ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿ ಮಾತಿನ ಬಾಣಗಳ ಭರಾಟೆ: ಕಾಂಗ್ರೆಸ್‌ನದ್ದು ಗ್ಯಾರಂಟಿ, ಬಿಜೆಪಿಯದ್ದು ಚೊಂಬು

Published 20 ಏಪ್ರಿಲ್ 2024, 4:14 IST
Last Updated 20 ಏಪ್ರಿಲ್ 2024, 4:14 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಗ್ಯಾರಂಟಿ’ ಪದ ಕಾಂಗ್ರೆಸ್‌ನ ಕಾಪಿರೈಟ್‌. ಅದನ್ನು ಪ್ರಧಾನಿ ನರೇಂದ್ರ ಮೋದಿ ಕಳವು ಮಾಡಿದ್ದಾರೆ. ಹೀಗಾಗಿಯೇ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಪದೇಪದೇ ‘ಗ್ಯಾರಂಟಿ’ ಪದ ಬಳಕೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್‌ ಸುರ್ಜೇವಾಲಾ ಲೇವಡಿ ಮಾಡಿದರು.

‘ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿ ಯೋಜನೆಯನ್ನು ಮೋದಿ ಹಾಗೂ ಬಿ.ಎಸ್.ಯಡಿಯೂರಪ್ಪ ಅಪಹಾಸ್ಯ ಮಾಡಿದ್ದರು. ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕೆ ಬರೊಲ್ಲ. ಗ್ಯಾರಂಟಿಗಳ ಅನುಷ್ಠಾನ ಸಾಧ್ಯವಿಲ್ಲ ಎಂದು ಅಣಕವಾಡಿದ್ದರು. ಈಗ ಗ್ಯಾರಂಟಿ ಹೆಸರು ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದ್ದಾರೆ’ ಎಂದು ಮೂದಲಿಸಿದರು.

‘ಸುಳ್ಳು ಹೇಳು, ಮತ್ತಷ್ಟು ಸುಳ್ಳು ಹೇಳು, ಮತ್ತೆ ಮತ್ತೆ ಸುಳ್ಳು ಹೇಳು’ ಎಂಬ ತಂತ್ರದ ಮೂಲಕ ಕರ್ನಾಟಕದ 27 ಜನ ಬಿಜೆಪಿ ಸಂಸದರು ರಾಜ್ಯದ ಜನರಿಗೆ ಕಳೆದ ಐದು ವರ್ಷಗಳಲ್ಲಿ ಬರೀ ಚೊಂಬು ಕೊಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಆ ಚೊಂಬನ್ನು ಅವರಿಗೆ ಹಿಂತಿರುಗಿಸಲಿದ್ದಾರೆ ಎಂದರು.

ಚಿತ್ರದುರ್ಗ ವರದಿ:

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಒಂದು ತಂಡವಾಗಿ ಆಡಳಿತ ನಡೆಸುತ್ತಿದೆ. ಪಕ್ಷವು ಆಡಳಿತದ ಅವಧಿಯನ್ನು ಪೂರ್ಣಗೊಳಿಸಲಿದೆ’ ಎಂದು ಸುರ್ಜೇವಾಲಾ ಹೇಳಿದರು.

‘ಸಿದ್ದರಾಮಯ್ಯ ಸಮರ್ಥ ಮುಖ್ಯಮಂತ್ರಿ. ಸಚಿವ ಸಂಪುಟದ ಸದಸ್ಯರು, ಶಾಸಕರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ತಂಡವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರಕ್ಕೆ ಯಾವುದೇ ಸಮಸ್ಯೆ ಎದುರಾಗದು’ ಎಂದು ಸ್ಪಷ್ಟನೆ ನೀಡಿದರು.

ಚಿಕ್ಕಮಗಳೂರು ವರದಿ:

‘ಕರ್ನಾಟಕದ ಜನರ ಮುಂದೆ ಎರಡು ಮಾದರಿಗಳಿದ್ದು, ಒಂದು ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಮಾದರಿ, ಮತ್ತೊಂದು ಮೋದಿ ಸರ್ಕಾರ ನೀಡಿದ ಚೊಂಬಿನ ಮಾದರಿ. ಇದೇ ಖಾಲಿ ಚೊಂಬನ್ನು ಜನ ಮೋದಿ ಅವರಿಗೆ ವಾಪಸ್ ನೀಡಲಿದ್ದಾರೆ’ ಎಂದು ಸುರ್ಜೇವಾಲಾ ಲೇವಡಿ ಮಾಡಿದರು.

‘‌ಬರ ಸ್ಥಿತಿ ನಿರ್ವಹಣೆಗೆ ₹17 ಸಾವಿರ ಕೋಟಿ ಕೇಳಿದರೆ ಮೋದಿ ಅವರು ನೀಡಿದ್ದು ಖಾಲಿ ಚೊಂಬು ಮಾತ್ರ. ಭದ್ರ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ ಪ್ರಕಾರ ₹6 ಸಾವಿರ ಕೋಟಿ ಕೇಳಿದರೆ ನೀಡಿದ್ದು ಚೊಂಬು, ರಾಜ್ಯದಲ್ಲಿ ಸಂಗ್ರಹವಾಗಿರುವ ತೆರಿಗೆಯಲ್ಲಿ ಪಾಲು ಕೇಳಿದರೆ ಮೋದಿ ಕೊಟ್ಟಿರುವುದು ಚೊಂಬು, ಎಲ್ಲಾ ಬ್ಯಾಂಕ್ ಖಾತೆಗೆ ₹15 ಲಕ್ಷ ಹಣ ಎಲ್ಲಿ ಎಂದು ಕೇಳಿದರೆ ಮೋದಿ ನೀಡಿರುವುದು ಚೊಂಬು, 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಎಲ್ಲಿ ಎಂದರೆ ಚೊಂಬು, ರಾಜ್ಯದ 27 ಸಂಸದರ ಸಾಧನೆ ಕೇಳಿದರೆ ಅದು ಕೂಡ ಚೊಂಬು. ಒಟ್ಟಾರೆ ಕೇಂದ್ರದಿಂದ ರಾಜ್ಯಕ್ಕೆ ಚೊಂಬಿನ ಕೊಡುಗೆಯನ್ನೇ ಮೋದಿ ನೀಡಿದ್ದಾರೆ’ ಎಂದರು.

‘ಎಲ್ಲರ ಮೇಲೂ ಕಣ್ಣಿಟ್ಟಿದ್ದೇನೆ, ಕೆಲಸ ಮಾಡಿ’
‘ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಶ್ರಮ ವಹಿಸಲೇಬೇಕು. ಎಲ್ಲರ ಮೇಲೂ ಕಣ್ಣಿಟ್ಟಿದ್ದೇನೆ. ಸಚಿವರು ಕೆಲಸ ಮಾಡದಿದ್ದರೆ ಸ್ಥಾನ ಕಳೆದುಕೊಳ್ಳುತ್ತಾರೆ. ಶಾಸಕರು ಕೆಲಸ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಬೇರೆಯವರಿಗೆ ಟಿಕೆಟ್ ಸಿಗಲಿದೆ’ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿಯೂ ಆಗಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಸಿದರು. ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ‘ಗ್ಯಾರಂಟಿ ಹಬ್ಬ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ನಮ್ಮ ಬೂತ್ ನಮ್ಮ ಜವಾಬ್ದಾರಿ’ ಹೆಸರಲ್ಲಿ ಕಾಂಗ್ರೆಸ್ ಚುನಾವಣೆಗೆ ಹೊರಟಿದೆ. ಮುಂದಿನ ಐದು ದಿನಗಳಲ್ಲಿ ಎಲ್ಲ ಮನೆ, ಬೂತ್‌ಗಳಲ್ಲಿ ಕಾಂಗ್ರೆಸ್‌ನ ಸ್ಟಿಕ್ಟರ್ ಹಾಗೂ ಗ್ಯಾರಂಟಿ ಕಾರ್ಡ್ ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT