ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಏಳು ಹೊಸ ಮುಖಗಳಿಗೆ ಅವಕಾಶ, ಬಿಜೆಪಿಯ ಇಬ್ಬರು ಶಾಸಕರಿಗೆ ತಪ್ಪಿದ ಟಿಕೆಟ್

ಹಟ ಸಾಧಿಸಿಕೊಂಡ ರಮೇಶ ಜಾರಕಿಹೊಳಿ, ಅಚ್ಚರಿ ಮೂಡಿಸಿದ ಬಿಜೆಪಿ ನಡೆ
Last Updated 11 ಏಪ್ರಿಲ್ 2023, 17:25 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಇನ್ನೊಂದೆಡೆ, 18 ಕ್ಷೇತ್ರಗಳ ಪೈಕಿ ಏಳು ಕಡೆ ಹೊಸ ಮುಖಗಳಿಗೇ ಟಿಕೆಟ್‌ ಘೋಷಿಸಲಾಗಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಜಿಲ್ಲೆ ಎಲ್ಲ ಕ್ಷೇತ್ರಗಳಿಗೂ ಟಿಕೆಟ್‌ ಹಂಚಿಕೆಯಾಗಿದ್ದು, ಬಿಜೆಪಿ ನಡೆ ಚರ್ಚೆಗೆ ಗ್ರಾಸವಾಗಿದೆ.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್‌ ಬೆನಕೆ ಹಾಗೂ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಪ್ರತಿಯಾಗಿ ಉತ್ತರದಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿ ಡಾ.ರವಿ ಪಾಟೀಲ ಅವರಿಗೆ ಮಣೆ ಹಾಕಿದ್ದರೆ, ರಾಮದುರ್ಗದಲ್ಲಿ ಹೊರಗಿನಿಂದ ಬಂದ ಚಿಕ್ಕರೇವಣ್ಣ ಎಂಬ ಬೆಂಗಳೂರಿನ ಉದ್ಯಮಿಗೆ ಹಸಿರು ನಿಶಾನೆ ತೋರಿದೆ.

ನಿರೀಕ್ಷೆಯಂತೆ ಎರಡು ಕ್ಷೇತ್ರಗಳಲ್ಲಿ ಅನುಕಂಪದ ಅಲೆಯ ಅವಕಾಶ ಪಡೆಯಲು ಗಾಳ ಹಾಕಲಾಗಿದೆ. ಸಚಿವರಾಗಿದ್ದ ಉಮೇಶ ಕತ್ತಿ ಅವರ ಪುತ್ರ ನಿಖಿಲ್‌ಗೆ ಹುಕ್ಕೇರಿ ಕ್ಷೇತ್ರದಲ್ಲಿ, ವಿಧಾನಸಭೆ ಉಪ ಸಭಾಧ್ಯಕ್ಷರಾಗಿದ್ದ ಆನಂದ ಮಾಮನಿ ಅವರ ಪತ್ನಿ ರತ್ನಾ ಅವರಿಗೆ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿದೆ.

ತಮ್ಮ ಆಪ್ತರಿಗೆ ಟಿಕೆಟ್‌ ಕೊಡಿಸಲು ಹಟ ತೊಟ್ಟಿದ್ದ ಶಾಸಕ ರಮೇಶ ಜಾರಕಿಹೊಳಿ ಸಫಲರಾಗಿದ್ದಾರೆ. ಮೂರು ಕ್ಷೇತ್ರಗಳಲ್ಲಿ ತಾವು ಗುರುತಿಸಿದ ಅಭ್ಯರ್ಥಿಗಳಿಗೇ ಟಿಕೆಟ್‌ ದಕ್ಕಿಸಿಕೊಂಡಿದ್ದಾರೆ. ಆಪರೇಷನ್‌ ಕಮಲದ ಮೂಲಕ ಬಿಜೆಪಿಗೆ ಬಂದ ಅಥಣಿ ಶಾಸಕ ಮಹೇಶ ಕುಮಠಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಟಿಕೆಟ್‌ ಪಡೆದಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಮಣಿಸಲು, ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳಕರ ಅವರಿಗೆ ಟಿಕೆಟ್‌ ಪಡೆಯುವಲ್ಲಿಯೂ ಜಾರಕಿಹೊಳಿ ಯಶಸ್ಸು ಕಂಡಿದ್ದಾರೆ.

ಒಂದೇ ಕುಟುಂಬದಲ್ಲಿ ಇಬ್ಬರಿಗೆ ಟಿಕೆಟ್‌:

ಉಮೇಶ ಕತ್ತಿ ಅವರ ಪುತ್ರ ನಿಖಿಲ್‌ ಹಾಗೂ ಸಹೋದರ ರಮೇಶ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ ಎಂದೇ ಸುದ್ದಿಯಾಗಿತ್ತು. ಆದರೆ, ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಇಬ್ಬರಿಗೂ ಟಿಕೆಟ್‌ ನೀಡಿದ್ದು ಗಮನ ಸೆಳೆದಿದೆ. ಲಿಂಗಾಯತ ಸಮುದಾಯದವರಾದ ಗಣೇಶ ಹುಕ್ಕೇರಿ ಅವರ ವಿರುದ್ಧ ಅದೇ ಸಮುದಾಯದ ರಮೇಶ ಕತ್ತಿ ಸಮರ್ಥ ಅಭ್ಯರ್ಥಿ ಎಂಬ ಮಾತುಗಳು ಬಿಜೆಪಿಯಲ್ಲಿ ಬಹುದಿನಗಳಿಂದ ಚರ್ಚೆಗೆ ಬಂದಿದ್ದವು. ಈಗ ಅದಕ್ಕೂ ತೆರೆ ಬಿದ್ದಿದೆ.

ಅಚ್ಚರಿಯೆಂದರೆ, ಯಮಕನಮರಡಿ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಟಿಕೆಟ್‌ ನೀಡಿದ್ದು. ಕಳೆದ ಬಾರಿಯ ಸತೀಶ ಜಾರಕಿಹೊಳಿಗೆ ನೇರಾನೇರ ಸ್ಪರ್ಧೆ ಒಡ್ಡಿದ್ದ ಪ್ರಬಲ ನಾಯಕ ಮಾರುತಿ ಅಷ್ಠಗಿ ಅವರನ್ನು ಬದಿಗಿಟ್ಟು, ಹೊಸಬರಾದ ಬಸವರಾಜ ಹುಂದ್ರಿ ಅವರಿಗೆ ಮಣೆ ಹಾಕಲಾಗಿದೆ.

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೈಲಹೊಂಗಲ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿದ್ದ ಜಗದೀಶ ಮೆಟಗುಡ್ಡ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಯಡಿಯೂರಪ್ಪ ಅವರ ಆಪ್ತರಾದ ಡಾ.ವಿಶ್ವನಾಥ ಪಾಟೀಲ ನಿರಾಸೆಗೊಂಡಿದ್ದು, ಬಂಡಾಯದ ಸೂಚನೆ ನೀಡಿದ್ದಾರೆ.

ಖಾನಾಪುರದಲ್ಲಿ ಕಳೆದ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದ ವಿಠಲ ಹಲಗೇಕರ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

*
ಟಿಕೆಟ್‌ ಪಡೆದ ಹಾಲಿ ಶಾಸಕರು

ಗೋಕಾಕ– ರಮೇಶ ಜಾರಕಿಹೊಳಿ

ಅರಭಾವಿ– ಬಾಲಚಂದ್ರ ಜಾರಕಿಹೊಳಿ

ನಿಪ್ಪಾಣಿ –ಶಶಿಕಲಾ ಜೊಲ್ಲೆ

ರಾಯಬಾಗ – ದುರ್ಯೋಧನ ಐಹೊಳೆ

ಕುಡಚಿ – ಪಿ.ರಾಜೀವ್‌

ಚನ್ನಮ್ಮನ ಕಿತ್ತೂರು – ಮಹಾಂತೇಶ ದೊಡ್ಡಗೌಡರ

ಬೆಳಗಾವಿ ದಕ್ಷಿಣ – ಅಭಯ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT