ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರವನ್ನು ಮಾದರಿ ಜಿಲ್ಲೆಯಾಗಿ ಮಾಡುವೆ: ಸೋಮಣ್ಣ

ಬಿಜೆಪಿ ರೈತ ಮೋರ್ಚಾ ಸಮಾವೇಶ, ರೈತರ ಅಭಿವೃದ್ಧಿಗೆ ಮೋದಿ ಸರ್ಕಾರದಿಂದ ಹಲವು ಯೋಜನೆ–ಕಡಾಡಿ
Last Updated 12 ಏಪ್ರಿಲ್ 2023, 6:52 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯಲ್ಲಿ ಹಿಂದುಳಿದಿರಬಹುದು. ಆದರೆ ಸ್ವಾಭಿಮಾನ, ಸಂಸ್ಕಾರದಲ್ಲಿ ಹಿಂದೆ ಬಿದ್ದಿಲ್ಲ. ಮಹದೇಶ್ವರಸ್ವಾಮಿ ಆಶೀರ್ವಾದ ಪಡೆದುಕೊಂಡು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುವುದೇ ನನ್ನ ಗುರಿ’ ಎಂದು ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಮಂಗಳವಾರ ಹೇಳಿದರು.

ನಗರದಲ್ಲಿ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಸ್ವಾಭಿಮಾನಕ್ಕೆ ಈ ಜಿಲ್ಲೆ ಮತ್ತೊಂದು ಹೆಸರು. ಇದರ ಸರ್ವಾಗೀಣ ಅಭಿವೃದ್ಧಿಗೊಳಿಸುವುದು ನಮ್ಮ ಕರ್ತವ್ಯ. 25 ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಇಷ್ಟು ವರ್ಷಗಳಲ್ಲಿ ಆಗದ್ದನ್ನು ಇನ್ನು ಐದು ವರ್ಷಗಳಲ್ಲಿ ಮಾಡಲು ಜಿಲ್ಲೆಯ ಜನರ ಮತ ಮುಖ್ಯವಾಗಿದೆ’ ಎಂದರು.

‘ಜಿಲ್ಲೆಗೆ ಕೆರೆ ತುಂಬಿಸುವ ಯೋಜನೆಯನ್ನು ಪರಿಚಯಿಸಿದ್ದು ಬಿಜೆಪಿ ಸರ್ಕಾರ. ಜಲಮೂಲದಿಂದ ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದು ಹೇಳಿದಾಗ, ಇದು ಆಗದ ಕೆಲಸ ಎಂದು ಹಲವರು ಹೇಳಿದ್ದರು. ಯಡಿಯೂರಪ್ಪ ನೇತೃತ್ವದಲ್ಲಿ 21 ಕೆರೆಗಳಿಗೆ ನೀರು ಹರಿಸಲಾಗಿತ್ತು. ಅದು ಯಶಸ್ವಿಯಾಗಿತ್ತು. ಈಗ ಜಿಲ್ಲೆಯ ಎಲ್ಲ ಕೆರೆಗಳಿಗೆ ₹1490 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಯ ಡಿಪಿಆರ್‌ ಸಿದ್ಧವಾಗಿದೆ’ ಎಂದರು.

‘ರೈತರು ರೈತರಾಗಿಯೇ ಇರಬಾರದು; ಬದಲಿಗೆ ಉದ್ಯಮಿಗಳಾಗಬೇಕು, ಮಾಲೀಕರಾಗಬೇಕು ಎಂಬ ಚಿಂತನೆಗಳಿಂದ ನರೇಂದ್ರ ಮೋದಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆಗೊಳಿಸಿದೆ. ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸೋಮಣ್ಣ ಮನವಿ ಮಾಡಿದರು.

ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ರಾಜೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜಿ. ನಾರಾಯಣ್‌ಪ್ರಸಾದ್, ಕಾಡಾ ಅಧ್ಯಕ್ಷ ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಮುಖಂಡರಾದ ಕೆ.ಆರ್.ಮಲ್ಲಿಕಾರ್ಜುನಪ್ಪ, ಎಂ. ರಾಮಚಂದ್ರ, ಜಿ. ನಾಗಶ್ರೀಪ್ರತಾಪ್, ಡಾ.ಎ.ಆರ್.ಬಾಬು, ಸುಂದರ್, ಬಸವಣ್ಣ, ಮಂಗಲ ಶಿವಕುಮಾರ್, ಹನುಮಂತಶೆಟ್ಟಿ, ಆಲೂರು ನಟರಾಜು, ಅರಕಲವಾಡಿ ನಾಗೇಂದ್ರ, ಯು.ಎಂ.ಪ್ರಭುಸ್ವಾಮಿ ಇತರರು ಇದ್ದರು.

ಸರ್ಕಾರದ ಯೋಜನೆ ತಿಳಿಸಿ: ಕಡಾಡಿ

ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ತನ್ನ ಆಡಳಿತದಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಅವರ ಕಣ್ಣಿರನ್ನು ಒರೆಸುವ ಕೆಲಸ ಮಾಡಲಿಲ್ಲ. ಪ್ರಧಾನಿ ಮೋದಿ ಸರ್ಕಾರ ಬಂದ ನಂತರ ರೈತರ ಕಷ್ಟಗಳಿಗೆ ಸ್ಪಂದಿಸುವ ಯೋಜನೆಗಳನ್ನು ಜಾರಿಗೆ ಗೊಳಿಸಿದ್ದರು. ಸ್ವಾಮಿನಾಥನ್‌ ಸಮಿತಿ ವರದಿ ಜಾರಿಗೆ ಕಾಂಗ್ರೆಸ್‌ ಕ್ರಮ ಕೈಗೊಂಡಿರಲಿಲ್ಲ. ಮೋದಿ ಸರ್ಕಾರವು ವರದಿ ಆಧಾರದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು, , ಆದಾಯವನ್ನು ದುಪ್ಪಟ್ಟುಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದರು.

‘ರೈತರು ಸೋಮಾರಿಯಾಗಿ ಮನೆಯಲ್ಲೇ ಮಲಗಿದ್ದರೆ ಆದಾಯ ದುಪ್ಪಟ್ಟು ಆಗದು. ಮೋದಿ ಸರ್ಕಾರದ ಯೋಜನೆಗಳ ಸೌಲಭ್ಯ ಬಳಸಿಕೊಂಡರೆ ಖಂಡಿತವಾಗಿಯೂ ಆದಾಯ ದ್ವಿಗುಣ ಗೊಳ್ಳುತ್ತದೆ ಎಂದರು.

‘ಮೊದಲು ರೈತರು ಉತ್ಪನ್ನಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶ ಇತ್ತು. ಈಗ ಆನ್‌ಲೈನ್‌ನಲ್ಲೂ ಮಾರಾಟಕ್ಕೆ ಅವಕಾಶ ಇದೆ. 135 ಕಿಸಾನ್‌ ರೈಲು ಆರಂಭಿಸಲಾಗಿದೆ. 58 ವಿಮಾನ ನಿಲ್ದಾಣಗಳಲ್ಲಿ ಕಿಸಾನ್‌ ಉಡಾನ್‌ ಯೋಜನೆ, ಪ್ರಧಾನಮಂತ್ರಿ ಕೃಷಿ ಸಮ್ಮಾನ್‌, ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಕೃಷಿ ಮನ್‌ ಧನ್‌ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತ ಒಬ್ಬ ವ್ಯಾಪಾರಿಯಾಗಬೇಕು, ಉದ್ಯಮಿಯಾಗಬೇಕು, ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಬೇಕು ಎಂಬ ಉದ್ದೇಶದಿಂದ ಹಲವು ಸಬ್ಸಿಡಿಗಳನ್ನು ನೀಡುತ್ತಿದೆ. ಈ ಎಲ್ಲ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಪಕ್ಷದ ಕಾರ್ಯರ್ತರು ಮಾಡಬೇಕು’ ಎಂದರು.

ನಾಲ್ಕೂ ಕ್ಷೇತ್ರಗಳಲ್ಲಿ ಸುತ್ತಾಡಿದ್ದೇನೆ. ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ನಾಲ್ಕೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ
ಎಂ.ಶಿವಣ್ಣ (ಕೋಟೆ), ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT