ಗುರುವಾರ , ನವೆಂಬರ್ 21, 2019
23 °C

ಅ.14 ವಿಶ್ವ ಮಾನದಂಡಗಳ ದಿನಾಚರಣೆ | ಮಾನದಂಡಗಳ ಮಾಹಿತಿ ಪಡೆಯೋಣ

Published:
Updated:

ವಸ್ತು, ಉಪಕರಣಗಳು, ಯಂತ್ರಗಳು, ಸಾಧನಗಳು, ಸಂಸ್ಥೆ– ಕಂಪನಿಗಳ ಸೇವೆ, ಕಾರ್ಯವೈಖರಿ ಎಲ್ಲದಕ್ಕೂ ಮಾನದಂಡವಿದೆ. ಈ ಮಾನದಂಡಗಳ ಪ್ರಕಾರವೇ ಆಯಾ ಸಂಸ್ಥೆಗಳಿಗೆ ಐಎಸ್‌ಒ ಪ್ರಮಾಣಪತ್ರ ನೀಡಲಾಗುತ್ತದೆ. ವಿಶ್ವ ಮಾನದಂಡಗಳ ದಿನಾಚರಣೆ ಅಂಗವಾಗಿ ಐಎಸ್‌ಒ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.

ಖರೀದಿಸಿದ ವಸ್ತುವಿನ ಗುಣಮಟ್ಟ, ವಿವಿಧ ಕ್ಷೇತ್ರದ ಸಂಸ್ಥೆಗಳು ನೀಡುತ್ತಿರುವ ಸೇವಾ ಗುಣಮಟ್ಟ, ವಿವಿಧ ವಸ್ತುಗಳ  ತಿಳಿಸುವುದಕ್ಕೆ ನಿರ್ದಿಷ್ಟ ಮಾನದಂಡಗಳಿವೆ. ಈ ಮಾನದಂಡಗಳ ಮೂಲಕವೇ ಗುಣಮಟ್ಟ, ಸುರಕ್ಷತೆ, ದಕ್ಷತೆ, ನಿಖರತೆಗಳನ್ನು ತಿಳಿಯಬಹುದು. ಈ ಮಾನದಂಡಗಳು ಗ್ರಾಹಕರ ಶ್ರಮದ ಹಣಕ್ಕೆ ನ್ಯಾಯ ಒದಗಿಸಲು ನೆರವಾಗುತ್ತವೆ. ಇಂತಹ ಮಾನದಂಡಗಳನ್ನು ನಿಗದಿ ಪಡಿಸುವುದಕ್ಕಾಗಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ರಚನೆಯಾದ ಸಂಸ್ಥೆ ಐಎಸ್‌ಒ.

1946 ಅಕ್ಟೋಬರ್ 14ರಂದು 25 ರಾಷ್ಟ್ರಗಳ ಪ್ರತಿನಿಧಿಗಳು ಬ್ರಿಟನ್ ರಾಜಧಾನಿ ಲಂಡನ್‌ನಲ್ಲಿ ಸಭೆ ಸೇರಿ,  ಮಾನದಂಡಗಳ ಏಕೀಕರಣ ಮತ್ತು ಸಮನ್ವಯಕ್ಕಾಗಿ ಅಂತರರಾಷ್ಟ್ರೀಯ ಮಾನದಂಡಗಳ ಸಂಸ್ಥೆಯೊಂದು ರಚಿಸುವ ತೀರ್ಮಾನ ತೆಗೆದುಕೊಂಡರು. ಈ ತೀರ್ಮಾನದಿಂದಾಗಿ ಅಂತರರಾಷ್ಟ್ರೀಯ ಮಾನದಂಡಗಳ ಸಂಘ ರಚಿಸಿದರು. ವರ್ಷದ ನಂತರ 1947 ಫೆಬ್ರುವರಿ 23ರಂದು ಅಧಿಕೃತವಾತವಾಗಿ (International Organization for Standardization- ISO) ಅಸ್ತಿತ್ವಕ್ಕೆ ಬಂತು. ಐಎಸ್‌ಒ ಕೇಂದ್ರ ಕಚೇರಿ ಸ್ವಿಟ್ಜರ್ಲೆಂಡ್‌ನ ಜೀನೆವಾದಲ್ಲಿದೆ.

ಇದರ ನೆನಪಿಗಾಗಿ 1970 ಅಕ್ಟೋಬರ್ 14ರಂದು ಮೊದಲ ಬಾರಿಗೆ ವಿಶ್ವ ಮಾನದಂಡಗಳ ದಿನ ಆಚರಿಸಲಾಯಿತು. ಕೆಲವು ವರ್ಷಗಳ ನಂತರ,  ಇಂಟರ್‌ನ್ಯಾಷನಲ್ ಎಲೆಕ್ಟ್ರೊಟೆಕ್ನಿಕಲ್ ಕಮಿಷನ್‌ (ಐಇಸಿ), ಇಂಟರ್‌ನ್ಯಾಷನಲ್‌ ಟೆಲಿಕಮ್ಯುನಿಕೇಷನ್‌ ಯೂನಿಟ್‌ (ಐಟಿಯು) ಸೇರಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸುತ್ತಿವೆ. ಪ್ರತಿ ವರ್ಷ ವಿವಿಧ ದೇಶಗಳು ವಿವಿಧ ರೂಪಗಳಲ್ಲಿ ಈ ದಿನವನ್ನು ಆಚರಿಸುತ್ತವೆ. ಪ್ರತಿ ವರ್ಷವೂ ಒಂದು ಥೀಮ್ ಕೂಡ ಇರುತ್ತವೆ. ಈ ಬಾರಿಯ ಥೀಮ್‌ ‘ವಿಡಿಯೊ ಸ್ಟ್ಯಾಂಡರ್ಡ್ಸ್ ಕ್ರಿಯೇಟ್ ಗ್ಲೋಬಲ್ ಸ್ಟೇಜ್‌’ (ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸುತ್ತಿರುವ ವಿಡಿಯೊ ಮಾನದಂಡಗಳು).

ನಿಗದಿ ಮಾಡುವುದು ಹೇಗೆ?

ಐಎಸ್‌ಒನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಜ್ಞರು ಕೆಲಸ ಮಾಡುತ್ತಾರೆ. ಇವರು ಕಾಲಕಾಲಕ್ಕೆ ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗಳು, ವಿವಿಧ ಕ್ಷೇತ್ರದ ವ್ಯವಸ್ಥೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸುತ್ತಿರುತ್ತಾರೆ. ಯಾವುದಾದರೂ ಸಂಸ್ಥೆ ಅಥವಾ ಕಂಪನಿ ತಯಾರಿಸಿದ, ಉತ್ಪಾದಿಸಿದ ಅಥವಾ ನೀಡುತ್ತಿರುವ ಸೇವೆಯ ಗುಣಮಟ್ಟ ಅಳೆಯುವುದಕ್ಕೆ ಸಂಸ್ಥೆಗೆ ಅರ್ಜಿ ಸಲ್ಲಿಸಬೇಕು. ಸಂಸ್ಥೆಯ ತಜ್ಞರು ಪರಿಶೀಲಿಸಿ ‘ಐಎಸ್‌ಒ’ ಪ್ರಮಾಣಪತ್ರ ನೀಡುತ್ತಾರೆ.

ಆಚರಿಸುವುದು ಹೇಗೆ?

ಈ ದಿನ ನಾವು ನಿತ್ಯ ಬಳಸುವ ವಸ್ತುಗಳು, ಉತ್ಪನ್ನಗಳು, ಯಂತ್ರೋಪಕಣಗಳು, ಸಾಧನಗಳು ಐಎಸ್‌ಒದಿಂದ ಪ್ರಮಾಣೀಕೃತವಾಗಿವೆಯೇ ಎಂಬುದನ್ನು ಪರಿಶೀಲಿಸಬಹುದು. ವಸ್ತುವಿನ ಗುಣಮಟ್ಟ ಹೇಗಿದೆ, ಬಳಸುತ್ತಿರುವ ವಸ್ತುಗಳ ತಯಾರಿಗೆ ಅನುಸರಿಸಬೇಕಾದ ಮಾನದಂಡಗಳೇನು ಎಂಬ ಮಾಹಿತಿಯನ್ನು ಕಲೆಹಾಕಬಹುದು. ಈ ಬಗ್ಗೆ ನಿಮ್ಮ ಸ್ನೇಹಿತರಿಗೆ ಸಹಪಾಠಿಗಳಿಗೆ ತಿಳಿಸಿ ಜಾಗೃತಿ ಮೂಡಿಸಬೇಕು. ವಸ್ತುಗಳನ್ನು ಎಚ್ಚರದಿಂದ ಖರೀದಿಸುವುದು ಹೇಗೆ ಎಂಬುದನ್ನು ತಿಳಿಯಬಹುದು.

* ಐಎಸ್‌ಒ ಸದಸ್ಯತ್ವ ಪಡೆದಿರುವ ರಾಷ್ಟ್ರಗಳು-

* ಐಎಸ್‌ಒ ತಂತ್ರಜ್ಞಾನ ಸಮಿತಿಗಳು-780

* ಐಎಸ್‌ಒನಲ್ಲಿ ಕೆಲಸ ಮಾಡುತ್ತಿರುವ ತಜ್ಞರು 45 ಸಾವಿರಕ್ಕೂ ಹೆಚ್ಚು

* ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಐಎಸ್‌ಒ ಈವರೆಗೆ ನಿಗದಿಪಡಿಸಿರುವ ಮಾನದಂಡಗಳು-22812

ಕೆಲವು ಪ್ರಮಾಣಪತ್ರಗಳು

* ISO 9001:2015- ಸಂಸ್ಥೆಗಳು, ಕಂಪನಿಗಳ ಸೇವಾಗುಣಮಟ್ಟಕ್ಕೆ ನೀಡುವ ಪ್ರಮಾಣಪತ್ರ

*  ISO 14001:2015- ಪರಿಸರಕ್ಕೆ ಸಂಬಂಧಿಸಿದ ಕಾರ್ಯನಿರ್ವಹಣಾ ‌ವ್ಯವಸ್ಥೆಗೆ ನೀಡುವ ಪತ್ರ

* ISO/IEC 27001:2013- ಮಾಹಿತಿ ತಂತ್ರಜ್ಞಾನಕ್ಕೆ ಕ್ಷೇತ್ರಕ್ಕೆ ಸಂಬಧಿಸಿದ ಸುರಕ್ಷತೆ, ಡಿಜಿಟಲ್‌ ಮಾಹಿತಿ ಸುರಕ್ಷತೆಗೆ ನೀಡುವ ಪ್ರಮಾಣಪತ್ರ

ಇದನ್ನೂ ಓದಿ: ಮಾಪನ ಇಲಾಖೆ ಕಾಗದ ರಹಿತ ಗುರಿ

ಪ್ರತಿಕ್ರಿಯಿಸಿ (+)