ಭಾನುವಾರ, ಜೂಲೈ 12, 2020
22 °C
ಶಿಕ್ಷಕರ ದಿನ

ಗುಂಡ್ಲುಪೇಟೆಯಲ್ಲೊಬ್ಬ ಮಾದರಿ ಶಿಕ್ಷಕ; ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಈ ಶಾಲೆ

ಮಲ್ಲೇಶ.ಎಂ. Updated:

ಅಕ್ಷರ ಗಾತ್ರ : | |

Deccan Herald

ಗುಂಡ್ಲುಪೇಟೆ: ಶಿಕ್ಷಕ ಮನಸ್ಸು ಮಾಡಿದರೆ ಖಾಸಗಿ ಶಾಲೆಯನ್ನೂ ಮೀರಿಸುವ  ರೀತಿಯಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆಯಾಗುವ ಶಿಕ್ಷಕರೊಬ್ಬರು ತಾಲ್ಲೂಕಿನಲ್ಲಿದ್ದಾರೆ.

ಶಾಲೆಯ ಮತ್ತು ಮಕ್ಕಳ ಆಮೂಲಾಗ್ರ ಪ್ರಗತಿಗೆ ಅವಿರತ ಶ್ರಮಿಸುತ್ತಿರುವ ತಾಲ್ಲೂಕಿನ ಕಾಡಂಚಿನಲ್ಲಿರುವ, ಹೊಂಗಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹದೇವಸ್ವಾಮಿ ಅವರು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂಬ ಕೂಗಿನ ನಡುವೆಯೇ ಈ ಶಾಲೆಗೆ ಪ್ರತಿ ವರ್ಷ ಹೆಚ್ಚು ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ಇದಕ್ಕೆ ಕಾರಣ ಮಹದೇವಸ್ವಾಮಿ ಅವರು.

ಪ್ರತಿ ವರ್ಷ ಶಾಲೆ ಆರಂಭವಾಗುವ ಹೊತ್ತಿಗೆ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡುವ ಅವರು, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ತಿಳಿಸುತ್ತಾರೆ. ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಶಾಲೆ ಕಡಿಮೆ ಇಲ್ಲ ಎಂಬುದನ್ನು ಮನವರಿಕೆ ಮಾಡಿ ಮಕ್ಕಳನ್ನು ಶಾಲೆಗೆ ಸೇರುವಂತೆ ಉತ್ತೇಜನ ನೀಡುತ್ತಾರೆ.

ಇದರ ಪರಿಣಾಮವಾಗಿ ಕಾನ್ವೆಂಟ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳೂ ಈ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಸದ್ಯ ಶಾಲೆಯಲ್ಲಿ 112 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ 8 ಮಕ್ಕಳು ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. 

ಶಾಲೆಯ ಮಕ್ಕಳಲ್ಲಿ ಶಿಸ್ತು ತರಲು ಮಹದೇವಸ್ವಾಮಿ ಶ್ರಮಿಸುತ್ತಿದ್ದಾರೆ. ಮಕ್ಕಳ ಸಮವಸ್ತ್ರ, ತರಗತಿ ಒಳಗೆ, ಹೊರಗಡೆ ಅವರ ವರ್ತನೆ ನೋಡಿದರೆ ಇದು ಗೊತ್ತಾಗುತ್ತದೆ. ಊಟದ ಸಮಯದಲ್ಲಿ ಒಂದು ಅಗಳು ಅನ್ನವನ್ನು ಮಕ್ಕಳು ಚೆಲ್ಲುವುದಿಲ್ಲ.

ಸಕಲ ಸೌಲಭ್ಯ: ದಾನಿಗಳ ಮನ ವೊಲಿಸಿ ಶಾಲೆಗೆ ಬೇಕಾದ ವಿಜ್ಞಾನ ಪ್ರಯೋಗಾಲಯ, ಶುದ್ಧ ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಗುರುತಿನ ಚೀಟಿಯನ್ನೂ ಮಹದೇವಸ್ವಾಮಿ ಮಾಡಿಸಿದ್ದಾರೆ. ಗ್ರಾಮದಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಮಕ್ಕಳ ಮೂಲಕ ಪೋಷಕರ ಮನವೊಲಿಸಿದ್ದಾರೆ.

ಕೈತೋಟ: ಶಾಲೆಯ ಆವರಣದಲ್ಲೇ ತರಕಾರಿ ತೋಟ ಅಭಿವೃದ್ಧಿ ಪಡಿಸಲಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ಬಹುತೇಕ ತರಕಾರಿಗಳನ್ನು ಅಲ್ಲೇ ಬೆಳೆಯಲಾಗುತ್ತದೆ. ಕೆಲವೊಂದನ್ನು ಮಾತ್ರ ಹೊರಗಿನಿಂದ ತರಲಾಗುತ್ತದೆ.

ಮಕ್ಕಳ ಹುಟ್ಟುಹಬ್ಬ: ಮಕ್ಕಳಲ್ಲಿ ಸಮಾನತೆ ಮೂಡಬೇಕು ಎಂಬ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಹುಟ್ಟಿದ ಹಬ್ಬ ಆಚರಿಸಲಾಗುತ್ತದೆ. ಮಕ್ಕಳಿಗೆ ಆ ದಿನ ಗಿಡಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. 

ಗ್ರಾಮಸ್ಥರ ಮತ್ತು ಹಾಲು ಉತ್ಪಾದಕರ ಮನವೊಲಿಸಿ ಪ್ರತಿ ದಿನ ಶಾಲಾ ಮಕ್ಕಳಿಗೆ 2 ಲೀಟರ್ ಹಾಲು ಲಭ್ಯವಾಗುವಂತೆಯೂ ಅವರು ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು