ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು... ಮತ ರಾಜಕೀಯದ ಘಾಟು!

Published 21 ಮಾರ್ಚ್ 2024, 22:49 IST
Last Updated 21 ಮಾರ್ಚ್ 2024, 22:49 IST
ಅಕ್ಷರ ಗಾತ್ರ

ತಮಿಳುನಾಡಿನ ಡಿಎಂಕೆ ಪಕ್ಷವು ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆಯನ್ನು ತಡೆಯುವುದಾಗಿ ಭರವಸೆ ನೀಡಿದೆ. ಡಿಎಂಕೆಯ ಈ ಭರವಸೆಗೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೈತ್ರಿ ಮುಖ್ಯವೋ, ರಾಜ್ಯದ ಹಿತ ಮುಖ್ಯವೋ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌. ಅಶೋಕ, ಕಾಂಗ್ರೆಸ್‌ ಪಕ್ಷವನ್ನು ಕೆಣಕಿದರೆ, ‘ನಾನು ಜಲಸಂಪನ್ಮೂಲ ಖಾತೆ ವಹಿಸಿಕೊಂಡಿದ್ದೇ ಮೇಕೆದಾಟು ಅಣೆಕಟ್ಟು ಕಟ್ಟಲು. ಯಾರ ವಿರೋಧಕ್ಕೂ ಬಗ್ಗುವುದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪ್ರತ್ಯುತ್ತರ ನೀಡಿದ್ದಾರೆ 

ಮೇಕೆದಾಟು ಯೋಜನೆ ಸ್ಥಗಿತ: ಡಿಎಂಕೆ ಪ್ರಣಾಳಿಕೆ ಭರವಸೆ

ಚೆನ್ನೈ: ಕರ್ನಾಟಕದ ಮಹತ್ವಕಾಂಕ್ಷೆಯ, ಅದರಲ್ಲೂ ಬೆಂಗಳೂರಿನ ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ‘ಇಂಡಿಯಾ’ ಮೈತ್ರಿಕೂಟದ ಡಿಎಂಕೆ ಪಕ್ಷವು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೃಷ್ಣರಾಜಸಾಗರ (ಕೆಆರ್‌ಎಸ್‌) ಅಣೆಕಟ್ಟುಗೆ ಪರ್ಯಾಯವಾಗಿ ಮತ್ತೊಂದು ಅಣೆಕಟ್ಟು ನಿರ್ಮಾಣದ ಪ್ರಸ್ತಾಪ ದಶಕಗಳ ಹಿಂದಿನದು. ಕನಕಪುರ ತಾಲ್ಲೂಕಿನ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸಜ್ಜಾಗಿದೆ.  ಕೇಂದ್ರ ಜಲ ಆಯೋಗಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಂತೆ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸುಮಾರು ₹5,900 ಕೋಟಿಗೂ ಹೆಚ್ಚು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಸುಮಾರು 66 ಟಿಎಂಸಿ ಅಡಿ ನೀರು ಸಂಗ್ರಹಿಸುವ ಗುರಿ ಇದೆ.

ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ ಕೂಡ ನಡೆಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡುವುದಾಗಿಯೂ ಪಕ್ಷದ ನಾಯಕರು ವಾಗ್ದಾನ ಮಾಡಿದ್ದರು. 2022–23ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ₹1,000 ಕೋಟಿ ಅನುದಾನ ಮೀಸಲಿಡಲಾಗಿತ್ತು. ಕೇಂದ್ರದ ಅನುಮತಿ ಸಿಗದೆ ಯೋಜನೆ ನನೆಗುದಿಗೆ ಬಿದ್ದಿದೆ.

‘ಅಣೆಕಟ್ಟು ಕಟ್ಟಲೆಂದೇ ಜಲಸಂಪನ್ಮೂಲ ಇಲಾಖೆ ವಹಿಸಿಕೊಂಡಿದ್ದೇನೆ’

ತಮಿಳುನಾಡು ಏನಾದರೂ ಮಾಡಿಕೊಳ್ಳಲಿ. ಮೇಕೆದಾಟು ಅಣೆಕಟ್ಟು ಕಟ್ಟಲೆಂದೇ ನಾನು ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಹೇಳಿರುವ ಬಗ್ಗೆ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ‘ಅವರ ಹೋರಾಟ ಅವರು ಮಾಡಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಅರಿವಿದೆ. ಅವರು ನಮಗೆ ನ್ಯಾಯ ಕೊಡಲೇಬೇಕು’ ಎಂದರು.

‘ಮೇಕೆದಾಟು ವಿಚಾರದಲ್ಲಿ ಕೋರ್ಟ್​ನಲ್ಲೂ ನಮಗೆ ನ್ಯಾಯ ಸಿಗುತ್ತದೆ.‌ ಡಿಎಂಕೆ ಪ್ರಣಾಳಿಕೆ ‘ಇಂಡಿಯಾ’ ಮೈತ್ರಿಕೂಟದ ಪ್ರಣಾಳಿಕೆಯಲ್ಲ. ಅದು ಅವರ ಪಕ್ಷದ ಪ್ರಣಾಳಿಕೆ. ಅದು ಅವರ ರಾಜಕೀಯ ಬಯಕೆ ಅಷ್ಟೇ’ ಎಂದರು. ಮೇಕೆದಾಟು ಯೋಜನೆ ಕರ್ನಾಟಕಕ್ಕೆ ಮಾತ್ರವಲ್ಲ. ಎರಡೂ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಇದ್ದಾರೆ. ಈ ಯೋಜನೆಯಿಂದ ಇಡೀ ದೇಶದ ಜನರಿಗೆ ಉಪಯೋಗವಾಗುತ್ತದೆ. ನಮ್ಮ ಸಹೋದರರು ಬೆಂಗಳೂರಿನಲ್ಲೂ ಇದ್ದಾರೆ. ಅವರಿಗೂ ಒಳ್ಳೆಯದು ಆಗಲಿ ಎಂದು ಮೇಕೆದಾಟು ಯೋಜನೆಯ ಪರವಾಗಿ ತಮಿಳುನಾಡು ಮಾತನಾಡುವ ಒಳ್ಳೆಯ ಕಾಲ ಬರಲಿದೆ’ ಎಂದರು.

ಸ್ಟಾಲಿನ್‌ ನಡೆಗೆ ಎಎಪಿ ಖಂಡನೆ

ಇಂಡಿಯಾ ಒಕ್ಕೂಟದ ಮಿತ್ರಪಕ್ಷ ಡಿಎಂಕೆ ರಾಜ್ಯದ ಆಶಯಕ್ಕೆ ವಿರುದ್ಧವಾಗಿ ಮೇಕೆದಾಟು ಯೋಜನೆಗೆ ತೊಡಕು ಮಾಡುತ್ತಿರುವುದು ದುರದೃಷ್ಟಕರ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಂದ ಇಂತಹ ನಡೆ ನಿರೀಕ್ಷಿಸಿರಲಿಲ್ಲ. ಮೇಕೆದಾಟು ಪ್ರಯೋಜನಗಳ ಕುರಿತು ‘ಇಂಡಿಯಾ’ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಡಿಎಂಕೆಗೆ ಕಾಂಗ್ರೆಸ್‌ ಮನವರಿಕೆ ಮಾಡಿಕೊಡಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

‘ಡಿಎಂಕೆ ಕಚೇರಿ ಮುಂದೆ ಸಿಎಂ, ಡಿಸಿಎಂ ಧರಣಿ ಮಾಡಲಿ’

ಬೆಂಗಳೂರು: ‘ಮೇಕೆದಾಟು ಯೋಜನೆ ಜಾರಿಯನ್ನು ತಡೆಯುವುದಾಗಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮ್ಮ ನಿಲುವು ಬಹಿರಂಗಪಡಿಸಬೇಕು. ಮೈತ್ರಿ ಮುಖ್ಯವೋ ಅಥವಾ ರಾಜ್ಯದ ಹಿತ ಮುಖ್ಯವೋ ಎಂಬುದನ್ನು ತಿಳಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಮೇಕೆದಾಟು ಯೋಜನೆಗೆ ತಮಿಳುನಾಡಿನ ಅಪ್ಪಣೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದ 135 ಶಾಸಕರೊಂದಿಗೆ ಚೆನ್ನೈನ ಡಿಎಂಕೆ ಕಚೇರಿ ಮುಂದೆ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಮಾಡಲಿ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಕೋವಿಡ್‌ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ‘ನಮ್ಮ ನೀರು ನಮ್ಮ ಹಕ್ಕು’ ಹೆಸರಿನಲ್ಲಿ ಪಾದಯಾತ್ರೆ ಮಾಡಿದ್ದರು. ಆದರೆ, ಇವರ ಮೈತ್ರಿಕೂಟದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ತಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಜಾರಿಯಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಅಂದು ಡಿ.ಕೆ.ಶಿವಕುಮಾರ್ ಅವರು ಮೇಕೆದಾಟುವಿನಲ್ಲಿ ಸ್ನಾನ ಮಾಡಿದ್ದರು. ಆದರೆ ಈಗ ಸ್ನಾನಕ್ಕಲ್ಲ, ಮುಖ ತೊಳೆಯುವುದಕ್ಕೂ ನೀರಿಲ್ಲ’ ಎಂದು ಹೇಳಿದರು.

‘ಬೆಂಗಳೂರಿನ ಜನರು ಕುಡಿಯಲು ನೀರಿಲ್ಲದೆ ವಲಸೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಯನ್ನು ಈವರೆಗೆ ನಾನಂತೂ ನೋಡಿಲ್ಲ. ಕರ್ನಾಟಕ ಕಾಂಗ್ರೆಸ್‌ಗೆ ‘ಇಂಡಿಯಾ’ ಒಕ್ಕೂಟ ಮುಖ್ಯವೋ, ರಾಜ್ಯದ ಹಿತ ಮುಖ್ಯವೋ ಎಂಬುದನ್ನು ಈ ಮೂಲಕ ಸಾಬೀತುಪಡಿಸಬೇಕು. ಮೇಕೆದಾಟು ಬಗ್ಗೆ ನಿಜವಾದ ಕಾಳಜಿ ಇದ್ದರೆ ಮಾತನಾಡಿ’ ಎಂದು ಅಶೋಕ ಸವಾಲು ಹಾಕಿದರು.

‘ಡಿ.ಕೆ.ಶಿವಕುಮಾರ್ ಪಾದಯಾತ್ರೆ ವೇಳೆ ಮೇಕೆದಾಟುವಿನಲ್ಲಿ ತರ್ಪಣ ಬಿಟ್ಟಿದ್ದರು. ಈ ಮೂಲಕ ರಾಜ್ಯದ ಜನರಿಗೆ ಅನ್ಯಾಯದ ತರ್ಪಣ ನೀಡಿದ್ದಾರೆ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಡಿಎಂಕೆ ಪ್ರಣಾಳಿಕೆಯಿಂದ ಮೇಕೆದಾಟಿನ ಅಂಶವನ್ನು ತೆಗೆದುಹಾಕಿಸಲು ಪ್ರಯತ್ನ ಮಾಡಲಿ. ಅಲ್ಲಿಯವರೆಗೆ ಕೇಂದ್ರ ಸರ್ಕಾರದ ಬಗ್ಗೆ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್‌ ನಾಯಕರಿಗೆ ಇಲ್ಲ’ ಎಂದೂ ತಿಳಿಸಿದರು.

‘ಹಿಂದೆ ಮಹದಾಯಿ ನದಿ ನೀರಿನ ವಿವಾದದ ಸಂಬಂಧ ಗೋವಾದಲ್ಲಿ ಸೋನಿಯಾ ಗಾಂಧಿಯವರು ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಡಿಎಂಕೆ ಮೂಲಕ ಈ ಮಾತನ್ನಾಡಿಸಿದ್ದಾರೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ದುರ್ಬಲ ಸಿಎಂ ಇರುವುದರಿಂದಲೇ ಸರ್ಕಾರವೂ ದುರ್ಬಲವಾಗಿದೆ. ಈ ದೌರ್ಬಲ್ಯವನ್ನು ಉಪಯೋಗಿಸಿ ಇಂಡಿಯಾ ಒಕ್ಕೂಟದ ಮುಖ್ಯಪಾಲುದಾರ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯ ಮೂಲಕ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT