ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವವೇ ಅಭಿವೃದ್ಧಿಗೆ ಅಡಿಪಾಯ: ಜಗದೀಶ ಶೆಟ್ಟರ್‌ ಸಂದರ್ಶನ

ಬೆಳಗಾವಿ ಜಿಲ್ಲೆಯೊಂದಿಗೆ 30 ವರ್ಷಗಳ ಒಡನಾಡಿ ಎಂದ ಜಗದೀಶ ಶೆಟ್ಟರ್‌
Published 4 ಮೇ 2024, 7:57 IST
Last Updated 4 ಮೇ 2024, 7:57 IST
ಅಕ್ಷರ ಗಾತ್ರ

ಹಿರಿಯ ರಾಜಕಾರಣಿ, ಮುಖ್ಯಮಂತ್ರಿ, ವಿವಿಧ ಖಾತೆಗಳ ಸಚಿವರಾಗಿ, ಎರಡು ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ಕಾರ್ಯನಿರ್ವಹಿಸಿದವರು ಜಗದೀಶ ಶೆಟ್ಟರ್‌. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಈ ಬಾರಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಧ್ಯೇಯೋದ್ದೇಶ, ಕ್ಷೇತ್ರದ ಬಗ್ಗೆ ಇಟ್ಟುಕೊಂಡ ನಿರೀಕ್ಷೆಯನ್ನು ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ತಿಳಿಸಿದ್ದಾರೆ.

* ಜನ ನಿಮಗೆ ಏಕೆ ಮತ ಹಾಕಬೇಕು?

–ಬೆಳಗಾವಿ ಅಭಿವೃದ್ಧಿಗೆ ನನ್ನ ರಾಜಕೀಯ ಅನುಭವ ಬಳಸುತ್ತೇನೆ. ಮುಖ್ಯಮಂತ್ರಿ ಆಗಿದ್ದ ನನಗೆ ಯಾವ ಜಿಲ್ಲೆಗೆ ಏನು ಬೇಕು ಎಂಬುದು ಸರಿಯಾಗಿ ಗೊ‌ತ್ತು. ಬೆಳಗಾವಿ ನನ್ನ ಕರ್ಮಭೂಮಿ. ಇದರ ಅಭಿವೃದ್ಧಿ ನನ್ನ ಕನಸು. ಹಾಗಾಗಿ, ಜನರು ಆಶೀರ್ವಾದಿಸುವಂತೆ ಕೋರುತ್ತೇನೆ.

* ಚುನಾವಣಾ ಕಣ ಹೇಗಿದೆ? ನಿರೀಕ್ಷೆಯಂತೆ ನಡೆದಿದೆಯೇ?

–ಖಂಡಿತ. ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಎಲ್ಲ ಕಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಜನ ನಿರ್ಧರಿಸಿದ್ದಾರೆ. ಅದಕ್ಕೆ ಪೂರಕವಾಗಿ ಬೆಳಗಾವಿಯಲ್ಲಿ ನನ್ನನ್ನು ಆಯ್ಕೆ ಮಾಡಲು ಬಯಸಿದ್ದಾರೆ.

* ಪ್ರಧಾನಿ ಮೋದಿ ಬಂದಿದ್ದು ಹೇಗೆ, ಎಷ್ಟು ಅನುಕೂಲ?

–ಮೋದಿ ಅವರು ದೇಶದಲ್ಲಿ ಎಲ್ಲೆಲ್ಲಿ ಹೋಗಿ ಪ್ರಚಾರ ಮಾಡಿದ್ದಾರೋ ಅಲ್ಲಿ ಬಿಜೆಪಿ ಗೆದ್ದಿದೆ. ಯುವಜನರನ್ನು ಸೆಳೆಯುವ, ಹಿರಿಯರನ್ನು ಗೌರವಿಸುವ, ಮಹಿಳೆಯರನ್ನು ಪೂಜಿಸುವ, ರಾಷ್ಟ್ರವನ್ನು ಅತಿಯಾಗಿ ಪ್ರೀತಿಸುವ ಮೋದಿ ಅವರ ನಡೆ ಜನರಿಗೆ ಇಷ್ಟವಾಗಿದೆ. ಅವರು ಬಂದು ಹೋದ ಮೇಲೆ ಇಡೀ ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ಉತ್ಸಾಹ ಹೆಚ್ಚಿದೆ.

* ‘ಹೊರಗಿನ ಅಭ್ಯರ್ಥಿ’ ಎಂಬ ಕಾಂಗ್ರೆಸ್‌ನವರ ಆರೋಪಕ್ಕೆ ನಿಮ್ಮ ಉತ್ತರ ಏನು?

–ಇದರ ಬಗ್ಗೆ ನಾನು ಚರ್ಚೆ ಮಾಡಿ ಸಮಯ ವ್ಯರ್ಥ ಮಾಡುವುದಿಲ್ಲ. ಕೆಲಸಕ್ಕೆ ಭಾರದ ಹೇಳಿಕೆ ಅದು. ಜನರು ನನ್ನನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ಸಿಗರು ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. 30 ವರ್ಷಗಳಿಂದ ನನಗೆ ಬೆಳಗಾವಿ ನಂಟಿದೆ. ಈ ಆರೋಪ ಮಾಡುವ ಕಾಂಗ್ರೆಸ್ಸಿಗರಿಗೆ ನನ್ನದೊಂದು ಪ್ರಶ್ನೆ; ಸಿದ್ದರಾಮಯ್ಯ ಅವರು ಮೈಸೂರು ಬಿಟ್ಟು ಬಾದಾಮಿಯಿಂದ ಸ್ಪರ್ಧಿಸಿದ್ದರು. ಆಗ ಅವರು ಹೊರಗಿನವರು ಆಗಿರಲಿಲ್ಲವೇ? ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದ್ದರು, ಇಂದಿರಾ ಗಾಂಧಿ ಚಿಕ್ಕಮಂಗಳೂರಿಂದ ಸ್ಪರ್ಧಿಸಿದ್ದರು. ಇದೇ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರ ಪುತ್ರಿ ಬಾಗಲಕೋಟೆಯಿಂದ ಸ್ಪರ್ಧಿಸಿದ್ದಾರೆ. ಅವರನ್ನೆಲ್ಲ ಹೊರಗಿನವರು ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳುತ್ತಾರೆಯೇ? ನನ್ನನ್ನು ಹೊರಗಿನವ ಎಂದು ಹೇಳುವ ನೈತಿಕತೆ ಅವರಿಗೆ ಇಲ್ಲ.

* ಜಿಲ್ಲೆಯ ರಾಜಕಾರಣ ಒಳಪೆಟ್ಟಿಗೆ ಹೆಸರಾದದ್ದು. ಹೇಗೆ ನಿಭಾಯಿಸುತ್ತಿದ್ದೀರಿ?

–ವಾತಾವರಣ ಚೆನ್ನಾಗಿದೆ. ಎಲ್ಲರೂ ಈಗ ಒಂದಾಗಿದ್ದೇವೆ. ಎಲ್ಲ ಶಾಸಕರು, ಮಾಜಿ ಶಾಸಕರು, ಮುಖಂಡರು ತಾವೇ ಅಭ್ಯರ್ಥಿ ಎಂಬಷ್ಟರ ಮಟ್ಟಿಗೆ ಕ್ರಿಯಾಶೀಲರಾಗಿ, ಮನಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಒಳಪೆಟ್ಟು, ಹೊರಪೆಟ್ಟು ಏನೇ ಇದ್ದರೂ ಅದು ಕಾಂಗ್ರೆಸ್‌ಗೆ ಸಂಬಂಧಿಸಿದ್ದು.

* ಈ ಚುನಾವಣೆ ನಿಮಗೂ ಹೊಸದು. ಅನುಭವ ಹೇಗಿದೆ?

–ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿ ಚಿಕ್ಕದು. ಲೋಕಸಭೆಯ ವ್ಯಾಪ್ತಿ ದೊಡ್ಡದು. ಓಡಾಡುವ ಪ್ರದೇಶ ದೊಡ್ಡದಾಗುತ್ತದೆ ಅಷ್ಟೇ. ಇದರಲ್ಲಿ ನನಗೆ ಅನುಭವವಿದೆ. ಹಿಂದಿನ ಚುನಾವಣೆಗಳಲ್ಲಿ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ.

* ಸಂಸದರಾದರೆ ಮಾಡಲೇಬೇಕೆಂದು ಉದ್ದೇಶಿಸಿರುವ  ಮುಖ್ಯ ಕೆಲಸ ಯಾವವು?

–ಇಡೀ ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ. ಬೆಳಗಾವಿಯನ್ನು ಅಭಿವೃದ್ಧಿ ಕೇಂದ್ರಿತ ಮಾಡಬೇಕಿದೆ. ಹೊಸ ಉದ್ಯೋಗ ತರುತ್ತೇನೆ. ಐಟಿ ಕ್ಲಸ್ಟರ್‌ ಮಾಡುವುದು ನನ್ನ ಉದ್ದೇಶ. ಮಾದರಿ ಕ್ಷೇತ್ರವಾಗಿ, ಬೆಳಗಾವಿಯನ್ನು ನಿಜವಾದ ಎರಡನೇ ರಾಜಧಾನಿ ಮಾಡುವುದು ನನ್ನ ಮುಂದಿರುವ ಗುರಿ.

ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌

ನಿಮ್ಮ ವಿರುದ್ಧ ಯುವ ರಾಜಕಾರಣಿ ನಿಂತಿದ್ದಾರೆ. ಅವರಿಗೆ ಕಿವಿಮಾತು ಏನು ಹೇಳುತ್ತೀರಿ?

–ಸಂಸತ್ತು ದೇಶವನ್ನೇ ಮುನ್ನಡೆಸಬೇಕಾದ ದೊಡ್ಡ ಜವಾಬ್ದಾರಿ ಹೊತ್ತಿದೆ. ಹಲವು ವರ್ಷಗಳ ರಾಜಕೀಯ ಅನುಭವ ಸಾಂವಿಧಾನಿಕ ಜ್ಞಾನ ಜನಧ್ವನಿ ಎಲ್ಲ ಅರ್ಥ ಮಾಡಿಕೊಂಡವರು ಅಲ್ಲಿ ಇರಬೇಕಾಗುತ್ತದೆ. ಯುವ ರಾಜಕಾರಣಿಗಳು ಮೊದಲು ರಾಜಕೀಯ ಅನುಭವ ಪಡೆಯಬೇಕು. ಹೋರಾಟ ಮಾಡಬೇಕು. ಪಳಗಿದ ಮೇಲೆ ಅಧಿಕಾರಕ್ಕೆ ಬರಬೇಕು. ಏನೂ ಇಲ್ಲದೇ ನೇರವಾಗಿ ಅಧಿಕಾರಕ್ಕೆ ಬಂದು ಕುಳಿತರೆ ಹುದ್ದೆಗೆ ಅಪಾಯ ತಪ್ಪಿದ್ದಲ್ಲ. ನಾನು ಕೂಡ ಸಾಕಷ್ಟು ವರ್ಷ ಪಳಗಿದ ಮೇಲೆಯೇ ಅಧಿಕಾರ ಬಯಸಿದ್ದೇನೆ.

* ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರೀಕ್ಷಿತ ಕೆಲಸ ಮಾಡಿದ್ದೀರೇ?

–ಪ್ರವಾಹ ಬಂದ ಸಂದರ್ಭದಲ್ಲಿ ರೈತರಿಗೆ ಯೋಗ್ಯ ಪರಿಹಾರ ನೀಡಿದ್ದೇನೆ. ಸಣ್ಣ ಗೋಡೆ ಕುಸಿದರೂ ಅತಿ ಹೆಚ್ಚು ಪರಿಹಾರ ಕೊಡಿಸಿದ್ದೇನೆ. ಕೋವಿಡ್ ಸಂದರ್ಭದ ಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಜಿಲ್ಲೆಯ ಜನರಿಗೆ ಲಸಿಕೆ ಕೊಡಿಸುವಲ್ಲಿ ಮುಂಚೂಣಿ ವಹಿಸಿದ್ದೇನೆ. ಕೈಗಾರಿಕಾ ಸಚಿವ ಇದ್ದಾಗ ಕಣಗಲಾ ಕೈಗಾರಿಕಾ ಪ್ರದೇಶಕ್ಕೆ ₹100 ಕೋಟಿ ನೀಡಿದ್ದೇನೆ. ನಾನು ಮುಖ್ಯಮಂತ್ರಿ ಇದ್ದಾಗ ಜಿಲ್ಲೆಯ ಅಭಿವೃದ್ಧಿಗೂ ₹100 ಕೋಟಿ ಕೊಟ್ಟಿದ್ದೇನೆ. ಸುವರ್ಣ ವಿಧಾನಸೌಧಕ್ಕೆ ಜಾಗ ಗುರುತಿಸಿದ್ದೂ ಭೂಮಿಪೂಜೆ ಮಾಡಿದ್ದು ಉದ್ಘಾಟನೆ ಮಾಡಿದ್ದು ಕೂಡ ನಾನೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT