ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ಲೋಕಸಭಾ ಚುನಾವಣೆಯ ಹಿನ್ನೋಟ: ಹೊಸಕೋಟೆ ಗರಿಷ್ಠ; ಯಲಹಂಕದಲ್ಲಿ ಕನಿಷ್ಠ

2019ರ ಲೋಕಸಭಾ ಚುನಾವಣೆಯ ಹಿನ್ನೋಟ; ಶೇ 76.78ರಷ್ಟು ಮತದಾನ
Published 6 ಏಪ್ರಿಲ್ 2024, 5:19 IST
Last Updated 6 ಏಪ್ರಿಲ್ 2024, 5:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಟ್ಟು ಶೇ 76.78ರಷ್ಟು ಮತದಾನವಾಗಿತ್ತು. ಈ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದ ಇತಿಹಾಸದಲ್ಲಿಯೇ 2019ರ ಚುನಾವಣೆಯಲ್ಲಿ ಅತಿ ಹೆಚ್ಚು  ಮತದಾನವಾಗಿದೆ. ಒಟ್ಟು 13,88,474 ಮತದಾರರು ಹಕ್ಕು ಚಲಾಯಿಸಿದ್ದರು.

2019ರ ಚುನಾವಣೆಯಲ್ಲಿ ಎಂಟೂ ವಿಧಾನಸಭಾ ಕ್ಷೇತ್ರಗಳ ಮತದಾನದ ಪ್ರಮಾಣ ನೋಡಿದರೆ ಹೆಚ್ಚಿನ ಮತದಾರರನ್ನು ಹೊಂದಿದ್ದ ಯಲಹಂಕ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾರರು ಹಕ್ಕು ಚಲಾಯಿಸಿದ್ದರು.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿನ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಶೇ 61.74ರಷ್ಟು ಮತದಾನವಾಗಿತ್ತು. ಇಡೀ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಿಮೆ ಮತದಾನವಾದ ಕ್ಷೇತ್ರ ಇದಾಗಿದೆ. ಬಿಜೆಪಿ ಅಭ್ಯರ್ಥಿಯೂ ಆಗಿದ್ದ ಬಿ.ಎನ್.ಬಚ್ಚೇಗೌಡ ಅವರ ಸ್ವಕ್ಷೇತ್ರ ಹೊಸಕೋಟೆಯಲ್ಲಿ  ಶೇ 88ರಷ್ಟು ಮತದಾನವಾಗಿತ್ತು. ಈ ಮೂಲಕ ಗರಿಷ್ಠ ಪ್ರಮಾಣದಲ್ಲಿ ಮತದಾನವಾದ ಕ್ಷೇತ್ರ ಹೊಸಕೋಟೆ ಎನಿಸಿತ್ತು.

2019ರ ಚುನಾವಣೆ ಸಮಯದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಲಹಂಕದಲ್ಲಿ ಮಾತ್ರ ಬಿಜೆಪಿ ಶಾಸಕರು ಇದ್ದರು. ಉಳಿದಂತೆ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಹೊಸಕೋಟೆ, ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು. ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಬಿಜೆಪಿ ಉಸ್ತುವಾರಿವಹಿಸಿಕೊಂಡಿದ್ದರು.  

ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಅಭ್ಯರ್ಥಿಗಿಂತ ಬಿಜೆಪಿಯು ಮುನ್ನಡೆ ಪಡೆದಿತ್ತು. 

2024ರ ಲೋಕಸಭೆ ಚುನಾವಣೆಯ ಈ ಹೊತ್ತಿನಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ 2.10 ಲಕ್ಷ, ಬಾಗೇಪಲ್ಲಿ 2.22 ಲಕ್ಷ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2.9 ಲಕ್ಷ, ಯಲಹಂಕದಲ್ಲಿ 4.50 ಲಕ್ಷ, ಹೊಸಕೋಟೆಯಲ್ಲಿ 2.37 ಲಕ್ಷ, ದೇವನಹಳ್ಳಿಯಲ್ಲಿ 2.15 ಲಕ್ಷ, ದೊಡ್ಡಬಳ್ಳಾಪುರದಲ್ಲಿ 2.18 ಲಕ್ಷ ಮತ್ತು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 2.20 ಲಕ್ಷ ಸೇರಿ 19.66 ಲಕ್ಷ ಮತದಾರರು ಇದ್ದಾರೆ. 

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಮತದಾನಕ್ಕೆ ನಾಗರಿಕರು ಮುಂದಾಗುವುದಿಲ್ಲ ಎನ್ನುವ ಮಾತುಗಳು ಇವೆ. ಆ ಕಾರಣದಿಂದ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿಯೇ ಮತದಾನ ಪ್ರಮಾಣ ಉತ್ತಮವಾಗಿ ಇರುತ್ತದೆ. 

ಹೀಗೆ ಈ ಬಾರಿಯ ಮತದಾನದ ಪ್ರಮಾಣವು ಸಹ ಸೋಲು ಗೆಲುವಿನ ಚರ್ಚೆಗೆ ಕಾರಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT