ಭಾನುವಾರ, ಮಾರ್ಚ್ 7, 2021
19 °C
ಮಾದರಿ ಶಿಕ್ಷಕ ಮಹಾಂತೇಶ ಪೂಜಾರಿ

ಮುದ್ನಾಳ ತಾಂಡಾದ ಸರ್ಕಾರಿ ಶಾಲೆ ಪತಿ–ಪತ್ನಿ ಶಿಕ್ಷಕರಾಗಿರುವ ಮಾದರಿ ಶಾಲೆ..!

ಮಹಾಬಲೇಶ್ವರ ಶಿ.ಗಡೇದ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಮುದ್ನಾಳ ತಾಂಡಾದ ಸರ್ಕಾರಿ ಶಾಲೆ ಮುದ್ದೇಬಿಹಾಳ ತಾಲ್ಲೂಕಿನ ಮಾದರಿ ಶಾಲೆಗಳಲ್ಲಿ ಒಂದಾಗಿದೆ. ಇದು ದಶಕದಿಂದ ಇಲ್ಲಿ ಕೆಲಸ ಮಾಡುತ್ತಿರುವ ನೆರೆಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ವರ್ಚಗಲ್ಲ ಗ್ರಾಮದ ಶಿಕ್ಷಕ ಮಹಾಂತೇಶ ಕೃಷ್ಣಪ್ಪ ಪೂಜಾರಿ ದಂಪತಿ ಪರಿಶ್ರಮದ ಪ್ರತಿಫಲ.

ಪೊಲೀಸ್‌ ಕಾನ್‌ಸ್ಟೆಬಲ್‌ ವೃತ್ತಿಯಲ್ಲಿದ್ದ ಮಹಾಂತೇಶ ಶಿಕ್ಷಕ ವೃತ್ತಿ ತನ್ನನ್ನು ಅರಸಿ ಬರುತ್ತಿದ್ದಂತೆ ಖಾಕಿ ತೊರೆದರು. ಇದೇ ತಾಂಡಾ ಶಾಲೆಯಿಂದ ತಮ್ಮ ಶಿಕ್ಷಕ ವೃತ್ತಿ ಆರಂಭಿಸಿದರು. 25 ಮನೆಗಳಿರುವ ತಾಂಡಾದಲ್ಲಿ 44 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಇಬ್ಬರು ಶಿಕ್ಷಕರು. ಮಹಾಂತೇಶಗೆ ಸಾಥ್‌ ನೀಡುತ್ತಿರುವವರು ಇವರ ಪತ್ನಿ ಶ್ರೀದೇವಿ ಶಿವಣ್ಣ ಗುಡದಿನ್ನಿ. ಇವರೂ ಶಿಕ್ಷಕಿ.

ಪತಿ–ಪತ್ನಿ ಇಬ್ಬರೂ ಶಾಲೆಯನ್ನು ಮನೆಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಈ ಗ್ರಾಮದಿಂದ ಒಂದೇ ಒಂದು ಮಗು ಸಹ ಬೇರೆ ಊರಿನ ಆಂಗ್ಲ ಮಾಧ್ಯಮ ಶಾಲೆ ಅಥವಾ ಖಾಸಗಿ ಶಾಲೆಗೆ ಹೋಗಲ್ಲ. ಇದನ್ನು ಸರ್ಕಾರಿ ಶಾಲೆ ಎಂದು ನಂಬಲು ಸಾಧ್ಯವಿಲ್ಲ. ಖಾಸಗಿ ಶಾಲೆಗಳಲ್ಲಿ ನಾಲ್ಕೈದು ಸಿಬ್ಬಂದಿ ಮಾಡುವ ಕೆಲಸವನ್ನು ಈ ಇಬ್ಬರೇ ಮಾಡುವುದು ವಿಶೇಷ.

ಏಳು ಗುಂಟೆಯಿರುವ ಶಾಲಾ ಆವರಣದಲ್ಲಿ ಮುನ್ನೂರು ಗಿಡಗಳನ್ನು ನೆಟ್ಟಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೊಬ್ಬ ಪೂಜಾರಿ ಅಂಥವರು ಇದ್ದರೆ, ವಿಜಯಪುರ ಜಿಲ್ಲೆಯಲ್ಲಿ ಹಚ್ಚಹಸಿರಿನ ವಾತಾವರಣ ನಿರ್ಮಿಸಬಹುದು ಎಂಬುದು ಸ್ಥಳೀಯರ ಅನಿಸಿಕೆ.

ಶಾಲಾ ಕೈ ತೋಟವೂ ಇದೆ. ಇಲ್ಲಿಯೇ ಬಿಸಿಯೂಟಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಯುತ್ತಾರೆ. ನಸುಕಿನ 6ಕ್ಕೆ ದಿನಚರಿ ಆರಂಭ. ನಿತ್ಯ ಅಭ್ಯಾಸ ಮಾಡದೆ ತರಗತಿಗೆ ಹೋಗಲ್ಲ. ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರ್‌. ಮಕ್ಕಳಿಗೆ ಆರೋಗ್ಯ ತಪ್ಪಿದರೆ ತಾವೇ ಒಂದು ದಿನದ ಮಟ್ಟಿಗೆ ವೈದ್ಯರಾಗುತ್ತಾರೆ. ಎರಡನೇ ದಿನವೂ ಜ್ವರ ಬಂದರೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹೈಟೆಕ್ ಶೌಚಾಲಯ. ಕೈ ತೊಳೆಯಲು ಸೋಪು, ಅರಿವೆ ಒದಗಿಸಿರುವುದು ಇಲ್ಲಿನ ವಿಶೇಷ.

ಇಲ್ಲಿ ಕಲಿಯುವ ಮಕ್ಕಳ ಬಹುತೇಕ ಪಾಲಕರು ಗೋವಾಕ್ಕೆ ದುಡಿಮೆಗಾಗಿ ಹೋಗಿದ್ದಾರೆ. ಅಜ್ಜ–ಅಜ್ಜಿಯರೇ ಪಾಲಕರು. ಆದರೆ ಮಕ್ಕಳಿಗೆ ತಮ್ಮ ತಂದೆ–ತಾಯಿಯ ಕೊರತೆ ಕಾಣದಂತೆ ಮಹಾಂತೇಶ ಪೂಜಾರಿ ಶಾಲಾ ದಾಖಲೆಗಳನ್ನು ನಿರ್ವಹಿಸಿದ್ದಾರೆ. ಆಧಾರ್‌ ಕಾರ್ಡ್‌ ಮಾಡಿಸಿ, ಬ್ಯಾಂಕ್ ಪಾಸ್ ಬುಕ್ ಸಹ ತೆರೆದಿದ್ದಾರೆ. ವಿದ್ಯಾರ್ಥಿ ವೇತನ ನೇರವಾಗಿ ಈ ಖಾತೆಗಳಿಗೆ ಜಮೆಯಾಗುತ್ತಿದೆ.

2011ರಲ್ಲಿ ಉತ್ತಮ ಶಾಲೆ ಹಾಗೂ ಉತ್ತಮ ಎಸ್.ಡಿ.ಎಂ.ಸಿ, ಪ್ರಶಸ್ತಿ, 2014 ಹಾಗೂ 2015ರಲ್ಲಿ ಜಿಲ್ಲಾ ಮಟ್ಟದ ಹಸಿರು ಶಾಲೆ ಎಂಬ ಪ್ರಶಸ್ತಿ ಈ ಶಾಲೆಗೆ ದಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು