ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಲೂಟಿಗೆ ಕರ್ನಾಟಕವೇ ಎಟಿಎಂ: ಮೋದಿ ಆರೋಪ

ಕಾಂಗ್ರೆಸ್‌ ಆಡಳಿತದಲ್ಲಿ ಸರ್ಕಾರಿ ನೌಕರರಿಗೂ ವೇತನ ನೀಡಲಾಗದ ಸ್ಥಿತಿ ಬರುತ್ತದೆ: ಮೋದಿ
Published 29 ಏಪ್ರಿಲ್ 2024, 22:17 IST
Last Updated 29 ಏಪ್ರಿಲ್ 2024, 22:17 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಕಾಂಗ್ರೆಸ್, ಲೂಟಿಗೆ ಕರ್ನಾಟಕವನ್ನೇ ಎಟಿಎಂ ಮಾಡಿಕೊಂಡಿದೆ. ಅದರ ಪರಿಣಾಮ ಕಡಿಮೆ ಸಮಯದಲ್ಲಿ ರಾಜ್ಯದ ಖಜಾನೆ ಖಾಲಿ ಆಗಿದೆ. ಸರ್ಕಾರದ ಖಜಾನೆ ಲೂಟಿ ಮಾಡಿ ತಮ್ಮ ಖಜಾನೆ ಭರ್ತಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಸೋಮವಾರ ಇಲ್ಲಿ  ಬಾಗಲಕೋಟೆ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ, ‌ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಶಾಸಕರ ನಿಧಿಯೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ’ ಎಂದು ಟೀಕಿಸಿದರು.

‘ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೂ ವೇತನ ನೀಡಲಾಗದಂತಹ ಸ್ಥಿತಿ ಬರುತ್ತದೆ. ನಿಮ್ಮ ಮಕ್ಕಳು ಉಪವಾಸ ಸಾಯಬೇಕಾದ ಪರಿಸ್ಥಿತಿ ತರುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ‌ವಸೂಲಿ ಗ್ಯಾಂಗ್ ಸರ್ಕಾರ‌ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಕೋಟ್ಯಂತರ ಮೊತ್ತದ ಹಗರಣ ಮಾಡುವ ಕನಸನ್ನು ಕಾಂಗ್ರೆಸ್ ನವರು ಕಾಣುತ್ತಿದ್ದಾರೆ. ರಾಜ್ಯ ಲೂಟಿ ಮಾಡುವವರಿಗೆ ಮೇ 7ರಂದು ಶಿಕ್ಷೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು. ಜನರು  ‘ಹೌದು’ ಎಂದು ಘೋಷಣೆ ಕೂಗಿದರು. ಬಾಗಲಕೋಟೆ ಸೇರಿದಂತೆ ಎಲ್ಲೆಡೆಯೂ ಮತ ಚಲಾಯಿಸುವ ಮೂಲಕ ಉತ್ತರ ನೀಡಬೇಕು’ ಎಂದರು.

‘ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗದವರಿಗೆ ಅಂಬೇಡ್ಕರ್‌ ಹಾಗೂ ಸಂವಿಧಾನ ನೀಡಿದ್ದ ಹಕ್ಕನ್ನು ಕಿತ್ತುಕೊಂಡು ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನೀಡಲಾಗುತ್ತಿದೆ. ಮೇಲಿನ ಸಮುದಾಯಗಳ ಹೆಚ್ಚು ಸಂಸದರು ಬಿಜೆಪಿಯಲ್ಲೇ ಇದ್ದಾರೆ. ಅವರೆಲ್ಲ ಬಿಜೆಪಿ ಜೊತೆಗಿದ್ದಾರೆ ಎಂದು ನಿಮ್ಮ ಹಕ್ಕು ಕಿತ್ತು ಮುಸ್ಲಿಮರಿಗೆ ನೀಡಲು ಮುಂದಾಗಿದೆ. ಇಂತಹ ಯೋಜನೆ ಜಾರಿಯಾಗಲು ಬಿಡುವುದಿಲ್ಲ. ನಿಮ್ಮ ಹಕ್ಕಿನ ರಕ್ಷಣೆಗೆ ಯಾವುದೇ ಹಂತಕ್ಕೂ ಹೋಗಲು ಸಿದ್ಧ’ ಎಂದು ಭರವಸೆ ನೀಡಿದರು.

‘ಕೆಲವೇ ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಲಿದೆ. ಇದನ್ನು ಯಾರು ಮಾಡಲಿದ್ದಾರೆ ಎಂಬ ಮೋದಿ ಅವರ ಪ್ರಶ್ನೆಗೆ ಜನರು ‘ಮೋದಿ’ ಎಂದು ಕೂಗಿದರು. ‘ಮೋದಿ ಅಲ್ಲ. ನಿಮ್ಮ ಒಂದು ಮತ ಮಾಡಲಿದೆ. ಉತ್ಪಾದನಾ, ಕೌಶಲ ಭರಿತ ದೇಶ ಮಾಡುವ ಸಂಕಲ್ಪ ಮಾಡಿದ್ದೇವೆ. ಇದು ಮೋಜು–ಮಸ್ತಿ ಮಾಡುವವರಿಗೆ ಸಾಧ್ಯವಾಗುವುದಿಲ್ಲ. ದಿನದ 24 ಗಂಟೆ ಕೆಲಸ ಮಾಡುವವರಿಂದ ಸಾಧ್ಯ’ ಎಂದು ಹೇಳಿದರು.

‘ಭಾರತದ ಭವಿಷ್ಯ ಬರೆಯುವ, ವಿಕಸಿತ ಭಾರತ ನಿರ್ಮಾಣ,‌ ಆತ್ಮನಿರ್ಭರ್ ಚುನಾವಣೆ ಇದಾಗಿದೆ’ ಎಂದರು.

ಬಾಗಲಕೋಟೆಯಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಂಬಳಿ ಹೊದಿಸಿ ಬೆಳ್ಳಿಯ ರಾಜದಂಡ ನೀಡಲಾಯಿತು. ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ‌ಗೋವಿಂದ ಕಾರಜೋಳ ಬಿ.ಎಸ್.ಯಡಿಯೂರಪ್ಪ ವೀರಣ್ಣ ಚರಂತಿಮಠ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದರು.
–ಪ್ರಜಾವಾಣಿ ಚಿತ್ರ
ಬಾಗಲಕೋಟೆಯಲ್ಲಿ ಸೋಮವಾರ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಂಬಳಿ ಹೊದಿಸಿ ಬೆಳ್ಳಿಯ ರಾಜದಂಡ ನೀಡಲಾಯಿತು. ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ‌ಗೋವಿಂದ ಕಾರಜೋಳ ಬಿ.ಎಸ್.ಯಡಿಯೂರಪ್ಪ ವೀರಣ್ಣ ಚರಂತಿಮಠ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಪಾಲ್ಗೊಂಡಿದ್ದರು. –ಪ್ರಜಾವಾಣಿ ಚಿತ್ರ

ಶ್ರೀನಿವಾಸ ಪ್ರಸಾದ್ ಜನ ನಾಯಕ: ಮೋದಿ

ಬಾಗಲಕೋಟೆ: ‘ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಸಿಪಾಯಿ ಶ್ರೀನಿವಾಸ ಪ್ರಸಾದ್ ಜನ ನಾಯಕರಾಗಿದ್ದರು. ಅವರೀಗ ನಮ್ಮೊಂದಿಗೆ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿಕೊಂಡರು. ‘ಅವರು ಹಲವು ದಶಕಗಳ ಸಾಮಾಜಿಕ ಜೀವನ ಪ್ರತಿ ಕ್ಷಣವನ್ನು ಬಡವರು ಶೋಷಿತರ ವಂಚಿತರಿಗಾಗಿ ಕೆಲಸ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ದಲಿತ ವರ್ಗದವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಸದಾ ಯತ್ನಿಸಿದರು’ ಎಂದರು.

ಕಂಬಳಿ ಹಾಕಿಕೊಂಡೇ ಭಾಷಣ

ಬಾಗಲಕೋಟೆ: ಪ್ರಧಾನಿ ಮೋದಿ ಅವರಿಗೆ ಸ್ಥಳೀಯ ನಾಯಕರು ಹೂವಿನ ಹಾರ ಹಾಕಿ ಗೋಮಾತೆಯ ಬೆಳ್ಳಿ ಮೂರ್ತಿ ಬೆಳ್ಳಿಯ ರಾಜದಂಡ ಹಾಗೂ ಕಂಬಳಿ ಹೊದಿಸಿ ಸನ್ಮಾನ ಮಾಡಿದರು. ಎಲ್ಲವನ್ನೂ ತೆಗೆದ ಮೋದಿ ಅವರು ಕಂಬಳಿಯನ್ನು ಮಾತ್ರ ವೇದಿಕೆಯಲ್ಲಿರುವವರೆಗೂ ಹಾಕಿಕೊಂಡಿದ್ದರು. ಅದನ್ನು ಹಾಕಿಕೊಂಡೇ ಭಾಷಣ ಮಾಡಿದರು. ಭಾಷಣದ ಆರಂಭದಲ್ಲಿ ಬನಶಂಕರಿ ದೇವಿಗೆ ಗುರು ಬಸವಣ್ಣ ಹಾಗೂ ಸಿದ್ದೇಶ್ವರ ಸ್ವಾಮೀಜಿಗೆ ನಮಸ್ಕಾರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT