನೀಡುತ್ತಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !