ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಮತದಾನ: ಹಿಂದಿನ ಪ್ರಮಾಣಕ್ಕಿಂತ ಕುಸಿತ

ಅರಿವು, ಮನವಿ, ಜಾಗೃತಿ ಕಾರ್ಯಕ್ರಮಗಳಿಗೆ ಮಣಿಯದ ರಾಜಧಾನಿ ಮತದಾರ
Published 26 ಏಪ್ರಿಲ್ 2024, 20:43 IST
Last Updated 26 ಏಪ್ರಿಲ್ 2024, 20:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮತದಾರರು ಮತ್ತೆ ತಮ್ಮ ಹಕ್ಕು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ. ಕಳೆದ ಲೋಕಸಭಾ ಹಾಗೂ ವಿಧಾನಸಭೆ ಚುನಾವಣೆಗಿಂತ ಕಡಿಮೆ ಪ್ರಮಾಣದ ಮತದಾನ ದಾಖಲಾಗಿದೆ.

ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಉತ್ತರ, ಕೇಂದ್ರ, ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಅತಿಕಡಿಮೆ ಮತದಾನವಾಗಿದ್ದು, ರಾಜ್ಯದಲ್ಲಿ ನಡೆದ 14 ಕ್ಷೇತ್ರಗಳಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರ ಕೊನೆಯ ಸ್ಥಾನದಲ್ಲಿದೆ. ಮೂರೂ ಲೋಕಸಭೆ ಕ್ಷೇತ್ರಗಳಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ 1ರಷ್ಟು ಕಡಿಮೆ ಮತದಾನವಾಗಿದೆ.

ಶುಕ್ರವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿರುಸಿನ ಮತದಾನ ನಡೆದಿತ್ತು. ಇದೇ ವೇಗದಲ್ಲಿ ಮತದಾನವಾದರೆ ಈ ಬಾರಿ ದಾಖಲೆಯ ಮತದಾನವಾಗಲಿದ್ದು, ಅರಿವು ಮೂಡಿಸಿದ್ದರ ಫಲ ಎಂಬಂತಹ ಮಾತು ವ್ಯಕ್ತವಾಗಿತ್ತು. ಆದರೆ, ಮಧ್ಯಾಹ್ನದ ನಂತರ ಮತದಾನ ಪ್ರಮಾಣ ಇಳಿಮುಖವಾಗಿ ಅಂತಿಮವಾಗಿ ಕಳೆದ ಬಾರಿಯಷ್ಟೂ ಮತದಾನವಾಗದೆ ಚುನಾವಣಾ ಅಧಿಕಾರಿಗಳೂ ನಿರಾಸೆಗೊಂಡರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಮೊದಲಬಾರಿಗೆ ಮತದಾರರ ಸಂಖ್ಯೆ ಒಂದು ಕೋಟಿ ದಾಟಿದೆ. ಆದರೆ, ಮತದಾನ ಪ್ರಮಾಣ ಸುಮಾರು ಅರ್ಧದಷ್ಟು ಮಾತ್ರ ಆಗಿದೆ. ಮೂರು ಲೋಕಸಭಾ ಕ್ಷೇತ್ರಗಳಲ್ಲಿ 62,43,029 ಮತದಾರರಿದ್ದಾರೆ. ಇದರಲ್ಲಿ ಶೇ 53.46ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿನಗರ, ಯಲಹಂಕ ಹಾಗೂ ಆನೇಕಲ್‌ ವಿಧಾನಸಭೆ ಕ್ಷೇತ್ರಗಳಲ್ಲಿ 38,84,840 ಮತದಾರರಿದ್ದಾರೆ. ಇದರಲ್ಲಿ ಶೇ 56.32 ಮತದಾನವಾಗಿದೆ.

ಕಾರಣಗಳೇನು?: ಬೆಂಗಳೂರಿನಲ್ಲಿ ಅತಿಹೆಚ್ಚು ಜಾಗೃತಿ ಮೂಡಿಸಲಾಗುತ್ತಿದ್ದರೂ ಮತದಾನದ ಪ್ರಮಾಣ ಮಾತ್ರ ಕಡಿಮೆಯಾಗುತ್ತಲೇ ಇದೆ. ಇದಕ್ಕೆ ಕಾರಣ ಇಂಥದ್ದೇ ಎಂಬುದನ್ನು ಗುರುತಿಸಲು ಚುನಾವಣಾಧಿಕಾರಿಗಳೂ ವಿಫಲರಾಗಿದ್ದಾರೆ. ‘ಸಾಲು ರಜೆ, ರಜೆಯಲ್ಲಿ ಪ್ರವಾಸದತ್ತ ನಾಗರಿಕರು, ನಿರಾಸಕ್ತಿ ಹಾಗೂ ಹೆಚ್ಚಿನ ಬಿಸಿಲ ಝಳ’  ಇತ್ಯಾದಿಗಳನ್ನು ಕಾರಣಗಳನ್ನಾಗಿ ಉಲ್ಲೇಖಿಸಲಾಗುತ್ತಿದೆ. ಇದರ ಜೊತೆಗೆ, ಕಾಯಿಲೆಯಿಂದ ಮನೆಯಿಂದ ಹೊರಬರಲು ಸಾಧ್ಯವಿರದವರು, ಬೇರೆ ಊರಿಗೆ ಹೋಗಿರುವವರು, ರಾಜ್ಯದ ಹೊರಭಾಗ, ವಿದೇಶಗಳಲ್ಲಿ ವಾಸ, ವ್ಯಾಸಂಗ ಮಾಡುತ್ತಿರುವವರೂ ಮತದಾನ ಮಾಡಿಲ್ಲ ಎಂದು ವ್ಯಾಖ್ಯಾನಿಸಲಾಗಿದೆ.

ತಮ್ಮ ಊರುಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದವರೂ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ವಾಸವಿರುವವರು ಇಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಹೀಗಾಗಿ, ಎರಡು–ಮೂರು ಕಡೆ ಅವರು ಹೆಸರು ಇರುವವರ ಸಂಖ್ಯೆಯೂ ಅಧಿಕವಾಗಿದೆ. ಈ ಎಲ್ಲ ಕಾರಣ, ಪಟ್ಟಿಯಲ್ಲಿರುವ ಒಟ್ಟು ಮತದಾರರಲ್ಲಿ ಶೇ 20ರಿಂದ ಶೇ 25ರಷ್ಟು ಮತದಾನ ಸಾಧ್ಯವಾಗುವುದಿಲ್ಲ. ಆದರೂ ಸುಮಾರು ಶೇ 70ರಷ್ಟು ಮತದಾನವಾಗಬೇಕಿತ್ತು ಎಂದು ಚುನಾವಣಾ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ನಗರದ ಕಾಮಾಕ್ಷಿಪಾಳ್ಯದ ಸಿದ್ಧಾರ್ಥ ಗೌತಮ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಲು ಸಾಲಾಗಿ ನಿಂತಿದ್ದ ಮತದಾರರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ನಗರದ ಕಾಮಾಕ್ಷಿಪಾಳ್ಯದ ಸಿದ್ಧಾರ್ಥ ಗೌತಮ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತ ಚಲಾಯಿಸಲು ಸಾಲಾಗಿ ನಿಂತಿದ್ದ ಮತದಾರರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಸೆಲ್ಫಿಗಳ ಸಂಭ್ರಮ

ನಗರ ಮತಗಟ್ಟೆಗಳಲ್ಲಿ ಸೆಲ್ಫಿಗಳ ಸಂಭ್ರಮ ಹೆಚ್ಚಾಗಿಯೇ ಇತ್ತು. ಮತದಾನ ಮಾಡಿ ಹೊರಬಂದ ಕೂಡಲೇ ಮತದಾರರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹಲವರು ತಮ್ಮ ಚಿತ್ರಕ್ಕೆ ಸೀಮಿತವಾಗಿದ್ದರು ಕೆಲವರು ತಮ್ಮ ಸಂಗಾತಿ ಕುಟುಂಬದ ಸದಸ್ಯರೊಂದಿಗೆ ಸೆಲ್ಫಿ ತೆಗೆದುಕೊಂಡರು. ಮೊದಲಬಾರಿ ಮತದಾನ ಮಾಡಿದ ಯುವಕರ ಸಡಗರ ಹೆಚ್ಚಾಗಿತ್ತು. ಕುಟುಂಬದವರ ಜೊತೆಗೆ ಚಿತ್ರ ತೆಗೆದುಕೊಡಿ ಎಂದು ಮತಗಟ್ಟೆಯ ಸಿಬ್ಬಂದಿಗೆ ಮನವಿಗಳೂ ಬಂದವು. ಹಲವರು ಇದಕ್ಕೆ ಸಮ್ಮತಿಸಿ ಚಿತ್ರ ತೆಗೆದುಕೊಟ್ಟರು.

ಪ್ರಾಣ ಉಳಿಸಿದ ವೈದ್ಯ

ಜೆ.ಪಿ ನಗರ 8ನೇ ಹಂತದ ಜಂಬೂಸವಾರಿ ದಿಣ್ಣೆಯಲ್ಲಿ ಮತದಾನ ಮಾಡಲು ಬಂದಿದ್ದ ಮಹಿಳೆಯವರು ಇದ್ದಕ್ಕಿದ್ದಂತೆ ಕುಸಿದರು. ತಕ್ಷಣ ಅಲ್ಲೇ ಇದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ್ ಪ್ರಸಾದ್ ಕುಸಿದ ಮಹಿಳೆಗೆ ಸಿಪಿಆರ್ ಮಾಡಿ ಅವರ ಜೀವ ಉಳಿಸಿದರು. ಆ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು.

ಕಾಲೇಜುಗಳಲ್ಲಿ ಮತಯಂತ್ರ

ನಗರದ ಮೂರು ಲೋಕಸಭಾ ಕ್ಷೇತ್ರಗಳ ಮತದಾನದ ಮತಯಂತ್ರಗಳನ್ನು (ಇವಿಎಂ) ಮೂರು ಕಾಲೇಜುಗಳಲ್ಲಿ (ಸ್ಟ್ರಾಂಗ್‌ ರೂಂ) ಇರಿಸಲಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮತಯಂತ್ರಗಳು ವಸಂತನಗರದ ಮೌಂಟ್ ಕಾರ್ಮೆಲ್ ಪಿಯು ಕಾಲೇಜು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತಯಂತ್ರಗಳು ವಿಠ್ಠಲಮಲ್ಯ ರಸ್ತೆಯಲ್ಲಿರುವ ಸೇಂಟ್‌ ಜೋಸೆಫ್ ಕಾಲೇಜು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಜಯನಗರದ ಎಸ್.ಎಸ್.ಎಂ.ಆರ್.ವಿ ಪಿಯು ಕಾಲೇಜಿನಲ್ಲಿರಿಸಲಾಗಿದೆ. ಅದೇ ಕಾಲೇಜುಗಳಲ್ಲಿ ಜೂನ್‌ 4ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಅಂಶಗಳು

l ಮನೆಯಲ್ಲಿ ಮತದಾನದ ಅವಕಾಶವಿದ್ದರೂ ಅನೇಕ ಹಿರಿಜೀವಗಳು ಮತದಾನ ಕೇಂದ್ರಗಳಿಗೆ ಬಂದು ಹಕ್ಕು ಚಲಾಯಿಸಿದರು

l ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ನ ಅಭ್ಯರ್ಥಿಗಳು ಸೇರಿ 21 ಸ್ಪರ್ಧಿಗಳು ಕಣದಲ್ಲಿದ್ದಾರೆ

l ಬ್ಯಾಟರಾಯನಪುರದ ಮೈಕೋಲೇಔಟ್ ಮತಗಟ್ಟೆಯಲ್ಲಿ ಮತದಾರರೊಬ್ಬರು ಆಮ್ಲಜನಕದ ಪೈಪನ್ನು ಜೋಡಿಸಿಕೊಂಡು ಕಾರಿನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದರು

l ಪೀಣ್ಯ ದಾಸರಹಳ್ಳಿ ಸಮೀಪದ ನೆಲಗದರನಹಳ್ಳಿಯ ಎನ್. ವಿಶ್ವ ಭಾರತಿ ವಿದ್ಯಾ ಕೇಂದ್ರದಲ್ಲಿ ನಿಸರ್ಗ ಶಾಲೆಯ ಮುಖ್ಯಸ್ಥೆ 90 ವರ್ಷದ ರುದ್ರಮ್ಮ ಅವರು ಅನಾರೋಗ್ಯದ ನಡುವೆ ಮಗನ ನೆರವಿನಿಂದ ಮತ ಚಲಾಯಿಸಿದರು

l ಶಾಂತಿನಗರದ ಮತಗಟ್ಟೆಯೊಂದರಲ್ಲಿ ಒಂದೇ ಕುಟುಂಬದ 23 ಮತದಾರರು ಮತ ಚಲಾವಣೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT