ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್‌ ತವರಲ್ಲಿ ಮಂಜುನಾಥ್ ಮಂದಹಾಸ

Published 16 ಏಪ್ರಿಲ್ 2024, 4:26 IST
Last Updated 16 ಏಪ್ರಿಲ್ 2024, 4:26 IST
ಅಕ್ಷರ ಗಾತ್ರ

ಕನಕಪುರ (ರಾಮನಗರ): ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಭಾನುವಾರವಿಡೀ ಡಿ.ಕೆ ಸಹೋದರರ ಭದ್ರಕೋಟೆಯಾದ ಕನಕಪುರದಲ್ಲಿ ಅಬ್ಬರದ ಪ್ರಚಾರ ಮಾಡಿದರು.

ಡಿ.ಕೆ. ಸಹೋದರರ ಸ್ವಗ್ರಾಮ ದೊಡ್ಡ ಆಲಹಳ್ಳಿ ಸೇರಿದಂತೆ ವಿವಿಧೆಡೆ ರೋಡ್ ಷೊ, ಪ್ರಚಾರ ಸಭೆ ನಡೆಸಿ ಶಕ್ತಿ ಪ್ರದರ್ಶಿಸಿದರು.

ಕನಕಪುರಕ್ಕೆ ಹೊರಡಲು ಸಿದ್ಧರಾಗುವ ಮುಂಚೆ ಬೆಂಗಳೂರಿನ ಮನೆಯಲ್ಲಿ ಬೆಳಗ್ಗೆ ದಿನಪತ್ರಿಕೆ ತಿರುವು ಹಾಕಿ ರಾಜಕೀಯ ವಿದ್ಯಮಾನ ಗಮನಿಸಿದರು.

ಅದಾಗಲೇ ಮನೆಗೆ ಬಂದಿದ್ದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಂದಿಗೆ ಪ್ರಚಾರದ ರೂಪುರೇಷೆ ಕುರಿತು ಚರ್ಚಿಸಿ 10ರ ಸುಮಾರಿಗೆ ಕನಕಪುರಕ್ಕೆ ಹೊರಡಲು ಕಾರು ಏರಿದರು.

ಮೊದಲಿಗೆ ಕನಕಪುರದ ಬೂದಿಕೆರೆಯಲ್ಲಿರುವ ಪರಿಶಿಷ್ಟರ ಟಿ.ಎಂ.ಸಿ ಕಾಲೊನಿಗೆ ಬಂದ ಅವರಿಗೆ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.

ಕಾಲೊನಿಯಲ್ಲಿದ್ದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಯಂತಿಯಲ್ಲಿ ಪಾಲ್ಗೊಂಡರು.

ಮೆಳೆಕೋಟೆಯಲ್ಲಿರುವ ದಲಿತ ಮುಖಂಡ ಕೃಷ್ಣಪ್ಪ ಮತ್ತು ಅಂಬೇಡ್ಕರ್ ನಗರದ ಗುಂಡಾ ಎಂಬುವರ ಮನೆಗೆ ಭೇಟಿ ನೀಡಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಉಪಾಹಾರ ಸವಿದರು.

ಮಧ್ಯಾಹ್ನದವರೆಗೆ ಕನಕಪುರ ದಲ್ಲೇ ಬೀಡುಬಿಟ್ಟು ವಿವಿಧ ಬಡಾವಣೆಗಳಿಗೆ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದರು. ಈ ವೇಳೆ, ಕೆಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದರು. ಅಲ್ಲಿಂದ ಸಾತನೂರಿಗೆ ಬಂದ ಮಂಜುನಾಥ್, ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಇಲ್ಲಿ ಇವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ, ಅ. ದೇವೇಗೌಡ, ಸ್ಥಳೀಯ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಸಾಥ್ ನೀಡಿದರು.

ಡಿ.ಕೆ ಸಹೋದರರ ಊರಾದ ದೊಡ್ಡಾಲಹಳ್ಳಿ ಬಂದಾಗ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ಅಲ್ಲಿಯೂ ತೆರೆದ ವಾಹನದಲ್ಲಿ ಗ್ರಾಮದ ವೃತ್ತದವರೆಗೆ ರೋಡ್ ಷೊ ನಡೆಸಿದರು.

ರಸ್ತೆಯುದ್ದಕ್ಕೂ ಸೇರಿದ್ದ ಕಾರ್ಯಕರ್ತ ರನ್ನು ಉದ್ದೇಶಿ ಮಂಜುನಾಥ್ ಮತ್ತು ಯೋಗೇಶ್ವರ್ ಇಬ್ಬರೂ ಮಾತನಾಡಿದರು.

ಮಧ್ಯಾಹ್ನ ನಲ್ಲಹಳ್ಳಿಯ ಜೆಡಿಎಸ್ ಮುಖಂಡರೊಬ್ಬರ ಮನೆಯಲ್ಲಿ ಊಟ ಮುಗಿಸಿ, ತಮಿಳುನಾಡಿನ ಗಡಿ ಭಾಗದ ಹುಣಸನಹಳ್ಳಿ, ಕೋಡಿಹಳ್ಳಿಯಲ್ಲಿ ಸಂಜೆವರೆಗೆ ಪ್ರಚಾರ ಮಾಡಿದರು.

ಸಂಜೆ 7ಕ್ಕೆ ಕನಕಪುರಕ್ಕೆ ಬಂದು ರಾತ್ರಿ 8ರವರೆಗೂ ಮತ್ತೊಂದು ಸುತ್ತಿನ ರೋಡ್ ಷೊ ಮತ್ತು ಪ್ರಚಾರ ಸಭೆ ನಡೆಸಿದರು.

ಸಂಜೆ ಮಂಜುನಾಥ್ ಪತ್ನಿ ಅನಸೂಯ ಸಹ ಪತಿಗೆ ಸಾಥ್ ನೀಡಿದರು.

ಮಂಜುನಾಥ್ ಹೋದ ಕಡೆಯೆಲ್ಲಾ ಜನರು ಅವರನ್ನು ಮುತ್ತಿಕೊಂಡು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕೆಲವರು, ‘ನಮ್ಮ ಸಂಬಂಧಿಕರೊಬ್ಬರಿಗೆ ನೀವೇ ಆಪರೇಷನ್ ಮಾಡಿದ್ದೀರಿ. ನಿಮ್ಮನ್ನು ನೋಡಿ ಖುಷಿಯಾಯ್ತು ಸರ್. ನಮ್ಮ ವೋಟು ನಿಮಗೇ’ ಎಂದು ಭರವಸೆಯ ಮಾತುಗಳನ್ನಾಡಿದರು.

‘ನಾನಿಲ್ಲಿರುವುದಕ್ಕೆ ವೈದ್ಯರೇ ಕಾರಣ. ಜಾತಿ–ಧರ್ಮ ಬಿಟ್ಟು ಅವರನ್ನು ನಾನು ಗೌರವಿಸುತ್ತೇನೆ. ಯಾರೇ ನನ್ನನ್ನು ವಿರೋಧಿಸಿದರೂ ವೈದ್ಯರಿಗೇ ನನ್ನ ಹಾಗೂ ಕುಟುಂಬದ ಮತ’ ಎಂದು ಮಂಜುನಾಥ್ ಅವರಿಂದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಸಾತನೂರಿನ ಮುಸ್ಲಿಂ ವ್ಯಕ್ತಿಯೊಬ್ಬರು ಹೇಳಿಕೊಂಡರು.

ಬೆಳಗ್ಗೆಯಿಂದ ರಾತ್ರಿವರೆಗೂ ಪ್ರಚಾರ ನಡೆಸಿ ಸುಸ್ತಾಗಿದ್ದರೂ ಅದನ್ನು ತೋರಿಸಿಕೊಳ್ಳದೆ ಲವಲವಿಕೆ ಮತ್ತು ನಗುಮೊಗದೊಂದಿಗೆ ಸ್ಥಳೀಯ ಮುಖಂಡ ರೊಂದಿಗೆ ಅನೌಪಚಾರಿಕ ಸಭೆ ನಡೆಸಿದರು.

ಮತದಾರರ ಮೇಲಾಗಬಹುದಾದ ಪ್ರಭಾವ ಕುರಿತು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದ ಅವರು ಬೆಂಗಳೂರಿನತ್ತ ಹೊರಟರು.

‘ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ’

ಬಿಜೆಪಿ ಗೆದ್ದರೆ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಕಾಂಗ್ರೆಸ್‌ ಸುಳ್ಳು ಪ್ರಚಾರ ಮಾಡುತ್ತಿದೆ. ಈ ಬಗ್ಗೆ ಸ್ವತಃ ಮೋದಿ ಅವರೇ ಸ್ಪಷ್ಟಪಡಿಸಿದ್ದಾರೆ. ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ  ಎಂದು ಅಂಬೇಡ್ಕರ್‌ ನಗರದಲ್ಲಿ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT