ಗುರುವಾರ , ಡಿಸೆಂಬರ್ 5, 2019
22 °C
ಕಸದಿಂದ ರಸತೆಗೆದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ

ಪ್ಲಾಸ್ಟಿಕ್ ಕ್ಯಾನ್‌ನಿಂದ ತಯಾರಾಯಿತು ಮೂತ್ರಾಲಯ

Published:
Updated:

ಶನಿವಾರಸಂತೆ: ಸರ್ಕಾರಿ ಶಾಲೆಗಳೆಂದರೆ ಅಲ್ಲಿ ಸೌಕರ್ಯಗಳಿಗಿಂತ ಕೊರತೆಯೇ ಹೆಚ್ಚು ಎಂದು ಮೂಗು ಮುರಿವ ಮಂದಿಯೇ ಹೆಚ್ಚು. ಕೆಲ ಶಾಲೆಗಳಲ್ಲಿ ಹೈಟೆಕ್ ಸೌಲಭ್ಯವಿರುವ ಶೌಚಾಲಯಗಳಿದ್ದರೂ ಸುಸ್ಥಿತಿಯ ನಿರ್ವಹಣೆ ವ್ಯವಸ್ಥೆ ಇರುವುದಿಲ್ಲ. ಸ್ವಚ್ಛ ಭಾರತ್ ಅಭಿಯಾನದ ಪರಿಕಲ್ಪನೆಯಲ್ಲಿ ಮುನ್ನಡೆಯುತ್ತಿರುವ ನಮ್ಮಲ್ಲಿ ಇಂದಿಗೂ ವ್ಯವಸ್ಥಿತವಾದ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ.

ಈ ಕೊರತೆ ನೀಗಿಸಲು ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಆರೋಗ್ಯ ಮತ್ತು ನೈರ್ಮಲ್ಯ ಪಾಠಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಹೊಸ ರೀತಿಯ ಯೋಜನಾ ಕಾರ್ಯ ನೀಡಿ ವೆಚ್ಚ ರಹಿತ ಮೂತ್ರಾಲಯಗಳನ್ನು ಪರಿಚಯಿಸಿದ್ದಾರೆ.ಮಕ್ಕಳನ್ನು ಪ್ರಾಯೋಗಿಕವಾಗಿ ಕಾರ್ಯತತ್ಪರರಾಗುವಂತೆ ಮಾಡಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ ಶೌಚಾಲಯವಿದ್ದರೂ ವ್ಯವಸ್ಥಿತ ವಿಲೇವಾರಿ ಇರಲಿಲ್ಲ. ಗಂಡುಮಕ್ಕಳ ಶೌಚಾಲಯದಲ್ಲಿ ಮೂತ್ರಾಲಯಕ್ಕೆ ವ್ಯವಸ್ಥೆ ಕೊರೆತೆ ಇತ್ತು.

ಮೂತ್ರಾಲಯ ಕಮೋಡ್ ಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಅಳವಡಿಸಲು ಪ್ರತಿ ಕಮೋಡ್ ಗೆ ₹2 ಸಾವಿರ ವೆಚ್ಚ ತಗುಲುತ್ತಿತ್ತು. ಮುಳ್ಳೂರು ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅತಿ ಕಡಿಮೆ ವೆಚ್ಚದ ಪ್ಲಾಸ್ಟಿಕ್ ಕ್ಯಾನ್ ಗಳನ್ನು ಬಳಸಿ ಯೂರಿನ್ ಕಮೋಡ್ ಮಾದರಿಯಲ್ಲಿ ಅದನ್ನು ಕತ್ತರಿಸಿ ಅದಕ್ಕೆ ಪಿವಿಸಿ ಪೈಪ್ ಅಳವಡಿಸಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಿದ್ದಾರೆ. ಫಿನಾಯಿಲ್ ಹಾಕಿ ಸ್ವಚ್ಛ ಮಾಡುವ ವ್ಯವಸ್ಥೆ ಕೂಡ ಮಾಡಿದ್ದಾರೆ.

ಹೇಗಿದೆ ಮೂತ್ರಾಲಯ: ಕೀಟ ನಾಶಕ ಅಥವಾ ಅಡುಗೆ ಎಣ್ಣೆಯ 5 ಲೀಟರ್ ಸಿಲಿಂಡರ್ ಆಕೃತಿಯ ಕ್ಯಾನುಗಳನ್ನು ತೆಗೆದುಕೊಂಡು ತಳಭಾಗವನ್ನು ಮೇಲ್ಮುಖವಾಗಿ ಮಾಡಿಕೊಂಡು ಕಮೋಡ್ ಮಾದರಿಯಲ್ಲಿ ಕತ್ತರಿಸಬೇಕು. ಮೇಲ್ಭಾಗದಲ್ಲಿ ನೀರು ಮತ್ತು ಫಿನಾಯಿಲ್ ಸಾಗಿಸಲು– ತಳಭಾಗದಲ್ಲಿ ಯೂರಿನ್ ವಿಲೇವಾರಿಯಾಗಲು 2 ಇಂಚಿನ ಪೈಪ್ ಬಳಸಿ ಅದನ್ನು ಪೂರ್ಣ ತಳ ಭಾಗದಲ್ಲಿರುವ 2 ಇಂಚಿನ ಪೈಪ್ ಗೆ ನೇರವಾಗಿ ಸಂಪರ್ಕ ಕಲ್ಪಿಸಿ ಮೂತ್ರ ಒಂದೆಡೆ ನಿಲ್ಲದೆ ವ್ಯವಸ್ಥಿತವಾಗಿ ಸಾಗುವಂತೆ ಮಾಡಲಾಗಿದೆ. 10 ಲೀಟರ್ ಸಾಮರ್ಥ್ಯದ ವಾಟರ್ ಕ್ಯಾನೊಂದನ್ನು ಕಮೋಡ್ ಶುಚಿಗೊಳಿಸಲು ಅಳವಡಿಸಲಾಗಿದ್ದು ವಾಲ್ ಗೇಟನ್ನು ಜೋರಾಗಿ ಆನ್ ಮಾಡಿದರೆ ಎಲ್ಲಾ ಕಮೋಡ್ ಗಳು ತೊಳೆದು ಹೋಗುತ್ತದೆ.

ಇದರಿಂದ ಪ್ರತಿನಿತ್ಯ ತೊಳೆಯುವ ಕೆಲಸ ಇದರಿಂದ ತಪ್ಪತ್ತದೆ. ಅಲ್ಲದೆ ಇಲ್ಲಿ ವಿಶೇಷವಾಗಿ 5 ಲೀಟರ್ ಕ್ಯಾನೊಂದನ್ನು ಫಿನಾಯಿಲ್ ತುಂಬಲು ಬಳಸಲಾಗಿದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ನೀರಿನೊಂದಿಗೆ ಫಿನಾಯಿಲ್ ಮಿಕ್ಸ್ ಮಾಡಿ ಇದಕ್ಕೆ ಹಾಕುತ್ತಾರೆ. ಇದು ಕಮೋಡ್‌ಗಳಿಗೆ ನಿಧಾನವಾಗಿ ಹನಿಹನಿಯಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಈ ಸಾಧನೆಗೆ ನಿಡ್ತ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಆಲೂರುಸಿದ್ಧಾಪುರ ಆರೋಗ್ಯ ಉಪಕೇಂದ್ರದ ವೈದ್ಯಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಶಾಲೆಗೆ ಸರ್ವ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)