ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಲೋಕಸಭೆ ಕ್ಷೇತ್ರ: ಇಲ್ಲಿ ಅಭಿವೃದ್ಧಿ, ಗ್ಯಾರಂಟಿ, ಹಿಂದುತ್ವದ ಸದ್ದು

Published 3 ಮೇ 2024, 23:18 IST
Last Updated 3 ಮೇ 2024, 23:18 IST
ಅಕ್ಷರ ಗಾತ್ರ

ಶಿವಮೊಗ್ಗ: ಆರ್‌ಎಸ್‌ಎಸ್‌–ಬಿಜೆಪಿಯ ಶಕ್ತಿ ಕೇಂದ್ರವಾಗಿ ಹಾಗೂ ರಾಜಕೀಯ ವಿದ್ಯಮಾನಗಳ ಕಾರಣಕ್ಕೆ ಗಮನ ಸೆಳೆಯುವ ಶಿವಮೊಗ್ಗ ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಈಶ್ವರಪ್ಪ ಬಂಡಾಯದಿಂದ ರಾಜ್ಯವ್ಯಾಪಿ ಸುದ್ದಿಯಲ್ಲಿದೆ.

ಕ್ಷೇತ್ರದಲ್ಲಿ ಕಳೆದ ನಾಲ್ಕು ಚುನಾವಣೆಗಳಲ್ಲೂ ಮುಂಚೂಣಿಯಲ್ಲಿದ್ದ ಹಿಂದುತ್ವ–ಅಭಿವೃದ್ಧಿ ಅಜೆಂಡಾಗಳು ಬಿಜೆಪಿಯನ್ನು ಗೆಲುವಿನ ದಡ ಸೇರಿಸಿದ್ದವು. ಆದರೆ ಈ ಬಾರಿ ಅವೆರಡೂ ಕವಲು ಹಾದಿಯಲ್ಲಿವೆ. ರಾಷ್ಟ್ರಭಕ್ತರ ಬಳಗದ ಹೆಸರಲ್ಲಿ ‘ಹಿಂದುತ್ವ’ ಹಾಗೂ ಬಿಜೆಪಿಯ ‘ಅಭಿವೃದ್ಧಿ’ ಮಂತ್ರ ಮೊದಲ ಬಾರಿಗೆ ಮುಖಾಮುಖಿ ಆಗಿವೆ. ಕಾಂಗ್ರೆಸ್‌ನ ‘ಗ್ಯಾರಂಟಿ’ಯೂ ಸದ್ದು ಮಾಡುತ್ತಿರುವುದರಿಂದ ಬಿಸಿಲ ಝಳದ ನಡುವೆಯೇ ಇಲ್ಲಿ ತ್ರಿಕೋನ ಸ್ಪರ್ಧೆ ಕಳೆಗಟ್ಟಿದೆ.

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭೆ ಕ್ಷೇತ್ರವು ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಮಲೆನಾಡು–ಅರೆ ಮಲೆನಾಡು, ಕರಾವಳಿಯ ಮತದಾರರನ್ನು ಹೊಂದಿದ್ದು ಕ್ಷೇತ್ರದ ವಿಶೇಷ. ಈ ಬಾರಿಯ ಚುನಾವಣೆ ಸತತ ಐದನೇ ಬಾರಿಗೆ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಬಂಗಾರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ ಕುಟುಂಬಗಳ ನಡುವಿನ ಸಮರಕ್ಕೆ ವೇದಿಕೆ ಒದಗಿಸಿದೆ.

2009ರಿಂದ 2019ರವರೆಗೆ ಒಂದು ಉಪಚುನಾವಣೆ ಸೇರಿ ಇಲ್ಲಿ ನಡೆದಿರುವ ನಾಲ್ಕು ಚುನಾವಣೆಗಳಲ್ಲಿ ಯಡಿಯೂರಪ್ಪ ಹಾಗೂ ಪುತ್ರ ಬಿ.ವೈ. ರಾಘವೇಂದ್ರ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಸೋಲಿನ ಸರಪಳಿ ತುಂಡರಿಸಲು ಬಂಗಾರಪ್ಪ ಕುಟುಂಬ ತೀವ್ರ ಪ್ರಯತ್ನ ನಡೆಸಿದೆ. 2014ರಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ತವರಿನಲ್ಲಿ 10 ವರ್ಷಗಳ ನಂತರ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದಾರೆ. 2009ರಲ್ಲಿ ಎಸ್‌.ಬಂಗಾರಪ್ಪ ವಿರುದ್ಧ 2018ರ ಉಪಚುನಾವಣೆ ಹಾಗೂ 2019ರ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರೊಂದಿಗೆ ಮುಖಾಮುಖಿಯಾಗಿದ್ದ ಬಿ.ವೈ.ರಾಘವೇಂದ್ರ, ಈ ಬಾರಿ ಗೀತಾ ಎದುರು ಪೈಪೋಟಿಯ ಮೂಲಕ ಅಪ್ಪ ಹಾಗೂ ಇಬ್ಬರು ಮಕ್ಕಳ ವಿರುದ್ಧ ಸ್ಪರ್ಧಿಸಿದ ದಾಖಲೆ ಬರೆಯುತ್ತಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಈಡಿಗ, ಬ್ರಾಹ್ಮಣ, ಮುಸ್ಲಿಂ, ಪರಿಶಿಷ್ಟ ಜಾತಿ, ಲಿಂಗಾಯತ, ಒಕ್ಕಲಿಗರು ಬಹುಸಂಖ್ಯಾತರು. ಕುರುಬ, ಆರ್ಯವೈಶ್ಯ ಹಾಗೂ ತಮಿಳು ಸಮುದಾಯದವರೂ ನಿರ್ಣಾಯಕವಾಗಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಮುಸ್ಲಿಮರನ್ನು ಹೊರತುಪಡಿಸಿ ಮಿಕ್ಕವರನ್ನು ‘ಹಿಂದುತ್ವ’ದ ನೆಲೆಯಲ್ಲಿ ಒಟ್ಟುಗೂಡಿಸುತ್ತಿತ್ತು. ಇದಕ್ಕೆ ನರೇಂದ್ರ ಮೋದಿ ಅಲೆ, ಯಡಿಯೂರಪ್ಪ ವರ್ಚಸ್ಸು ಕೂಡ ನೆರವಾಗುತ್ತಿದ್ದವು. ಆದರೆ, ಈ ಬಾರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿ ಕಣದಲ್ಲಿದ್ದಾರೆ. ರಾಷ್ಟ್ರಭಕ್ತರ ಬಳಗದ ಹೆಸರಲ್ಲಿ ‘ಹಿಂದುತ್ವ’ದ ಮತಬುಟ್ಟಿಗೆ ಕೈಹಾಕಿದ್ದಾರೆ. 

ಕ್ಷೇತ್ರದಲ್ಲಿರುವ ನಾಲ್ವರು ಬಿಜೆಪಿ, ಜೆಡಿಎಸ್‌ನ ಒಬ್ಬ ಶಾಸಕರು ರಾಘವೇಂದ್ರ ಅವರ ನೆರವಿಗೆ ನಿಂತಿದ್ದಾರೆ. 10 ವರ್ಷಗಳಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ಹಿಡಿದು ಅವರು ಮತ ಕೇಳುತ್ತಿದ್ದಾರೆ.

ಕಳೆದ ಬಾರಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸೋತಿದ್ದ ಮಧು ಬಂಗಾರಪ್ಪ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್‌ ಸೇರಿ ಗೆದ್ದು ಸಚಿವರಾಗಿದ್ದಾರೆ. ಅಕ್ಕ ಗೀತಾ ಬೆನ್ನಿಗೆ ನಿಂತಿದ್ದಾರೆ. ಪತಿ, ನಟ ಶಿವರಾಜಕುಮಾರ್ ಅವರ ವರ್ಚಸ್ಸು ಗೀತಾ ಬೆನ್ನಿಗಿದ್ದು, ಕಾಂಗ್ರೆಸ್‌ನ ‘ಗ್ಯಾರಂಟಿ’ ಯೋಜನೆಗಳ ಬಲ ಬೆಂಬಲಕ್ಕಿದೆ. ‘ಮನೆ ಮಗಳಿಗೆ ಮತ ಕೊಡಿ’ ಎಂದು ಭಾವನಾತ್ಮಕವಾಗಿ ಗೀತಾ ಮತ ಕೇಳುತ್ತಿದ್ದಾರೆ.

ಪ್ರಧಾನಿ ಮೋದಿ ಭಾವಚಿತ್ರ ಇಟ್ಟುಕೊಂಡು ‘ಏಕಾಂಗಿ’ ಹೋರಾಟ ನಡೆಸಿದವರು ಈಶ್ವರಪ್ಪ. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಹೆಚ್ಚು ಲೀಡ್ ಕೊಟ್ಟಿದ್ದ ಬೈಂದೂರು, ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಈಶ್ವರಪ್ಪ, ಹಿಂದುತ್ವದ ಮಂತ್ರ ಪಠಿಸುತ್ತಿದ್ದಾರೆ. ಬಿಜೆಪಿಯಲ್ಲಿರುವ ಹಿಂದುತ್ವದ ಬೆಂಬಲಿಗರು, ಯಡಿಯೂರಪ್ಪ ಕುಟುಂಬ ರಾಜಕಾರಣದ ವಿರೋಧಿಗಳೇ ‘ಅದೃಶ್ಯ’ ಮತದಾರರ ರೂಪದಲ್ಲಿ ಬೆನ್ನಿಗಿದ್ದಾರೆ ಎಂದು ನಂಬಿದ್ದಾರೆ.

ಅನುಕಂಪ, ಬಂಡಾಯದ ಬೇಗೆಯಿಂದ ಶಿವಮೊಗ್ಗ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದರೂ ಮಲೆನಾಡ ಮತದಾರರು ಮಾತ್ರ ಮೂವರಲ್ಲಿ ಯಾರು ಹಿತವರು ಎಂಬ ಗುಟ್ಟು ಬಿಟ್ಟುಕೊಡದೇ ಮೌನ ಹೊದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT