ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ: ಎಚ್.ಡಿ. ದೇವೇಗೌಡ

ವಿಧಾನಸೌಧದ ಮುಂಭಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು
Published 30 ಏಪ್ರಿಲ್ 2023, 16:03 IST
Last Updated 30 ಏಪ್ರಿಲ್ 2023, 16:03 IST
ಅಕ್ಷರ ಗಾತ್ರ

ಚನ್ನಪಟ್ಟಣ: ಚನ್ನಪಟ್ಟಣದ ಮತದಾರರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಶಾಸಕರನ್ನಾಗಿ ಮಾಡಿ, ವಿಧಾನಸೌಧದ ಮುಂಭಾಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.

ತಾಲ್ಲೂಕಿನ ಇಗ್ಗಲೂರು ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಅಕ್ಕೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಸಮಯ ದೊರೆಯುತ್ತಿಲ್ಲ. ಅವರ ಪರವಾಗಿ ಪ್ರಚಾರ ಮಾಡಲು ಮೊದಲ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಬಂದಿದ್ದೇನೆ. ಚನ್ನಪಟ್ಟಣ ಕ್ಷೇತ್ರದ ಜನರು ಕುಮಾರಸ್ವಾಮಿ ಅವರ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಯೋಜನೆಗಳ ರೀತಿ ಬೇರೆ ಯಾವುದೇ ಮುಖ್ಯಮಂತ್ರಿ ಮಾಡಿರುವುದನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ನುಡಿದಂತೆ ನಡೆಯುವ, ಬಡವರ ಕಣ್ಣೀರು ಒರೆಸುವ ಒಬ್ಬ ರಾಜಕಾರಣಿ ಈ ದೇಶದಲ್ಲಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಪಂಚರತ್ನ ಯೋಜನೆ ಜಾರಿಗೆ ಕುಮಾರಸ್ವಾಮಿ ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಗೆ ನೀರು ಕೊಡಲು ಜಲಧಾರೆ ಯೋಜನೆಯನ್ನು ರೂಪಿಸಿದ್ದಾರೆ. ಅವರ ಆಸೆಯನ್ನು ಈಡೇರಿಸುವುದು ಜನರ ಕೈಯಲ್ಲಿದೆ ಎಂದರು.

ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ

ಕನ್ನಡ ನಾಡಿನ ಜನರು ಸಹ ತಮಿಳುನಾಡಿನ ರೀತಿ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು. ಕಳೆದ 50 ವರ್ಷಗಳಿಂದ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಲೆ ಎತ್ತಿ ನಿಲ್ಲಲು ಇದುವರೆಗೂ ಸಾಧ್ಯವಾಗಿಲ್ಲ ಎಂದರು.
ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಏಕಾಂಗಿಯಾಗಿ ಹೋರಾಟ ಮಾಡಿದ್ದೇನೆ. ಕಾಂಗ್ರೆಸ್, ಬಿಜೆಪಿ ನಾಯಕರು ಯಾರು ರಾಜ್ಯದ ಪರ ನಿಲ್ಲಲಿಲ್ಲ. 40 ತಮಿಳು ಸಂಸದರು ನನ್ನನ್ನು ಕಟ್ಟಿಹಾಕಿದರು. ಇಗ್ಗಲೂರು ಜಲಾಶಯ ನಿರ್ಮಾಣಕ್ಕೆ ಯಾರು ಒಂದು ರೂಪಾಯಿ ಕೊಟ್ಟಿಲ್ಲ. ಅದು ರೈತರು ಬೆವರು ಸುರಿಸಿ ಕೊಟ್ಟ ಹಣದಲ್ಲಿ ಡ್ಯಾಂ ಕಟ್ಟಿದ್ದೇನೆ ಎಂದು ತಿಳಿಸಿದರು.

ಮಾಜಿ ಶಾಸಕ ಎಂ.ಸಿ.ಅಶ್ವಥ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಮುಖಂಡರಾದ ಬೋರ್ವೆಲ್ ರಾಮಚಂದ್ರು, ಕುಕ್ಕೂರುದೊಡ್ಡಿ ಜಯರಾಂ, ರೇಖಾ ಉಮಾಶಂಕರ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಬರಬೇಡಿ ಎನ್ನಲು ಆಗುತ್ತದೆಯೆ?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಬೇಡಿ ಎನ್ನಲು ಆಗುತ್ತದೆಯೇ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಆಗಮನದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಬಂದು ಹೋದರು ಜನರು ಬಯಸಿದ ತೀರ್ಪನ್ನೇ ಕೊಡುತ್ತಾರೆ. ಬರುವವರನ್ನು ಹೋಗುವವರನ್ನು ನಾವು ಬೇಡ ಎನ್ನಲು ಆಗುವುದಿಲ್ಲ. ತೀರ್ಪು ಕೊಡುವವರು ಪುಣ್ಯಾತ್ಮರು. ಅಳೆದು ತೂಗಿ ಆಶೀರ್ವಾದ ಮಾಡುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT