ಜನ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕು?
2008ರಿಂದ 2013ರವರೆಗೆ ಶಾಸಕನಾಗಿದ್ದೆ. ಆ ಸಮಯದಲ್ಲಿ ಮಾಯಕೊಂಡ ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯವೈಖರಿಯನ್ನು ಜನರು ಮೆಚ್ಚಿದ್ದಾರೆ. ಪ್ರತಿ ಬೂತ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ನನ್ನನ್ನು ಜನ ಆಯ್ಕೆ ಮಾಡಿಯೇ ಮಾಡುತ್ತಾರೆ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಯೋಜನೆ, ಯೋಚನೆಗಳೇನು?
ಕ್ಷೇತ್ರದ ಎಲ್ಲ 184 ಗ್ರಾಮಗಳನ್ನು ಸುತ್ತಿದ್ದೇನೆ. ಎಲ್ಲಿ ಏನು ಸಮಸ್ಯೆ ಇದೆ? ಜನರ ಬೇಡಿಕೆಗಳೇನು ಎಂಬ ಸ್ಪಷ್ಟ ಅರಿವಿದೆ. 22 ಕೆರೆ ತುಂಬಿಸುವ ಯೋಜನೆ ಅಪೂರ್ಣವಾಗಿದೆ. ಅಸ್ತವ್ಯಸ್ತವಾಗಿದೆ. ಅದನ್ನು ಸರಿಪಡಿಸಿ ನೀರು ತುಂಬಿಸಬೇಕು. ಎಲ್ಲ ಕಡೆಗಳಲ್ಲಿ ಸಮರ್ಪಕ ನೀರಾವರಿ ವ್ಯವಸ್ಥೆ ಮಾಡಬೇಕು. ಬಹಳ ಕಡೆಗಳಲ್ಲಿ ರಸ್ತೆ ಅಭಿವೃದ್ಧಿ ಕುಂಠಿತಗೊಂಡಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆಯಬೇಕಿದೆ. ಸುವರ್ಣ ಗ್ರಾಮ ಯೋಜನೆಗೆ ಮತ್ತೆ ಚಾಲನೆ ನೀಡಲಾಗುವುದು. ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಪರಿಶಿಷ್ಟ ಜಾತಿ, ಪಂಗಡದವರಿಗೆ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಲಾಗುವುದು.
ಒಂದೇ ಸಮುದಾಯದ ಇಬ್ಬಿಬ್ಬಿರು ಕಣದಲ್ಲಿರುವುದರಿಂದ ಸಮಸ್ಯೆ ಆಗುವುದಿಲ್ಲವೇ?
ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಗಳಿಲ್ಲ. ಕಾಂಗ್ರೆಸ್‌ನಿಂದ ಬಂಡಾಯ ಎದ್ದವರಷ್ಟೇ ಇದ್ದಾರೆ. ಒಬ್ಬರು ನನ್ನದೇ ಸಮುದಾಯದವರಾದರೂ ನನಗೇನೂ ಸಮಸ್ಯೆ ಆಗಲ್ಲ. ಸಮುದಾಯದ ಮತಗಳು ಒಡೆಯಲ್ಲ.
ಕೈಗಾರಿಕಾ ಕಾರಿಡಾರ್‌ಗಾಗಿ ಭೂಮಿ ನೀಡುವುದನ್ನು ರೈತರು ವಿರೋಧಿಸಿದ್ದಾರೆ. ನಿಮ್ಮ ನಿಲುವು ಏನು?
ಕೈಗಾರಿಕೆ ಯಾಕೆ ಬೇಕು ಎಂಬುದನ್ನು ರೈತರ ಬಳಿ ಮಾತನಾಡುತ್ತೇನೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಿಯೇ ಮುಂದುವರಿಯಲಾಗುವುದು.
ಟಿಕೆಟ್ ಸಿಗದೇ ಇದ್ದಾಗ ಹಿಂದೆ ಬೇರೆ ಪಕ್ಷಕ್ಕೆ ಹೋಗಿದ್ದೀರಿ. ಮತ್ತೆ ಬಿಜೆಪಿಗೆ ಬಂದಿದ್ದೀರಿ. ಪಕ್ಷಾಂತರವನ್ನು ಜನ ಒಪ್ಪುತ್ತಾರಾ?
ಹಿಂದೆ ಮಧ್ಯದಲ್ಲಿ ಬಿಜೆಪಿ ಬಿಟ್ಟು ಹೋಗಿದ್ದು ನಿಜ. ಆದರೆ, ಮತ್ತೆ ಮರಳಿ ಹಲವು ವರ್ಷಗಳಾಗಿವೆ. ಈಗ ಅದೆಲ್ಲ ಅಪ್ರಸ್ತುತ. ನನ್ನನ್ನು ಪಕ್ಷ ಗುರುತಿಸಿ ಎಸ್.ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷನನ್ನಾಗಿ ಮಾಡಿತು. ಬಳಿಕ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿತು. 4 ಜಿಲ್ಲೆಗಳಲ್ಲಿ ವೀಕ್ಷಕನಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ವಹಿಸಿತು. ಈಗ ಟಿಕೆಟ್ ನೀಡಿದೆ.
ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜನಸ್ಪಂದನೆ ಹೇಗಿದೆ?
ಶೇ 70ರಷ್ಟು ಪ್ರಚಾರ ಮುಗಿಸಿದ್ದೇನೆ. ಮಾಯಕೊಂಡ ದಲ್ಲಿ ಜೆಡಿಎಸ್ ಪರ ವಾತಾವರಣ ಇದೆ. ನಮ್ಮ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ, ಈಗ ಘೋಷಣೆ ಮಾಡಿರುವ ಪಂಚರತ್ನ ಕಾರ್ಯಕ್ರಮಗಳು, ನನ್ನ ಬಗ್ಗೆ ಜನರಿಗೆ ಇರುವ ಅನುಕಂಪ, ನಾನು ಮಾಡುತ್ತಿರುವ ಸೇವೆ ಈ ವಾತಾವರಣವನ್ನು ನಿರ್ಮಿಸಿದೆ. ಜನರು ನನಗೆ ಅವಕಾಶ ನೀಡಲಿದ್ದಾರೆ.
ಜನ ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?
ಒಳ್ಳೆಯ ಕೆಲಸ ಮಾಡಲು ನನ್ನನ್ನು ಆಯ್ಕೆ ಮಾಡಬೇಕು. 3 ಬಾರಿ ಸ್ಪರ್ಧಿಸಿ ಸೋತಿದ್ದೇನೆ. ರಾಷ್ಟ್ರೀಯ ಪಕ್ಷಗಳು ನನ್ನನ್ನು ಬಳಸಿಕೊಂಡು ಮೋಸ ಮಾಡಿವೆ. ಬಿಜೆಪಿ ಎರಡು ಬಾರಿ ನಿನಗೇ ಟಿಕೆಟ್ ಎಂದು ಭರವಸೆ ನೀಡಿ, ಅವರ ಸಮಾವೇಶಕ್ಕೆಲ್ಲ ನಾನು ಸಾವಿರಾರು ಬಸ್‌ಗಳನ್ನು ಕಳುಹಿಸುವಂತೆ ಮಾಡಿದ್ದರು. ಎರಡು ಬಾರಿಯೂ ಟಿಕೆಟ್ ನೀಡಲಿಲ್ಲ. ಟಿಕೆಟ್ ಕೊಡ್ತೀವಿ ಎಂದು ಭರವಸೆ ನೀಡಿ ಬರಮಾಡಿಕೊಂಡ ಕಾಂಗ್ರೆಸ್ ಕೂಡ ಕೈಕೊಟ್ಟಿತು. ಸ್ಥಳೀಯ ನಾಯಕರಿಂದಾಗಿ ಎರಡೂ ಕಡೆ ಮೋಸವಾಗಿದೆ. ನನಗೀಗ 69 ವರ್ಷ. ಸಾಯುವ ಮೊದಲು ಜನರ ಸೇವೆ ಮಾಡಬೇಕು. ಸತ್ತ ಮೇಲೂ ಹೆಸರು ಉಳಿಯುವಂತ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶ. ಜನರಿಗೆ ಇದೆಲ್ಲವನ್ನೂ ಅರ್ಥ ಮಾಡಿಸುತ್ತಿದ್ದೇನೆ. ಜನರು ನನ್ನನ್ನೇ ಆಯ್ಕೆ ಮಾಡಲಿದ್ದಾರೆ.
ಕ್ಷೇತ್ರಕ್ಕೆ ಏನು ಮಾಡಬೇಕೆಂಬ ಆಲೋಚನೆ ಇದೆ?
ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕು. ಮಾಯಕೊಂಡವನ್ನು ಗುಡಿಸಲು ಮುಕ್ತವನ್ನಾಗಿಸಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಬೇಕು. ರಸ್ತೆ, ಚರಂಡಿ, ಬೀದಿದೀಪ ವ್ಯವಸ್ಥೆ ಸರಿಯಾಗಬೇಕು. ಹಿಂದೆ ಶಾಸಕರಾದವರು ಎಷ್ಟೋ ಹಳ್ಳಿಗಳಿಗೆ ಐದು ವರ್ಷಗಳಲ್ಲಿ ಒಮ್ಮೆಯೂ ಭೇಟಿ ನೀಡಿಲ್ಲ. ನಾನು ಗೆದ್ದರೆ ಪ್ರತಿ ಹಳ್ಳಿಗೆ ಹೋಗುತ್ತೇನೆ. ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಒಂದು ಜನಸಂಪರ್ಕ ಕೇಂದ್ರ ತೆರೆಯುತ್ತೇನೆ.
ಕೈಗಾರಿಕಾ ಕಾರಿಡಾರ್‌ಗೆ ಭೂಸ್ವಾಧೀನ ಮಾಡುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ಜನರಿಗೆ ಉದ್ಯೋಗ ಸಿಗಬೇಕಿದ್ದರೆ ಕೈಗಾರಿಕೆಗಳು ಬೇಕು. 30–40 ಕೈಗಾರಿಕೆಗಳನ್ನು ತರುವ ಉದ್ದೇಶ ಇದೆ. ಆದರೆ, ಅದಕ್ಕಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಬದಲು ಬೇರೆಡೆ ಭೂಸ್ವಾಧೀನ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ತಿಳಿಸುವೆ.
ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು ಪ್ರಬಲರಾಗಿದ್ದಾರೆ. ಅದು ನಿಮ್ಮ ಗೆಲುವಿಗೆ ಅಡ್ಡಗಾಲು ಆಗುವುದಿಲ್ಲವೇ?
ನಾನು ಕೂಡ ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಜೆಡಿಎಸ್‌ಗೆ ಬಂದವನು. ಹಿಂದೆ ಪಕ್ಷೇತರನಾಗಿ ಸ್ಪರ್ಧಿಸಿಯೇ 27,000ಕ್ಕೂ ಅಧಿಕ ಮತ ಪಡೆದಿದ್ದೆ. ಈಗ ಜೆಡಿಎಸ್ ಅಭ್ಯರ್ಥಿ ಆಗಿದ್ದು, ನನ್ನ ಕಳಕಳಿ ಜನರಿಗೆ ಗೊತ್ತಿರುವುದರಿಂದ ನನ್ನ ಪರವಾಗಿ ಮತ ಚಲಾಯಿಸಲಿದ್ದಾರೆ ಎಂಬ ವಿಶ್ವಾಸವಿದೆ.
ಹೇಗಿದೆ ಚುನಾವಣಾ ತಯಾರಿ?
ಮನೆ ಮನೆಗೆ ತಲುಪಿದ್ದೇನೆ. ಎಲ್ಲರನ್ನೂ ಭೇಟಿ ಮಾಡಿ ಮಾತನಾಡು ತ್ತಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ದೊರೆಯು ತ್ತಿದೆ. ನಾಮಪತ್ರ ಸಲ್ಲಿಸುವ ದಿನ ರ‍್ಯಾಲಿಯಲ್ಲಿ ಸೇರಿದ್ದ ಜನಸ್ತೋಮ ವೇ ಈ ಬಾರಿ ಮಾಯಕೊಂಡ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಸಂದೇಶವನ್ನು ಸಾರಿದೆ.
ನಿಮ್ಮನ್ನೇ ಯಾಕೆ ಆಯ್ಕೆ ಮಾಡಬೇಕು?
ನಾನು ನಿರಂತರ ಜನರ ಮಧ್ಯೆಯೇ ಇದ್ದು ಸೇವೆ ಮಾಡಿಕೊಂಡು ಬಂದವನು. ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗಲೂ ಜನರಿಗಾಗಿ ಕೆಲಸ ಮಾಡಿದ್ದೆ. ಕೊರೊನಾ ವೇಳೆ ಎಲ್ಲರೂ ಮನೆಯಲ್ಲಿ ಕುಳಿತರೆ, ನಾನು ಸೋಂಕಿತರಿಗೆ ಬೆಡ್, ಚಿಕಿತ್ಸೆ ಕೊಡಿಸಲು ಓಡಾಡುತ್ತಿದ್ದೆ. ಇದೆಲ್ಲ ಗೊತ್ತಿರುವವರು ನನ್ನನ್ನು ಆಯ್ಕೆ ಮಾಡಲಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?
ರೈತರಿಗೆ ಮೊದಲ ಆದ್ಯತೆ. ರೈತರು ಬೆಳೆದ ಬೆಳೆಗಳನ್ನು ರಕ್ಷಿಸಲು ಶೀಥಲೀಕರಣ ಘಟಕಗಳನ್ನು ಸ್ಥಾಪಿಸಲಾಗುವುದು. ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗುವುದು. ಆರೋಗ್ಯ, ಶಿಕ್ಷಣ ಎಲ್ಲರಿಗೂ ಸಿಗಬೇಕು. ರಸ್ತೆ, ಚರಂಡಿ ನಿರ್ಮಿಸಬೇಕು. ಶಾಸಕರ ನಿರ್ಲಕ್ಷ್ಯದಿಂದ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಮತ್ತೆ ಅಭಿವೃದ್ಧಿ ಪಥಕ್ಕೆ ಒಯ್ಯುವುದೇ ನನ್ನ ಗುರಿ.
ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟುವುದಿಲ್ಲವೇ?
ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದಾಗ ಬಂಡಾಯ ಸಹಜ. ಎಲ್ಲರಿಗೂ ಸ್ಪರ್ಧಿಸುವ ಹಕ್ಕು ಇರುತ್ತದೆ. ಆದರೆ, ಪಕ್ಷದಲ್ಲಿ ಒಬ್ಬರಿಗಷ್ಟೇ ಟಿಕೆಟ್ ನೀಡಲು ಸಾಧ್ಯ. ಟಿಕೆಟ್ ಸಿಗದೇ ಇದ್ದಾಗ ಕೆಲವೊಮ್ಮೆ ಆರೋಪಗಳನ್ನು ಮಾಡುವುದೂ ಸಹಜ. ಜನರು ಪ್ರಜ್ಞಾವಂತರಿದ್ದಾರೆ. ಯಾರನ್ನು ಗೆಲ್ಲಿಸಬೇಕು ಎಂದು ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಒಂದು ಸಿದ್ಧಾಂತ, ನಿಲುವು ಇದೆ. ಎಲ್ಲರನ್ನೂ ಒಟ್ಟಿಗೆ ಒಯ್ಯುವ ಗುಣವಿದೆ. ಅದು ಕೂಡ ಚುನಾವಣೆಯಲ್ಲಿ ನನಗೆ ಪೂರಕವಾಗಿದೆ.
ಕೈಗಾರಿಕಾ ಕಾರಿಡಾರ್‌ಗಾಗಿ ಕೃಷಿ ಭೂಮಿ ವಶಪಡಿಸಿಕೊಳ್ಳುವ ಬಗ್ಗೆ ನಿಮ್ಮ ನಿಲುವೇನು?
ನಮ್ಮ ಕ್ಷೇತ್ರದಲ್ಲಿ ಕೈಗಾರಿಕಾ ಕಾರಿಡಾರ್‌ಗಾಗಿ ಸಾವಿರಾರು ಎಕರೆ ಕೃಷಿಭೂಮಿಯನ್ನು ಗುರುತಿಸಲಾಗಿದೆ. ಅದು ಫಲವತ್ತಾದ ಭೂಮಿ. ಈ ಕೃಷಿ ಭೂಮಿಯನ್ನು ಉಳಿಸಲು ರೈತರ ಜತೆಗೆ ಸೇರಿ ನಾನೂ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೈಗಾರಿಕೆಗೆ ನನ್ನ ವಿರೋಧವಿಲ್ಲ. ಆದರೆ, ಎಲ್ಲಿ ಸ್ಥಾಪಿಸಬೇಕು ಎಂಬುದು ಮುಖ್ಯ.
ಕಾಂಗ್ರೆಸ್ ಟಿಕೆಟ್ ಸಿಗದಿದ್ದರೂ ನೀವು ಸ್ಪರ್ಧಿಸಲು ಕಾರಣವೇನು?
ಮೂರೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ತಿರುಗಾಡುತ್ತಿದ್ದೇನೆ. ನನ್ನ ಶಕ್ತಿ ಮೀರಿ ಜನರ ಸೇವೆ ಮಾಡುತ್ತಿದ್ದೇನೆ. ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದೆ. ಟಿಕೆಟ್ ಸಿಗುವುದು, ಬಿಡುವುದು ಎರಡನೇ ವಿಚಾರ. ಟಿಕೆಟ್‌ಗಾಗಿ ಒಬ್ಬ ಹೆಣ್ಣುಮಗಳ ತೇಜೋವಧೆ ಮಾಡುವುದನ್ನು ಸಹಿಸಲು ಸಾಧ್ಯವೇ? ಮಹಿಳೆಯರ ಸ್ವಾಭಿಮಾನಕ್ಕಾಗಿ, ಗೌರವಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ಜನರು ಊಟ ಇಲ್ಲದೇ ಇದ್ದರೂ ಸುಮ್ಮನಿರುತ್ತಾರೆ. ಆದರೆ, ಸ್ವಾಭಿಮಾನಕ್ಕೆ, ಆತ್ಮಗೌರವಕ್ಕೆ, ಮಾನಕ್ಕೆ ಬೆಲೆ ಕೊಡುತ್ತಾರೆ. ನನ್ನ ತೇಜೋವಧೆ ಜನರಿಗೆ ಸಿಟ್ಟು ತರಿಸಿದೆ.
ನಿಮ್ಮ ಹೋರಾಟಕ್ಕೆ ಜನಬೆಂಬಲ ಸಿಗುತ್ತಿದೆಯೇ?
ಕಿಚ್ಚ ಸುದೀಪ್ ಬಂದಾಗಲೇ 1,000 ಜನ ಸೇರಿದ್ದರು. ಅಂಥದ್ದರಲ್ಲಿ ನಾನು ಹೋದರೆ ಜನ ಬರುತ್ತಾರೋ ಇಲ್ವೋ ಎಂಬ ಅನುಮಾನ ಇತ್ತು. ಪಕ್ಷದಿಂದ ಕಣಕ್ಕಿಳಿದರೆ ಸಿಗುವ ಪ್ರತಿಕ್ರಿಯೆಯೇ ಬೇರೆ. ಪಕ್ಷೇತರವಾಗಿ ಸ್ಪರ್ಧಿಸಿದಾಗ ಜನ ಒಪ್ಪಿಕೊಳ್ಳುತ್ತಾರಾ? ಇಲ್ಲವಾ? ಎಂಬ ಅಧೈರ್ಯ ಇತ್ತು. ಆದರೆ ಪ್ರತಿದಿನ 2,000ಕ್ಕೂ ಅಧಿಕ ಜನ ಪ್ರತಿ ಹಳ್ಳಿಗಳಲ್ಲಿ ನನ್ನ ಜತೆ ಸೇರುತ್ತಿದ್ದಾರೆ. ಇದನ್ನೆಲ್ಲ ನೋಡುವಾಗ ಖುಷಿಯಾಗುತ್ತದೆ. ಜನರ ಪ್ರೀತಿಯನ್ನು ಕಂಡು ಬೆರಗಾಗಿದ್ದೇನೆ. ಸೋಲು ಗೆಲುವಿನ ಬಗ್ಗೆ ತಲೆಕೆಡಿಸಿ ಕೊಳ್ಳದೇ ಕಣಕ್ಕೆ ಇಳಿದಿದ್ದೆ. ಈಗ ಗೆಲವು ಖಚಿತ ಎಂಬ ವಾತಾವರಣ ಇದೆ.
ಜನ ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?
ಮಾಯಕೊಂಡದಿಂದ 25 ವರ್ಷಗಳಿಂದ ಯಾವ ಮಹಿಳೆಯೂ ವಿಧಾನಸಭೆಗೆ ಆಯ್ಕೆಯಾಗಿಲ್ಲ. ಈ ಬಾರಿ ಮಹಿಳೆಯನ್ನು ಆಯ್ಕೆ ಮಾಡುವ ಅವಕಾಶ ಜನರ ಮುಂದಿದೆ. ನಾನು ಬಡ ಕುಟುಂಬದಿಂದ ಬಂದವಳು. ಬಡತನ ಅಂದರೆ ಏನು ಎಂಬ ಅರಿವು ನನಗಿದೆ. ರೈತರ ಸಂಕಷ್ಟ ಗೊತ್ತಿದೆ. ಜನರ ಬಡತನ ಮತ್ತು ಸಮಸ್ಯೆಗಳ ಬಗ್ಗೆ ಗೊತ್ತಿರುವವರು ಸ್ಪಂದಿಸುವುದು ವಿಶೇಷ. ಕೊರೊನಾ ಕಾಲದಲ್ಲಿ ನಾನು ಮಾಡಿದ ಸೇವೆ ಜನರಿಗೆ ಅರಿವಿದೆ. ಈ ಎಲ್ಲ ಕಾರಣಗಳಿಂದ ಜನ ನನ್ನನ್ನೇ ಆಯ್ಕೆ ಮಾಡಲಿದ್ದಾರೆ.
ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸುವುದಕ್ಕೂ ಸ್ವತಂತ್ರವಾಗಿ ಸ್ಪರ್ಧಿಸುವುದಕ್ಕೂ ವ್ಯತ್ಯಾಸ ಇದೆಯೇ?.
ಪಕ್ಷ ಅಂದರೆ ಬ್ರ್ಯಾಂಡ್. ಬ್ರ್ಯಾಂಡ್ ಮೇಲೆ ಹಲವರು ತರಕಾರಿಗಳನ್ನು ಖರೀದಿಸುತ್ತಾರೆ. ಬ್ರ್ಯಾಂಡ್ ಇಲ್ಲದ ಆದರೆ, ತಾಜಾ ತರಕಾರಿ ಕಂಡರೆ ಜನರ ಬ್ರ್ಯಾಂಡ್ ನೋಡದೇ ತಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ತೀರ್ಮಾನಿಸಿ ಅದನ್ನೇ ಆಯ್ಕೆ ಮಾಡುತ್ತಾರೆ. ಇದೂ ಹಾಗೇ ಬ್ರ್ಯಾಂಡ್ ಇಲ್ಲದೆಯೇ ನನ್ನನ್ನು ಆಯ್ಕೆ ಮಾಡಲಿದ್ದಾರೆ. ನಮ್ಮ ಮನೆಯ ಮಗಳು ಎಂದು ಅಪ್ಪಿಕೊಳ್ಳಲಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಚಿಂತನೆ ಏನು?
ಕ್ಷೇತ್ರದ ಮನೆ ಮಗಳಾಗಿ, ಸಹೋದರಿಯಾಗಿ ಅಧಿಕಾರ ಇಲ್ಲದೆಯೇ ಕೆಲಸ ಮಾಡಿದ್ದೇನೆ. ಕ್ಷೇತ್ರದಾದ್ಯಂತ ಓಡಾಡಿದ್ದೇನೆ. ಎಲ್ಲಿ ಏನು ಕೆಲಸಗಳಾಗಬೇಕು ಎಂದು ಗೊತ್ತಿದೆ. ಶಿಕ್ಷಣ, ಉದ್ಯೋಗ, ನೀರು ಸಹಿತ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸುವುದು ನನ್ನ ಕನಸು.
ಮಾಡಲಿಂಗ್, ಸಿನಿಮಾ ಹಿನ್ನೆಲೆಯ ನೀವು ಜನರೊಂದಿಗೆ ಬೆರೆಯುತ್ತೀರಾ?
ಗೆಲುವು, ಸೋಲು ಜನರಿಗೆ ಬಿಟ್ಟಿದ್ದೇನೆ. ಅವರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವೂ ಇದೆ. ಗೆದ್ದರೂ ಸೋತರೂ ನಾನು ಜನರ ಮಧ್ಯೆಯೇ ಇರುತ್ತೇನೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಕೆಲಸ ಮಾಡುತ್ತೇನೆ. ನನ್ನನ್ನು ನಂಬಿದ ಜನರಿಗಾಗಿ ಇಲ್ಲೇ ಇರುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.