ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಂಜಾಬ್ ಲೋಕಸಭಾ ಚುನಾವಣೆ: ಪ್ರತ್ಯೇಕತಾವಾದಿ ನಾಯಕನ ಅಬ್ಬರ

ಖದೂರ್ ಸಾಹಿಬ್ ಕ್ಷೇತ್ರದಲ್ಲಿ ಅಮೃತ್‌ಪಾಲ್ ಸಿಂಗ್ ಸ್ಪರ್ಧೆ
Published 28 ಮೇ 2024, 23:42 IST
Last Updated 28 ಮೇ 2024, 23:42 IST
ಅಕ್ಷರ ಗಾತ್ರ

ಖದೂರ್ ಸಾಹಿಬ್ (ಚಂಡೀಗಢ): ಗಡಿ ರಾಜ್ಯವಾದ ಪಂಜಾಬ್‌ನ ಜನರಲ್ಲಿ ಪ್ರತ್ಯೇಕತಾವಾದಿ ಭಾವನೆ ಮತ್ತು ಖಲಿಸ್ತಾನಿಗಳ ಪರ ಒಲವು ಇದ್ದು, ಅದು ಸಣ್ಣ ಪ್ರಮಾಣದಲ್ಲಿರಲಿ ಅಥವಾ ದೊಡ್ಡ ಮಟ್ಟದಲ್ಲಿರಲಿ, ಚುನಾವಣಾ ಸಮಯದಲ್ಲಿ ಅದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ.

ಈ ಬಾರಿಯ ಲೋಕಸಭಾ ಚುನಾವಣೆಯ ಕಣದಲ್ಲಿ ಹಲವು ಪ್ರತ್ಯೇಕತಾವಾದಿ ಅಭ್ಯರ್ಥಿಗಳಿದ್ದಾರೆ. ಸದ್ಯ ಅಸ್ಸಾಂನ ದಿಬ್ರುಗಢ ಜೈಲಿನಲ್ಲಿರುವ, ಖದೂರ್ ಸಾಹಿಬ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಪ್ರತ್ಯೇಕತಾವಾದಿ ಚಳವಳಿಯ ನಾಯಕ ಮತ್ತು ಸಿಖ್ ಬೋಧಕ ಅಮೃತ್ ಪಾಲ್ ಸಿಂಗ್ ಅವರ ಸ್ಪರ್ಧೆಯು ಅಪಾರ ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ಇಚ್ಛಾನುಸಾರ ವರ್ತಿಸುವುದಕ್ಕೆ ಖ್ಯಾತಿ ಪಡೆದಿರುವ ಅಮೃತ್‌ಪಾಲ್ ಸಿಂಗ್ ಸಂವಿಧಾನದ ವಿರುದ್ಧ ಮಾತನಾಡುವುದೂ ಇದೆ. ಖಲಿಸ್ತಾನಿ ಹೋರಾಟದ ಪ್ರಮುಖ ನಾಯಕ ಸಿಮ್ರಾನ್‌ಜಿತ್ ಸಿಂಗ್ ಅವರು ಪಂಜಾಬ್‌ನ ಸಂಗ್ರೂರ್ ಕ್ಷೇತ್ರದ ಸಂಸದರಾಗಿದ್ದಾರೆ. 

ಜೂನ್‌ 1ರಂದು ಪಂಜಾಬ್‌ನಲ್ಲಿ ಮತದಾನ ನಡೆಯಲಿದೆ; ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಬಂಡುಕೋರರ ವಿರುದ್ಧ ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆದದ್ದು ಕೂಡ 1984ರ ಜೂನ್ 1ರಂದೇ. ಪಂಜಾಬ್‌ನಲ್ಲಿ ಬಹಳ ಹಿಂದಿನಿಂದಲೂ ತೀವ್ರವಾದಿಗಳು ಪ್ರತ್ಯೇಕತೆಯ ವಿಷಯವನ್ನು ಜೀವಂತವಾಗಿಟ್ಟಿದ್ದರು. ಅಮೃತ್‌ಪಾಲ್ ಸಿಂಗ್ ಅವರ ಪ್ರವೇಶದ ನಂತರ ಪ್ರತ್ಯೇಕತಾವಾದಿ ಹೋರಾಟಕ್ಕೆ ಬಲ ಬಂದಂತಾಗಿದ್ದು, ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸವಾಲು ಎಸೆಯುತ್ತಿದ್ದಾರೆ. ಅವರ ಬ್ಯಾನರ್‌ಗಳು ಕ್ಷೇತ್ರದ ಎಲ್ಲೆಡೆಯೂ ರಾರಾಜಿಸುತ್ತಿವೆ.

ಪಂಜಾಬ್‌ನಲ್ಲಿ ಭಯೋತ್ಪಾದನೆಯ ಕಗ್ಗತ್ತಲ ಕಾಲದಲ್ಲಿ ಖದೂರ್ ಸಾಹಿಬ್ ಬಂಡುಕೋರರ ಪ್ರಮುಖ ನೆಲೆಯಾಗಿತ್ತು. ಇದು ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಭದ್ರಕೋಟೆಯಾಗಿದ್ದು, ಚುನಾವಣೆಯಲ್ಲಿ ದಾಖಲೆಯ ಒಂಬತ್ತು ಬಾರಿ ಗೆಲುವು ಸಾಧಿಸಿದೆ. ಅಮೃತ್‌ಪಾಲ್ ಸಿಂಗ್ ಅವರ ಪ್ರವೇಶವು ಎಸ್‌ಎಡಿಯ ಮತಬ್ಯಾಂಕ್‌ ಅನ್ನು ಮುಕ್ಕಾಗಿಸುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಬಂಧನಕ್ಕೊಳಗಾಗಿರುವ ಸಿಂಗ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜೂನ್ 4ರ ಫಲಿತಾಂಶ ಪಂಜಾಬ್‌ಗೆ ಅಚ್ಚರಿ ಉಂಟುಮಾಡಲಿದೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

1995ರಲ್ಲಿ ಅಪಹರಣಕ್ಕೊಳಗಾಗಿ, ನಾಪತ್ತೆಯಾದ ಮಾನವ ಹಕ್ಕು ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಪತ್ನಿ ಪರಮ್‌ಜಿತ್ ಕೌರ್ ಖಾಲ್ರಾ ಅವರು 2019ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಆದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಶೇ 20ರಷ್ಟು ಮತಗಳನ್ನು ಪಡೆಯುವ ಮೂಲಕ ಭರವಸೆ ಮೂಡಿಸಿದ್ದರು. 2019ರಲ್ಲಿ ಖದೂರ್ ಸಾಹಿಬ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ನಿವೃತ್ತ ಸೇನಾ ಮುಖ್ಯಸ್ಥ ಜೆ.ಜೆ.ಸಿಂಗ್ ಅವರು ಪರಮ್‌ಜಿತ್ ಕೌರ್ ಅವರಿಗಾಗಿ ಕಣದಿಂದ ಹಿಂದೆ ಸರಿದಿದ್ದರು. ಹಾಲಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯ ಬೆಂಬಲಿಗರನ್ನು ಹೊಂದಿರುವ ಕೌರ್ ಅವರು ಅಮೃತ್ ಪಾಲ್ ಸಿಂಗ್ ಪರವಾಗಿ ಕ್ಷೇತ್ರದಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ.

ತನ್ನ ಪಾರಂಪರಿಕ ಮತಗಳ ಮೇಲೆ ಕಣ್ಣು ನೆಟ್ಟಿರುವ ಎಸ್‌ಎಡಿ, ಪ್ರಬಲ ಅಭ್ಯರ್ಥಿಯಾದ ವಿರ್ಸಾ ಸಿಂಗ್ ವಾಲ್ಟೋಹಾ ಅವರನ್ನು ಕಣಕ್ಕಿಳಿಸಿದೆ. ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಅಮೃತ್‌ಪಾಲ್ ಸಿಂಗ್ ವಿರುದ್ಧ ಸರ್ವಶಕ್ತಿಯನ್ನೂ ಬಳಸಿ ಎಸ್‌ಎಡಿ ಕಾದಾಡುತ್ತಿದೆ. ಖದೂರ್ ಸಾಹಿಬ್ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಸಿಮ್ರಾನ್‌ಜಿತ್ ಸಿಂಗ್ ಮಾನ್ ನೇತೃತ್ವದ ಶಿರೋಮಣಿ ಅಕಾಲಿ ದಳ (ಅಮೃತಸರ) ನಂತರ ಅಮೃತ್ ಪಾಲ್ ಅವರನ್ನು ಬೆಂಬಲಿಸಿ ಕಣದಿಂದ ಹಿಂದೆ ಸರಿಯಿತು. 

ಅಮೃತ್ ಪಾಲ್ ಸಿಂಗ್ ಅವರು ಪರಮ್‌ಜಿತ್ ಕೌರ್ ಅವರ ಶೇ 20ರಷ್ಟು ಮತಗಳ ಜತೆಗೆ ತಮ್ಮ ಪ್ರತ್ಯೇಕತಾವಾದಿ ಭಾವನೆಗಳೊಂದಿಗೆ ಎಸ್‌ಎಡಿಯ ಶೇ 30ರಷ್ಟು ಮತಗಳಿಗೂ ಕನ್ನ ಹಾಕುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಬಿಜೆಪಿ ಅಭ್ಯರ್ಥಿಯಾಗಿ ಮನ್‌ಜಿತ್ ಸಿಂಗ್ ಮನ್ನಾ, ಎಎಪಿ ಅಭ್ಯರ್ಥಿಯಾಗಿ ಮೂರು ಬಾರಿ ಶಾಸಕರಾಗಿದ್ದ ಲಾಲ್‌ಜಿತ್ ಸಿಂಗ್ ಭುಲ್ಲಾರ್ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕುಲ್‌ಬೀರ್ ಸಿಂಗ್ ಕಣದಲ್ಲಿ ಇದ್ದಾರೆ.

ಯಾರು ಈ ಅಮೃತ್ ಪಾಲ್ ಸಿಂಗ್?

‘ವಾರಿಸ್ ಪಂಜಾಬ್ ಡೇ’ ಮುಖ್ಯಸ್ಥರಾಗಿರುವ ಅಮೃತ್ ಪಾಲ್ ಸಿಂಗ್ ಅವರನ್ನು ಸುದೀರ್ಘ ಕಾಲದ ಹುಡುಕಾಟದ ನಂತರ ಕಳೆದ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಆರೋಪ ಹೊರಿಸಲಾಗಿದೆ. ಅಮೃತ್ ಖಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಮಹಾ ಅಭಿಮಾನಿ. ದುಬೈನಲ್ಲಿದ್ದ ಅವರು ಭಾರತಕ್ಕೆ ವಾಪಸ್ ಬಂದ ನಂತರ ಸಿಖ್ಖರ ಪರವಾಗಿ ಹೋರಾಟ ನಡೆಸತೊಡಗಿದ್ದರು. ಉಗ್ರ ಭಾಷಣಗಳಿಗೆ ಹೆಸರಾಗಿರುವ ಇವರು ಕಾನೂನು ಸುವ್ಯವಸ್ಥೆಗೆ ಸವಾಲು ಎಸೆದಿದ್ದರು. ಕಳೆದ ವರ್ಷದ ಫೆಬ್ರುವರಿಯಲ್ಲಿ ಇವರ ಬೆಂಬಲಿಗನೊಬ್ಬನನ್ನು ಅಮೃತಸರದ ಪೊಲೀಸರು ಬಂಧಿಸಿದ್ದರು. ಆತನನ್ನು ಬಿಡಿಸಲು ಕತ್ತಿ ಹಾಗೂ ಬಂದೂಕುಗಳನ್ನು ಹೊಂದಿದ್ದ ಬೆಂಬಲಿಗರೊಂದಿಗೆ ಅಮೃತ್ ಪಾಲ್ ಸಿಂಗ್ ಪೊಲೀಸ್ ಠಾಣೆಯ ಮೇಲೆ ‌ದಾಳಿ ಮಾಡಿದ್ದರು.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT