ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43.29 ಡಿಗ್ರಿ ಸೆಲ್ಸಿಯಸ್‌ನಲ್ಲಿ ಭಾಷಣ ಮಾಡಿ ಚುನಾವಣಾ ಕಾವು ಹೆಚ್ಚಿಸಿದ ರಾಹುಲ್‌

ರಣ ಬಿಸಿಲು ಲೆಕ್ಕಿಸದೇ ಪ್ರಚಾರ ಸಭೆಗೆ ಬಂದ ಜನ
Published 2 ಮೇ 2024, 23:53 IST
Last Updated 2 ಮೇ 2024, 23:53 IST
ಅಕ್ಷರ ಗಾತ್ರ

ರಾಯಚೂರು: ಮಲೆನಾಡಿನಿಂದ ಬಿಸಿಲೂರಿಗೆ ಬಂದಿಳಿದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ 43.29 ಡಿಗ್ರಿ ಸೆಲ್ಸಿಯಸ್‌ ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲೇ ಭಾಷಣ ಮಾಡಿ ಮತ್ತಷ್ಷು ಚುನಾವಣಾ ಕಾವು ಎಬ್ಬಿಸಿದರು.

ಒಂದು ತಾಸು ತಡವಾಗಿ ಬಂದ ರಾಹುಲ್‌ ಗಾಂಧಿ ಅವರು ಸ್ವಾಗತ ಭಾಷಣಕ್ಕೂ ಹೆಚ್ಚಿನ ಅವಕಾಶ ಕೊಡದೇ ನೇರವಾಗಿಯೇ ಭಾಷಣ ಮಾಡಿದರು.

ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ಪ್ರಜ್ವಲ್‌ ರೇವಣ್ಣ ಪ್ರಕರಣ ಉಲ್ಲೇಖಿಸಿ ತಮ್ಮ ಭಾಷಣದಲ್ಲಿ ಮೋದಿ ಹಾಗೂ ಅಮಿತಾ ಷಾ ಅವರನ್ನು ಜರಿದರು.

ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡುವ ದಿಸೆಯಲ್ಲಿ ಜನರು ಇಂಡಿಯಾ ಒಕ್ಕೂಟಕ್ಕೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ವೇದಿಕೆ ಬರುತ್ತಿದ್ದಂತೆಯೇ ಜನರತ್ತ ಕೈಬೀಸಿ ಶುಭ ಹಾರೈಸಿದರು. ರಾಹುಲ್‌ ಗಾಂಧಿ ಭಾಷಣ ಆರಂಭಿಸುತ್ತಿದ್ದಂತೆಯೇ ಜನ ಸಿಳ್ಳೆ ಹಾಕಿ ಘೋಷಣೆ ಮೊಳಗಿಸಿದರು.

ಬೆಂಕಿ ಬಿಸಿಲು ಹಾಗೂ ವಿಪರೀತ ಬಿಸಿಲು ಇದ್ದರೂ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಜನರಲ್ಲಿನ ಉತ್ಸಾಹ ಕಡಿಮೆಯಾಗಿರಲಿಲ್ಲ. ಕೊಡೆ ಹಿಡಿದು ಕೊಂಡು, ತಲೆಗೆ ಟವಾಲ್‌ ಸುತ್ತಿಕೊಂಡು ಸಮಾವೇಶಕ್ಕೆ ಬಂದಿದ್ದರು.

ವೇದಿಕೆ ಬಹಳ ದೂರವಿದ್ದ ಕಾರಣ 10 ಕಡೆ ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿತ್ತು. ಹಿಂದೆ ಕುಳಿತವರು ಎಲ್‌ಇಡಿ ಟಿವಿಯಲ್ಲೇ ನಾಯಕರ ಭಾಷಣ ಆಲಿಸಿದರು. ಸೆಖೆ ತಡೆದುಕೊಳ್ಳಲು ಸಾಧ್ಯವಾಗದೇ ಅನೇಕ ಜನ ಕೂಲರ್‌ ಸುತ್ತ ಮುಗಿಬಿದ್ದಿದ್ದರು.


ಸುಸ್ತಾದ ಪೊಲೀಸ್‌ ಸಿಬ್ಬಂದಿ:

ಪ್ರಚಾರ ಸಭೆಗೆ ಆಗಮಿಸಿದ್ದ ಜನರನ್ನು ನಿಯಂತ್ರಿಸಲು ನಿಯೋಜಿಸಿದ್ದ ಪೊಲೀಸರು ಬಿಸಿಲಿಗೆ ಸುಸ್ತಾಗಿದ್ದರು. ಬಸವೇಶ್ವರ ವೃತ್ತದ ಬಳಿ ಒಂದೇ ರಸ್ತೆ ಇರುವ ಕಾರಣ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರಿಗೆ ಸಾಕುಸಾಕಾಯಿತು.

ನಗರದ ಹೊರವಲಯದಲ್ಲಿ ಬೈಪಾಸ್‌ ರಸ್ತೆ ಮೂಲಕ ವಾಹನಗಳು ಸಾಗುವಂತೆ ನೋಡಿಕೊಳ್ಳಲಾಯಿತು. ಮಂತ್ರಾಲಯ, ಶ್ರೀಶೈಲ ಹಾಗೂ ಕರ್ನೂಲ್‌ ಕಡೆಗೆ ಹೋಗುವ ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸಿದರು.

ನಾಳೆ ರಾಯಚೂರಲ್ಲಿ ಅಣ್ಣಾಮಲೈ ರೋಡ್‌ ಶೋ

ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರು ಮೇ 4ರಂದು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ ಸಂತೋಷ ಹಬ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ವಿವಿಧ ಕ್ಷೇತ್ರಗಳ ಚಿಂತಕರೊಂದಿಗೆ ಚರ್ಚೆ ನಡೆಸಲಿದೆ.

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ನಡೆಯಬೇಕಿದ್ದ ತೆಲುಗು ಚಲನಚಿತ್ರ ನಟ ಪವನ ಕಲ್ಯಾಣ ರೋಡ್‌ಶೋ ಆಗಲೇ ರದ್ದಾಗಿದೆ. ಮಾಜಿ ಮುಖ್ಯಮಮತ್ರಿ ಬಿ.ಎಸ್‌.ಯಡಿಯೂರಪ್ಪ ಕಾರ್ಯಕ್ರಮ ಇನ್ನೂ ಅಂತಿಮವಾಗಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಲಿಂಗಸುಗೂರಲ್ಲಿ ಮೇ 3ರಂದು ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ. ರಾಯಚೂರಲ್ಲಿ ಅವರ ಕಾರ್ಯಕ್ರಮ ಇಲ್ಲ. ರಾಯಚೂರಲ್ಲಿ ನಡೆಯಬೇಕಿದ್ದ ಮೋದಿ ಕಾರ್ಯಕ್ರಮ ರದ್ದಾಗಿದೆ.

ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ.ರವಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಹೋಗಿದ್ದಾರೆ.

ಬೆಂಕಿ ಬಿಸಿಲಿನಿಂದಾಗಿ ಬಿಜೆಪಿಯ ಮುಖಂಡರು ರಾಯಚೂರಿಗೆ ಪ್ರಚಾರ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಿಂಧನೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಎರಡನೇ ಬಾರಿ ಬಂದು ಪ್ರಚಾರ ಮಾಡಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಕೆ.ಎಚ್‌.ಮುನಿಯಪ್ಪ, ಎಚ್.ಆಂಜನೇಯ, ಶಾಸಕ ತನ್ವೀರ್‌ ಸೇಠ್, ಯತೀಂದ್ರ ಸಿದ್ದರಾಮಯ್ಯ ಬಂದು ಹೋಗಿದ್ದಾರೆ.

ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಬಂದಿದ್ದ ವ್ಯಕ್ತಿ
ಬಿಸಿಲಿನ ಝಳದಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಬಂದಿದ್ದ ವ್ಯಕ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT