ಹೊಸ ವರ್ಷದ ಸಂಕಲ್ಪಶಕ್ತಿ

7

ಹೊಸ ವರ್ಷದ ಸಂಕಲ್ಪಶಕ್ತಿ

Published:
Updated:

ಎಲ್ಲೆಡೆ ಹೊಸ ವರ್ಷದ ಸಂಭ್ರಮ, ಸಡಗರ, ಉತ್ಸಾಹ. ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ಹೊಸ ದಿನಗಳೆಡೆಗೆ ಭರವಸೆ, ಕನಸುಗಳೊಂದಿಗೆ ಹೆಜ್ಜೆ ಹಾಕುವ ಹುರುಪು. ಹೊಸ ವರ್ಷಕ್ಕೆ ನಾವೂ ಹೊಸಬರಾಗಿ, ಹೊಸತನವನ್ನು ಮೈಗೂಡಿಸಿಕೊಳ್ಳುವ ಹಂಬಲ ಎಲ್ಲರಲ್ಲೂ ಮನೆ ಮಾಡಿರುತ್ತದೆ.

‘ಹೊಸ ವರ್ಷದ ಸಂಕಲ್ಪಗಳು’ ಆ ಹೊಸತನದ ಹಂಬಲದ ಒಂದು ಭಾಗವೇ ಆಗಿದೆ.  ಇವು ಎಷ್ಟು ಕ್ಲೀಷೆಯಾಗಿಬಿಟ್ಟಿವೆ ಎಂದರೆ ‘ಹೊಸ ವರ್ಷಕ್ಕೆ ಯಾವ ಸಂಕಲ್ಪಗಳನ್ನೂ ಕೈಗೊಳ್ಳಬಾರದೆಂಬುದೇ ನಮ್ಮ ಹೊಸ ವರ್ಷದ ಸಂಕಲ್ಪ’ – ಎಂದು ಅನೇಕರು ಹಿಡಿದ ಸಂಕಲ್ಪ ನೆರವೇರಿಸಲಾಗದ ನಿರಾಸೆಯಲ್ಲಿ ಹೇಳುತ್ತಿರುತ್ತಾರೆ. ಇರಲಿ. ಸಂಕಲ್ಪಗಳು, ನಿರ್ಣಯಗಳು, ದೃಢ ನಿಶ್ಚಯಗಳಿರದೆ ಬಾಳುವುದು ಅಷ್ಟೇನೂ ಆಸಕ್ತಿದಾಯಕ ವಿಚಾರವಲ್ಲ. ಪ್ರತಿ ವ್ಯಕ್ತಿಯೂ ಪ್ರತಿ ನಿತ್ಯವೂ ಒಂದಲ್ಲ ಒಂದು ನಿರ್ಣಯದೆಡೆಗೆ ಸಾಗುತ್ತಲೇ ಇರುವುದರಲ್ಲಿಯೇ ಜೀವನದ ಸ್ವಾರಸ್ಯವಿದೆ ಎಂದರೆ ತಪ್ಪಾಗಲಾರದು.

ಹೀಗಿರುವಾಗ ಶಿಕ್ಷಣವ್ಯವಸ್ಥೆಯ ಮೂರು ಆಧಾರಸ್ತಂಭಗಳಾದ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಕೈಗೊಳ್ಳಬಹುದಾದ ನಿರ್ಣಯಗಳು ಯಾವುದಾಗಿರಬಹುದು ಎನ್ನುವುದನ್ನು ನೋಡೋಣ. ಈ ನಿರ್ಣಯಗಳ ಪಟ್ಟಿ ಸಂಪೂರ್ಣವೇನಲ್ಲ; ಇವು ಸೂಚಕಗಳು ಮಾತ್ರ, ವಿಭಿನ್ನ ಸಂದರ್ಭಗಳು, ಅಗತ್ಯಗಳಿಗೆ ತಕ್ಕಂತೆ ಮಾರ್ಪಾಟುಗಳನ್ನು ಮಾಡಿಕೊಳ್ಳಬಹುದು ಎಂಬುದನ್ನೇನೂ ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಅದಕ್ಕೂ ಮುನ್ನ ನಿರ್ಣಯಗಳು ಅಥವಾ ‘ಹೊಸ ವರ್ಷದ ಸಂಕಲ್ಪಗಳು’ ಹೇಗಿದ್ದರೆ ಚೆನ್ನ ಎಂಬುದನ್ನು ನೋಡೋಣ.

1) ಮೊಟ್ಟಮೊದಲನೆಯದಾಗಿ ಸಂಕಲ್ಪಗಳು ಎಂದರೆ ಯಾವುದೋ ಆವೇಶದಲ್ಲಿ ಏನೋ ಅಂದುಕೊಂಡು ನಂತರ ಮರೆತುಬಿಡುವುದಲ್ಲ. ಸಂಕಲ್ಪದೆಡೆಗಿನ ಬದ್ಧತೆ ಇರಬೇಕಾದುದು ಅತಿ ಮುಖ್ಯ. ಅದಕ್ಕಾಗಿಯೇ ಒಂದು ಜರ್ನಲ್‌ ಅನ್ನು ಬರೆಯುವ ಅಭ್ಯಾಸ ಬಹಳ ಉಪಯೋಗಕಾರಿ. ಇದರಿಂದ ನಮ್ಮ ಆಲೋಚನೆ, ಉದ್ದೇಶಗಳ ಬಗ್ಗೆಯೂ ಸ್ಪಷ್ಟತೆ ದೊರಕುವುದು ನಿಶ್ಚಿತ.

2) ಈ ಜರ್ನಲ್‌ನಲ್ಲಿ ನಮ್ಮ ಆಸೆ, ಆಕಾಂಕ್ಷೆ, ದೂರಾಲೋಚನೆ, ಕನಸುಗಳನ್ನು ನನಸು ಮಾಡಿಕೊಳ್ಳಲು ನಾವು ಕಂಡುಕೊಳ್ಳಬೇಕಾದ ಮಾರ್ಗ, ಆ ಹಾದಿಯಲ್ಲಿ ಉಂಟಾಗಬಹುದಾದ ಎಡರು ತೊಡರುಗಳು, ಅವುಗಳನ್ನು ನಿರ್ವಹಿಸಲು ನಾವು ಕಂಡುಕೊಂಡ ಉಪಾಯಗಳು ಎಲ್ಲವನ್ನೂ ಪ್ರತಿದಿನವೂ ಬರೆಯಬಹುದು.

3) ಸಂಕಲ್ಪಗಳನ್ನು ಕೈಗೊಳ್ಳುವಾಗ ಅವು ಆವೇಶದಿಂದ, ಕಳೆದುಹೋದ ದಿನಗಳಲ್ಲಿ ಮಾಡಿದ ತಪ್ಪುಗಳಿಗೆ ಪಶ್ಚಾತ್ತಾಪದಿಂದ, ಬೇರೆಯವರೊಂದಿಗಿನ ಪೈಪೋಟಿಯಿಂದ, ಅತಿಯಾದ ಮಹತ್ವಾಕಾಂಕ್ಷೆಗಳ ಭಾರದಿಂದ ಹುಟ್ಟಿದ್ದಾಗಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ. ಸಂಕಲ್ಪಗಳು ವಾಸ್ತವಿಕವಾಗಿರುವುದೂ, ಕನಸಿನೆಡೆಗಿನ ಚಿಕ್ಕ ಚಿಕ್ಕ ಹೆಜ್ಜೆಗಳಾಗಿರುವುದೂ ತುಂಬ ಮುಖ್ಯ.

4) ಯಾವುದೇ ವರ್ತನೆ, ಮನಃಸ್ಥಿತಿಯಾದರೂ ಹಲವಾರು ವರ್ಷಗಳ ಅಭ್ಯಾಸದಿಂದ ರೂಢಿಯಾಗಿರುತ್ತದಾದ್ದರಿಂದ ತಕ್ಷಣದ ಬದಲಾವಣೆ ಕಷ್ಟವಾಗುತ್ತದೆ. ಹೀಗಾಗಿ ಒಮ್ಮೊಮ್ಮೆ ಸಂಕಲ್ಪದೆಡೆಗಿನ ನಡೆ ಅಲ್ಲಲ್ಲಿ ತಪ್ಪಿದರೂ ಎದೆಗುಂದದೆ, ಸೋಲೊಪ್ಪದೆ ಮತ್ತೆ ಮತ್ತೆ ಗುರಿಯಡೆಗಿನ ದಾರಿ ಹಿಡಿಯುವುದು ಅನಿವಾರ್ಯ.

5) ಸಂಕಲ್ಪಗಳ ಬಗ್ಗೆ ಕುಟುಂಬ ಸದಸ್ಯರು, ಸಹೋದ್ಯೋಗಿಗಳು, ಸ್ನೇಹಿತರ ಜೊತೆ ಚರ್ಚಿಸಿ, ಮುಖ್ಯ ಸಂಕಲ್ಪಗಳಿಗೆ ಪೂರಕ ಸಂಕಲ್ಪಗಳನ್ನು ಹೊಂದಿಸಿಕೊಳ್ಳುವುದು, ಅದರ ಸಾಧ್ಯಾಸಾಧ್ಯತೆಗಳ ಕುರಿತು ಆಲೋಚಿಸುವುದು, ವಿಚಾರವಿನಿಮಯ – ಇವು ಕೂಡ ಸಂಕಲ್ಪಗಳನ್ನು ಅರ್ಥಪೂರ್ಣವಾಗಿಸಿ ಅವುಗಳೆಡೆಗಿನ ಬದ್ಧತೆ, ನಿಷ್ಠೆಯನ್ನು ಗಟ್ಟಿಗೊಳಿಸುತ್ತವೆ.

ವಿದ್ಯಾರ್ಥಿಗಳ ಹೊಸವರ್ಷದ ಸಂಕಲ್ಪಗಳು ಹೀಗಿರಬಹುದು:

1) ತಪ್ಪದೇ ಶಾಲೆ/ ಕಾಲೇಜಿಗೆ ಹೋಗಿ, ಒಂದೂ ತರಗತಿಯನ್ನು ಮಿಸ್ ಮಾಡದೆ ಏಕಾಗ್ರತೆಯಿಂದ ಪಾಠ ಕೇಳಿಸಿಕೊಂಡು ಕ್ಲಾಸಿನಲ್ಲೇ ಮುಖ್ಯ ಅಂಶಗಳ ನೋಟ್ಸ್ ತಯಾರಿಸುವುದು.

2) ಅರ್ಥವಾಗದ ಅಥವಾ ಮಹತ್ವಪೂರ್ಣ ವಿಷಯಗಳನ್ನು ಚರ್ಚೆ ಮಾಡಲೆಂದೇ ಒಂದಷ್ಟು ಸಮಯವನ್ನು ಮೀಸಲಿಟ್ಟು ಅಧ್ಯಾಪಕರೊಂದಿಗೆ, ಸಹಪಾಠಿಗಳೊಂದಿಗೆ ಚರ್ಚಿಸುವುದು

3) ಗ್ರಂಥಾಲಯದ ಸಂಪೂರ್ಣ ಉಪಯೋಗ ಪಡೆಯುವುದು. ಇತ್ತೀಚೆಗೆ ಅಂತರ್ ಶಿಸ್ತೀಯ ಹಾಗೂ ಬಹುಶಿಸ್ತೀಯ ಅಧ್ಯಯನಗಳಿಗೆ (interdisciplinary and multidisciplinary studies) ಮಹತ್ವವಿರುವುದರಿಂದ ಅಧ್ಯಯನದ ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುವುದು ಮುಖ್ಯ.

4) ಬರವಣಿಗೆಯ ಕೌಶಲವನ್ನು ಹೆಚ್ಚಿಸಿಕೊಳ್ಳುವುದು. ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯವಾದರೂ ಉನ್ನತ ಅಧ್ಯಯನದಲ್ಲಿ ಅಭ್ಯರ್ಥಿಗಳ ಸಾಮರ್ಥ್ಯ ಅಳೆಯಲು ಬರವಣಿಗೆಯ ಸ್ಯಾಂಪಲ್‌ಗಳನ್ನು ಕೇಳುತ್ತಾರೆ. ಹಾಗೆಯೇ ಬರವಣಿಗೆಯ ಮೂಲಕ ನಮ್ಮ ಆಲೋಚನೆಗಳನ್ನು ಸಶಕ್ತವಾಗಿ ಹೊರ ಹೊಮ್ಮಿಸಲು ಸಾಧ್ಯ. ಹೀಗಾಗಿ ಬರವಣಿಗೆಯನ್ನು ಅವಶ್ಯವಾಗಿ ರೂಢಿಸಿಕೊಳ್ಳತಕ್ಕದ್ದು.

5) ಯಾವುದೇ ಪಾಠದಲ್ಲಿನ ಮುಖ್ಯ ಪರಿಕಲ್ಪನೆಗಳನ್ನು, ವಿಚಾರಗಳನ್ನು ಮನನ ಮಾಡಿ, ಆಳವಾಗಿ ಆಲೋಚಿಸುವ ಅಭ್ಯಾಸ ಬೆಳೆಸಿಕೊಂಡು ಅದನ್ನು ಸ್ವಂತ ಭಾಷೆಯಲ್ಲಿ ಬರೆಯುವುದು, ಹಾಗೆಯೇ ಬರೆದಿದ್ದನ್ನು ಮತ್ತೆ ಮತ್ತೆ ತಿದ್ದುವುದು.

ಮೇಲೆ ಹೇಳಿದ ವಿದ್ಯಾರ್ಥಿ ಸಂಕಲ್ಪಗಳು ಸ್ವಲ್ಪ ಹಿರಿಯ ವಿದ್ಯಾರ್ಥಿಗಳಿಗಷ್ಟೇ ಮೀಸಲು. ತಾವೇ ನಿರ್ಣಯಗಳನ್ನು ಕೈಗೊಳ್ಳಲಾಗದ ಕಿರಿಯ ವಯಸ್ಸಿನ ವಿದ್ಯಾರ್ಥಿಗಳಿಗೆ ಪೋಷಕರ ಮಾರ್ಗದರ್ಶನ ಅಗತ್ಯ. ಹಾಗೆಯೇ ಹಿರಿಯ ವಿದ್ಯಾರ್ಥಿಗಳಿಗೂ ಪೋಷಕರ ಮಾನಸಿಕ ಬೆಂಬಲ ಅತ್ಯಗತ್ಯ.

**

ಶಿಕ್ಷಕರ ಹೊಸ ವರ್ಷದ ಸಂಕಲ್ಪಗಳು ಹೀಗಿರಬಹುದು

1) ವಿದ್ಯಾರ್ಥಿಗಳನ್ನು ಸುಂದರ ವ್ಯಕ್ತಿತ್ವವುಳ್ಳವರನ್ನಾಗಿ, ಸಮಾಜಕ್ಕೆ ಕೊಡುಗೆಯಾಗಿ, ಉತ್ತಮ ನಾಗರಿಕರಾಗಿ ತಯಾರುಗೊಳಿಸುವ ಸಾಮರ್ಥ್ಯ ಶಿಕ್ಷಕರಿಗೆ ಇರುತ್ತದೆ. ಇದು ಸಾಧ್ಯವಾಗಲು ಅವರು ತಮ್ಮಲ್ಲಿಯ ಸಂಪನ್ಮೂಲವನ್ನು ಅನ್ವೇಷಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ಅಧ್ಯಯನ, ತರಬೇತಿ, ಪ್ರಾಯೋಗಿಕ ಕಲಿಸುವಿಕೆ, ಕಲಿಸುವ ಹೊಸ ವಿಧಾನಗಳ ಅನ್ವೇಷಣೆ, ವಿಚಾರವಿನಿಮಯ, ಚಿಂತನೆ, ಓದು, ಪ‍್ರವಾಸ ಮುಂತಾದುವುಗಳನ್ನು ಹೆಚ್ಚಿಸಿಕೊಳ್ಳಬೇಕು.

2) ಕಲಿಕೆಗಿರುವ ಸಾಮಾಜಿಕ ಆಯಾಮಗಳನ್ನು ಗುರುತಿಸಿ, ವಿದ್ಯಾರ್ಥಿಗಳ ಸಂಭಾಷಣೆ ಮತ್ತು ಸಂವಹನಶಕ್ತಿಗಳನ್ನು ವೃದ್ಧಿಗೊಳಿಸಬೇಕು. ವಿದ್ಯಾರ್ಥಿಗಳ ಮಧ್ಯೆ ಇರಬಹುದಾದ ಸಂಘರ್ಷಗಳನ್ನು ಗುರುತಿಸಿ ಅವನ್ನು ಸೌಹಾರ್ದಯುತವಾಗಿ ಪರಿಹರಿಸಬೇಕು. ಪರಸ್ಪರ ಮೌಲಿಕ ನಂಟನ್ನು ನೆಲೆಗೊಳಿಸಬೇಕು. ವಿದ್ಯಾರ್ಥಿಗಳ ವೈವಿಧ್ಯವನ್ನು ಗುರುತಿಸಿ, ಅವರ ಆಂತರಿಕ ಶಕ್ತಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು.

3) ಸಾಧ್ಯವಾದಷ್ಟೂ ಪ್ರತಿ ವಿದ್ಯಾರ್ಥಿಯ ಕಲಿಕೆ ಹಾಗೂ ವ್ಯಕ್ತಿತ್ವವನ್ನು ತಿಳಿದುಕೊಂಡು ಅವರೊಡನೆ ಆತ್ಮೀಯ ಬಾಂಧವ್ಯವನ್ನು ಬೆಳಿಸಿಕೊಳ್ಳುವುದು. ಅವರ ಸಾಧನೆಗಳನ್ನು ಮೆಚ್ಚುತ್ತ ಇನ್ನಷ್ಟು ಪ್ರೋತ್ಸಾಹ, ಮಾರ್ಗದರ್ಶನವನ್ನು ಒದಗಿಸುವುದು.

4) ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸರ್ವಾಂಗೀಣ ಅಭಿವೃದ್ಧಿ ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಜೀವನಕೌಶಲಗಳ ಕಲಿಕೆಗೆ ಪೂರಕವಾಗಿ ವಿಚಾರಸಂಕಿರಣ, ಕಾರ್ಯಾಗಾರಗಳು, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು.

5) ಸಾಮಾಜಿಕ ಕಳಕಳಿ, ಪರಿಸರ ಜಾಗೃತಿ, ಪರಿಸರ ಸಂರಕ್ಷಣೆ, ಸಮಾನತೆ, ಭ್ರಷ್ಟಾಚಾರ, ಲೈಂಗಿಕ ದೌರ್ಜನ್ಯಗಳು, ಸಮಾಜದ ಮೌಢ್ಯ, ವಿಕೃತಿ, ಅನ್ಯಾಯ, ಪ್ರಚಲಿತ ವಿದ್ಯಮಾನಗಳು - ಇವುಗಳನ್ನು ಕುರಿತು ವಿದ್ಯಾರ್ಥಿಗಳಲ್ಲಿ ಸ್ವತಂತ್ರವಿಚಾರ, ವಿವೇಕ, ಅರಿವು ಮೂಡಿಸಲು ಅಗತ್ಯ ವಿಧಾನಗಳನ್ನು ಪೂರೈಸುವುದು.

ಮೇಲೆ ಹೇಳಿರುವ ಹೆಚ್ಚಿನ ಸಂಕಲ್ಪಗಳನ್ನು ಕಾರ್ಯಗತಗೊಳಿಸುವಲ್ಲಿ ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ಪರಸ್ಪರ ಸಹಭಾಗಿತ್ವ ಅವಶ್ಯಕ. ಆದರೂ ಯಾರು ಯಾರು ಯಾವ ಯಾವ ಸಂಕಲ್ಪಗಳಿಗೆ ಹೆಚ್ಚು ಜವಾಬ್ದಾರರಾಗುತ್ತಾರೆ ಎಂಬುದರ ಮೇಲೆ ವಿದ್ಯಾರ್ಥಿ, ಪೋಷಕರು, ಶಿಕ್ಷಕರ ನಿರ್ಣಯಗಳು ಎಂದು ವಿಭಾಗಿಸಲಾಗಿದೆ. ಹಾಗೆಯೇ ಹೆಚ್ಚಿನ ಸಂಕಲ್ಪಗಳ ವ್ಯಾಪ್ತಿ ವಿಸ್ತಾರವಾಗಿವೆ; ಮುಖ್ಯ ಸಂಕಲ್ಪಗಳನ್ನು ಕಾರ್ಯಗತಗೊಳಿಸುವಲ್ಲಿ ಉಪ ಸಂಕಲ್ಪಗಳ ಅವಶ್ಯಕತೆಯೂ ಇದೆ.

**

ಪೋಷಕರ ನಿರ್ಣಯಗಳು/ಸಂಕಲ್ಪಗಳು ಹೀಗಿರಬಹುದು

ಮಕ್ಕಳ ದೈಹಿಕ-ಮಾನಸಿಕ ಆರೋಗ್ಯದ ಕುರಿತಾಗಿ ತಿಳಿವಳಿಕೆ ಮೂಡಿಸಿಕೊಳ್ಳುವುದು. ಅವರ ದೈಹಿಕ–ಮಾನಸಿಕ ಬೆಳವಣಿಗೆಯ ಹಂತಗಳು, ಆ ಹಂತಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಕುರಿತು ತಿಳಿದುಕೊಳ್ಳಬೇಕು. ಮಕ್ಕಳ ಬಗ್ಗೆ ತಾಳ್ಮೆ–ವಿಶ್ವಾಸಗಳನ್ನು ಬೆಳೆಸಿಕೊಳ್ಳುವುದು.

ಮಕ್ಕಳ ಬೆಳವಣಿಗೆಗೆ ಪೂರಕವಾದ ಭಾವನಾತ್ಮಕ ವಾತಾವರಣವನ್ನು ಮನೆಯಲ್ಲಿ ಸೃಷ್ಟಿಸುವುದು. ಮಕ್ಕಳೊಡನೆ ಮುಕ್ತ ಮಾತುಕತೆಯನ್ನು ಪ್ರತಿದಿನವೂ ರೂಢಿಸಿಕೊಂಡು, ಅವರೊಂದಿಗೆ ಆತ್ಮೀಯತೆಯನ್ನು ಸಾಧಿಸುವುದು.

ಪೋಷಕರ ವೈಯಕ್ತಿಕ, ಆರ್ಥಿಕ, ಕೌಟುಂಬಿಕ ಪರಿಸ್ಥಿತಿಗಳು ಮಕ್ಕಳನ್ನು ಹೆಚ್ಚು ಬಾಧಿಸದಂತೆ ನೋಡಿಕೊಳ್ಳುವುದು. ಅಗತ್ಯ ಬಿದ್ದರೆ  ಆಪ್ತಸಮಾಲೋಚಕರನ್ನು ಕಾಣುವುದು.

ಮಕ್ಕಳ ಅಧ್ಯಯನದಲ್ಲಿ ತಲೆದೋರಬಹುದಾದ ಏಕಾಗ್ರತೆಯ ಕೊರತೆ, ನೆನಪಿನ ಶಕ್ತಿಯ ಸಮಸ್ಯೆಗಳು, ಸಮಯ ಪಾಲನೆಯಲ್ಲಿನ ತೊಡಕುಗಳು, ಅತಿಯಾದ ಗೆಳೆಯರ ಒಡನಾಟ, ಅತಿಯಾದ ಮೊಬೈಲ್ ಬಳಕೆ ಇನ್ನೂ ಮುಂತಾದ ತೊಂದರೆಗಳನ್ನು ಗುರುತಿಸಿ ಕಾಲ ಕಾಲಕ್ಕೆ ಅವಕ್ಕೆ ಪರಿಹಾರಗಳನ್ನು ಹುಡುಕುವುದು.

ಪ್ರತಿದಿನವೂ ತಪ್ಪದೇ ಅಧ್ಯಯನ, ಅಭ್ಯಾಸಗಳನ್ನು ಮಕ್ಕಳು ರೂಢಿಸಿಕೊಂಡು ಉತ್ತಮ ಅಂಕಗಳೊಂದಿಗೆ ಪಾಸಾಗುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆಟೋಟಗಳಲ್ಲಿ, ಸಭೆ–ಸಮಾರಂಭಗಳಲ್ಲಿ ಭಾಗವಹಿಸುವುದು. ಒಟ್ಟಾರೆ ಮಕ್ಕಳು ಎಲ್ಲದರಲ್ಲೂ ಒಂದು ಹದ ಕಂಡುಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡುವುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !