ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಭೂತ

Last Updated 23 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಊರು ಬಿಟ್ಟು ವಿದ್ಯಾಭ್ಯಾಸಕ್ಕೆಂದು ಬೇರೆ ಊರಿಗೆ ಹೋಗುವವರಿಗೆ ಆಶ್ರಯ ನೀಡುವುದು ಹಾಸ್ಟೆಲ್‌. ಎಷ್ಟೋ ಮಂದಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಎಂಬುದು ತವರು ಮನೆಯಷ್ಟೇ ಆಪ್ತ.

ನಾನು ಓದಲು ಬೇರೆ ಊರಿಗೆ ಹೋದಾಗ ಮನಸಿಲ್ಲದ ಮನಸಿನಿಂದ ಹಾಸ್ಟೆಲ್‌ ಸೇರಿದ್ದೆ. ಮೊದಮೊದಲು ಹೊಸ ವಾತಾವರಣ ನನ್ನ ಉಸಿರುಗಟ್ಟಿಸಿತ್ತು. ಪರಿಚಯವಿಲ್ಲದ ವಿಚಿತ್ರ ಮುಖಗಳು, ವರ್ತನೆಗಳನ್ನು ನೋಡಿ ನನ್ನ ತಲೆ ಗಿರ್‌ ಎಂದಿದ್ದಂತೂ ನಿಜ. ಆದರೆ ಅನಿವಾರ್ಯತೆಯ ಕಾರಣದಿಂದ ಹಾಸ್ಟೆಲ್‌ ವಾಸ ಮುಂದುವರಿದಿತ್ತು.

ಒಮ್ಮೆ ನಮ್ಮ ರೂಮಿನ ಸದಸ್ಯರೆಲ್ಲಾ ಎಂದಿನಂತೆ ಊಟಕ್ಕೆ ಕುಳಿತಿದ್ದೆವು. ಊಟ ಮಾಡುತ್ತಾ ಸಣ್ಣ ಪಂಚಾಯ್ತಿಯೊಂದು ಶುರುವಾಯಿತು. ಮಾತನಾಡುತ್ತಾ ಭೋಜನದಲ್ಲಿ ಮಗ್ನರಾಗಿದ್ದ ನಮಗೆ ಮಾತು ದಾರಿ ತಪ್ಪಿದ್ದರ ಅರಿವಾಗಲಿಲ್ಲ. ಒಬ್ಬಳು ಹಾಸ್ಟೆಲ್‌ನಲ್ಲಿ ‘ದೆವ್ವ’ ಇದೆಯಂತೆ ಎಂದರೆ ಮತ್ತೊಬ್ಬಳು ಅದಕ್ಕೆ ಇಂಬು ನೀಡುವಂತೆ ಯಾರೋ ಯುವತಿ ಹಾಸ್ಟೆಲ್‌ನ ಒಂದು ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಳಂತೆ ಎಂದು ದೆವ್ವ ಕಣ್ಮುಂದೆ ಪ್ರತ್ಯಕ್ಷವಾದಂತೆ ವರ್ಣಿಸಿದಳು. ಹೀಗೆ ಕತೆಗಳನ್ನು ಹೇಳಿ ನನ್ನ ನಿದ್ರೆಗೆ ಭಂಗ ತಂದಿಟ್ಟರು.

ಎಲ್ಲಿ ಕೂತರೂ ಎಲ್ಲಿ ನಿಂತರೂ ಅದೇ ಗುಂಗಲ್ಲಿದ್ದ ನನಗೆ ಹಾಸಿಗೆಗೆ ಹೋಗಲು ಅಂಜಿಕೆ. ಆದರೂ ಸಾಹಸ ಎಂಬಂತೆ ಹಾಸಿಗೆಗೆ ಬಿದ್ದೆ. ಆ ದಿನ ಹಾಸಿಗೆಯೊಂದಿಗೆ ದೊಡ್ಡ ಯುದ್ದವೇ ನಡೆದುಹೋಯಿತು. ಕರಿನೆರಳು ದೆವ್ವದ ಪ್ರತಿರೂಪ ಕೆತ್ತುತ್ತಿತ್ತು. ಕಣ್ಣು ತೆರೆಯಲು ಎದೆ ಢವ ಢವ ಸದ್ದು ಮಾಡುತ್ತಿತ್ತು. ಮಾತನಾಡಲು ಧನಿಯೇ ಹೊರಡುತ್ತಿರಲಿಲ್ಲ. ಯಾರೋ ನನ್ನ ಬಳಿ ನಿಂತು ನನ್ನನ್ನು ಸ್ಪರ್ಶಿಸಲು ಪ್ರಯತ್ನ ಪಟ್ಟಂತೆ ಭಾಸವಾಗುತ್ತಿತ್ತು. ಬೆಳಗಾಗುವುದರೊಳಗೆ ಜೀವ ಕೈಗೆ ಬಂದಂತಾಗಿತ್ತು. ಅಂದೇ ಮನೆಕಡೆ ಮುಖ ಮಾಡಿದ್ದೆ. ಒಂದು ವಾರ ಹಾಸ್ಟೆಲ್‌ ಕಡೆ ತಲೆ ಹಾಕಿರಲಿಲ್ಲ. ಇದು ಒಂದು ಸಂಗತಿಯಾದರೆ, ನಾನು ಊರಿನಲ್ಲಿದ್ದಾಗ ಹಾಸ್ಟೆಲ್‌ನಿಂದ ನನ್ನ ಗೆಳತಿಯೊಬ್ಬಳು ಕರೆಮಾಡಿ ಹಾಸ್ಟೆಲ್‌ಗೆ ಕಳ್ಳ ನುಗ್ಗಿದ್ದ ವಿಷಯ ತಿಳಿಸಿದಳು. ನನಗೆ ಆಶ್ಚರ್ಯವಾಯಿತು. ವಿಪರ್ಯಾಸ ಎಂದರೆ ಬೆಲೆಬಾಳುವಂತಹ ಲ್ಯಾಪ್‌ಟಾ‍ಪ್‌, ಮೊಬೈಲ್‌ಗಳನ್ನು ಬಿಟ್ಟು ಬೇಸಿಕ್‌ ಸೆಟ್‌ ಪೋನ್‌ ಒಂದನ್ನು ಮಾತ್ರ ತೆಗೆದುಕೊಂಡು ಹೋಗಿದ್ದ. ಯಾರಿಗೂ ಅಪಾಯವಾಗಿರಲಿಲ್ಲ. ಎಲ್ಲೋ ಇದ್ದ ನಾನು ಆ ವಿಷಯ ಕೇಳಿ ಚಕಿತಳಾದೆ. ಅದಾದ ನಂತರ ಹಾಸ್ಟೆಲ್‌ಗೆ ಸಿಸಿ ಕ್ಯಾಮೆರಾದ ಆಗಮನವಾಯಿತು. ಈ ಎರಡು ಘಟನೆಗಳು ಹಾಸ್ಟೆಲ್‌ ದಿನಗಳಲ್ಲಿ ನನಗೆ ಮರೆಯಲಾಗದ ದಿನಗಳೆಂದೇ ಹೇಳಬಹುದು.

ನಾಗರತ್ನ ಜಿ. ಸೆಂಟ್ರಲ್ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT