ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಸ್ಥೆಯ ತಾಣವಾದ ಆಸ್ಪತ್ರೆ

ಜಗಳೂರು– ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಎಸ್‌ವಿಆರ್‌ ದಿಢೀರ್‌ ಭೇಟಿ
Last Updated 13 ಜೂನ್ 2018, 9:20 IST
ಅಕ್ಷರ ಗಾತ್ರ

ಜಗಳೂರು: ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ರೋಗಿಯಿಂದ ₹ 16 ಸಾವಿರ ವಸೂಲಿ ಮಾಡಿದ ವೈದ್ಯ, ಗಬ್ಬೆದ್ದು ನಾರುತ್ತಿರುವ ವಾರ್ಡ್‌ಗಳು, ತಡವಾಗಿ ಆಸ್ಪತ್ರೆಗೆ ಬರುವ ವೈದ್ಯರು, ಅವ್ಯವಹಾರದ ಆರೋಪ. ಶಾಸಕ ಎಸ್‌.ವಿ. ರಾಮಚಂದ್ರ ಅವರು ಇಲ್ಲಿನ ತಾಲ್ಲೂಕು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಮಸ್ಯೆಗಳು ತೆರೆದುಕೊಂಡಿದ್ದು ಹೀಗೆ.

ಶಾಸಕರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ಕೊಟ್ಟ ಎಸ್‌.ವಿ. ರಾಮಚಂದ್ರ ಅವರ ಎದುರು ರೋಗಿಗಳು ಹಾಗೂ ಸಾರ್ವಜನಿಕರು ಆರೋಪಗಳ ಸುರಿಮಳೆಗೈದರು.

ಔಷಧ ದಾಸ್ತಾನು ಕೊಠಡಿಗೆ ಭೇಡಿ ನೀಡಿದ ಸಮಯದಲ್ಲಿ ದಾಖಲೆಗಳನ್ನು ಅಸಮರ್ಪಕವಾಗಿ ನಿರ್ವಹಿಸಿರುವುದನ್ನು ಕಂಡು ಶಾಸಕರು ಆಡಳಿತ ವೈದ್ಯಾಧಿಕಾರಿ ಡಾ. ಮುರಳೀಧರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪದ ಬಗ್ಗೆ ಶಾಸಕರು ಪ್ರಶ್ನಿಸಿದರು. ವೈದ್ಯಾಧಿಕಾರಿ ತಮ್ಮನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು.

‘ನೀವು ಸರಿಯಾದ ಸಮಯಕ್ಕೆ ಬರುತ್ತೀರೋ ಇಲ್ಲವೋ ಎನ್ನುವುದು ಸಿಸಿಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿರುತ್ತದೆ. ಫೂಟೇಜ್‌ ತೋರಿಸಿ, ಬಯೋಮೆಟ್ರಿಕ್‌ ಎಲ್ಲಿ’ ಎಂದು ಎಂದು ಶಾಸಕರು ಹೇಳುತ್ತಿದ್ದಂತೆ ತಡಬಡಾಯಿಸಿದ ಡಾ. ಮುರಳೀಧರ್‌, ‘ಸಿಸಿಟಿವಿ ಕ್ಯಾಮೆರಾ ಹಾಗೂ ಬಯೋಮೆಟ್ರಿಕ್‌ ಕೆಟ್ಟು ಹೋಗಿದೆ’ ಎಂದರು.

ರೋಗಿಯ ಸಂಬಂಧಿಕರು ಮಾತನಾಡಿ, ‘ವೈದ್ಯರೊಬ್ಬರು ಶಸ್ತ್ರಚಿಕಿತ್ಸೆ ಮಾಡಲು ₹16 ಸಾವಿರ ಹಣ ನಮ್ಮಿಂದ ಪಡೆದಿದ್ದಾರೆ. ನಾವು ಬಡವರು ಇಲ್ಲವೆಂದರೂ ವೈದ್ಯರು ಕೇಳಿಲ್ಲ. ಸಾಲ ಮಾಡಿ ತಂದಿದ್ದೇವೆ ಸ್ವಾಮಿ ’ಎಂದು ಅಳಲು ತೋಡಿಕೊಂಡರು.

ಶಾಸಕ ರಾಮಚಂದ್ರ ಅವರು, ‘ಸರ್ಕಾರಿ ಆಸ್ಪತ್ರೆ ಎಂದು ಬಡವರು ಇಲ್ಲಿಗೆ ಬರುತ್ತಾರೆ. ನೀವು ಇಲ್ಲೂ ರೋಗಿಗಳಿಗೆ ಹಣಕ್ಕಾಗಿ ಪೀಡಿಸುವುದು ಅಮಾನವೀಯ. ಕೂಡಲೇ ಅವರ ಹಣವನ್ನು ವಾಪಸ್‌ ಕೊಡಿಸಿ’ ಎಂದು ಡಾ. ಮುರಳೀಧರ್‌ ಅವರಿಗೆ ತಾಕೀತು ಮಾಡಿದರು.

ನಂತರ ಶಾಸಕರು ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಮಾತನಾಡಿದರು. ಶಾಸಕರ ಎದುರಲ್ಲೇ ಸಿಬ್ಬಂದಿ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದರು. ಮಧ್ಯ ಪ್ರವೇಶಿಸಿದ ಶಾಸಕರು, ‘ನಿಮ್ಮ ನಡುವೆ ಅಸೂಯೆ ಇದ್ದಲ್ಲಿ ರೋಗಿಗಳಿಗೆ ಗುಣಮಟ್ಟದ ಸೇವೆ ಸಲ್ಲಿಸುವುದು ಹೇಗೆ ಸಾಧ್ಯ’ ಎಂದು ತರಾಟೆಗೆ ತೆಗೆದುಕೊಂಡರು.

ಆಂಬುಲೆನ್ಸ್ ಹಾಗೂ ಹೆಚ್ಚಿನ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ವೈದ್ಯರೊಂದಿಗೆ ‌ ಗಲಾಟೆ ಮಾಡದೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಸ್‌.ಕೆ. ಮಂಜುನಾಥ್‌, ಸವಿತಾ ಕಲ್ಲೇಶಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಶಂಕ್ರನಾಯ್ಕ, ತಿಮ್ಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT