ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುದ್ವೇಷ ಹೆಚ್ಚಾಗಲು ಬಿಜೆಪಿ, ಕಾಂಗ್ರೆಸ್ ಕಾರಣ: ಮಾಯಾವತಿ

ಕಳ್ಳದಾರಿಯಿಂದ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ: ಮಾಯಾವತಿ
Published 5 ಮೇ 2023, 15:45 IST
Last Updated 5 ಮೇ 2023, 15:45 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಕೋಮುಗಲಭೆ ಹೆಚ್ಚಾಗಿದೆ. ಧಾರ್ಮಿಕ ಭಾವನೆ ಕೆಡಿಸುವುದಷ್ಟೇ ಬಿಜೆಪಿಯ ಕಾರ್ಯಸೂಚಿ. ಕೋಮುದ್ವೇಷ ಹೆಚ್ಚಾಗಲು ಕಾಂಗ್ರೆಸ್‌ ಕೊಡುಗೆಯೂ ಇದೆ’ ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಹೇಳಿದರು.

ಬಿಎಸ್‌ಪಿ ರಾಜ್ಯ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಕಾಲದಲ್ಲಿ ಹಣ ಕೊಟ್ಟವರ ಪರವಾಗಿ ನೀತಿಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ರೂಪಿಸಿಕೊಂಡು ಬಂದಿವೆ. ಇದರಿಂದಾಗಿ ಬಡತನ, ಅನಕ್ಷರತೆ ಮತ್ತು ಹಸಿವಿನಿಂದ ಜನ ಈಗಲೂ ಕಂಗಾಲಾಗುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಆಡಳಿತ ನಡೆಸಿದ ಬಿಎಸ್‌ಪಿ, ಎಂದಿಗೂ ಶ್ರೀಮಂತರಿಂದ ಹಣ ಪಡೆದಿಲ್ಲ. ಬಡಜನರ ಕಾಣಿಕೆ ಮತ್ತು ಕಾರ್ಯಕರ್ತರ ಸದಸ್ಯತ್ವ ಶುಲ್ಕದಿಂದ ಬಂದ ಹಣದಿಂದ ಚುನಾವಣೆ ನಡೆಸಿದ್ದೇವೆ. ಅಧಿಕಾರಕ್ಕೆ ಬಂದಾಗ ಬಡವರ ಪರ ನೀತಿ ರೂಪಿಸಿದ್ದೇವೆ’ ಎಂದರು.

‘ಮೀಸಲಾತಿ ಜಾರಿಗೆ ತಂದಿದ್ದು ನಾವು ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಅದು ಸಂಪೂರ್ಣ ಸುಳ್ಳು. ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದ್ದರೆ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಸ್ಥಿತಿ ಈಗಲೂ ಹೀನಾಯವಾಗಿ ಇರುತ್ತಿರಲಿಲ್ಲ’ ಎಂದು ಹೇಳಿದರು.

‘ಮತ ಯಂತ್ರದ ಮೂಲಕ ಚುನಾವಣೆ ನಡೆಸುತ್ತಿದ್ದಾಗ ಬಿಎಸ್‌ಪಿಗೆ ಹೆಚ್ಚಿನ ಮತಗಳು ಬರುತ್ತಿದ್ದವು. ಎಲೆಕ್ಟ್ರಾನಿಕ್ ಮತಯಂತ್ರ ಬಳಕೆಯಾದ ನಂತರ ಮತಗಳ ಪ್ರಮಾಣ ಕಡಿಮೆಯಾಗಿವೆ. ಜನ ಬೆಂಬಲ ಕಡಿಮೆಯಾಗಿಲ್ಲ. ಕಳ್ಳದಾರಿ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಮತಪತ್ರದ ಮೂಲಕ ಚುನಾವಣೆ ನಡೆದರೆ ಉತ್ತರ ಪ್ರದೇಶ ಮಾತ್ರವಲ್ಲ, ಇಡೀ ದೇಶದಲ್ಲಿ ಬಿಎಸ್‌ಪಿ ಅಧಿಕಾರಕ್ಕೆ ಬರಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಪುಲಕೇಶಿನಗರದಲ್ಲಿ ಕಾಂಗ್ರೆಸ್‌ ಟಿಕೆಟ್ ವಂಚಿತ ಅಂಖಡ ಶ್ರೀನಿವಾಸಮೂರ್ತಿ ಮತ್ತು ಗಾಂಧಿನಗರದಲ್ಲಿ ಬಿಜೆಪಿ ಟಿಕೆಟ್ ವಂಚಿತ ಕೃಷ್ಣಯ್ಯಶೆಟ್ಟಿ ಬಿಎಸ್‌ಪಿಯಿಂದ ಕಣದಲ್ಲಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ 130 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT