ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಅಲ್ಲ, ಘಮಂಡಿಯಾ ಮೈತ್ರಿಕೂಟ: ಜೆ.ಪಿ.ನಡ್ಡಾ ವಾಗ್ದಾಳಿ

Published 26 ಏಪ್ರಿಲ್ 2024, 22:45 IST
Last Updated 26 ಏಪ್ರಿಲ್ 2024, 22:45 IST
ಅಕ್ಷರ ಗಾತ್ರ

ಕಲಬುರಗಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಶುಕ್ರವಾರ ಇಲ್ಲಿ ಅದ್ದೂರಿ ರೋಡ್‌ ಶೋ ನಡೆಸಿದರು. ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ರೋಡ್‌ ಶೋ ಕೊನೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ, ಕಾಂಗ್ರೆಸ್‌ ಪಕ್ಷ ವಿರುದ್ಧ ವಾಗ್ದಾಳಿ ನಡೆಸಿದರು.

‘ನೀವು ಮೋದಿ ನೇತೃತ್ವದಲ್ಲಿ ಮಜಬೂತ್‌ (ಬಲಿಷ್ಠ) ಸರ್ಕಾರ ನೋಡಿದ್ದೀರಿ. ಅದೇ ಕಾಂಗ್ರೆಸ್ ಅವಧಿಯಲ್ಲಿ ಮಜಬೂರ್‌ (ಅಸಹಾಯಕ) ಸರ್ಕಾರ ನೋಡಿದ್ದೀರಿ. ಅಸಹಾಯಕ ಸರ್ಕಾರ ಪಾಕಿಸ್ತಾನದ ಎದುರು ಮಂಡಿಯೂರುತ್ತಿತ್ತು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಪ್ರಧಾನಿ ಕಚೇರಿ ಔತಣಕ್ಕೆ ಆಹ್ವಾನಿಸಿ, ಮಾತುಕತೆ ನಡೆಸುತ್ತಿತ್ತು. ಈಗ ಪಾಕಿಸ್ತಾನ ಗಡಿಯಲ್ಲಿ ದಾಳಿ ನಡೆಸಿದರೆ, ಮೋದಿ ನಾಯಕತ್ವದಲ್ಲಿ ದೇಶದ ಸೈನಿಕರು ಪಾಕಿಸ್ತಾನಕ್ಕೇ ನುಗ್ಗಿ ಹೊಡೆಯುವಂಥ ಬಲಿಷ್ಠ ಸರ್ಕಾರವಿದೆ’ ಎಂದು ಪ್ರತಿಪಾದಿಸಿದರು. ‘ಇದು ಬರೀ ಕಲಬುರಗಿಯ ಜಾಧವ ಅವರನ್ನು ಲೋಕಸಭೆ ಕಳಿಸುವ ಚುನಾವಣೆಯಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪ ವನ್ನು ಪೂರ್ಣಗೊಳಿಸುವ ಚುನಾವಣೆಯಾಗಿದೆ’ ಎಂದರು. 

‘ದೇಶದಲ್ಲಿ ಒಂದೆಡೆ ಮೋದಿ ನೇತೃತ್ವದ ಸರ್ಕಾರವಿದೆ. ಮತ್ತೊಂದೆಡೆ ಖರ್ಗೆ ನೇತೃತ್ವದಲ್ಲಿ ನಡೆಯುತ್ತಿರುವ ಪಾರ್ಟಿ ಇದೆ. ‘ಇಂಡಿಯಾ’ ಮೈತ್ರಿಕೂಟವು ‘ಘಮಂಡಿಯಾ’ (ಸೊಕ್ಕಿನ) ಮೈತ್ರಿಕೂಟ, ಇದು ಕುಟುಂಬ ಉಳಿಸಿ ಮೈತ್ರಿಕೂಟವಾಗಿದೆ. ಹಗರಣಗಳನ್ನು ನಡೆಸಿದ ಕುಟುಂಬಗಳ ಪಕ್ಷಗಳ ಮೈತ್ರಿಕೂಟವಾಗಿದೆ. ಎಲ್ಲರೂ ತಮ್ಮ ಕುಟುಂಬಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಮೋದಿ ಭ್ರಷ್ಟಾಚಾರಿಗಳನ್ನು ತೊಲಗಿಸಿ ಎಂದರೆ ಈ ಮೈತ್ರಿಕೂಟ ಭ್ರಷ್ಟಾಚಾರಿಗಳನ್ನು ರಕ್ಷಿಸಿ ಎನ್ನುತ್ತದೆ’ ಎಂದು ಜರಿದರು.

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ, ಪ್ರಮುಖರಾದ ಶಿವರಾಜ ಪಾಟೀಲ ರದ್ದೇವಾಡಗಿ, ಚಂದು ಪಾಟೀಲ, ಬಿ.ಜಿ.ಪಾಟೀಲ, ಶಶೀಲ್ ನಮೋಶಿ, ರಘುನಾಥ‌ರಾವ್ ಮಲ್ಕಾಪುರೆ ವಿಶಾಲ ದರ್ಗಿ ಹಾಗೂ ದತ್ತಾತ್ರೇಯ ಪಾಟೀಲ ರೇವೂರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT