ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು M.Com. ಪದವೀಧರನಾಗಿದ್ದು ಕೆಲಸ ಸಿಗುತ್ತಿಲ್ಲ, ಬೇರೆ ಉದ್ಯೋಗದ ಮಾಹಿತಿ ನೀಡಿ

Last Updated 2 ಜನವರಿ 2020, 7:43 IST
ಅಕ್ಷರ ಗಾತ್ರ

*ನಾನು ಎಂ.ಕಾಂ. ಸ್ನಾತಕೋತ್ತರ ಪದವೀಧರನಾಗಿದ್ದು ನನಗೆ ಸೂಕ್ತ ಕೆಲಸ ಸಿಗುತ್ತಿಲ್ಲ. ನನಗೆ ಟೀಚಿಂಗ್ ಇಷ್ಟ ಇಲ್ಲ, ಬೇರೆ ಕೆಲಸಗಳ ಬಗ್ಗೆ ಸಲಹೆ ನೀಡಿ.

ಹೆಸರು, ಊರು ಇಲ್ಲ

ನಿಮಗೆ ಸೂಕ್ತವಾದ ಕೆಲಸ ಯಾವುದು ಎಂದು ನೀವು ಸರಿಯಾಗಿ ಸ್ಪಷ್ಟಪಡಿಸದಿರುವ ಕಾರಣ ನೀವು ಓದಿರುವ ವಾಣಿಜ್ಯ ಕ್ಷೇತ್ರವನ್ನು ನಿಮ್ಮ ಆಸಕ್ತಿಯ ಕ್ಷೇತ್ರವೆಂದು ಭಾವಿಸಿ ನಾನು ಉತ್ತರಿಸುತ್ತೇನೆ. ನೀವು ಎಂ.ಕಾಂ. ಮಾಡಿ ಉಪನ್ಯಾಸ ವೃತ್ತಿ ಮಾಡಲು ಇಚ್ಛೆ ಇಲ್ಲದಿದ್ದಲ್ಲಿ ಕಾಮರ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲ ವೃತ್ತಿಗಳನ್ನು ಆಯ್ದುಕೊಳ್ಳಬಹುದು. ವಾಣಿಜ್ಯ ಕ್ಷೇತ್ರದ ಕೆಲಸಗಳಲ್ಲಿ ಸ್ನಾತಕೋತ್ತರ ಮತ್ತು ವಿಶೇಷವಾಗಿ ಎಂ.ಕಾಂ. ಮತ್ತು ಬಿ.ಕಾಂ. ನಡುವೆ ಹೆಚ್ಚಿನ ವ್ಯತ್ಯಾಸ ಪರಿಗಣಿಸುವುದಿಲ್ಲ. ಅದಕ್ಕಾಗಿ ನಿಮ್ಮ ವಾಣಿಜ್ಯ ಪದವಿಯ ಆಧಾರದ ಮೇಲೆ ಪ್ರಯತ್ನಿಸಬೇಕೇ ವಿನಃ ಎಂ.ಕಾಂ.ಗೆಂದು ವಿಶೇಷ ಪ್ರಾಧನ್ಯತೆ ಏನೂ ಸಿಗುವುದಿಲ್ಲ. ವಾಣಿಜ್ಯ ಕ್ಷೇತ್ರದ ಸಾಮಾನ್ಯ ವೃತ್ತಿಗಳಾದ ಅಕೌಂಟೆನ್ಸಿ, ಆಡಿಟಿಂಗ್, ಬ್ಯಾಂಕಿಂಗ್ ಹುದ್ದೆಗಳಿಗೆ ಪ್ರಯತ್ನಿಸಬಹುದು. ಅದಲ್ಲದೆ ಇದೇ ಕ್ಷೇತ್ರಕ್ಕೆ ಹತ್ತಿರದ ಕೆಲಸಗಳಾದ ಬ್ಯುಸಿನೆಸ್‌ ಡೆವಲೆಪ್‌ಮೆಂಟ್‌, ಅನಾಲಿಸ್ಟ್ ಡಿಜಿಟಲ್ ಮಾರ್ಕೆಟಿಂಗ್, ಇನ್ಶುರೆನ್ಸ್, ಸಪ್ಲೈಚೈನ್ ಮ್ಯಾನೇಜ್‌ಮೆಂಟ್.. ಹೀಗೆ ಅನೇಕ ಕೆಲಸಗಳನ್ನು ಮಾಡಬಹುದು. ಅದಲ್ಲದೆ ಸಾಮಾನ್ಯವಾಗಿ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸರ್ಕಾರಿ ಹುದ್ದೆಗಳಾದ ಎಫ್.ಡಿ.ಎ., ಎಸ್.ಡಿ.ಎ., ಬ್ಯಾಂಕ್ ಕ್ಲರ್ಕ್ ಮತ್ತು ಪ್ರೊಬೇಶನರಿ ಆಫೀಸರ್ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಮೇಲೆ ಅರ್ಹತೆ ಗಳಿಸಬಹುದಾದ ಎಲ್ಲಾ ಸರ್ಕಾರಿ ಕ್ಷೇತ್ರದ ಹುದ್ದೆಗಳಿಗೂ ಪ್ರಯತ್ನಿಸಬಹುದು. ಕೆಲಸ ಹುಡುಕಲು ಬೇರೆ ಬೇರೆ ಜಾಬ್ ಪೋರ್ಟಲ್ ನೋಂದಣಿ ಮಾಡಿಕೊಳ್ಳಿ, ಸ್ನೇಹಿತರ ಮತ್ತು ಶಿಕ್ಷಕರ ಸಂಪರ್ಕ ಬಳಸಿಕೊಳ್ಳಿ, ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಿ. ಶುಭಾಶಯ.

***
ಎಂಜಿನಿಯರಿಂಗ್‌ ಮ್ಯಾನುಫ್ಯಾಕ್ಚರಿಂಗ್‌ ಮ್ಯಾನೇಜ್‌ಮೆಂಟ್‌ (ಇಎಂಎಂ)ನಲ್ಲಿ ಎಂ.ಟೆಕ್‌. ಮುಗಿಸಿ ಎರಡು ವರ್ಷಗಳಾದವು. ಹಲವು ಸಂದರ್ಶನಗಳನ್ನು ಎದುರಿಸಿದ್ದೇನೆ. ಆದರೆ ನನಗೆ ಕೆಲಸ ಕೊಡಲು ಹಿಂಜರಿಯುತ್ತಾರೆ. ಏನು ಮಾಡಲೂ ಮನಸ್ಸಾಗುತ್ತಿಲ್ಲ. ನನಗೆ ಬ್ಯುಸಿನೆಸ್‌ ವಿಷಯದಲ್ಲಿ ತುಂಬಾ ಆಸಕ್ತಿ ಇದೆ. ಇತ್ತೀಚೆಗೆ ಪಿಜಿಡಿಬಿಎ (ಒಂದು ವರ್ಷ) ಕರಸ್ಪಾಂಡೆನ್ಸ್‌ ಕೋರ್ಸ್‌ ಮಾಡಬೇಕೆಂದಿದ್ದೇನೆ. ಇದನ್ನು ಮಾಡಿದರೆ ಬೇಡಿಕೆ ಇದೆಯೇ? ಕೆಲಸ ಸಿಗುತ್ತದೆಯೇ? ದಯವಿಟ್ಟು ಸಲಹೆ ನೀಡಿ.

ಹೆಸರು, ಊರು ಇಲ್ಲ

ನಮಗೆ ನಮ್ಮ ಓದು, ಆಸಕ್ತಿ, ಸಂಬಳ, ಸ್ಥಳ ಎಲ್ಲದಕ್ಕೂ ಹೊಂದುವ ಸೂಕ್ತವಾದ ಕೆಲಸ ಸಿಗುವುದಕ್ಕೆ ಸಮಯ ಹಿಡಿಯುತ್ತದೆ ಮತ್ತು ಅದೊಂದು ಪ್ರಕ್ರಿಯೆ ಕೂಡ. ಹಾಗೆ ಒಂದು ಉದ್ಯೋಗಾವಕಾಶವನ್ನು ನೀಡುವಾಗ ಸಂಸ್ಥೆಯು ಅನೇಕ ಮಾನದಂಡಗಳಿಂದ ನೋಡುತ್ತದೆ. ಅದು ಆ ನಿರ್ದಿಷ್ಟ ಕೆಲಸಕ್ಕೆ ಬೇಕಾಗಿರುವ ಜ್ಞಾನ, ಕೌಶಲ, ಭಾಷೆ, ಸಂವಹನ ಕೌಶಲ, ವ್ಯಕ್ತಿತ್ವ ಹೀಗೆ ಅನೇಕ ಮಾನದಂಡಗಳಿರುತ್ತವೆ. ಅಷ್ಟು ಮಾತ್ರವಲ್ಲದೆ ಸಂದರ್ಶನದಲ್ಲಿ ನಿಮ್ಮ ಮತ್ತು ಇತರರ ಪ್ರದರ್ಶನ ಇತ್ಯಾದಿ ವಿಷಯಗಳು ಕೂಡ ಕಾರಣವಾಗುತ್ತದೆ. ಅನೇಕ ಸಂದರ್ಶನಗಳ ನಂತರವೇ ಸೂಕ್ತವಾದ ಕೆಲಸ ದೊರಕುವುದು. ಹೀಗಾಗಿ ನೀವು ಕೇವಲ ಫಲಿತಾಂಶವನ್ನು ಪರಿಗಣಿಸಿ ಮನಸ್ಸಿಗೆ ಕಷ್ಟ ಮಾಡಿಕೊಳ್ಳಬೇಡಿ. ಇದರಿಂದ ಹೇಗೆ ಹೊರಬರಬೇಕು ಎಂದು ಯೋಚಿಸುವ.

ಇಲ್ಲಿಯ ತನಕದ ನಿಮ್ಮ ಸಂದರ್ಶನಗಳ ಅನುಭವವನ್ನು ಪ್ರಾಮಾಣಿಕವಾಗಿ ವಿಮರ್ಶಿಸಿ ನೋಡಿ. ಸಂದರ್ಶನಕಾರರ ಪ್ರಶ್ನೆಗಳು, ಅವುಗಳ ಉದ್ದೇಶ ಇತ್ಯಾದಿಗಳನ್ನು ನೆನಪಿಸಿಕೊಳ್ಳಿ. ಹಾಗೆ ಪ್ರತಿಯೊಂದು ಸಂದರ್ಶನದ ಅನುಭವವನ್ನು ವಿಮರ್ಶೆ ಮಾಡಿಕೊಂಡು ಯಾವ ವಿಚಾರಗಳು ನಿಮ್ಮ ಸಂದರ್ಶನದಲ್ಲಿ ಉತ್ತಮವಾಗಿತ್ತು, ಯಾವ ವಿಚಾರಗಳು ಉತ್ತಮವಾಗಿರಲಿಲ್ಲ ಎಂದು ವಿಮರ್ಶೆ ಮಾಡಿಕೊಂಡು ಅವುಗಳನ್ನು ಉತ್ತಮ ಪಡಿಸಿಕೊಳ್ಳಲು ಪ್ರಯತ್ನಿಸಿ. ಇನ್ನಷ್ಟು ಆತ್ಮವಿಶ್ವಾಸದಿಂದ ಮುಂದಿನ ಸಂದರ್ಶನಗಳನ್ನು ಎದುರಿಸಿ.

ಇನ್ನು ಬ್ಯುಸಿನೆಸ್ ಸಂಬಂಧಿತ ವಿಷಯಗಳ ಬಗ್ಗೆ ನೋಡೋಣ. ಯಾಕಾಗಿ ನಿಮಗೆ ಆ ವಿಷಯದಲ್ಲಿ ಆಸಕ್ತಿ ಇದೆ, ಅದರಲ್ಲಿ ಮುಂದಿನ ಉದ್ಯೋಗ ಅವಕಾಶಗಳೇನು, ಅವುಗಳ ಕೆಲಸದ ಲಕ್ಷಣಗಳೇನು ಎಂದು ಸರಿಯಾಗಿ ತಿಳಿದು ಆಲೋಚಿಸಿ ನಿರ್ಧರಿಸಿ. ನಿಮಗೆ ಬ್ಯುಸಿನೆಸ್ ಡೆವಲೆಪ್‌ಮೆಂಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ನಿಮ್ಮ ಎಂ.ಟೆಕ್. ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲೇ ಬಹಳಷ್ಟು ಬ್ಯುಸಿನೆಸ್ ಡೆವಲೆಪ್‌ಮೆಂಟ್ ಅಥವಾ ಬಿ.ಡಿ.ಎ. ಉದ್ಯೋಗಾವಕಾಶಗಳಿದ್ದು ಅವುಗಳಿಗೆ ಪ್ರಯತ್ನ ಪಡುತ್ತ, ಕೆಲಸ ಮಾಡುತ್ತ ಪಿಜಿಡಿಬಿಎ ಓದಿಕೊಳ್ಳಬಹುದು. ಶುಭಾಶಯ.

*ಇತ್ತೀಚಿನ ಮಾಹಿತಿ ಪ್ರಕಾರ ಐ.ಟಿ. ಉದ್ಯೋಗದಲ್ಲಿ ಏರಿಳಿತವಾಗುತ್ತಿದೆ. ಇದರ ಬಗ್ಗೆ ಮಾಹಿತಿ ನೀಡಿ.

ಶರಣಕುಮಾರ್, ಕಲಬುರ್ಗಿ

ಶರಣಕುಮಾರ್, ಪ್ರತಿಯೊಂದು ಕ್ಷೇತ್ರಗಳಲ್ಲಿ ಏರುಪೇರು ಸಾಮಾನ್ಯವಾಗಿರುತ್ತದೆ. ಈಗ ವಿಶ್ವವೇ ಒಂದು ಮಾರುಕಟ್ಟೆ ಆಗಿರುವುದರಿಂದ ಒಂದು ದೇಶದಲ್ಲಿ ಆಗುವ ರಾಜಕೀಯ ವಿದ್ಯಮಾನಗಳು, ಸಾಮಾಜಿಕ, ಆರ್ಥಿಕ ಮತ್ತು ಮಾರುಕಟ್ಟೆಯ ಬದಲಾವಣೆಗಳು ಆ ದೇಶ ಮಾತ್ರವಲ್ಲದೆ ಪ್ರಪಂಚದ ಬೇರೆ ದೇಶಗಳ ಉದ್ಯೋಗಾವಕಾಶಗಳ ಮೇಲೂ ಕೂಡ ಪರಿಣಾಮ ಬೀರುತ್ತದೆ. ಒಂದೊಂದು ಕಾಲದಲ್ಲಿ ಒಂದೊಂದು ಕ್ಷೇತ್ರ ಏಳ್ಗೆ ಕಾಣುತ್ತದೆ. ಮತ್ತೊಂದಷ್ಟು ಕ್ಷೇತ್ರಗಳ ಬೆಳವಣಿಗೆ ಮಂದವಾಗಿರುತ್ತದೆ. ಹೀಗಾಗಿ ಈ ಬಗ್ಗೆ ಹೆಚ್ಚು ಚಿಂತಿಸದೆ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲಿ ಉತ್ತಮ ಜ್ಞಾನ ಮತ್ತು ಕೌಶಲವನ್ನು ಗಳಿಸುವ ಬಗ್ಗೆ ಗಮನ ವಹಿಸಬೇಕು.

ಸದ್ಯ ಇರುವ ಮಾಹಿತಿಗಳ ಪ್ರಕಾರ ಐಟಿ ಕ್ಷೇತ್ರದಲ್ಲಿ ಹೊಸ ಕೆಲಸಗಳ ಸೃಷ್ಟಿ ಹಿಂದಿಗಿಂತ ಕಡಿಮೆ ಆಗಿದೆ. ಎಲ್ಲಾ ಹೊಸ ಕ್ಷೇತ್ರಗಳಲ್ಲೂ ಪ್ರಾರಂಭಕ್ಕೆ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಕಾಲಕ್ರಮೇಣ ಕಡಿಮೆ ಆಗುತ್ತ ಬರುವುದು ಸಾಮಾನ್ಯ. ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ ಹೊಸ ಉದ್ಯೋಗಾವಕಾಶಗಳು ಕಡಿಮೆ ಆಗುವುದರ ಜೊತೆಗೆ ಹಿಂದೆಂದಿಗಿಂತಲೂ ಹೆಚ್ಚು ಅಭ್ಯರ್ಥಿಗಳು ಐಟಿ ಕ್ಷೇತ್ರದಲ್ಲಿ ಶಿಕ್ಷಣ ಪಡೆದು ಕೆಲಸ ಅರಸುತ್ತಿದ್ದಾರೆ ಎಂದು ಗಮನಿಸಬೇಕಾಗುತ್ತದೆ. ಹೀಗಾಗಿ ಈ ಅನುಪಾತದ ಹೊಂದಾಣಿಕೆ ಸಮಸ್ಯೆಯಾಗಿದೆ ಮತ್ತು ಸ್ಪರ್ಧೆ ಹೆಚ್ಚು ಕಠಿಣವಾಗುತ್ತಿದೆ.

ಹಾಗೆಯೇ ಪ್ರತಿಯೊಂದು ಕ್ಷೇತ್ರದಲ್ಲಿ ಆಗುವ ಆಂತರಿಕ ಬದಲಾವಣೆ ಮತ್ತು ಉದ್ಯೋಗ ಮಾರುಕಟ್ಟೆಯ ನಡುವಿನ ಸಂಬಂಧವನ್ನು ಕೂಡ ನೋಡಬೇಕಾಗುತ್ತದೆ. ಐಟಿ ಕ್ಷೇತ್ರ ಸದಾ ಕ್ಷಿಪ್ರ ಬದಲಾವಣೆಗಳನ್ನು ಒಳಗೊಳ್ಳುವ ಕ್ಷೇತ್ರ. ನಾವು ಹಾಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಐಟಿ ಕ್ಷೇತ್ರ ಬಳಸುವ ಪ್ರೋಗ್ರಾಮಿಂಗ್ ಭಾಷೆಗಳು, ಫ್ಲಾಟ್‌ಫಾರಂಗಳು ಕಾಲ ಕಾಲಕ್ಕೆ ಬದಲಾದಂತೆ ನಾವು ನಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು. ಸದ್ಯ ಆಟೊಮೇಶನ್, ಮಷಿನ್ ಲರ್ನಿಂಗ್ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಐಟಿ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು. ಇವುಗಳಿಂದಲೂ ಉದ್ಯೋಗದ ಅವಕಾಶಗಳ ರೂಪುರೇಷೆಗಳು ಕೂಡ ಬದಲಾಗುತ್ತವೆ.

ನಾವು ಗಮನ ಕೊಡಬೇಕಾಗಿರುವುದು ನಮ್ಮನ್ನು ನಾವು ಹೇಗೆ ಈ ಕ್ಷೇತ್ರದ ಸ್ಫರ್ಧಾತ್ಮಕತೆಗೆ ತಯಾರಿ ಮಾಡಿಕೊಳ್ಳುತ್ತೇವೆ ಎಂದು. ನಾವು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸಿದಲ್ಲಿ ಆ ಕ್ಷೇತ್ರದಲ್ಲಿ ಸದ್ಯ ಬೇಡಿಕೆ ಇರುವ ಕೌಶಲ ಯಾವುದು ಎಂದು ತಿಳಿದು ಅವುಗಳನ್ನು ಸಂಪಾದಿಸಿ ಕೆಲಸ ಪಡೆಯುವುದು ಮತ್ತು ಅಭಿವೃದ್ಧಿ ಹೊಂದುವುದು. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು, ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT