ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಪ್ರಚಾರಕ್ಕಾಗಿ ರಾಜ್ಯಕ್ಕೆ ಬರಲಿದ್ದಾರೆ ಮೋದಿ, ಶಾ, ಯೋಗಿ

Published 17 ಏಪ್ರಿಲ್ 2024, 15:44 IST
Last Updated 17 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಹಂತದ ಮತದಾನಕ್ಕೆ (ಏ.26) ಇನ್ನೂ ಒಂಬತ್ತು ದಿನಗಳು ಬಾಕಿ ಇದ್ದು, ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರಕ್ಕಾಗಿ ರಾಜ್ಯಕ್ಕೆ ಸಾಲು ಸಾಲಾಗಿ ಬರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏ.20ಕ್ಕೆ ಬರಲಿದ್ದಾರೆ. ಅಮಿತ್ ಶಾ ಅವರು ಏ.23 ಮತ್ತು 24, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ. 24ರಂದು ಪ್ರಚಾರ ನಡೆಸಲಿದ್ದಾರೆ. ಜೆ.ಪಿ.ನಡ್ಡಾ ಮತ್ತು ರಾಜನಾಥ್‌ ಸಿಂಗ್‌ ಅವರ ದಿನಾಂಕ ನಿಗದಿ ಆಗಬೇಕಾಗಿದೆ ಎಂದು ಬಿಜೆಪಿ ಪ್ರಧಾನಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಏ.20ರಂದು ಮಧ್ಯಾಹ್ನ 3.30ಕ್ಕೆ ಚಿಕ್ಕಬಳ್ಳಾಪುರದಲ್ಲಿ ಮತ್ತು ಸಂಜೆ 5.30ಕ್ಕೆ ಬೆಂಗಳೂರು ಅರಮನೆ ಮೈದಾನದಲ್ಲಿ ‘ವಿಜಯ ಸಂಕಲ್ಪ’ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಅವರು, ಏ. 23ರಂದು ಬೆಳಿಗ್ಗೆ 10ಕ್ಕೆ ಯಶವಂತಪುರದಲ್ಲಿ ರೋಡ್‌ ಶೋ, 12.30ಕ್ಕೆ ಯಲಹಂಕದಲ್ಲಿ ಸಾರ್ವಜನಿಕ ಸಭೆ, ಸಂಜೆ 4ಕ್ಕೆ ಬೊಮ್ಮನಹಳ್ಳಿಯಲ್ಲಿ ರೋಡ್‌ ಶೋ, ರಾತ್ರಿ 7ಕ್ಕೆ ಮಹದೇವಪುರದಲ್ಲಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಏ.24ರ ಬೆಳಿಗ್ಗೆ 10ಕ್ಕೆ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಮಧ್ಯಾಹ್ನ 1ಕ್ಕೆ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗವಹಿಸಲಿದ್ದು, ಸಂಜೆ 5ಕ್ಕೆ ಹುಬ್ಬಳ್ಳಿಯಲ್ಲಿ ರೋಡ್ ಶೋನಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಏ.24ರಂದು ಬೆಳಿಗ್ಗೆ 10ಕ್ಕೆ ಆರ್‌.ಆರ್‌.ನಗರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಮಧ್ಯಾಹ್ನ 12 ಕ್ಕೆ ಮಡಿಕೇರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಹಿಸಲಿದ್ದು, ಸಂಜೆ 4ಕ್ಕೆ ಉಡುಪಿಯ ಮಲ್ಪೆಯ ಸಮುದ್ರ ತೀರದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. 

ಮೋದಿಗಾಗಿ ಈ ಭಾನುವಾರ: ಏ. 21 ಮತ್ತು 28ರಂದು ‘ನಾನು ಮೋದಿ ಪರಿವಾರ, ಮೋದಿಗಾಗಿ ಮೀಸಲು ಈ ಭಾನುವಾರ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಏ. 21ರಂದು ರಾಜ್ಯದ ವಿವಿಧೆಡೆ 15 ಲಕ್ಷಕ್ಕೂ ಹೆಚ್ಚು ಮೋದಿ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ವಿವಿಧ ಬಡಾವಣೆಗಳು, ಬೀದಿ, ಉದ್ಯಾನಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮೊದಲ ಹಂತದ ಚುನಾವಣೆ ನಡೆಯುವ 28 ಸಾವಿರ ಬೂತ್‌ಗಳಲ್ಲಿ ಪ್ರತಿಯೊಂದು ಬೂತ್‌ಗೂ ತಲಾ 50 ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT