ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ: ಇಬ್ಬರು ಅನುಭವಿಗಳ ನಡುವಿನ ‘ಕುಸ್ತಿ’

Published 20 ಏಪ್ರಿಲ್ 2024, 1:15 IST
Last Updated 20 ಏಪ್ರಿಲ್ 2024, 1:15 IST
ಅಕ್ಷರ ಗಾತ್ರ

ತುಮಕೂರು: ಒಂದು ಕಡೆ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಪಣತೊಟ್ಟಿದ್ದರೆ, ಮತ್ತೊಂದೆಡೆ ಶತಾಯಗತಾಯ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಪಣ ತೊಟ್ಟಿದೆ. ‘ನೀ ಕೊಡೆ, ನಾ ಬಿಡೆ’ ಎಂಬಂತೆ ಹಣಾಹಣಿ ನಡೆದಿದೆ.

ಕಾಂಗ್ರೆಸ್‌ನ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಬಿಜೆಪಿ– ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವಿಗಾಗಿ ಬೆವರು ಹರಿಸುತ್ತಿದ್ದು, ಇಬ್ಬರು ಅನುಭವಿ ನಾಯಕರ ಕಾದಾಟ ಕುತೂಹಲ ಮೂಡಿಸಿದೆ. 

ಕಳೆದ ಬಾರಿ ದೋಸ್ತಿಗಳಾಗಿದ್ದವರು ಈ ಸಲ ಎದುರಾಳಿಗಳು. ಎದುರಾಳಿಗಳಾಗಿದ್ದವರು ಈಗ ಒಂದಾಗಿ ನಿಂತಿದ್ದಾರೆ. ಕಳೆದ ಬಾರಿ ವಲಸಿಗ ಮತ್ತು ಹೇಮಾವತಿ ನೀರಿನ ವಿಚಾರ ಮುಂದಿಟ್ಟುಕೊಂಡು ಎಚ್.ಡಿ.ದೇವೇಗೌಡ ಅವರನ್ನು ಮಣಿಸಲು ಬಿಜೆಪಿ ಬಳಸಿದ್ದ ಅಸ್ತ್ರವನ್ನೇ ಈಗ ಕಾಂಗ್ರೆಸ್ ಬಳಸುತ್ತಿದೆ. ‘ವಲಸಿಗ’ ಹಾಗೂ ‘ಸ್ಥಳೀಯ’ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.

ಇದಕ್ಕೆ ಪ್ರತಿ ತಂತ್ರವಾಗಿ ನರೇಂದ್ರ ಮೋದಿ, ರಾಮನ ವಿಚಾರ ಪ್ರಸ್ತಾಪಿಸಿ ಭಾವನಾತ್ಮಕವಾಗಿ ಮತದಾರರನ್ನು ಕಟ್ಟಿ ಹಾಕಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. 

ಒಳ ಒಪ್ಪಂದದ ಬೇಗುದಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಒಳ ಒಪ್ಪಂದವೇ ಫಲಿತಾಂಶ ನಿರ್ಧರಿಸಿತ್ತು. ಈ ಬಾರಿಯೂ ಎರಡೂ ಪಕ್ಷಗಳಿಗೆ ಇದು ಕಾಡುತ್ತಿದೆ. ‘ಬೆಳಗಿನ ಜಾವ ಐದು ಗಂಟೆ ಹೊತ್ತಿಗೆ ನಡೆಯುವ ದೂರವಾಣಿ ಸಂಭಾಷಣೆ’ ಫಲಿತಾಂಶದ ದಿಕ್ಕು ಬದಲಿಸಬಹುದು. ಈ ಕುತೂಹಲದ ವಿಚಾರ ರಾಜಕೀಯ ಪಕ್ಷಗಳ ನಾಯಕರ ನಡುವೆ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ಪಂಚ ಗ್ಯಾರಂಟಿ, ಸಂಸದನಾಗಿದ್ದಾಗ ಮಾಡಿದ ಕೆಲಸ ಮತಬುಟ್ಟಿ ತುಂಬಿಸಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೈ ಹಿಡಿಯಬಹುದು. ಜೆಡಿಎಸ್, ಬಿಜೆಪಿಯಿಂದ ವಲಸೆ ಬಂದವರು ಊರುಗೋಲಾಗುತ್ತಾರೆ. ಬೆಲೆ ಏರಿಕೆಯಿಂದ ಜನರು ಬೇಸತ್ತಿರುವುದು ನೆರವಿಗೆ ಬರಬಹುದು ಎಂಬ ಉತ್ಸಾಹದಲ್ಲಿ ಮುದ್ದಹನುಮೇಗೌಡ ಇದ್ದಾರೆ.

ಕಳೆದ ಬಾರಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಒಳ ಒಪ್ಪಂದದಿಂದಾಗಿ ಎಚ್.ಡಿ.ದೇವೇಗೌಡ ಸೋಲಬೇಕಾಯಿತು. ಆದರೆ, ಈ ಬಾರಿ ಬಿಜೆಪಿ– ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಲಾಗಿದೆ. ‘ಮೈತ್ರಿ ಗಟ್ಟಿಯಾಗಿದೆ’. ಎರಡೂ ಪಕ್ಷದವರು ಒಟ್ಟಾಗಿ ಕೆಲಸ ಮಾಡುತ್ತಿರುವುದು ಸೋಮಣ್ಣ ಉತ್ಸಾಹ ಇಮ್ಮಡಿಗೊಳಿಸಿದೆ. ಈ ಒಗ್ಗಟ್ಟೇ ಬಿಜೆಪಿಗೆ ಬಲ ತಂದುಕೊಟ್ಟಿದೆ.

ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಬೆಂಬಲಿಗರು ಪ್ರಚಾರದಿಂದ ದೂರ ಉಳಿದಿರುವುದು ಸೋಮಣ್ಣ ತಲೆಬಿಸಿಗೆ ಕಾರಣವಾಗಿದ್ದರೆ, ತಿಪಟೂರು ಭಾಗದಲ್ಲಿ ಕಾಂಗ್ರೆಸ್ ನಾಯಕರ ನಿರುತ್ಸಾಹ ಮುದ್ದಹನುಮೇಗೌಡರಿಗೆ ತಲೆ ನೋವಾಗಿದೆ.

ಒಕ್ಕಲಿಗರು ದೊಡ್ಡಗೌಡರನ್ನು ನೋಡಿ ಬಿಜೆಪಿ ಬೆಂಬಲಿಸುತ್ತಾರೋ, ಇಲ್ಲವೆ ಮುದ್ದಹನುಮೇಗೌಡ ಕೈ ಹಿಡಿಯುತ್ತಾರೋ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. ಕಳೆದ ಬಾರಿ ದೇವೇಗೌಡರ ಸೋಲಿಗೆ ಕಾರಣರಾದ ಮುದ್ದಹನುಮೇಗೌಡರಿಗೆ ಒಕ್ಕಲಿಗರು ಪಾಠ ಕಲಿಸುವಂತೆ ಪ್ರಚಾರ ಮಾಡಲಾಗುತ್ತಿದೆ. ಪದೇ ಪದೇ ‘ನಾನು ಕಾರಣನಲ್ಲ’ ಎಂದು ಮುದ್ದುಹನುಮೇಗೌಡರು ಹೇಳುವ ಮೂಲಕ ಕೋಪ ತಣಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT