ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಯದುವೀರ್ ಪ್ರಚಾರಕ್ಕೆ ಜಿಟಿಡಿ ಸಾಥ್‌

ಇಲವಾಲ ಹೋಬಳಿಯ ಗ್ರಾಮಗಳಲ್ಲಿ ಮತ ಯಾಚನೆ
Published 20 ಏಪ್ರಿಲ್ 2024, 13:06 IST
Last Updated 20 ಏಪ್ರಿಲ್ 2024, 13:06 IST
ಅಕ್ಷರ ಗಾತ್ರ

ಮೈಸೂರು: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ. ದೇವೇಗೌಡ ಜತೆಗೂಡಿ ಇಲವಾಲ ಹೋಬಳಿ ಹಾಗೂ ಸುತ್ತಮುತ್ತಲ ವಿವಿಧ ಗ್ರಾಮಗಳಲ್ಲಿ ಶನಿವಾರ ಮತ ಯಾಚಿಸಿದರು.

ಜಟ್ಟಿಹುಂಡಿ ಗ್ರಾಮದಲ್ಲಿ ಮಾತನಾಡಿದ ಯದುವೀರ್‌, ‘ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಮೈಸೂರು– ಕೊಡಗು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಿಂದ ಎಲ್ಲರಿಗೂ ಬಹಳ ಅನುಕೂಲವಾಗಿದೆ. ಜಲಜೀವನ ಮಿಷನ್ ಮೂಲಕ 2.5 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸಾಕಷ್ಟು ಮಂದಿಗೆ ಮನೆ ನಿರ್ಮಿಸಿಕೊಡಲಾಗಿದೆ’ ಎಂದರು.

‘ನಮ್ಮ ಪೂರ್ವಜರಂತೆ ನಾನೂ ಜನರಿಗಾಗಿ ಕೆಲಸ ಮಾಡುತ್ತೇನೆ. ಜನರ ಸೇವೆ ಮಾಡುವುದು ನನ್ನ ಪಾಲಿನ ಸೌಭಾಗ್ಯವೆಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.

ನಾಗವಾಲ, ಮಾದಹಳ್ಳಿಯಲ್ಲಿ ಮತ ಯಾಚಿಸಿದ ಬಳಿಕ ಬೀರಿಹುಂಡಿಯಲ್ಲಿ ಮಾತನಾಡಿ, ‘ಹಳ್ಳಿಯ ವಾತಾವರಣ, ಸಮಸ್ಯೆಗಳ ಅರಿವಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣರ ನೋವು–ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡುವೆ. ಬಿಜೆಪಿ ಅಭ್ಯರ್ಥಿ ಅರಮನೆಯಿಂದ ಹೊರಗೆ ಬರುವುದಿಲ್ಲ, ಜನರ ಕಷ್ಟ– ಸುಖಗಳನ್ನು ಕೇಳುವುದಿಲ್ಲ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಅರಮನೆ ಬಿಟ್ಟು ಹಳ್ಳಿಗಳಿಗೆ ಬಂದಿದ್ದೇನೆ’ ಎಂದರು.

‘ಮೈಸೂರು ಮಹಾರಾಜರು ಈ ಭಾಗದ ಸುವರ್ಣ ಯುಗಕ್ಕೆ ಶ್ರಮಿಸಿದ್ದರು. ಈಗ, ಪ್ರಧಾನಿಯವರು ಇಡೀ ದೇಶಕ್ಕೆ ಸುವರ್ಣ ಯುಗ ತರಲು ಕೆಲಸ ಮಾಡುತ್ತಿದ್ದಾರೆ. ಏನೆಲ್ಲಾ ಅಭಿವೃದ್ಧಿ ಕಾರ್ಯ ಮತ್ತು ಸಾಧನೆ ಮಾಡಿದರೂ ಇದು ಟ್ರೇಲರ್ ಮಾತ್ರವೇ ಎಂದು ಹೇಳಿದ್ದಾರೆ. ಟ್ರೇಲರ್‌ ಚೆನ್ನಾಗಿರುವುದರಿಂದ ಸಿನಿಮಾ ಕೂಡ ಚೆನ್ನಾಗಿರುತ್ತದೆ. ಅದನ್ನು ವೀಕ್ಷಿಸಲು ಬಿಜೆಪಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಕವೀಶ್‌ ಗೌಡ, ಕೋಟೆಹುಂಡಿ ಮಹದೇವ್ ಪಾಲ್ಗೊಂಡಿದ್ದರು.

ಬಳಿಕ, ವಿಜಯನಗರ 3ನೇ ಹಂತದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

ಕಾಂಗ್ರೆಸ್ ಅಧಿಕಾರ ಹಣ ಬಲದಿಂದ ಗೆಲ್ಲುವ ಕನಸನ್ನು ಕಾಣುತ್ತಿದೆ. ಗೆಲ್ಲುವುದು ಜನ ಬಲವೋ ಅಥವಾ ಹಣ ಬಲವೋ ಎನ್ನುವುದು ಫಲಿತಾಂಶದ ಬಳಿಕ ಗೊತ್ತಾಗಲಿದೆ

-ಜಿ.ಟಿ. ದೇವೇಗೌಡ ಶಾಸಕ

‘ಒಂದು ಲಕ್ಷ ಮತಗಳ ಲೀಡ್ ನೀಡಿ’

ಜಿ.ಟಿ.ದೇವೇಗೌಡ ಮಾತನಾಡಿ ‘ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಯದುವೀರ್‌ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಲೀಡ್ ನೀಡಬೇಕು’ ಎಂದು ಕೋರಿದರು. ‘ಮೈಸೂರು ಭಾಗಕ್ಕೆ ಮಹಾರಾಜರು ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಳ್ಳಬೇಕು. ಕನ್ನಂಬಾಡಿ ಕಟ್ಟೆ ಕಟ್ಟಿ ರೈತರ ಬದುಕು ಹಸನುಗೊಳಿಸಿದ ವಿವಿಧ ಕಾರ್ಖಾನೆಗಳ ಮೂಲಕ ಉದ್ಯೋಗ ಕಲ್ಪಿಸಿದ ಮಾರುಕಟ್ಟೆಗಳನ್ನು ನಿರ್ಮಿಸಿದ್ದನ್ನು ಮರೆಯಲಾಗದು’ ಎಂದು ತಿಳಿಸಿದರು. ‘ಯದುವೀರ್‌ ಅವರನ್ನು ಖುದ್ದು ನರೇಂದ್ರ ಮೋದಿಯವರೇ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಗೆಲ್ಲಿಸುವ ಮೂಲಕ ಅವರ ಕೈಬಲಪಡಿಸಬೇಕು. ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲ ಕಡೆ ಪ್ರವಾಸ ಮಾಡಿ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಮಾಡಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT