ಬುಧವಾರ, ಆಗಸ್ಟ್ 10, 2022
23 °C

ಕನ್ನಡದ ಕೈಗೆಟಕುವುದೇ ತಾಂತ್ರಿಕ ಶಿಕ್ಷಣ?

ಪ್ರಶಾಂತ ಸೊರಟೂರ Updated:

ಅಕ್ಷರ ಗಾತ್ರ : | |

Prajavani

ತಾಂತ್ರಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಸುವ ಕನಸೊಂದನ್ನು ಕೇಂದ್ರ ಸರ್ಕಾರ ಇದೀಗ ತೇಲಿಬಿಟ್ಟಿದೆ. ಕನ್ನಡದ ಮಟ್ಟಿಗೆ ಆ ಕನಸು ನನಸಾಗುವುದೇ ಎಂದು ಯೋಚಿಸಿದರೆ ನಿರಾಸೆಯೇ ಎದುರಾಗುತ್ತದೆ. ಕುವೆಂಪು ಅವರ ಕಾಲದಿಂದಲೂ ಚರ್ಚೆ ನಡೆಯುತ್ತಿದ್ದರೂ ಪಿಯುಸಿ ಮಟ್ಟದಲ್ಲಿ ಸಹ ನಮಗಿನ್ನೂ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸಲು ಸಾಧ್ಯವಾಗಿಲ್ಲ. ಯಾಕೆ ಹೀಗೆ? ಹಾಗಾದರೆ ಮುಂದಿರುವ ದಾರಿ ಯಾವುದು?

***

‘ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ಸಾಧ್ಯವೇ ಇಲ್ಲ; ಈ ಬಗ್ಗೆ ಚರ್ಚಿಸುವುದು ಸಹ ಸಮಯವನ್ನು ಪೋಲು ಮಾಡಿದಂತೆ’ ಅನ್ನುವಂತಹ ಮಾತುಗಳು ಕೇಳಿ ಬರುತ್ತಿರುವ ದಿನಗಳಿವು. ಪರಿಸ್ಥಿತಿ ಹೀಗಿರುವಾಗ ದೇಶದ ಆಯ್ದ ಕೆಲವು ಐಐಟಿ ಹಾಗೂ ಎನ್‌ಐಟಿಗಳಲ್ಲಿ 2021ರಿಂದಲೇ ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಏರ್ಪಾಡು ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದೇ ಭಾವಿಸಲಾದ ವಿಷಯವೊಂದು ಸರ್ಕಾರದ ಈ ನಡೆಯಿಂದಾಗಿ ಮತ್ತೆ ಚರ್ಚೆಯ ಹಳಿಗೆ ಬಂದಿದೆ. ಪಿಯುಸಿ ಹಂತದಲ್ಲಿ ವಿಜ್ಞಾನದ ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿ ಪರಿಣಾಮಕಾರಿಯಾಗಿ ನೀಡುವಲ್ಲಿ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿರುವ ಈ ಹೊತ್ತಿನಲ್ಲಿ ತಾಂತ್ರಿಕ ಶಿಕ್ಷಣವನ್ನೂ ಸ್ಥಳೀಯ ಭಾಷೆಗಳಲ್ಲಿ ಪಡೆಯಬಹುದೆಂಬ ಕನಸನ್ನು ತೇಲಿಬಿಡಲಾಗಿದೆ. ತಾಯ್ನುಡಿ/ಪರಿಸರದ ನುಡಿಯಲ್ಲಿನ ಕಲಿಕೆ ಜ್ಞಾನಾಧಾರಿತ ಸಮಾಜವನ್ನು ಕಟ್ಟುವಲ್ಲಿ ದೊಡ್ಡಪಾತ್ರ ವಹಿಸುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

ದೇಶವೆಂದರೆ ಜನ
ದೇಶವೆಂದರೆ ಬರಿ ಭೂಮಿಯಲ್ಲ; ದೇಶವೆಂದರೆ ಜನವೂ ಹೌದು. ದೇಶದ ಏಳಿಗೆ ಅಂದರೆ ಅಲ್ಲಿನ ಜನರ ಏಳಿಗೆಯೇ. ಜನರ ಆರ್ಥಿಕ ಮತ್ತು ಸಾಮಾಜಿಕ ಏಳಿಗೆಯನ್ನೇ ಗುರಿಯಾಗಿಟ್ಟುಕೊಳ್ಳುವ ಯಾವುದೇ ದೇಶ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಶಿಕ್ಷಣವನ್ನು ಬಿಟ್ಟು ಏಳಿಗೆಯ ಕುರಿತು ಯೋಚಿಸಲು ಸಾಧ್ಯವಿಲ್ಲ. ಇಂದು ನಾವು ಕಾಣುವ ಜಾಗತೀಕರಣಕ್ಕೆ ಮೂವತ್ತರಿಂದ ನಲವತ್ತು ವರ್ಷಗಳ ಇತಿಹಾಸ ಇರಬಹುದು. ಈ ಅವಧಿಯಲ್ಲಿ ಕೈ-ಕೈ ಹಿಡಿದುಕೊಂಡು ಒಳಿತಾದರೂ ಕೆಡುಕಾದರೂ ಒಟ್ಟಿಗೆ ಅನುಭವಿಸಬೇಕು ಅನ್ನುವಂತಹ ಒಂದು ಏರ್ಪಾಡು ದೇಶ ದೇಶಗಳ ನಡುವೆ ಏರ್ಪಟ್ಟಿರಬಹುದು. ಇಂತಹ ವ್ಯವಸ್ಥೆಯಲ್ಲಿ ಯಾವ ದೇಶಗಳು ಮೇಲುಗೈ ಸಾಧಿಸಿವೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ತಮ್ಮದೇ ನುಡಿಯಲ್ಲಿ, ಜ್ಞಾನದ ಬಲದ ಮೇಲೆ, ತಮ್ಮ ಆರ್ಥಿಕ ಏರ್ಪಾಡುಗಳನ್ನು ಮಾಡಿಕೊಂಡ ದೇಶಗಳೇ ಮೊದಲಿವೆ ಎಂಬುದನ್ನು ಕಾಣಬಹುದು.

ಪ್ರತಿವರ್ಷ ಜಾಗತಿಕ ಆವಿಷ್ಕಾರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದೇಶಗಳ ಪಟ್ಟಿಯನ್ನು ನೋಡಿದಾಗ ಸಿಂಗಪುರ, ಹಾಂಗ್‌ಕಾಂಗ್ ತರಹದ ಪುಟ್ಟ ದೇಶಗಳನ್ನು ಬಿಟ್ಟರೆ, ಉಳಿದ ಎಲ್ಲ ದೇಶಗಳಲ್ಲಿ, ಎಲ್ಲ ಹಂತದ  ಕಲಿಕೆ ಅವರವರ ನುಡಿಯಲ್ಲೇ ನಡೆಯುತ್ತಿದೆ. ಇಂಗ್ಲಿಷ್ ಮೂಲಕ ಮಾತ್ರವೇ ಉನ್ನತ ಶಿಕ್ಷಣ ಸಾಧ್ಯ ಅನ್ನುವ ನಂಬಿಕೆ ಇರುವ ಭಾರತ ಎಂದಿಗೂ ಈ ಪಟ್ಟಿಯ ಮೊದಲ 25 ಸ್ಥಾನಗಳಲ್ಲಿ ಕಾಣಿಸಿಕೊಂಡಿಲ್ಲ.

ಜಗತ್ತಿನ ಜನಸಂಖ್ಯೆಯ ಆರರಲ್ಲಿ ಒಂದು ಭಾಗ ಹೊಂದಿರುವ ದೇಶವೊಂದು, ಜಗತ್ತಿಗೆ ಜ್ಞಾನದ ಅನೇಕ ಸಾಧ್ಯತೆಗಳನ್ನು ಇತಿಹಾಸದಲ್ಲಿ ಕೊಟ್ಟ ನಿದರ್ಶನವೂ ಇರುವ ನೆಲವೊಂದು ಯಾಕೆ ಕಲಿಕೆಯ ವಿಷಯದಲ್ಲಿ ಇಷ್ಟು ಹಿಂದಿದೆ ಎಂದು ಯೋಚಿಸಿದರೆ ಸಿಗುವ ಉತ್ತರ ಒಂದೇ: ನಮಗೆ ನಮ್ಮ ಭಾಷೆಗಳ ಬಗ್ಗೆ, ಅವುಗಳನ್ನು ನಮ್ಮ ಏಳಿಗೆಗೆ ಬುನಾದಿಯಾಗಿ ಬಳಸಿಕೊಳ್ಳುವ ಬಗ್ಗೆ ನಂಬಿಕೆಯಿಲ್ಲ. 200-300 ವರ್ಷಗಳ ವಸಾಹತುಶಾಹಿ ಪ್ರಜ್ಞೆ ಹಾಗೂ ನಮ್ಮಲ್ಲಿನ ಜಾತಿ ಪದ್ಧತಿಯ ತೊಡಕು ಕಲಿಕೆಯ ವಿಷಯದಲ್ಲಿ ನಮ್ಮ ಭಾಷೆಗಳನ್ನು ನಾವು ತೆಗೆದುಕೊಳ್ಳಬೇಕಾದಷ್ಟು ಗಂಭೀರವಾಗಿ ತೆಗೆದುಕೊಳ್ಳಲು ಬಿಟ್ಟಿಲ್ಲ. ಆದರೆ, ಅದನ್ನು ಬದಲಾಯಿಸದ ಹೊರತು ಹೆಚ್ಚು ಸಮಗ್ರವಾಗಿ, ಎಲ್ಲರನ್ನೂ ತಲುಪುವ, ಒಳಗೊಳ್ಳುವ ಮತ್ತು ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಒದಗಿಸುವ ಕಲಿಕೆಯ ಏರ್ಪಾಡು ಕಟ್ಟಿಕೊಳ್ಳಲು ಸಾಧ್ಯವಿಲ್ಲ.

ಮೊದಲು ಪಿಯುಸಿ ಗೆಲ್ಲೋಣ
ಪ್ರಾದೇಶಿಕ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಆಶಯ ತೋರಿಸಿರುವ ಕಾರಣಕ್ಕಾಗಿ ಸರ್ಕಾರವನ್ನು ಅಭಿನಂದಿಸೋಣ. ‘ಡೆವಿಲ್ ಈಸ್ ಇನ್ ದಿ ಡಿಟೇಲ್ಸ್’ ಅನ್ನುವಂತೆ, ಇದರ ಕಾರ್ಯಸಾಧ್ಯತೆಗಳ ಬಗ್ಗೆ ನೋಡಿದಾಗ, ಸರ್ಕಾರ ಇದರ ಬಗ್ಗೆ ನಿಜಕ್ಕೂ ಗಂಭೀರವಾಗಿದೆಯೇ ಅನ್ನುವ ಪ್ರಶ್ನೆಯೂ ಏಳುತ್ತದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ. ಇಂದು ಭಾರತದಲ್ಲಿ ಪಿಯುಸಿ ಹಂತದಲ್ಲಿ ಭಾರತದ ಭಾಷೆಗಳಲ್ಲಿ ವಿಜ್ಞಾನದ ಕಲಿಕೆ ಒಂದು ಮಟ್ಟಿಗಾದರೂ ನಡೆಯುತ್ತಿರುವ ಭಾಷೆಗಳೆಂದರೆ ಹಿಂದಿ, ಗುಜರಾತಿ, ತಮಿಳು ಮತ್ತು ಬೆಂಗಾಲಿ ಮಾತ್ರ. ಉಳಿದ ಬಹುತೇಕ ಭಾಷೆಗಳಲ್ಲಿ ಪಿಯುಸಿ ಮಟ್ಟದ ಕಲಿಕೆಗೆ ಬೇಕಾದ ಪಠ್ಯಪುಸ್ತಕವಾಗಲಿ, ಪೂರಕ ಸಾಮಗ್ರಿಯಾಗಲಿ ಸಿದ್ಧವಾಗಿಲ್ಲ. ಆ ಕಾರಣದಿಂದಲೇ ನೀಟ್ ತರಹದ ಪರೀಕ್ಷೆಗಳನ್ನು 11 ಭಾಷೆಗಳಲ್ಲಿ ಬರೆಯುವ ಅವಕಾಶ ಕೊಡಲಾಗಿದ್ದರೂ ಮುಕ್ಕಾಲು ಭಾಗ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲೂ ಉಳಿದವರು ಹಿಂದಿ, ಬೆಂಗಾಲಿ, ತಮಿಳು ಮತ್ತು ಗುಜರಾತಿನಲ್ಲೂ ಬರೆಯುತ್ತಿದ್ದಾರೆ.

ಕುವೆಂಪು ಅವರ ಕಾಲದಿಂದಲೇ ವಿಜ್ಞಾನದ ಕಲಿಕೆಯನ್ನು ಕನ್ನಡದಲ್ಲಿ ಕಟ್ಟಬೇಕು ಅನ್ನುವ ಪ್ರಯತ್ನ ನಡೆಯುತ್ತಿದ್ದರೂ ಈಗಲೂ ಕನ್ನಡದಲ್ಲಿ ಪಿಯುಸಿ ತೆಗೆದುಕೊಂಡು ಬರೆಯುವ, ಓದುವ ಏರ್ಪಾಡುಗಳು ಸಲೀಸಾಗಿಲ್ಲ. ಹೀಗಿರುವಾಗ ಮುಂದಿನ ವರ್ಷದಿಂದ ತಾಂತ್ರಿಕ ಶಿಕ್ಷಣ ಪ್ರಾದೇಶಿಕ ಭಾಷೆಗಳಲ್ಲಿ ಅಂದಾಗ ಅದು ಕೇವಲ ಈ ಮೂರ್ನಾಲ್ಕು ಭಾಷೆಗಳಲ್ಲಿ ಪ್ರಾಯೋಗಿಕವಾಗಿ ಕೆಲವು ಕೋರ್ಸ್‌ಗಳನ್ನು ನಡೆಸುವ ಪ್ರಯತ್ನ ಆಗಬಹುದೇನೋ. ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ಭಾಷೆಗಳಿಗೂ ಸದ್ಯ ಈ ಆಯ್ಕೆ ಒದಗಲಿಕ್ಕಿಲ್ಲ. 

ಮೊದಲು ಈ ನಾಲ್ಕೈದು ಭಾಷೆಗಳಲ್ಲಿ ಶುರುವಾಗಿ ಹಂತ ಹಂತವಾಗಿ ಕನ್ನಡಕ್ಕೂ ಈ ಆಯ್ಕೆ ಒದಗುತ್ತದೆ ಅಂದುಕೊಂಡರೂ ಕನ್ನಡದಲ್ಲಿ ಉನ್ನತ ಶಿಕ್ಷಣದ ವ್ಯವಸ್ಥೆ ಕಟ್ಟಿಕೊಳ್ಳಲು ಆಗಬೇಕಿರುವ ಕೆಲಸಗಳ ಬಗ್ಗೆ ನಮ್ಮ ರಾಜ್ಯ ಸರ್ಕಾರವಾಗಲಿ, ವಿಶ್ವವಿದ್ಯಾಲಯಗಳಾಗಲಿ ಯಾವುದೇ ಯೋಜನೆ ಹೊಂದಿರುವಂತೆ ಕಾಣುವುದಿಲ್ಲ. ಹಾಗಿದ್ದರೆ ಈ ಕುರಿತು ಏನಾಗಬೇಕು ಅನ್ನುವ ಪ್ರಶ್ನೆ ಇಟ್ಟುಕೊಂಡು ನೋಡಿದರೆ ಕೆಲವು ವಿಚಾರಗಳನ್ನು ಗಮನಿಸಬಹುದು.

ಹತ್ತನೆಯ ತರಗತಿಯವರೆಗೆ ಕನ್ನಡದಲ್ಲಿ ಈಗಿರುವ ವಿಜ್ಞಾನ-ಗಣಿತದ ಕಲಿಕೆ ಉನ್ನತ ಶಿಕ್ಷಣವನ್ನು ಕನ್ನಡದಲ್ಲಿ ಕೊಡಲು ಪೂರಕವಾಗಿಲ್ಲ. ಕಲಿಕೆ ನಿಜಕ್ಕೂ ಪರಿಣಾಮಕಾರಿಯಾಗಿ ಆಗಬೇಕು ಅಂದರೆ ಪಠ್ಯಕ್ರಮ ಮತ್ತು ಹೇಳಿಕೊಡುವ ಬಗೆ ಆದಷ್ಟು ಮಗುವಿನ ಪರಿಸರದ ನುಡಿಗೆ ಹತ್ತಿರ ಇರಬೇಕು. ಕನ್ನಡ ಮಾಧ್ಯಮದ ಪಠ್ಯಕ್ರಮದಲ್ಲಿ ಪಾರಿಭಾಷಿಕ ಪದಗಳ ವಿಚಾರಕ್ಕೆ ಬಂದಾಗ ಮಕ್ಕಳಿಗೆ, ಶಿಕ್ಷಕರಿಗೆ ಅನುಕೂಲ ಆಗುತ್ತದೋ ಇಲ್ಲವೋ ಎಂದು ಪರಿಗಣಿಸದೆ ಅತೀ ಹೆಚ್ಚು ಎರವಲು ಪದಗಳನ್ನು ತಂದು ಪಠ್ಯಪುಸ್ತಕ ಸಿದ್ಧಪಡಿಸಲಾಗಿದೆ. ‘ಕಾನ್ಕೆವ್ ಮಿರರ್‌’, ‘ಕಾನ್ವೆಕ್ಸ್ ಮಿರರ್’ ಅನ್ನುವುದನ್ನು ‘ಉಬ್ಬುಗಾಜು’, ‘ತಗ್ಗುಗಾಜು’ ಎಂದು ಹೇಳಿದರೆ ಕನ್ನಡ ನಾಡಿನ ಯಾವ ಭಾಗದ ಮಗುವಿಗೂ ಅರ್ಥವಾಗುತ್ತದೆ. ಆದರೆ, ಅದರ ಜಾಗವನ್ನು ‘ಪೀನದರ್ಪಣ’,  ‘ನಿಮ್ನದರ್ಪಣ’ ಅನ್ನುವ ಪದಗಳು ಆವರಿಸಿಕೊಂಡಿವೆ ‘ಕೂಡುವುದು’, ‘ಕಳೆಯುವುದು’ ಎಂಬ ಬಳಕೆ ಎಲ್ಲರ ಪರಿಸರದಲ್ಲಿದ್ದರೂ ‘ಸಂಕಲನ’, ‘ವ್ಯವಕಲನ’ವೇ ಸರಿ ಅನ್ನುವ ನಿಲುವು ನಮ್ಮ ಪಠ್ಯಪುಸ್ತಕಗಳದ್ದು. ಮಗುವಿಗೆ ‘ಕಾನ್ಕೆವ್’, ‘ಕಾನ್ವೆಕ್ಸ್’, ‘ಅಡಿಶನ್’, ‘ಸಬ್-ಟ್ರಾಕ್ಷನ್’ ಎಷ್ಟು ಹೊರಗಿನದ್ದೋ ‘ಪೀನ’, ‘ನಿಮ್ನ’, ‘ಸಂಕಲನ’, ‘ವ್ಯವಕಲನ’ವೂ ಅಷ್ಟೇ ಸ್ಥಳೀಯ ಪರಿಸರಕ್ಕೆ ಹೊರತಾದದ್ದು.

ಪದಗಳು ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗಬಾರದು. ಇದನ್ನು ಕನ್ನಡದ್ದೇ ಪದಗಳನ್ನು ಬಳಸುವ ಹುಚ್ಚು, ಇನ್ನೊಂದು ನುಡಿಯ ಮೇಲಿನ ಹಗೆತನ ಎಂದು ಬಗೆಯದೇ ಮಕ್ಕಳ ಕಲಿಕೆಗೆ ಯಾವ ರೀತಿಯ ಪದಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಅನ್ನುವ ಒಂದೇ ನೆಲೆ ಇಟ್ಟುಕೊಂಡು ನೋಡುವ ಕೆಲಸ ಆಗಬೇಕು. ಹಾಗೆ ನೋಡಿದರೆ ಕನ್ನಡ ಬೇರಿನ ಪದಗಳು, ಎರವಲು ಪದಗಳು, ಇಂಗ್ಲಿಷಿನಲ್ಲಿರುವ ಪದಗಳ ನಡುವೆ ಒಂದು ಹದವಾದ ಸಮತೋಲನ ಕಂಡುಕೊಳ್ಳುವ ಪ್ರಯತ್ನವಾದರೆ ಒಳ್ಳೆಯದು.ಆಗ ಹತ್ತನೆ ತರಗತಿಯವರೆಗಿನ ಕಲಿಕೆಯನ್ನು ಸುಧಾರಿಸಬಹುದು ಮತ್ತು ಆ ಬುನಾದಿಯ ಮೇಲೆ ಉನ್ನತ ಶಿಕ್ಷಣವನ್ನು ಕನ್ನಡಕ್ಕೆ ತರಲು ನಡೆಯಬೇಕಾದ ಕಾರ್ಪಸ್ ಪ್ಲಾನಿಂಗ್ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬಹುದು. ಜಪಾನ್ ಇದನ್ನು ರಂಗಾಕು ಚಳವಳಿಯ ಮೂಲಕ ಮಾಡಿಕೊಂಡಿತು. ಈಸ್ಟೋನಿಯಾ, ಫಿನ್ಲೆಂಡ್, ಇಸ್ರೇಲ್, ದಕ್ಷಿಣ ಕೊರಿಯಾದಲ್ಲೂ ಇಂತಹ ಪ್ರಯತ್ನಗಳು ಆಗಿವೆ ಮತ್ತು ತಾಂತ್ರಿಕ ಶಿಕ್ಷಣವನ್ನು ಆಯಾ ಭಾಷೆಗಳಲ್ಲಿ ನೀಡುವಲ್ಲಿ ನೆರವಾಗಿವೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಹೊಣೆ ತುಂಬಾ ದೊಡ್ಡದಿದೆ. ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಠ್ಯ ಸಿದ್ಧವಾಗಲು ಬೇಕಾದ ಪರಿಸರವನ್ನು ಕಟ್ಟಿಕೊಡುವುದು ಸರಕಾರದ ಮುಖ್ಯ ಕೆಲಸ. ಸಾಹಿತ್ಯ ಸಮ್ಮೇಳನಗಳಿಗೆ ಒಂದಿಷ್ಟು ಹಣ ಕೊಡುವುದೇ ಕನ್ನಡಪರ ಕೆಲಸ ಅಂದುಕೊಳ್ಳುವುದನ್ನು ಬಿಟ್ಟು ನಿಜಕ್ಕೂ ಕನ್ನಡದಲ್ಲಿ ಎಲ್ಲ ಹಂತದ ಕಲಿಕೆ ಕಟ್ಟಿಕೊಳ್ಳುವ ಕೆಲಸದ ಬಗ್ಗೆ ಒಂದು ಸಮಗ್ರ ಯೋಜನೆಯನ್ನು ರೂಪಿಸಬೇಕು. ಅದಕ್ಕೆ ಸೂಕ್ತ ಪರಿಣಿತರನ್ನು ಜೋಡಿಸಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸುತ್ತ ಸಮುದಾಯದ ಪಾಲ್ಗೊಳ್ಳುವಿಕೆಯ ಅನೇಕ ಯೋಜನೆಗಳನ್ನು ನಡೆಸುತ್ತಿರುವ ಉತ್ಸಾಹಿಗಳನ್ನು ಸೇರಿಸಿಕೊಂಡು ಒಂದು ಕಾರ್ಯಯೋಜನೆ ಜಾರಿಗೆ ತರಬೇಕು. ದಕ್ಷತೆಯಿಂದ ಈ ಕೆಲಸ ನಡೆದರೆ ಇನ್ನೈದು ವರ್ಷಗಳಲ್ಲಿ ಪಿಯುಸಿ ಹಂತದಲ್ಲೂ ಅಲ್ಲಿಂದ ಮತ್ತೈದು ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣದಲ್ಲೂ ಕನ್ನಡ ನೆಲೆ ಕಂಡುಕೊಳ್ಳಬಹುದು. ಇಂಗ್ಲಿಷ್ ಅನ್ನುವ ಒಂದು ಪೆನ್ಸಿಲ್ ಪಕ್ಕ ಕನ್ನಡದ ಚಿಕ್ಕದೊಂದು ಪೆನ್ಸಿಲ್ ಇಟ್ಟುಕೊಂಡು ಹಂತ ಹಂತವಾಗಿ ಇದನ್ನು ಬೆಳೆಸುವ ಕೆಲಸ ಮಾಡಬಹುದು. ಕನ್ನಡಿಗರ ಏಳಿಗೆಯೇ ಗುರಿಯಾದ ಸರ್ಕಾರವಿದ್ದಲ್ಲಿ ಇದು ಖಂಡಿತ ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು