ಶುಕ್ರವಾರ, ಜೂನ್ 5, 2020
27 °C

ಸೀಟು ಹೆಚ್ಚಳ: ಮುಗಿಯದ ಗೊಂದಲ

ಎ. ನಾರಾಯಣ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಸರ್ಕಾರ ಇತ್ತೀಚಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ಘೋಷಿಸಿತು. ಅದರ ಬೆನ್ನಲ್ಲೇ, ಈ ಮೀಸಲಾತಿಯಿಂದಾಗಿ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ವರ್ಗಗಳಿಗೆ ತೊಂದರೆಯಾಗ
ಬಾರದೆಂದೇನೊ ಲೆಕ್ಕ ಹಾಕಿ ಉನ್ನತಶಿಕ್ಷಣ ರಂಗದಲ್ಲಿ ಏಕಾಏಕಿ ಶೇ 25 ರಷ್ಟು ಸೀಟುಗಳನ್ನು ಹೆಚ್ಚಿಸಲು ನಿರ್ಧರಿಸಿತು. ಹೊಸದಾಗಿ ನೀಡಲಾದ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಆರ್ಥಿಕ ಮಾನದಂಡದ ಮೇಲೆ ಮೀಸಲಾತಿ ನೀಡಲಾಗದು ಎನ್ನುವ ತನ್ನ ಹಿಂದಿನ ನಿಲುವನ್ನೇ ಮತ್ತೊಮ್ಮೆ ಎತ್ತಿ ಹಿಡಿದರೆ ಈಗ ಹೆಚ್ಚಿಸಿದ ಸೀಟುಗಳನ್ನು ಮತ್ತೆ ಕಡಿತಗೊಳಿಸಬೇಕೇ?

ಅದಕ್ಕಿಂತಲೂ ಮುಖ್ಯವಾಗಿ ಈಗಾಗಲೇ ಇರುವ ಸೀಟುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಶಿಕ್ಷಣ ನೀಡುವುದಕ್ಕೇನೇ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಪರದಾಡುವ ಸ್ಥಿತಿ ಇದೆ. ಮುಖ್ಯವಾಗಿ ಶಿಕ್ಷಕರ ಕೊರತೆ. ಶಿಕ್ಷಕರು ಇರುವಲ್ಲಿ ಶಿಕ್ಷಕರ ಗುಣಮಟ್ಟದ ಕೊರತೆ. ಎರಡೂ ಇದ್ದಲ್ಲಿ (ಅಂತಹ ಸಂಸ್ಥೆಗಳ ಸಂಖ್ಯೆ ಬಹಳ ಕಡಿಮೆ ಇದೆ) ಮೂಲಸೌಕರ್ಯಗಳ ಕೊರತೆ. ಹೀಗೆ ಕೊರತೆಗಳ ಆಗರವಾಗಿರುವ ಉನ್ನತ ಶಿಕ್ಷಣರಂಗಕ್ಕೆ ಈಗ ಮತ್ತಷ್ಟೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ. ಉನ್ನತ ಶಿಕ್ಷಣರಂಗದಲ್ಲಿ ಇತರ ರಂಗಗಳಲ್ಲಿ ಇರುವಂತೆಯೇ ಸಾಮಾಜಿಕ ನ್ಯಾಯ ಇರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಉನ್ನತ ಶಿಕ್ಷಣರಂಗವನ್ನು ಮತ್ತಷ್ಟೂ ಕೆಡಿಸಿದರೆ ಅತ್ತ ಉನ್ನತಶಿಕ್ಷಣವೂ ಉಳಿಯುವುದಿಲ್ಲ, ಇತ್ತ ಸಾಮಾಜಿಕನ್ಯಾಯವನ್ನೂ ನೀಡಿದಂತಾಗುವುದಿಲ್ಲ.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ
ಇಡೀ ಉನ್ನತ ಶಿಕ್ಷಣರಂಗವನ್ನು ಈಗ ನಿಭಾಯಿಸುತ್ತಿರುವುದೇ ಗುತ್ತಿಗೆ ಆಧಾರದಲ್ಲಿ ನೇಮಕವಾದ ಪ್ರಾಧ್ಯಾಪಕರು. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸಬೇಕು. ಉನ್ನತ ಶಿಕ್ಷಣ ಸಮೀಕ್ಷೆ ಕಂಡುಕೊಂಡ ಪ್ರಕಾರ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 70 ರಷ್ಟು ಖಾಸಗಿ ಸಂಸ್ಥೆಗಳಿವೆ. ಬಹುತೇಕ ಖಾಸಗಿ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರ ನೇಮಕ, ಅವರ ಸೇವಾ ಭದ್ರತೆ, ಅವರ ತರಬೇತಿ, ಸಂಬಳ ಎಲ್ಲವೂ ಸಮಸ್ಯಾತ್ಮಕ. ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಕಾರ ಸರಕಾರೀ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಇರುವ ಸುಮಾರು 80,000 ಮಂದಿ ಪ್ರಾಧ್ಯಾಪಕರು ‘ನಕಲಿ’ ಗಳಂತೆ. ಇದು ಸರಕಾರವೇ ಮಂಡಿಸಿದ ವರದಿ. ಇಂತಹ ಮೂಲಭೂತ ಸಮಸ್ಯೆಯೊಂದರ ಬಗ್ಗೆ ಚಕಾರವೆತ್ತದ ಸರಕಾರ ಇದ್ದಕಿದ್ದ ಹಾಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಿದೆ!

ಕುಸಿದ ಶಿಕ್ಷಕರ ಬೋಧನಾ ಗುಣಮಟ್ಟ
ಭಾರತದ ಉನ್ನತ ಶಿಕ್ಷಣ ರಂಗ ವಿಚಿತ್ರವಾದ ವಿಷಮ ವರ್ತುಲವೊಂದರಲ್ಲಿ ಸಿಲುಕಿಕೊಂಡಿದೆ. ಇದನ್ನು ಬಹಳ ಸರಳವಾಗಿ ವಿವರಿಸಬೇಕು ಎಂದಾದರೆ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಕರ ಗುಣಮಟ್ಟ ತೀರಾ ಕಳಪೆಯಾಗಿದೆ. ಕಳಪೆ ಶಿಕ್ಷಕರು ಕಳಪೆ ಪದವೀಧರರನ್ನು ಸೃಷ್ಟಿಸುತ್ತಾರೆ. ಈ ಕಳಪೆ ಪದವೀಧರರು ತಾವು ಶಿಕ್ಷಕರಾದ ಮೇಲೆ ತಮಗಿಂತಲೂ ಕಳಪೆಯಾದ ಪದವೀಧರರನ್ನು ತಯಾರಿಸುತ್ತಾರೆ. ಹೀಗೆ ಇಡೀ ಉನ್ನತ ಶಿಕ್ಷಣ ಅಧೋಗತಿಯಲ್ಲಿದೆ. ಇದ್ದ ಶಿಕ್ಷಕರನ್ನು ಒಮ್ಮಿಂದೊಮ್ಮೆಲೆ ಕಿತ್ತು ಅಲ್ಲಿಗೆ ಉತ್ತಮರನ್ನು ತರಲು ಸಾಧ್ಯವಿಲ್ಲ. ಉತ್ತಮರಾದವರನ್ನು ಎಲ್ಲಿ ಹುಡುಕಬೇಕು ಎನ್ನುವ ಸವಾಲು ಬೇರೆ ಇದೆ. ಉನ್ನತ ಶಿಕ್ಷಣ ಸರಿ ಇಲ್ಲ ಎಂದಾಕ್ಷಣ, ನಮ್ಮಲ್ಲಿ ಐಐಟಿಗಳಿಲ್ಲವೇ? ನಮ್ಮಲ್ಲಿ ಐಐಎಂಗಳಿಲ್ಲಲ್ಲವೇ, ನಮ್ಮಲ್ಲಿ ರಾಷ್ಟ್ರೀಯ ಕಾನೂನು ಶಾಲೆಗಳಿಲ್ಲವೇ, ಇವೆಲ್ಲವೂ ಶ್ರೇಷ್ಠ ಸಂಸ್ಥೆಗಳೆಂದು ಹೆಸರು ಪಡೆದಿಲ್ಲವೇ ಎನ್ನುವ ಮರುಪ್ರಶ್ನೆ ಹಾಕುವವರಿದ್ದಾರೆ. ಈ ಮರುಪ್ರಶ್ನೆಗೆ ಎರಡು ರೀತಿಯಲ್ಲಿ ಉತ್ತರಿಸಬಹುದು. ಮೊದಲನೆಯದಾಗಿ ಕೆಟ್ಟ ಉನ್ನತಶಿಕ್ಷಣ ವ್ಯವಸ್ಥೆಯೊಳಗೆ ಅಲ್ಲೊಂದು ಇಲ್ಲೊಂದು ಎಂಬಂತೆ ‘ಉತ್ಕೃಷ್ಟತೆಯ’ ದ್ವೀಪಗಳನ್ನು ಸೃಷ್ಟಿಸುವುದರಿಂದ ಉನ್ನತ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಎರಡನೆಯದಾಗಿ ಉತ್ಕೃಷ್ಟ ದ್ವೀಪಗಳೂ ಕೂಡಾ ಬರಬರುತ್ತಾ ತಮ್ಮ ಉತ್ಕೃಷ್ಟತೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಲಿವೆ. ಎಐಐಟಿ, ಐಐಎಂ, ಕಾನೂನು ಶಾಲೆ ಇತ್ಯಾದಿಗಳ ಸಂಖ್ಯೆ ಇತ್ತೀಚಿಗೆ ಬೇಕಾಬಿಟ್ಟಿಯಾಗಿ ಹೆಚ್ಚಾದಂತೆಯೇ ಅಲ್ಲಿ ತಯಾರಾಗಿ ಬರುವ ಪದವೀಧರರು ಕೂಡಾ ಇತರ ಪದವೀಧರರಿಗಿಂತ ಭಿನ್ನವಾಗಿ ಉಳಿದಿಲ್ಲ ಎನ್ನುವ ಅಭಿಪ್ರಾಯವೊಂದು ಇತ್ತೀಚೆಗಿನ ದಿನಗಳಲ್ಲಿ ದಟ್ಟವಾಗುತ್ತಿದೆ. ಹೊಸದಾಗಿ ಸ್ಥಾಪನೆಗೊಂಡ ಇಂತಹ ಸಂಸ್ಥೆಗಳು ಹಳೆಯ ಸಂಸ್ಥೆಗಳ ಸಾಲಿನಲ್ಲಿ ನಿಲ್ಲುವುದಿಲ್ಲ.

ಇದಕ್ಕೆ ಕಾರಣ ಏನು ಎಂದರೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುನ್ನ, ಸರಿಯಾದ ಅಧ್ಯಾಪಕರುಗಳನ್ನು ನೇಮಿಸುವ ಮುನ್ನವೇ ಸಂಸ್ಥೆಗಳ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಯನ್ನು ಮನಬಂದಂತೆ ಹೆಚ್ಚಿಸುತ್ತಾ ಹೋದದ್ದು. ಈ ರೀತಿ ಪೂರ್ವತಯಾರಿ ಇಲ್ಲದೆ ಸಂಖ್ಯೆಯನ್ನು ಹೆಚ್ಚಿಸಲು ಒಂದು ಕಾರಣ ಪ್ರತಿಯೊಂದು ರಾಜ್ಯವೂ ಜಿದ್ದಿಗೆ ಬಿದ್ದು ನಮಗೂ ಇಂತಹ ಒಂದು ಸಂಸ್ಥೆಯನ್ನು ಕೊಡಿ ಎಂದು ಕೇಂದ್ರದ ಮೇಲೆ ಒತ್ತಾಯ ಹಾಕಿದ್ದು.  ಸಂಸ್ಥೆಗಳು ಹೆಚ್ಚಿದಂತೆ ಗುಣಮಟ್ಟ ಕುಸಿಯಿತು. ಈಗ ಎಲ್ಲಾ ರೀತಿಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆಯನ್ನು ಯಾವ ಮುನ್ಸೂಚನೆಯೂ ಇಲ್ಲದೆ, ಯಾವ ತಯಾರಿಯೂ ಇಲ್ಲದೆ ಹೆಚ್ಚಿಸಲಾಗಿದೆ. ಇದರ ಪರಿಣಾಮ ಏನು ಎನ್ನುವುದನ್ನು ಊಹಿಸಲು ಯಾವುದೇ ಸಂಶೋಧನೆ ಬೇಕಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು