ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸುಂಧರಾಗೆ ಎಲ್ಲ ಸ್ಥಾನ ಗೆಲ್ಲುವ ಛಲ

ರಾಜಸ್ತಾನ: ಕಳೆದು ಹೋದ ನೆಲೆ ಮರಳಿ ಪಡೆಯಲು ಕಾಂಗ್ರೆಸ್‌ ಹರಸಾಹಸ
Last Updated 14 ಏಪ್ರಿಲ್ 2014, 19:53 IST
ಅಕ್ಷರ ಗಾತ್ರ

ಜೈಪುರ: ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಲು 272ಕ್ಕೂ ಹೆಚ್ಚಿನ ಸ್ಥಾನ ಗಳಿಸುವಲ್ಲಿ ಮಹತ್ವದ ಕೊಡುಗೆ ನೀಡುವ ನಿರೀಕ್ಷೆ ಇರುವ ಬಿಜೆಪಿ ಆಡಳಿತದ ಐದು ರಾಜ್ಯಗಳಲ್ಲಿ ರಾಜಸ್ತಾನವೂ ಒಂದು.

ಸುಮಾರು ನಾಲ್ಕು ತಿಂಗಳ ಹಿಂದೆ ವಿಧಾನಸಭೆಯ 200ರಲ್ಲಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ನಾಲ್ಕನೇ ಮೂರಕ್ಕೂ ಹೆಚ್ಚಿನ ಬಹುಮತದಿಂದ ವಸುಂಧರಾ ರಾಜೆ ರಾಜಸ್ತಾನದ ಮುಖ್ಯಮಂತ್ರಿ ಯಾಗಿದ್ದಾರೆ. ಈ ಗೆಲುವಿನಿಂದ ಉತ್ತೇಜಿತರಾಗಿ ಇಲ್ಲಿನ ಎಲ್ಲ 25 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ.

ಮರುಭೂಮಿ ರಾಜ್ಯ ರಾಜಸ್ತಾನದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಏಪ್ರಿಲ್‌ 17ರಂದು ಮೊದಲ ಹಂತದ ಮತದಾನ ನಡೆಯಲಿದೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿಗೆ ಯುಪಿಎ–2 ಮತ್ತು ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯಗಳೆರಡೂ ಕಾರಣ. ಬೆಲೆ ಏರಿಕೆ, ಹಿರಿಯ ನಾಯಕರ ಒಳಜಗಳ ಮತ್ತು ಕಾಂಗ್ರೆಸ್‌ನ ನಾಯಕರು ಮತ್ತು ಸಚಿವರು ಮಹಿಳೆಯರ ಮೇಲೆ ನಡೆಸಿದ ಹಲ್ಲೆ ಪ್ರಕರಣಗಳು ಕಾಂಗ್ರೆಸ್‌ ಮೇಲೆ ಮತದಾರರಿಗೆ ಸಿಟ್ಟು ತರಿಸಿತ್ತು.

ಕಾಂಗ್ರೆಸ್‌ ವಿರುದ್ಧ ಜನರಲ್ಲಿ ಯಾವ ಪ್ರಮಾಣದಲ್ಲಿ ಸಿಟ್ಟಿತ್ತೆಂದರೆ ಗೆಹ್ಲೋಟ್‌ ಸರ್ಕಾರ ಜಾರಿಗೆ ತಂದ ಬಡವರಿಗೆ ಉಚಿತ ಔಷಧ ಮತ್ತು ಹಿರಿಯ ನಾಗರಿಕರಿಗೆ ಪಿಂಚಣಿಯಂತಹ ಪರಿಣಾಮಕಾರಿ ಯೋಜನೆಗಳನ್ನೂ ಜನರು ನಿರ್ಲಕ್ಷಿಸಿದರು.

ಕೇಂದ್ರ ಸಚಿವ ಸಚಿನ್‌ ಪೈಲಟ್‌ ಪ್ರತಿನಿಧಿಸುತ್ತಿರುವ ಅಜ್ಮೀರ್‌ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಸೋತು ಹೋಗಿದೆ. ಅಲ್ಪಸಂಖ್ಯಾತರೇ ಬಹುಸಂಖ್ಯೆಯಲ್ಲಿರುವ ಪುಷ್ಕರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನಸೀಮ್‌ ಅಕ್ತರ್‌ ಅವರು ಬಿಜೆಪಿಯ ಸುರೇಶ್‌ ಕುಮಾರ್‌ ರಾವತ್‌ ವಿರುದ್ಧ 40,000 ಮತಗಳ ಅಂತರದಿಂದ ಸೋತಿರುವುದು ಕಾಂಗ್ರೆಸ್‌ಗೆ ಆಘಾತ ಉಂಟು  ಮಾಡಿರುವ ಅಂಶ.

ಭರತ್‌ಪುರ ಮತ್ತು ಇತರ ಪ್ರದೇಶಗಳಲ್ಲಿ ಕೋಮು ಗಲಭೆ ನಿಯಂತ್ರಿಸಲು ಗೆಹ್ಲೋಟ್‌ ಸರ್ಕಾರ ವಿಫಲವಾಗಿದ್ದರಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ದೊರೆತಿವೆ. ಆದರೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಅದೇ ರೀತಿಯ ಬೆಂಬಲ ಈ ಬಾರಿ ದೊರೆಯುವ ಸಾಧ್ಯತೆ ಕಡಿಮೆ.

ಕಳೆದ 16 ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಬಂದರೆ ಮತ್ತೊಮ್ಮೆ ಬಿಜೆಪಿ ಹೆಚ್ಚಿನ ಕಡೆ ಜಯಗಳಿಸುತ್ತಿದೆ. 2009ರಲ್ಲಿ ಬಿಜೆಪಿ ಅತ್ಯಂತ ಕಡಿಮೆ ಅಂದರೆ ನಾಲ್ಕು ಸ್ಥಾನಗಳನ್ನಷ್ಟೇ ಗೆದ್ದಿತ್ತು. ಕಾಂಗ್ರೆಸ್‌ 20 ಸ್ಥಾನಗಳನ್ನು ಗೆದ್ದು ಬೀಗಿತ್ತು.

ಸಮೀಕ್ಷೆಗಳಲ್ಲಿ ಬಿಜೆಪಿ ಮುಂದೆ: ಮೋದಿ ಜನಪ್ರಿಯತೆ­ಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.

‌ಎನ್‌ಡಿಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ 19 ಸ್ಥಾನ ದೊರೆಯಬಹುದು ಎಂದು ಹೇಳಲಾಗಿದೆ. ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿಯೂ ಇಂತಹುದೇ ಫಲಿತಾಂಶ ದೊರೆತಿದೆ ಎಂದು ನಾಯಕರೊಬ್ಬರು ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಇಲ್ಲಿ ಹೆಚ್ಚಿನ ಆತ್ಮವಿಶ್ವಾಸ ಇಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡ ಬೆಂಬಲ ನೆಲೆಯನ್ನು ಮರಳಿ ಪಡೆಯುವುದು ಕಾಂಗ್ರೆಸ್‌ ಮುಂದಿರುವ ದೊಡ್ಡ ಸವಾಲು. ರಾಜ್ಯದ ವಿವಿಧ ಪ್ರದೇಶಗಳು ಮತ್ತು ಜಾತಿಗಳ ನಡುವೆ ಕಾಂಗ್ರೆಸ್‌ ಹಿಂದೆ ಜನಪ್ರಿಯತೆ ಹೊಂದಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಆರು ಮೀಸಲು ಕ್ಷೇತ್ರಗಳಲ್ಲಿ ಐದನ್ನು ಕಾಂಗ್ರೆಸ್‌ ಗೆದ್ದಿತ್ತು. ಬಿಜೆಪಿಗೆ ಆಗ ದಕ್ಕಿದ್ದು ಒಂದು ಕ್ಷೇತ್ರ ಮಾತ್ರ.

ಜಾಟ್‌–ರಜಪೂತ ಸಂಘರ್ಷ: ರಾಜಸ್ತಾನದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಜಾಟ್‌ ಮತ್ತು ರಜಪೂತ ಸಮುದಾಯಗಳ ನಡುವೆ ಅಧಿಕಾರಕ್ಕೆ ಸಂಘರ್ಷ ಇದೆ. ಈ ಕಾರಣಕ್ಕಾಗಿಯೇ ಗಣನೀಯ ಪ್ರಮಾಣದಲ್ಲಿರುವ ಜಾಟ್‌ ಮತಗಳನ್ನು ಒಲಿಸಿಕೊಳ್ಳಲು ಕಾಂಗ್ರೆಸ್‌ ಮತ್ತು ಬಿಜೆಪಿ ಶ್ರಮಿಸುತ್ತಿವೆ.

ಜಾಟ್‌ ಸಮುದಾಯವನ್ನು ಕೇಂದ್ರದ ‘ಹಿಂದುಳಿದ ವರ್ಗ’ಕ್ಕೆ ಸೇರಿಸಿರುವುದು ನೆರವಾಗಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ಸಿಗಿದೆ. ಆದರೆ ಜಾಟ್‌ ರಾಜ ವಂಶಕ್ಕೆ ಸೇರಿದ ವಸುಂಧರಾ ರಾಜೆ ಜಾಟ್‌ ಸಮುದಾಯದ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಚಾಯ್‌ವಾಲಾ ಆಗಿದ್ದ ಮೋದಿ ಕೂಡ ಗುಜರಾತ್‌ನ ಹಿಂದುಳಿದ ವರ್ಗಕ್ಕೆ ಸೇರಿದವರು ಎಂಬ ಪ್ರಚಾರವನ್ನೂ ಬಿಜೆಪಿ ಮಾಡುತ್ತಿದೆ.

ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ತಾನದ 130ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಾಟ್‌ ಸಮುದಾಯದ ಪ್ರಾಬಲ್ಯ ಇದೆ.

ಬಿಜೆಪಿಯ ಹಿರಿಯ ನಾಯಕ ಜಸ್ವಂತ್‌ ಸಿಂಗ್‌ ಅವರಿಗೆ ಬಾರ್ಮೇರ್‌ ಕ್ಷೇತ್ರದಿಂದ ಟಿಕೆಟ್‌ ನಿರಾಕರಿಸಿರುವುದನ್ನು ಕಾಂಗ್ರೆಸ್‌ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ರಜಪೂತರನ್ನು ಬಿಜೆಪಿಯಲ್ಲಿ ನಿರ್ಲಕ್ಷಿಸಲಾಗುತ್ತಿದೆ ಎಂಬ ಪ್ರಚಾರದಲ್ಲಿ ಕಾಂಗ್ರೆಸ್‌ ತೊಡಗಿದೆ. ಬಾರ್ಮೇರ್‌ನಲ್ಲಿ ಬಿಜೆಪಿ ಜಾಟ್ ಸಮುದಾಯದ ಸೋನಾರಾಮ್‌ ಚೌಧರಿ ಅವರನ್ನು ಕಣಕ್ಕಿಳಿಸಿದೆ. ಅಲ್ಲಿ ಹೊರತುಪಡಿಸಿ ಬೇರೆಲ್ಲೂ ಕಾಂಗ್ರೆಸ್‌ನ ಪ್ರಚಾರದಿಂದ ತೊಂದರೆಯಾಗದು ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿದ್ದಾರೆ.

ರಾಜಕೀಯ ವಿಶ್ಲೇಷಕರ ಪ್ರಕಾರ 12 ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಹೋರಾಟ ಇದೆ. ಬಾರ್ಮೇರ್‌, ಜೈಪುರ ಗ್ರಾಮಾಂತರ, ಜೋಧ್‌ಪುರ, ಅಲ್ವಾರ್‌, ಭರತ್‌ಪುರ, ಜೈಪುರ, ದೌಸ, ಟಂಕ ಸವಾಯ್‌ ಮಾಧೋಪುರ, ಜಾಲೋರ್‌, ನಾಗೌರ್‌, ಝುಂಝುನು ಮತ್ತು ಸಿಕರ್‌ಗಳಲ್ಲಿ  ತೀವ್ರ ಪೈಪೋಟಿ ಕಂಡುಬರಬಹುದು.

ಜಿತೇಂದ್ರ, ಅಜರ್‌, ಜೋಶಿ ಸತ್ವಪರೀಕ್ಷೆ: ದೌಸ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿ ಯಾರೇ ಗೆದ್ದರೂ ನಷ್ಟ ಒಂದೇ ಕುಟುಂಬಕ್ಕೆ. ಕೇಂದ್ರ ಸಚಿವ ನಮೋ ನಾರಾಯಣ ಮೀನಾ ಅವರ ವಿರುದ್ಧ ಬಿಜೆಪಿ ಅವರ ಸಹೋದರ ಎಚ್‌.ಸಿ. ಮೀನಾ ಅವರನ್ನು ಕಣಕ್ಕಿಳಿಸಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಅಲ್ವಾರ್‌ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ಕಣದಲ್ಲಿದ್ದಾರೆ. ಜಿತೇಂದ್ರ, ಚಂದ್ರೇಶ್‌ ಕುಮಾರಿ ಕಟೋಚ್‌, ಇಜಯರಾಜ್‌ ಸಿಂಗ್‌ ಕಣದಲ್ಲಿರುವ ರಾಜ ಕುಟುಂಬದ ಅಭ್ಯರ್ಥಿಗಳು.

ಟಂಕ ಸವಾಯ್‌ ಮಾಧೋಪುರದಲ್ಲಿ ಹೊರಗಿನವರ ನಡುವೆಯೇ ಸ್ಪರ್ಧೆ ಇದೆ. ಕಾಂಗ್ರೆಸ್‌ನಿಂದ ಅಜರುದ್ದೀನ್‌ ಸ್ಪರ್ಧಿಸಿದ್ದರೆ ಬಿಜೆಪಿಯಿಂದ ಸುಖ್‌ಬೀರ್‌ ಸಿಂಗ್‌ ಜಾನ್‌ಪುರಿಯ ಕಣದಲ್ಲಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ನಿಕಟವರ್ತಿ ಸಿ.ಪಿ. ಜೋಶಿ ಅವರು ತಮ್ಮ ಭಿಲ್ವಾರಾ ಕ್ಷೇತ್ರವನ್ನು ಬಿಟ್ಟು ಜೈಪುರ ಗ್ರಾಮಾಂತರಕ್ಕೆ ವರ್ಗಾವಣೆಗೊಂಡಿದ್ದಾರೆ. ಇಲ್ಲಿ ಬಿಜೆಪಿಯಿಂದ ಒಲಿಂಪಿಕ್ ಪದಕ ವಿಜೇತ ರಾಜವರ್ಧನ್‌ಸಿಂಗ್ ರಾಠೋಡ್‌ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT