ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಾಯ: ಖರ್ಗೆ

Published 29 ಮೇ 2024, 14:40 IST
Last Updated 29 ಮೇ 2024, 14:40 IST
ಅಕ್ಷರ ಗಾತ್ರ

ಬಾಲೇಶ್ವರ (ಒಡಿಶಾ): 'ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಲಿದೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಒಡಿಶಾದ ಬಾಲೇಶ್ವರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

'ಈ ಚುನಾವಣೆಯಲ್ಲಿ ನೀವು ಬಿಜೆಪಿಯನ್ನು ಸೋಲಿಸದಿದ್ದರೆ, ನಿಮ್ಮ ಭವಿಷ್ಯದೊಂದಿಗೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಎರಡಕ್ಕೂ ಅಪಾಯ ಎದುರಾಗಲಿದೆ' ಎಂದು ಹೇಳಿದ್ದಾರೆ.

'ಎಸ್‌‌ಸಿ, ಎಸ್‌ಟಿ ಹಾಗೂ ಒಬಿಸಿಗೆ ನೀಡಿದ ಮೀಸಲಾತಿ ನೀತಿ ಕೂಡ ಅಪಾಯದಲ್ಲಿದೆ' ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

'ಬಿಜೆಪಿ ಸರ್ಕಾರದ ಅವಧಿಯಲ್ಲಿ ಯುವಜನತೆ ಅತಿ ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ. ನಿರುದ್ಯೋಗ ದರ ಗರಿಷ್ಠ ಮಟ್ಟದಲ್ಲಿದ್ದು, ದೇಶದೆಲ್ಲೆಡೆ ಬಿಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ ಪ್ರಧಾನಿ ಮೋದಿ ಈ ಕುರಿತು ತಲೆಕೆಡಿಸಿಕೊಂಡಿಲ್ಲ. ಮತ್ತೆ ಅಧಿಕಾರಕ್ಕೆ ಮರಳುವ ಗುರಿ ಹೊಂದಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

'ರೈತರ ಆದಾಯ ದ್ವಿಗುಣಗೊಳಿಸುವುದು, ಯುವಜನತೆಗೆ ಪ್ರತಿವರ್ಷ ಎರಡು ಕೋಟಿ ಉದ್ಯೋಗಾವಕಾಶ ಮತ್ತು ಕಪ್ಪು ಹಣ ಮರಳಿ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮೆ ಮಾಡುವುದಾಗಿ ಪ್ರಧಾನಿ ಮೋದಿ ವಾಗ್ದಾನ ನೀಡಿದ್ದರು. ಈ ಭರವಸೆಗಳು ಎಲ್ಲಿ' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

'ಮಣಿಪುರದಲ್ಲಿ ಸಂಭವಿಸಿದ್ದ ಜನಾಂಗೀಯ ಹಿಂಸಾಚಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮೋದಿ ವಿಫಲರಾಗಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT