ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಫಲಿತಾಂಶದ ಮೇಲೆ ‘ನೋಟಾ’ ಪರಿಣಾಮ

Published 13 ಮೇ 2023, 19:32 IST
Last Updated 13 ಮೇ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಗಾಂಧಿನಗರ, ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಅಧಿಕವಿದೆ. ಬಹುತೇಕ ಕ್ಷೇತ್ರಗಳಲ್ಲಿ 2 ಸಾವಿರಕ್ಕೂ ಅಧಿಕ ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. 

ಚುನಾವಣೆ ಕಣದಲ್ಲಿ ಇರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಚ್ಛೆ ಇಲ್ಲದೆ ಇದ್ದರೆ ನೋಟಾಗೆ ಮತ ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ. ಇತ್ತೀಚಿನ ಚುನಾವಣೆಗಳಲ್ಲಿ ನೋಟಾಕ್ಕೆ ಮತ ಚಲಾಯಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದು ಅಭ್ಯರ್ಥಿಗಳ ಲೆಕ್ಕಾಚಾರವನ್ನು ತಲೆ ಕೆಳಗೆ ಮಾಡುತ್ತಿದೆ. ಗಾಂಧಿನಗರದಲ್ಲಿ ದಿನೇಶ್ ಗುಂಡೂರಾವ್ ಅವರು 54,118 ಮತಗಳಿಸಿದರೆ, ಸಪ್ತಗಿರಿ ಗೌಡ ಅವರು 54,013 ಮತ ಪಡೆದುಕೊಂಡರು. ಗೆಲುವಿನ ಅಂತರ 105 ಮತಗಳು ಮಾತ್ರ. ಈ ಕ್ಷೇತ್ರದಲ್ಲಿ 1,692 ಮಂದಿ ನೋಟಾ ಚಲಾಯಿಸಿದ್ದಾರೆ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಜಯನಗರದಲ್ಲಿಯೂ ಚುನಾವಣೆ ಫಲಿತಾಂಶದಲ್ಲಿ ಗೆಲುವಿನ ಅಂತರಕ್ಕಿಂತ ನೋಟಾ ಮತಗಳೇ ಹೆಚ್ಚಿವೆ. ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಹಾಗೂ ಬಿಜೆಪಿಯ ಸಿ.ಕೆ. ರಾಮಮೂರ್ತಿ ತಲಾ 57 ಸಾವಿರ ಮತ ಪಡೆದಿದ್ದರು. ಗೆಲುವಿನ ಅಂತರ ಎರಡಂಕಿ ಇದ್ದಿದ್ದರಿಂದ ಗೊಂದಲ ಸೃಷ್ಟಿಯಾಗಿ, ಮರು ಎಣಿಕೆ ನಡೆಯಿತು. ಈ ಕ್ಷೇತ್ರದಲ್ಲಿ 1,184 ಮತಗಳು ನೋಟಾಕ್ಕೆ ಚಲಾವಣೆಯಾಗಿದೆ. 

ಮಹದೇವಪುರ ವಿಧಾನಸಭೆ ಕ್ಷೇತ್ರದಲ್ಲಿ 4,758 ಮಂದಿ ನೋಟಾಕ್ಕೆ ಮತ ಹಾಕಿದ್ದಾರೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ನೋಟಾಕ್ಕೆ ಚಲಾವಣೆಯಾದ ಗರಿಷ್ಠ ಮತಗಳು ಇವಾಗಿವೆ. ಕೆ.ಆರ್. ಪುರದಲ್ಲಿ 4,377 ಹಾಗೂ ಬೆಂಗಳೂರು ದಕ್ಷಿಣದಲ್ಲಿ 3,997 ಮತಗಳು ನೋಟಾಕ್ಕೆ ಚಲಾವಣೆಯಾಗಿದೆ. 

ರಾಜರಾಜೇಶ್ವರಿನಗರ, ಮಹಾಲಕ್ಷ್ಮಿಲೇಔಟ್, ಮಲ್ಲೇಶ್ವರ, ಸರ್ವಜ್ಞನಗರ, ಪದ್ಮನಾಭನಗರ, ಬೊಮ್ಮನಹಳ್ಳಿ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ ಹಾಗೂ ಆನೇಕಲ್‌ನಲ್ಲಿ ತಲಾ 2 ಸಾವಿರಕ್ಕೂ ಅಧಿಕ ಮತಗಳು ನೋಟಾಕ್ಕೆ ಚಲಾಯಿಸಲ್ಪಟ್ಟಿದೆ. 

ಸ್ಪರ್ಧೆ ಒಡ್ಡದ ಎಎಪಿ, ಕೆಆರ್‌ಎಸ್

ಬೆಂಗಳೂರು: ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ಮತ್ತಿತರ ಪಕ್ಷಗಳು ಶೂನ್ಯ ಸಾಧನೆ ಮಾಡಿದ್ದು, ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸ್ಪರ್ಧೆ ಒಡ್ಡಲು ವಿಫಲವಾಗಿವೆ.

ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್‌ ಆದ್ಮಿ ಪಕ್ಷ (ಎಎಪಿ) ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಅಚ್ಚರಿ ಮೂಡಿಸುವ ತವಕದಲ್ಲಿತ್ತು. ನಗರದ ವಿವಿಧ ಕ್ಷೇತ್ರಗಳಿಗೆ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಎಂಬಿಎ ಪದವೀಧರರು, ಮಾಜಿ ಸೈನಿಕರು, ವೈದ್ಯರು, ವಕೀಲರು, ವಿದೇಶಗಳಲ್ಲಿ ಕೆಲಸ ಮಾಡಿದ್ದವರಿಗೆ ಟಿಕೆಟ್‌ ಘೋಷಿಸಿತ್ತು. ಆದರೆ, ಅವರು ಪ್ರಬಲ ಅಭ್ಯರ್ಥಿಗಳನ್ನು ಎದುರಿಸಿ, ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ, ನಿವೃತ್ತ ಕೆಎಎಸ್‌ ಅಧಿಕಾರಿ ಕೆ.ಮಥಾಯ್‌ ಶಾಂತಿನಗರ ಕ್ಷೇತ್ರದಲ್ಲಿ ಎಎಪಿಯಿಂದ ಸ್ಪರ್ಧಿಸಿದ್ದರು. ಅವರು ಪ್ರಮುಖ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಸವಾಲು ಹಾಕಬಹುದು ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿತ್ತು. ಆದರೆ, ಶೇ 1.34ರಷ್ಟು ಮಾತ್ರ ಮತ ಪಡೆದಿದ್ದಾರೆ. ಪುಲಿಕೇಶಿ ನಗರದಿಂದ ಸ್ಪರ್ಧಿಸಿದ್ಧ ಸಾಫ್ಟ್‌ವೇರ್‌ ಎಂಜಿನಿಯರ್ ಸುರೇಶ್‌ ರಾಥೋಡ್‌ ಶೇ 0.53ರಷ್ಟು ಮತ ಪಡೆದಿದ್ದಾರೆ. ಕ್ಷೇತ್ರದಲ್ಲಿ ವಿಜೇತರಾದ ಕಾಂಗ್ರೆಸ್ ಅಭ್ಯರ್ಥಿ ಎ.ಸಿ. ಶ್ರೀನಿವಾಸ್ ಶೇ 66.72ರಷ್ಟು ಮತ ಪಡೆದಿದ್ದಾರೆ.

ಸುರತ್ಕಲ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನಗರದಲ್ಲಿ ಆರುಶಿ ಫೌಂಡೇಶನ್‌ ಸ್ಥಾಪಿಸಿರುವ ಮೋಹನ ದಾಸರಿ ಸಿ.ವಿ.ರಾಮನ್‌ ನಗರದಲ್ಲಿ ಸ್ಪರ್ಧಿಸಿದ್ದರು. ಅವರು ಶೇ 2.29ರಷ್ಟು ಮಾತ್ರ ಮತ ‍ಪಡೆದಿದ್ದಾರೆ. ದೇಶದ ಪ್ರಮುಖ ತೈಲ ಕಂಪನಿಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದ 70 ವರ್ಷದ ಸೀತಾರಾಮ್‌ ಗುಂಡಪ್ಪ, ಬೊಮ್ಮನಹಳ್ಳಿಯಿಂದ ಸ್ಪರ್ಧಿಸಿದ್ದರು. ಅವರು ಶೇ 0.92ರಷ್ಟು ಮಾತ್ರ ಮತ ಪಡೆದಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡಿ, 300ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿತ್ತು. ನಗರದಲ್ಲಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಿತ್ತು. ಅವರು ಸಹ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸ್ಪರ್ಧೆ ಒಡ್ಡಲು ವಿಫಲರಾಗಿದ್ದಾರೆ. ಅದೇ ರೀತಿ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳಿಗೆ ಸಹ ಹೆಚ್ಚಿನ ಪ್ರಮಾಣದಲ್ಲಿ ಮತ ಪಡೆಯಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT