ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ದಿಕ್ಸೂಚಿ | ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು?

Last Updated 22 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಪರೀಕ್ಷೆಗೆ ಕೆಲವೇ ದಿನಗಳಿರುವಾಗ ಕೈಗೊಳ್ಳುವ ಅಧ್ಯಯನ ಯಾವತ್ತೂ ಯಶಸ್ಸನ್ನು ತರಲಾರದು ಎಂಬ ಮಾತಿದೆ. ಇದು ಕೆಲವು ವಿದ್ಯಾರ್ಥಿಗಳಿಗೆ ಅನ್ವಯವಾಗಬಹುದು. ಅಂದರೆ ಮೊದಲು ಪಠ್ಯಪುಸ್ತಕ ಹಿಡಿಯದೆ, ಒಂದೆರಡು ವಾರಗಳಿರುವಾಗ ಗಡಿಬಿಡಿಯಲ್ಲಿ ತಯಾರಿಗೆ ತೊಡಗುವವರು ಹೇಗೆ ತಾನೆ ನಿರೀಕ್ಷೆ ಮಾಡಿದಷ್ಟು ಅಂಕ ಗಳಿಸಿಯಾರು? ಆ ರೀತಿಯ ಓದಿನಿಂದಾಗಿ ಒತ್ತಡ ಜಾಸ್ತಿಯಾಗುವುದಲ್ಲದೇ, ಓದಿದ್ದೂ ನೆನಪಿರುವುದಿಲ್ಲ; ಎಲ್ಲವೂ ಕಲಸು ಮೇಲೋಗರವಷ್ಟೆ.

ಆದರೆ ಸಾಕಷ್ಟು ತಯಾರಿ ನಡೆಸಿ ಪರೀಕ್ಷೆ ಒಂದೆರಡು ದಿನಗಳಿರುವಾಗ ನಡೆಸುವ ಪುನರಾವರ್ತನೆ ಇದೆಯಲ್ಲ, ಅದು ತುಂಬಾ ಮಹತ್ವದ್ದು. ಹಾಗೆಯೇ ಪ್ರತಿ ವಿಷಯದ ಪರೀಕ್ಷೆಯ ಹಿಂದಿನ ದಿನ ಕೆಲವು ಗಂಟೆಗಳನ್ನು ಈ ಪುನರಾವರ್ತನೆಗೆ ಮೀಸಲಿಟ್ಟರೆ ಹೆಚ್ಚಿನ ಪ್ರಯೋಜನವಾಗುವುದು ನಿಶ್ಚಿತ. ಹಾಗಾದರೆ ಈ ಪುನರಾವರ್ತನೆ ಅಥವಾ ಕೊನೆಯ ಕ್ಷಣದ ಸಿದ್ಧತೆ ಹೇಗಿರಬೇಕು?

ಮೊದಲನೆಯದಾಗಿ ಪರೀಕ್ಷೆಯ ಹಿಂದಿನ ದಿನ ಯಾವುದೇ ಹೊಸ ವಿಷಯವನ್ನು ಓದಲು ಹೋಗಬೇಡಿ. ಅಂದರೆ ನೀವು ಪರೀಕ್ಷೆಗೆಂದು ತಯಾರಿ ನಡೆಸುವ ದಿನಗಳಲ್ಲಿ ಮುಟ್ಟದ ಪಾಠವನ್ನು ಓದಿ ಅರ್ಥ ಮಾಡಿಕೊಳ್ಳಲು ಯತ್ನಿಸುವುದಾಗಲಿ ಅಥವಾ ಗಣಿತದ ಒಂದು ಕಷ್ಟದ ಲೆಕ್ಕವನ್ನು ಅಂದು ಬಿಡಿಸಲು ಮುಂದಾಗುವುದಾಲಿ ಮಾಡುವುದು ಖಂಡಿತ ಸರಿಯಲ್ಲ. ಇದಕ್ಕಾಗಿ ನಿಮ್ಮ ಸಮಯ ವ್ಯರ್ಥವಾಗುವುದೇ ಹೊರತು ಅದನ್ನು ತಕ್ಷಣ ಸಿದ್ಧಿಸಿಕೊಳ್ಳುವುದು, ಅರಗಿಸಿಕೊಳ್ಳುವುದು ಸಾಧ್ಯವಾಗಲಾರದು. ಬದಲಾಗಿ ಉಳಿದ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ವಿಫಲರಾಗುತ್ತೀರಿ.

ಟಿಪ್ಪಣಿ ಓದಿ: ಪರೀಕ್ಷೆಗೆ ತಯಾರಿ ನಡೆಸುವ ಸಮಯದಲ್ಲಿ ನೀವು ಸಿದ್ಧಪಡಿಸಿಕೊಂಡ ಟಿಪ್ಪಣಿ (ನೋಟ್ಸ್‌) ಗಳನ್ನು ಈ ಸಂದರ್ಭದಲ್ಲಿ ಓದುವುದು ಒಳಿತು. ಇಡೀ ಪುಸ್ತಕವನ್ನಾಗಲಿ ಅಥವಾ ತರಗತಿಗಳಿಗೆ ಹಾಜರಾಗುವ ಸಂದರ್ಭದಲ್ಲಿ ಮಾಡಿದ ಹೋಂವರ್ಕ್‌ನಲ್ಲಿರುವ ಅಂಶಗಳನ್ನಾಗಲಿ ಓದುವುದು ಸಾಧ್ಯವಿಲ್ಲದ ಮಾತು. ಹೀಗಾಗಿ ಟಿಪ್ಪಣಿಯಲ್ಲಿರುವ ಮುಖ್ಯವಾದ ಅಂಶಗಳನ್ನು, ಗೆರೆ ಎಳೆಯಲಾದ ಸೂತ್ರಗಳ ಮೇಲೆ ಕಣ್ಣು ಹಾಯಿಸಿ. ಗಣಿತ, ವಿಜ್ಞಾನದಲ್ಲಿ ಬರುವ ಸೂತ್ರಗಳನ್ನು, ಸಮಾಜ ವಿಜ್ಞಾನದಲ್ಲಿರುವ ಇಸವಿ, ರಾಜರ ಹೆಸರು, ಇಂಗ್ಲಿಷ್‌, ಕನ್ನಡ ಅಥವಾ ಹಿಂದಿಯಲ್ಲಿರುವ ವ್ಯಾಕರಣವನ್ನು ಪುಟ್ಟ ಚೀಟಿಗಳ ಮೇಲೆ ಬರೆದು ಗೋಡೆಯ ಮೇಲೆ ಅಂಟಿಸಿದ್ದರೆ ಅವುಗಳತ್ತ ಕೆಲವು ಕಾಲ ಗಮನ ನೀಡಿ. ಮುಖ್ಯವಾದ ಯಾವುದೇ ಅಂಶವನ್ನೂ ಬಿಟ್ಟಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಪರೀಕ್ಷೆಗೆ ಮುನ್ನ: ಪರೀಕ್ಷೆ ಆರಂಭವಾಗುವ ಅರ್ಧ– ಒಂದು ಗಂಟೆ ಮುನ್ನ ನಿಗದಿತ ಸ್ಥಳದ ಬಳಿ ಇರುತ್ತೀರಿ ಎಂದುಕೊಳ್ಳಿ. ಅಲ್ಲಿ ನಿಮ್ಮ ಸ್ನೇಹಿತರೋ, ಸಹಪಾಠಿಗಳೋ ಸಿಕ್ಕರೆ ಅವರ ಜೊತೆ ಲೋಕಾಭಿರಾಮವಾಗಿ ಒಂದೆರಡು ಮಾತನಾಡಿದರೆ ಸರಿ. ಅದು ಬಿಟ್ಟು ನಿಮ್ಮ ಸಿದ್ಧತೆ ಬಗ್ಗೆ ಹೇಳಿಕೊಳ್ಳುವುದು, ಅವರ ತಯಾರಿಯ ಕುರಿತು ಕುತೂಹಲ ವ್ಯಕ್ತಪಡಿಸುವುದು ಸರಿಯಲ್ಲ. ಇದು ಹೆಚ್ಚಿನ ಸಲ ನಿಮ್ಮ ಆತ್ಮವಿಶ್ವಾಸವನ್ನು ಕುಂದಿಸಿಬಿಡುತ್ತದೆ. ಅದರ ಬದಲು ನಿಮ್ಮ ಸಿದ್ಧತೆ ಬಗ್ಗೆ ವಿಶ್ವಾಸವಿಡಿ.

ಪರೀಕ್ಷಾ ಕೊಠಡಿ ಪ್ರವೇಶಿಸುವ 10–15 ನಿಮಿಷಗಳ ಮುನ್ನ ಗಡಿಬಿಡಿಯಲ್ಲಿ ಓದುವುದೂ ತರವಲ್ಲ. ಆರಾಮವಾಗಿ ಮನಸ್ಸು ನಿರಾಳವಾಗಲು ಬಿಡಿ.

ಬರೆಯುವಾಗ: ಈ ಬಗ್ಗೆ ಹೆಚ್ಚು ವಿವರಣೆ ಬೇಕಿಲ್ಲ ಎನಿಸುತ್ತದೆ. ಏಕೆಂದರೆ ಈಗಾಗಲೇ ನಿಮ್ಮ ಶಿಕ್ಷಕರು ಇದರ ಬಗ್ಗೆ ಹೇಳಿರುತ್ತಾರೆ. ಅಂಕ ಎಷ್ಟು ನಮೂದಿಸಿರುತ್ತಾರೋ ಅದಕ್ಕೆ ತಕ್ಕಷ್ಟು ಉತ್ತರಿಸಿ. ಕಷ್ಟವೆನಿಸಿದ ಪ್ರಶ್ನೆಗೆ ಉತ್ತರ ಹುಡುಕುತ್ತ ಸಮಯ ವ್ಯರ್ಥ ಮಾಡಬೇಡಿ. ಮುಂದಿನ ಪ್ರಶ್ನೆಯತ್ತ ಕಣ್ಣು ಹಾಯಿಸಿ. ಅಗತ್ಯವಿದ್ದ ಕಡೆ ಚಿತ್ರ ಬಿಡಿಸಿ. ಸೂತ್ರಗಳು, ನಕ್ಷೆಗಳು, ಹಂತಗಳನ್ನು ಬರೆಯಿರಿ. ಸಮಯದ ಕಡೆ ಗಮನವಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT