ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ 50 ಸ್ಥಾನಗಳನ್ನೂ ಗೆಲ್ಲುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

Published 11 ಮೇ 2024, 16:05 IST
Last Updated 11 ಮೇ 2024, 16:05 IST
ಅಕ್ಷರ ಗಾತ್ರ

ಫುಲ್ಬನಿ/ಬೊಲಂಗಿರ್ (ಒಡಿಶಾ) (ಪಿಟಿಐ): ಕಾಂಗ್ರೆಸ್ ಪಕ್ಷವು ಕನಿಷ್ಠ 50 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಮತ್ತು ವಿರೋಧ ಪಕ್ಷದ ಸ್ಥಾನಮಾನ ಪಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಭಿಪ್ರಾಯಪಟ್ಟರು.

ಒಡಿಶಾದ ಕಂಧಮಾಲ್‌ನಲ್ಲಿ ಪ್ರಚಾರ ನಡೆಸಿದ ಅವರು, ‘ಕಾಂಗ್ರೆಸ್‌ನ ‘ಶಹಜಾದ’ 2014ರಿಂದ ಹೇಳಿದ್ದನ್ನೇ ಹೇಳುತ್ತಿದ್ದಾರೆ. ಎನ್‌ಡಿಎ ಈ ಬಾರಿ 400ಕ್ಕೂ ಹೆಚ್ಚು ಸ್ಥಾನ ಪಡೆದು ದಾಖಲೆ ನಿರ್ಮಿಸಲಿದೆ’ ಎಂದು ಪ್ರತಿಪಾದಿಸಿದರು.  

‘ಪಾಕಿಸ್ತಾನವು ಕೂಡ ಅಣ್ವಸ್ತ್ರ ಹೊಂದಿದ್ದು, ಯಾವುದೇ ಕ್ಷಣದಲ್ಲಿ ಅವನ್ನು ಬಳಸಬಹುದು ಎಂದು ಪದೇ ಪದೇ ಹೇಳುವ ಮೂಲಕ ಕಾಂಗ್ರೆಸ್ ಪಕ್ಷವು ಜನರಲ್ಲಿ ಭಯ ಹರಡುತ್ತಿದೆ’ ಎಂದು ಆರೋಪಿಸಿದರು. ‘ಜೀವಂತ ಶವಗಳಾಗಿರುವ ಈ ಮಂದಿ ದೇಶದ ಚೈತನ್ಯವನ್ನು ಕೊಲ್ಲುತ್ತಿದ್ದಾರೆ’ ಎಂದು ಟೀಕಿಸಿದರು.

‘ಪಾಕಿಸ್ತಾನವು ಈಗ ತನ್ನ ಬಳಿ ಇರುವ ಬಾಂಬ್‌ಗಳನ್ನು ಮಾರಲು ಪ್ರಯತ್ನಿಸುತ್ತಿದ್ದು, ಕೊಳ್ಳುವವರಿಗಾಗಿ ಹುಡುಕುತ್ತಿದೆ. ಆದರೆ, ಅವು ಕಳಪೆ ಗುಣಮಟ್ಟದವರಾಗಿರುವುದರಿಂದ ಯಾರೂ ಕೊಳ್ಳಲು ಮುಂದೆ ಬರುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.  

Cut-off box - ‘ಮೋದಿ ಸರ್ಕಾರ ರಚಿಸುವುದು ಕಷ್ಟ’ ಪಟ್ನಾ/ಸಮಸ್ತಿಪುರ (ಪಿಟಿಐ): ಪ್ರಧಾನಿ ಮೋದಿ ಅವರು ಮುಂದೆ ಸರ್ಕಾರ ರಚನೆ ಮಾಡುವುದು ತುಂಬಾ ಕಷ್ಟವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಅಭಿಪ್ರಾಯಪಟ್ಟರು. ಪಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ‘ಮೋದಿ ತೆಲಂಗಾಣದಲ್ಲಿ ಪ್ರಚಾರ ಮಾಡುತ್ತಿದ್ದಾಗ ನಾನು ನೆರೆಯ ಆಂಧ್ರಪ್ರದೇಶದಲ್ಲಿ ರ್‍ಯಾಲಿ ನಡೆಸುತ್ತಿದ್ದೆ. ಅವರ ಮಾತುಗಳಲ್ಲಿ ಈ ಹಿಂದೆ ಕಾಣುತ್ತಿದ್ದ ಬಿರುಸು ಮತ್ತು ಉತ್ಸಾಹ ಈಗ ಕಾಣುತ್ತಿಲ್ಲ. ಅವರು ಸರ್ಕಾರ ರಚಿಸುವುದು ಕಷ್ಟವಿದೆ ಎನ್ನುವುದನ್ನು ಮೂರು ಹಂತಗಳ ಚುನಾವಣೆಯ ನಂತರ ನಾನು ಸುಲಭವಾಗಿ ಹೇಳಬಲ್ಲೆ. ಹೀಗಾಗಿಯೇ ಅವರು ತಮ್ಮ ಸಾಧನೆಗಳ ಬದಲು ಹಿಂದೂ– ಮುಸ್ಲಿಂ ವಿಭಜನೆಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು. ಬಿಹಾರದ ಸಮಸ್ತಿಪುರದಲ್ಲಿ ಮಾತನಾಡಿದ ಖರ್ಗೆ ‘ನಾವು ಅಂಬಾನಿ–ಅದಾನಿ ಬಗ್ಗೆ ಮೌನ ವಹಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ನಾವು ಮೌನವಾಗಿಲ್ಲ. ಅವರ ಆರೋಪದ ಪ್ರಕಾರ ನಾವು ಉದ್ಯಮಿಗಳಿಂದ ಕಪ್ಪು ಹಣ ಸ್ವೀಕರಿಸಿದ್ದರೆ ಸರ್ಕಾರ ಯಾಕೆ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT