ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Election Results: ಒಕ್ಕಲಿಗರ ‘ನೆಲೆ’ ಮತ್ತೆ ಜೆಡಿಎಸ್‌ ತೆಕ್ಕೆಗೆ

Published 4 ಜೂನ್ 2024, 22:57 IST
Last Updated 4 ಜೂನ್ 2024, 22:57 IST
ಅಕ್ಷರ ಗಾತ್ರ

ಬೆಂಗಳೂರು: ವರ್ಷದ ಹಿಂದಷ್ಟೇ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತದಾರರ ಪ್ರಾಬಲ್ಯದ ಕ್ಷೇತ್ರಗಳಲ್ಲೇ ಹೀನಾಯವಾಗಿ ಸೋತಿದ್ದ ಜೆಡಿಎಸ್‌, ಲೋಕಸಭಾ ಚುನಾವಣೆಯಲ್ಲಿ ತನ್ನ ಭದ್ರ ನೆಲೆಯ ಮೇಲೆ ಪುನಃ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಜತೆಯಲ್ಲೇ ಎಂಟಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಿತ್ರಪಕ್ಷ ಬಿಜೆಪಿಯ ಗೆಲುವಿಗೆ ಗಣನೀಯ ಪಾತ್ರ ವಹಿಸಿರುವುದು ಚುನಾವಣಾ ಫಲಿತಾಂಶದಲ್ಲಿ ಎದ್ದು ಕಾಣುತ್ತಿದೆ.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಬಲ ಕುಗ್ಗಿತ್ತು. ಬಿಜೆಪಿಯ ಮೈತ್ರಿಯ ಆಹ್ವಾನವನ್ನು ಜೆಡಿಎಸ್‌ ನಾಯಕರು ಅಳೆದು– ತೂಗಿ ಸ್ವೀಕರಿಸಿದ್ದರು. ಕ್ಷೇತ್ರ ಹಂಚಿಕೆ ವಿಚಾರದಲ್ಲಿ ಬಿಜೆಪಿ ನಿಲುವಿನ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಪಕ್ಷದ ನೆಲೆಯ ಮೇಲಿನ ಹಿಡಿತ ಕಳೆದುಕೊಳ್ಳುವ ಆತಂಕ ಹೊರಹಾಕಿದ್ದರು.

ಒಕ್ಕಲಿಗ ಮತದಾರರ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ ಪಕ್ಷ, ಲೋಕಸಭಾ ಚುನಾವಣೆಯಲ್ಲೂ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜೆಡಿಎಸ್ ಪಕ್ಷದ ಬಲವನ್ನು ಮತ್ತಷ್ಟು ಕುಗ್ಗಿಸಲು ಭಾರಿ ತಂತ್ರಗಾರಿಕೆ ಮಾಡಿತ್ತು. ಆದರೆ, ಸ್ಪರ್ಧಿಸಿದ್ದ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್‌, ಒಕ್ಕಲಿಗರ ಮೇಲೆ ರಾಜಕೀಯವಾಗಿ ಪ್ರಬಲ ಹಿಡಿತ ಸಾಧಿಸುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಆಸೆಗೆ ತಣ್ಣೀರು ಎರಚಿದೆ.

ಮಂಡ್ಯದಲ್ಲಿ ಭಾರಿ ಅಂತರದ ಗೆಲುವು ಸಾಧಿಸಿರುವ ಕುಮಾರಸ್ವಾಮಿ ಒಕ್ಕಲಿಗರು ತಮ್ಮ ಕುಟುಂಬದ ಪರವಾಗಿದ್ದಾರೆ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರದಲ್ಲಿ ಮಲ್ಲೇಶ್ ಬಾಬು ಗೆಲುವು ಜೆಡಿಎಸ್‌ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸಿದ ಜೆಡಿಎಸ್‌ ನಾಯಕರ ನಿರ್ಧಾರವೇ ಸೋಲಿಗೆ ಕಾರಣ ಎಂಬುದನ್ನು ಫಲಿತಾಂಶದ ಬಳಿಕ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಅಭ್ಯರ್ಥಿ ಆಯ್ಕೆಯಲ್ಲಿ ಕುಟುಂಬದ ಒತ್ತಡಕ್ಕೆ ಮಣಿದ ಜೆಡಿಎಸ್‌, ಮೂರನೇ ಸ್ಥಾನದ ಅವಕಾಶ ಕಳೆದುಕೊಂಡಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಅಳಿಯ ಡಾ.ಸಿ.ಎನ್‌. ಮಂಜುನಾಥ್‌ ಅವರು ಕೆಪಿಸಿಸಿ ಅಧ್ಯಕ್ಷರ ತಮ್ಮ ಡಿ.ಕೆ. ಸುರೇಶ್‌ ಅವರನ್ನು 2.68 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಗೆಲುವಿನಲ್ಲಿ ಬಿಜೆಪಿಗಿಂತಲೂ ಜೆಡಿಎಸ್‌ ಪ್ರಭಾವವೇ ಹೆಚ್ಚು ಕೆಲಸ ಮಾಡಿದೆ. ತಮ್ಮ ಕುಟುಂಬದ ವಿರುದ್ಧ ನೇರ ಸಮರಕ್ಕೆ ಇಳಿದಿದ್ದ ಶಿವಕುಮಾರ್‌ ಅವರನ್ನು ಈ ಸೋಲಿನ ಮೂಲಕ ಕಟ್ಟಿಹಾಕುವ ತಂತ್ರಗಾರಿಕೆಯಲ್ಲಿ ಜೆಡಿಎಸ್‌ ನಾಯಕರು ಯಶಸ್ವಿಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು ಮತ್ತು ಚಿತ್ರದುರ್ಗ ಕ್ಷೇತ್ರಗಳಲ್ಲಿ ಜೆಡಿಎಸ್‌ ಜತೆಗಿನ ಮೈತ್ರಿಯಿಂದಾಗಿಯೇ ಬಿಜೆಪಿ ನಿರಾಯಾಸವಾಗಿ ಗೆಲುವಿನ ದಡ ಸೇರಿದೆ ಎಂಬುದು ಸ್ಪಷ್ಟ. ಈ ಕ್ಷೇತ್ರಗಳಲ್ಲಿ ಒಕ್ಕಲಿಗರು ಜೆಡಿಎಸ್‌ ಕಾರಣಕ್ಕಾಗಿ ಬಿಜೆಪಿಯತ್ತ ವಾಲಿರುವುದು ಫಲಿತಾಂಶದಲ್ಲಿ ಗೋಚರಿಸುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ನೆಲೆ ಹೊಂದಿರುವ ಸಮುದಾಯದ ‘ಪ್ರಭಾವಿ’ಯೊಬ್ಬರು ಒಕ್ಕಲಿಗ ಸಮುದಾಯದ ಮತಗಳನ್ನು ಬಿಜೆಪಿ– ಜೆಡಿಎಸ್‌ಗೆ ವರ್ಗಾಯಿಸುವಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದಾರೆ ಎನ್ನಲಾಗುತ್ತಿದೆ.

ಉಡುಪಿ– ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಹಿಗ್ಗುವುದಕ್ಕೂ ಜೆಡಿಎಸ್‌ ಕಾರಣವಾಗಿದೆ.

ಲೋಕಸಭಾ ಚುನಾವಣೆಯ ಫಲಿತಾಂಶವು ಜೆಡಿಎಸ್‌ ಪಕ್ಷಕ್ಕೆ ಮರುಜನ್ಮ ನೀಡುವುದರ ಜತೆಯಲ್ಲೇ, ಬಿಜೆಪಿ ಜತೆಗಿನ ಮೈತ್ರಿ ಮತ್ತಷ್ಟು ಗಟ್ಟಿಯಾಗಲು ಕಾರಣವಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT