ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಪ್ರಚಾರದಲ್ಲಿ ‘ಮೇಕೆದಾಟು’ ಭರಾಟೆ

ಮೋದಿ ಕೈ ಹಿಡಿದು ಸಹಿ ಮಾಡಿಸುವೆ: ದೇವೇಗೌಡ* ಇಷ್ಟು ದಿನ ಯಾಕೆ ಮಾಡಿಸಲಿಲ್ಲ: ಡಿ.ಕೆ. ಶಿವಕುಮಾರ್‌ ತಿರುಗೇಟು
Published 24 ಏಪ್ರಿಲ್ 2024, 5:17 IST
Last Updated 24 ಏಪ್ರಿಲ್ 2024, 5:17 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಹಾರೋಹಳ್ಳಿಯಲ್ಲಿ ಮಂಗಳವಾರ ಪ್ರಚಾರ ಕೈಗೊಂಡ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಾಯಕರು ಮೇಕೆದಾಟು ಯೋಜನೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡರು. 

ಬಿಜೆಪಿ ಅಭ್ಯರ್ಥಿ, ಅಳಿಯ ಡಾ. ಸಿ.ಎನ್. ಮಂಜುನಾಥ್ ಪರ ಮತಯಾಚಿಸಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ‘ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸಿ ಕೊಡುವುದಾಗಿ ಮೋದಿ ಅವರಿಗೆ ಮಾತು ಕೊಟ್ಟಿದ್ದೇನೆ. ನಾವು ಗೆದ್ದರೆ ಮೇಕೆದಾಟು ಯೋಜನೆಗೆ ಮೋದಿ ಅವರ ಕೈ ಹಿಡಿದು ಸಹಿ ಹಾಕಿಸುವೆ’ ಎಂದರು.

‘ಮೋದಿ ಸಹ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅದಕ್ಕಾಗಿಯೇ ಇಳಿ ವಯಸ್ಸಿನಲ್ಲೂ ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ. ಹೃದಯ ಶಸ್ತ್ರಚಿಕಿತ್ಸೆಯಾದರೂ ವಿಶ್ರಾಂತಿ ಪಡೆಯದೆ ಕುಮಾರಸ್ವಾಮಿ ಅವರು ರಾಜ್ಯ ಸುತ್ತುತ್ತಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ ಪ್ರಚಾರದ ವೇಳೆ ಗೌಡರ ಈ ಮಾತಿಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಹಾಗಾದರೆ ಇಷ್ಟು ದಿನ ಗೌಡರು ಯಾಕೆ ಆ ಕೆಲಸ ಮಾಡಿಸಲಿಲ್ಲ? ತಂದೆ, ಮಗನನ್ನು ತಡೆದವರು ಯಾರು’ ಎಂದು ಪ್ರಶ್ನಿಸಿದರು.

‘ಮೇಕೆದಾಟು ಯೋಜನೆಗಾಗಿ ನಾವು ಹೋರಾಟ ಮಾಡಿ ಕೋರ್ಟ್‌ಗೆ ಬೇಕಾದ ದಾಖಲೆ ಸಲ್ಲಿಸಿದ್ದೇವೆ. ಅಲ್ಲಿ ನಮಗೆ ನ್ಯಾಯ ಸಿಕ್ಕಿ, ಈ ಯೋಜನೆಯನ್ನು ಕಾಂಗ್ರೆಸ್‌ನವರು ಅನುಷ್ಠಾನ ಮಾಡುತ್ತಾರೆ ಎಂದು ಗೊತ್ತಾದ ಮೇಲೆ ಮೋದಿ ಕೈಲಿ ಸಹಿ ಹಾಕಿಸ್ತೀನಿ ಅಂತೀರಾ. ನಿಮ್ಮ ಯಾವ ಸಹಿಯೂ ಬೇಡ’ ಎಂದು ತಿರುಗೇಟು ನೀಡಿದರು.

‘ಮೇಕೆದಾಟು ಯೋಜನೆ ಜಾರಿಗಾಗಿಯೇ ನಾನು ನೀರಾವರಿ ಖಾತೆ ತೆಗೆದುಕೊಂಡಿದ್ದೇನೆ. ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಮಾಡಲಿಲ್ಲ. ಈಗ ಬಂದಿದ್ದೀರಾ? ನಮ್ಮ‌ನೀರು ನಮ್ಮ ಹಕ್ಕು. ಕಾವೇರಿ ನದಿ ವ್ಯಾಪ್ತಿಯ ಜನರ ರಕ್ಷಣೆ ನನ್ನ ಜವಾಬ್ದಾರಿ. ನಮ್ಮ‌ ಕಾಲದಲ್ಲೇ ಯೋಜನೆ ಜಾರಿ ಮಾಡುತ್ತೇವೆ. ನೀವ್ಯಾರೂ ತಲೆ ಕೆಡಿಸಿಕೊಳ್ಳಬೇಡಿ’ ಎಂದು ಶಿವಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT